ಬೆಂಗಳೂರು: ಸರ್ವೇಶ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ‘ರಕ್ಷಕ-2’ ಕನ್ನಡ ಚಲನಚಿತ್ರವು ಇದೇ ಜೂ.26ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಈ ಹಿಂದೆ ಶತದಿನೋತ್ಸವ ಕಂಡ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ ಚಿತ್ರದ ನಿರ್ದೇಶಕರಾದ ಡಾ. ಆರ್ ವಿಜಯ್ ಕುಮಾರ್ ನಟಿಸಿ ನಿರ್ದೇಶನ ಮಾಡಿರುವ ಮೂರನೇ ಚಿತ್ರವಿದು. ಈ ಚಿತ್ರದಲ್ಲಿ ಲವ್ಹ್- ಆಕ್ಷನ್-ಫ್ಯಾಮಿಲಿ ಸಸ್ಪೆನ್ಸ್-ಥ್ರಿಲ್ಲರ್, ಕಾಮಿಡಿ ಜೊತೆಗೆ ಚಿತ್ರದಲ್ಲಿ ಮೂರು ಹಾಡುಗಳಿವೆ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಚಿತ್ರವಾಗಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಆರ್.ವಿಜಯಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಪ್ರಮುಖ ಪಾತ್ರದಲ್ಲಿ ಚಿತ್ರದ ನಿರ್ದೇಶಕ ಡಾ. ಆರ್ ವಿಜಯ್ ಕುಮಾರ್ ಅವರು ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ , ಖ್ಯಾತ ಹಾಸ್ಯ ನಟ ಲಯಕೋಕಿಲ ಹೆಡ್ ಕಾನ್ಸ್ಟೇಬಲ್ ಆಗಿ ಅಭಿನಯಿಸಿದ್ದು ನಾಯಕ ನಟರಾಗಿ ರಾಜವಂಶಿ, ನಾಯಕಿಯಾಗಿ ರಾಧಿಕಾ , ಮುಖ್ಯ ಪಾತ್ರದಲ್ಲಿ ಮಧುಶ್ರೀ ಖಳನಾಯಕನಾಗಿ ಹಿರಿಯ ನಟ ಸುರೇಂದ್ರ ಕುಮಾರ್, ಮುರಳಿಕೃಷ್ಣ, ವಿಜಯ್ ಮಧಾಳೇ, ಅರವಿಂದ್, ರೋಹಿಣಿ ಮೊದಲಾದವರು ಅಭಿನಯಿಸಿದ್ದಾರೆ.

ಛಾಯಾಗ್ರಹಣ ವಿಜಯ್ ಮಧಾಳೇ ಮತ್ತು ಆಕಾಶ, ಸಂಕಲನ ವಿಜಯ್ ಮಧಾಳೇ, ಸಾಹಸ ವೈಲೆಂಟ್ ವೇಲು, ಪ್ರಸಾಧನ ಜೀವನ್, ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಕಥೆ-ಚಿತ್ರಕಥೆ- ಸಂಭಾಷಣೆ-ಸಂಗೀತದ ಜೊತೆಗೆ ನಿರ್ದೇಶನವನ್ನು ಡಾ. ಆರ್ ವಿಜಯಕುಮಾರ್ ಮಾಡಿದ್ದಾರೆ. ನಿರ್ಮಾಪಕ ವಿ.ಶಿವ್ ಸರ್ವೇಶ್ ಅವರು ಚಿತ್ರವನ್ನು ನಿರ್ಮಿಸಿದ್ದು ವಿಎಸ್ ಕೆ ಸಿನೆ ಕ್ರಿಯೇಷನ್ಸ್ ವಿಶಾಲ ಕರ್ನಾಟಕಕ್ಕೆ ಹಂಚಿಕೆದಾರರಾಗಿದ್ದಾರೆ.









