ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಮೆಗೆ ತಳ್ಳುವುದು ಸಮಾಜದ ಅಭಿವೃದ್ಧಿಗೆ ಮಾರಕ:ನ್ಯಾ.ಭಾಗ್ಯಮ್ಮ

ಹುಣಸೂರು(ಮನುಕುಮಾರ್): ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಮೆಗೆ ತಳ್ಳುವುದು ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಹೇಳಿದರು.
ತಾಲೂಕಿನ ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಿಳಿಕೆರೆ, ಮಡಿಲು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಮಂಗಳವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯ ದೊರೆಯಬೇಕಿದ್ದು, ಬಾಲಕಾರ್ಮಿಕ ಪದ್ದತಿ ಮಕ್ಕಳ ಮೂಲ ಹಕ್ಕುಗಳ ಉಲ್ಲಂಘನೆಯಾಗಿದೆ. ಬಾಲಕಾರ್ಮಿಕರು ಕಂಡುಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಕ್ಕಳ ಭವಿಷ್ಯ ರಕ್ಷಣೆಗೆ ಕೈಜೋಡಿಸಬೇಕು. ಮಕ್ಕಳ ಕೈಯಲ್ಲಿ ಪುಸ್ತಕ ಬಿಟ್ಟರೆ ಯಾವುದೇ ಕೆಲಸದ ಸಾಧನೆಗಳನ್ನು ಕೊಡಬಾರದು, ನಮ್ಮ ದೇಶವನ್ನು ಉಳಿಸುವ ದಿನ ಪ್ರತಿಭೆಗಳನ್ನು ಕಾಪಾಡಿಕೊಳ್ಳುಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಮಿಕ ನಿರೀಕ್ಷಕ ಎನ್ ಮಂಜುನಾಥ್ ಮಾತನಾಡಿ, ಮಕ್ಕಳು ಆರೋಗ್ಯ ರಕ್ಷಣೆ ಇಲ್ಲದೇ ಮೂಲ ಭೂತ ಸೌಕರ್ಯಗಳಿಗಾಗಿ ಬಾಲ್ಯವನ್ನು ಕಸಿದುಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಹಾಗಾಗಿ 2002 ರಲ್ಲಿ ವಿಶ್ವ ಸಂಸ್ಥೆ, ಅಂತರ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಈ ಬಾಲ ಕಾರಣಕ್ಕಾಗಿಯೇ ಕಾರ್ಮಿಕರ ವಿರುದ್ಧ ವಿಶ್ವ ದಿನವನ್ನು ಪ್ರಾರಂಭಿಸಿತು. ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನವನ್ನು ಜೂನ್ 12 ಎಂದು ಗುರುತಿಸಲು ಕಾರಣ ಬಾಲ ಕಾರ್ಮಿಕರ ಸಮಸ್ಯೆಗಳ ಬಗೆಗೆ ಗಮನ ಸೆಳೆಯುವುದು ಮತ್ತು ಅದನ್ನು ನಿರ್ಮೂಲನೆ ಮಾಡಲು ಅಥವಾ ಅದರ ವಿರುದ್ಧ ಹೋರಾಡಲು ಮಾರ್ಗಗಳನ್ನು ಕಂಡುಕೊಳ್ಳುವುದಾಗಿದೆ ಎಂದರು.

ಬಾಲ ಕಾರ್ಮಿಕ ಪದ್ದತಿ ಎನ್ನುವುದು ಒಂದು ಸಾಮಾಜಿಕ ಪಿಡುಗು ಮಕ್ಕಳನ್ನು ಬಲವಂತದ ದುಡಿಮೆ, ಮಾದಕ ವಸ್ತು ಕಳ್ಳ ಸಾಗಣೆ ಮತ್ತು ವೇಶ್ಯಾವಾಟಿಕೆ ಮುಂತಾದ ಅಕ್ರಮ ಚಟುವಟಿಕೆಗಳಿಗೆ ತಳ್ಳುವಂತಹ ಚಟುವಟಿಕೆಯ ಹಿಂದಿರುವ ಬಾಲ ಕಾರ್ಮಿಕರ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಪ್ರತಿಯೊಬ್ಬರು ಇದರ ನಿರ್ಮೂಲನೆಗೆ ಕೈಜೋಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲ ಸಂಘದ ಅಧ್ಯಕ್ಷ ಎಸ್. ಶಿವಣ್ಣೇಗೌಡ, ಸಹಾಯಕ ಸರ್ಕಾರಿ ಅಭಿಯೋಜಕಿ ಅನಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಬೋರೆಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಪ್ರಾಂಶುಪಾಲರಾದ ಸ್ನೇಹಲತಾ ಮಾತನಾಡಿದರು. ಡಾನ್ ಬೋಸ್ಕೋ ಮಕ್ಕಳಾಲಯದ ನಿರ್ದೇಶಕ ಜಿಮ್ ಜೋಸ್, ಎಸ್.ಡಿ.ಎಂ.ಸಿ ಅದ್ಯಕ್ಷ ಚಂದ್ರನಾಯಕ, ಸಾ.ಪ.ಪೂ.ಕಾಲೇಜು ಪ್ರಾಂಶುಪಾಲ ಧನಂಜಯ್ ಕುಮಾರ್, ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ , ಭಾಸ್ಕರ್, ಚಂದ್ರಕಾಂತ್ ಸೇರಿದಂತೆ ಶಿಕ್ಷಕರು, ಮಕ್ಕಳು ಹಾಜರಿದ್ದರು.







