ಆಸ್ಪತ್ರೆಗಾಗಿ ಕಾಯುತ್ತಿರುವ ಶೂರರ ನಾಡು ಕೊಡಗು: ಇದು ನೋವು ಅಲ್ಲದೆ ಮತ್ತೇನು?
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-7

ಕೊಡಗಿಗೆ ಎಲ್ಲವೂ ಇದೆ ಆದರೆ ಒಂದೊಳ್ಳೆು ಸುಸಜ್ಜಿತ ಆಸ್ಪತ್ರೆ ಇಲ್ಲವೆಂಬ ಕೊರಗು ಇದ್ದೇ ಇದೆ. ಹತ್ತು ಹಲವು ಸಮಸ್ಯೆಗಳನ್ನು ಹೊದ್ದು ಕುಳಿತಿರುವ ಕೊಡಗಿನಲ್ಲಿ ಕಾಯಿಲೆ ಬಂದರೆ ಜನ ದೂರದ ಊರುಗಳಿಗೆ ಹೋಗಬೇಕಾಗುತ್ತದೆ. ಹೀಗಾಗಿ ಆಸ್ಪತ್ರೆ ಕೊರತೆಯ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ತೆರೆದಿಟ್ಟಿದ್ದಾರೆ.
ಈ ಆಗಸ್ಟ್ 15ಕ್ಕೆ ನಾವು 79ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿದ್ದೇವೆ. ಸ್ವಾತಂತ್ರ್ಯ ಬಂದು 78 ವರ್ಷ ಪೂರ್ಣವಾದರೂ ಕೊಡಗು ಉತ್ತಮ ಆಸ್ಪತ್ರೆಗಾಗಿ ಕಾಯುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬರಬೇಕಾದ ವಿಷಯ. ಒಂದು ಕಾಲದಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಜಿಲ್ಲೆ, ಇವತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಎದುರು ನೋಡುತ್ತಿದೆ. ಪ್ರತ್ಯೇಕ ರಾಜ್ಯವಾಗಿ ಕೊಡಗು ಇದ್ದಿದ್ದರೆ, ಇವತ್ತು ಭಾರತದಲ್ಲೇ ಅತ್ಯುತ್ತಮ ಆರೋಗ್ಯ ಸೌಲಭ್ಯ ಹೊಂದಿದ, ಮಾದರಿ ರಾಜ್ಯವಾಗಿ ಇರುತ್ತಿತ್ತು ಅನ್ನುವುದು ಕೊಡಗಿನ ಜನರ ಭಾವನೆ. ಆದರೆ ವಿಲೀನದ ನಂತರದ ವರ್ಷಗಳಲ್ಲಿ ಕೊಡಗಿನ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಗಮನ ಹರಿದುಬಂದಿಲ್ಲ. ಇದು ಪ್ರತಿ ಕೊಡಗಿನ ಪ್ರಜೆಯ ಮನವನ್ನು ಕಲಕುವ ನೋವು.
ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಕೊಡಗಿನಲ್ಲಿ ಸರಿಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ, ಕ್ಯಾನ್ಸರ್ ಆಸ್ಪತ್ರೆ ಇಲ್ಲ. ಜೊತೆಗೆ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವೈದ್ಯರುಗಳಿಲ್ಲ, ಬಹಳಷ್ಟು ಔಷಧಿ ಮತ್ತು ಮಾತ್ರೆಗಳ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವ ಅಗತ್ಯ ಇಂದು ತುರ್ತಾಗಿದೆ.

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು..
ಇದೇ ಕೊಡಗಿನ ಜನರ ಒಕ್ಕೊರಲಿನ ವಿನಂತಿ. ಇದು ಭಿಕ್ಷೆಯಲ್ಲ, ಇದು ನಮ್ಮ ಹಕ್ಕು. ಉತ್ತರ ಕೊಡಗು ಮತ್ತು ದಕ್ಷಿಣ ಕೊಡಗು ಎರಡೂ ಕಡೆಯ ಜನರಿಗೆ ಅನುಕೂಲವಾಗುವಂತೆ, ಬಿಟ್ಟಂಗಾಲ, ಅಮ್ಮತ್ತಿ ಅಂತಹ ಮಧ್ಯಭಾಗದ ಸ್ಥಳಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು.
ಇವತ್ತಿನ ವಾಸ್ತವ ಏನೆಂದರೆ ಅಂತಹ ಒಂದು ಜೀವ ರಕ್ಷಕ ಆಸ್ಪತ್ರೆ ಕೊಡಗಿನಲ್ಲಿ ಇಲ್ಲ. ದೇಶಕ್ಕೆ ವೀರರನ್ನು, ಕ್ರೀಡಾಪಟುಗಳನ್ನು ಕೊಟ್ಟ ಮಣ್ಣಿನಲ್ಲಿ ಹೃದಯಾಘಾತವಾದರೆ, ಸ್ಟ್ರೋಕ್ ಆದರೆ, ಅಪಘಾತವಾದರೆ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ಸಿಗುವ ಒಂದೇ ಒಂದು ಆಸ್ಪತ್ರೆ ಇಲ್ಲ. ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ತಿಂಗಳುಗಟ್ಟಲೆ ಕೀಮೋಥೆರಪಿ, ರೇಡಿಯೇಷನ್‌ಗೆ ಮೈಸೂರು, ಬೆಂಗಳೂರು, ಮಂಗಳೂರಿಗೆ ಪ್ರಯಾಣ ಮಾಡಬೇಕಿದೆ. ಈ ಪರಿಸ್ಥಿತಿ ಬದಲಾಗಬೇಕು. ಇದು ನಮ್ಮೆಲ್ಲರ ಆಶಯ.
ಅದಕ್ಕಿಂತ ದೊಡ್ಡ ದುರಂತ ಏನೆಂದರೆ, ಸಮಯಕ್ಕೆ ಸರಿಯಾಗಿ, ವೇಗವಾಗಿ ಆಸ್ಪತ್ರೆ ತಲುಪಲು ಸರಿಯಾದ ರಸ್ತೆಗಳೇ ಇಲ್ಲ. ಕೊಡಗಿನ ಹಳ್ಳಿಗಳಿಂದ ಮಡಿಕೇರಿ, ವಿರಾಜಪೇಟೆ, ಕುಶಾಲನಗರ ಆಸ್ಪತ್ರೆ ತಲುಪಲು ಗುಂಡಿ ಬಿದ್ದ, ಹಾಳಾದ ರಸ್ತೆಗಳಲ್ಲೇ ಗಂಟೆಗಟ್ಟಲೆ ಪ್ರಯಾಣ ಮಾಡಬೇಕು. ಆಂಬುಲೆನ್ಸ್ ಇದ್ದರೂ, ರಸ್ತೆ ಸರಿಯಿಲ್ಲದಿದ್ದರೆ ಜೀವ ಉಳಿಸುವ ‘ಗೋಲ್ಡನ್ ಅವರ್’ ದಾರಿಯಲ್ಲೇ ಮುಗಿದು ಹೋಗುತ್ತದೆ. ಆಸ್ಪತ್ರೆ ಇಲ್ಲದ ನೋವು ಒಂದು ಕಡೆ, ಇದ್ದ ಆಸ್ಪತ್ರೆಗೆ ತಲುಪಲು ರಸ್ತೆಯೇ ಇಲ್ಲದಿರುವುದು ಇನ್ನೊಂದು ದೊಡ್ಡ ಶಾಪ.
ಧೀರರ ನಾಡು, ಸ್ವಾತಂತ್ರ್ಯ ಹೋರಾಟದಲ್ಲಿ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಕೊಟ್ಟಂತಹ ಶೂರರ ನಾಡು ಇವತ್ತು ಒಂದು ಆಸ್ಪತ್ರೆಗಾಗಿ ಕಾಯುತ್ತಿರುವುದು ನೋವಿನ ಸಂಗತಿ. ದೇಶಕ್ಕೆ ಅಸಂಖ್ಯಾತ ಸೈನಿಕರನ್ನು, ಅಸಂಖ್ಯಾತ ಕ್ರೀಡಾಪಟುಗಳನ್ನು, ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಟ್ಟಂತಹ ಕೊಡಗು ಇವತ್ತು ಒಂದು ಆಸ್ಪತ್ರೆಗಾಗಿ ಎದುರು ನೋಡುವಂತಾಗಿದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯನಂತಹ ಮಹಾನ್ ಸೈನಿಕರನ್ನು ದೇಶಕ್ಕೆ ಕೊಟ್ಟ ಮಣ್ಣು ಇದು. ಅಶ್ವಿನಿ ಪೊನ್ನಪ್ಪ, ರೋಹನ್ ಬೋಪಣ್ಣ, ಜೋಶ್ನಾ ಚಿಣ್ಣಪ್ಪ, ಅರ್ಜುನ್ ಹಾಲಪ್ಪ, ಎಸ್.ವಿ. ಸುನಿಲ್, ನಿಕ್ಕಿನ್ ತಿಮ್ಮಯ್ಯ, ಕೆ.ಸಿ. ನಿಕ್ಕಿ, ಲೆನೆ ಅಯ್ಯಪ್ಪ ಅವರಂತಹ ಕೊಡಗಿನ ವಿಶ್ವಮಟ್ಟದ ಕ್ರೀಡಾಪಟುಗಳನ್ನು ಬೆಳೆಸಿದ ನೆಲ ಇದು. ಬ್ರಿಟಿಷರ ವಿರುದ್ಧ ಹೋರಾಡಿ ರಕ್ತ ಚೆಲ್ಲಿದ ವೀರರ ಬೀಡು ಇದು. ಆದರೆ ಅದೇ ಕೊಡಗಿನ ಜನ ಇವತ್ತು ಹೃದಯಾಘಾತವಾದರೆ, ಸ್ಟ್ರೋಕ್ ಆದರೆ, ಕ್ಯಾನ್ಸರ್ ಬಂದರೆ, ಅಪಘಾತವಾದರೆ ಸಮರ್ಪಕ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಸ್ಥಿತಿ ಇದೆ.
ಮಡಿಕೇರಿಯಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ದೊಡ್ಡಮಟ್ಟದಲ್ಲಿ ಬೋಧಕ ಆಸ್ಪತ್ರೆ ಆಗಿರುವುದು ಅತ್ಯಂತ ಸಂತೋಷಕರ. ಇದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭಾಗ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ, ಬೃಹತ್ ಕಟ್ಟಡ, ಅತ್ಯಾಧುನಿಕ ವಾರ್ಡ್, ಐಸಿಯು ಎಲ್ಲವನ್ನೂ ನಿರ್ಮಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ, ಜೊತೆಗೆ ಜನರಿಗೆ ಉತ್ತಮ ಚಿಕಿತ್ಸೆ ಕೊಡುವ ಉದ್ದೇಶದಿಂದ ಈ ಬೋಧಕ ಆಸ್ಪತ್ರೆಯನ್ನು ಕಟ್ಟಲಾಗಿದೆ. ಈ ದೂರದೃಷ್ಟಿಯ ಕೆಲಸವನ್ನು ಕೊಡಗಿನ ಜನತೆ ಸದಾ ಸ್ಮರಿಸುತ್ತದೆ.
ಆದರೆ ಸೌಲಭ್ಯ ವಂಚಿತ ಆಗುತ್ತಿರುವುದು ಮಾತ್ರ ದುರಂತ. ಎಂಆರ್‌ಐ ಯಂತ್ರ ಬಂದಿದೆ, ಆದರೆ ಅದನ್ನು ಸರಿಯಾಗಿ ನಿಭಾಯಿಸುವ ತಜ್ಞ ಸಿಬ್ಬಂದಿ, ರೇಡಿಯಾಲಜಿಸ್ಟ್ ಇಲ್ಲ. ಲಕ್ಷಾಂತರ ರೂಪಾಯಿಯ ಯಂತ್ರ ಇದ್ದು ರೋಗಿಗಳಿಗೆ ಉಪಯೋಗವಾಗದಿದ್ದರೆ ಏನು ಪ್ರಯೋಜನ? ಇದರ ಜೊತೆಗೆ ಸಿಟಿ ಸ್ಕ್ಯಾನ್, ಡಯಾಲಿಸಿಸ್ ಯಂತ್ರಗಳು, ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ರೇಡಿಯೇಷನ್ ಯಂತ್ರಗಳು, ತಜ್ಞ ವೈದ್ಯರು, ಸಿಬ್ಬಂದಿಯನ್ನು ಒದಗಿಸುವ ಅಗತ್ಯ ಇದೆ. ಸರ್ಕಾರಗಳು ಬದಲಾಗುತ್ತಿರುತ್ತವೆ.
ಬದಲಾದ ಸರ್ಕಾರಗಳು ಅಗತ್ಯತೆಗಳನ್ನು ಪೂರೈಸಿದರೆ ಈ ಆಸ್ಪತ್ರೆ ಕೊಡಗಿನ ಜನರಿಗೆ ವರದಾನವಾಗುತ್ತದೆ. ಕಟ್ಟಡದ ಜೊತೆಗೆ ಜೀವ ಉಳಿಸುವ ಯಂತ್ರಗಳು ಬೇಕು, ವೈದ್ಯರು ಬೇಕು, ಅದನ್ನು ನಿರ್ವಹಿಸುವ ಸಿಬ್ಬಂದಿ ಬೇಕು. ಆಗ ಮಾತ್ರ ಬೋಧಕ ಆಸ್ಪತ್ರೆಯ ನಿಜವಾದ ಉದ್ದೇಶ ಈಡೇರುತ್ತದೆ. ಕೊಡಗಿನ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವೈದ್ಯರುಗಳಿಲ್ಲ. ಸೂಕ್ತ ಔಷಧಿಗಳ ಕೊರತೆ ಇದೆ. ಜನಸಾಮಾನ್ಯರು, ಬಡಜನರು ತೊಂದರೆಗೆ ಸಿಲುಕಿದ್ದಾರೆ.
ಇದು ಕೊಡಗಿನ ಮಣ್ಣಿನ ಕಣ್ಣೀರು.
ಹಲವಾರು ಬಡಜನ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೆ, ಔಷಧಿ ಸಿಗದೆ, ಖಾಸಗಿ ಆಸ್ಪತ್ರೆಗೆ ಹೋಗಲು ದುಡ್ಡಿಲ್ಲದೆ, ಔಷಧಿಗಳನ್ನು ಕೊಳ್ಳಲು ಕಾಸಿಲ್ಲದೆ ನಿಸ್ಸಹಾಯಕರಾಗಿ ಪರದಾಡುವ ಪರಿಸ್ಥಿತಿ ಕೊಡಗಿನಲ್ಲಿ ಇದೆ.
ಹಾಸಿಗೆ ಇದೆ, ಕಟ್ಟಡ ಇದೆ, ಬೋರ್ಡ್ ಇದೆ, ಎಂಆರ್‌ಐ ಯಂತ್ರವೂ ಇದೆ. ಆದರೆ ಪೂರ್ಣ ಪ್ರಮಾಣದ ವೈದ್ಯರಿಲ್ಲ, ಯಂತ್ರ ನಿರ್ವಹಿಸುವ ಸಿಬ್ಬಂದಿ ಇಲ್ಲ. ಮಾತ್ರೆಗಳ ಕೊರತೆ ಇದೆ. ಸಮರ್ಪಕ ಚಿಕಿತ್ಸೆ ಬೇಕಿದೆ.

ತೋಟದಲ್ಲಿ ದುಡಿದು ಬಂದ ಕೂಲಿ ಕಾರ್ಮಿಕನಿಗೆ ಜ್ವರ ಬಂದರೆ ಮಡಿಕೇರಿ, ಮೈಸೂರು ಹೋಗಬೇಕಿದೆ. ಗರ್ಭಿಣಿ ಹೆಂಗಸಿಗೆ ನೋವು ಶುರುವಾದರೆ ಆಂಬುಲೆನ್ಸ್‌ನಲ್ಲೇ ಮಗು ಹುಟ್ಟುವ ಸಂದರ್ಭ ಬರುತ್ತಿದೆ. ಹೃದಯಾಘಾತವಾದರೆ, ಸ್ಟ್ರೋಕ್ ಆದರೆ ಹಾಳಾದ ರಸ್ತೆಯಲ್ಲಿ ದಾರಿಯಲ್ಲೇ ಸಮಯ ವ್ಯರ್ಥವಾಗಿ ಪ್ರಾಣಕ್ಕೆ ಸಂಚಕಾರ ಬರುತ್ತಿದೆ. ಕ್ಯಾನ್ಸರ್ ರೋಗಿ ಕೀಮೋಗೆ ಪ್ರತಿ ವಾರ ನೂರಾರು ಕಿಲೋಮೀಟರ್ ಪ್ರಯಾಣ ಮಾಡಬೇಕಿದೆ. ಈ ಸ್ಥಿತಿ ಬದಲಾಗಬೇಕು ಅನ್ನುವುದೇ ಕೊಡಗಿನ ಜನರ ಆಶಯ.
ಆಡಳಿತ ವರ್ಗದ ಗಮನಕ್ಕೆ….
ಪೂರ್ಣ ಪ್ರಮಾಣದ ವೈದ್ಯರು ಮತ್ತು ಸಮರ್ಪಕ ಔಷಧಿ ಸರಬರಾಜು ಕೊಡಗಿನ ತುರ್ತು ಅಗತ್ಯ. ಸರ್ಕಾರಿ ಆಸ್ಪತ್ರೆಗೆ ಬರುವವರು ಯಾರು? ದುಡ್ಡಿದ್ದವನು ಬರುವುದಿಲ್ಲ. ಸಿರಿವಂತ ಬರುವುದಿಲ್ಲ. ಬರುವುದು ದಿನಗೂಲಿ ಮಾಡಿ ಬದುಕುವವನು, ತೋಟದ ಕೆಲಸ ಮಾಡುವವನು, ಒಂಟಿ ತಾಯಿ, ವೃದ್ಧರು. ಇವರ ಆರೋಗ್ಯಕ್ಕೆ ಆದ್ಯತೆ ಸಿಗಬೇಕು. ಕೊಡಗಿನಲ್ಲಿ ವೈದ್ಯರ ಕೊರತೆ ನೀಗಿದರೆ, ಜನರಿಗೆ ನೆಮ್ಮದಿ ಸಿಗುತ್ತದೆ. ರೋಗಿಗಳ ಅಳಲು ಕೇಳುವಂತಾಗಬೇಕು.
ಆಡಳಿತ ವ್ಯವಸ್ಥೆ ಕೊಡಗಿನ ಆಸ್ಪತ್ರೆಗಳ ಕಡೆಗೆ ವಿಶೇಷ ಗಮನ ಹರಿಸಬೇಕು. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ, ಸುಂಟಿಕೊಪ್ಪ, ಸಿದ್ದಾಪುರ, ಪೊನ್ನಂಪೇಟೆ ಮುಂತಾದ ಎಲ್ಲಾ ಪ್ರಮುಖ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. ರೋಗಿಗಳಿಗೆ ನೆಲದ ಮೇಲೆ ಮಲಗುವ ಸ್ಥಿತಿ ಬರಬಾರದು, ಔಷಧಿ ಇಲ್ಲದೆ ನರಳುವ ಪರಿಸ್ಥಿತಿ ಬರಬಾರದು, ವೈದ್ಯರು ಇಲ್ಲದೆ ವಾಪಸ್ ಹೋಗುವ ಸ್ಥಿತಿ ಬರಬಾರದು.
ಕೊಡಗಿಗೆ ಬೇಕಾಗಿರುವುದು ಭರವಸೆ ಅಲ್ಲ, ವೈದ್ಯರು..
ಮಡಿಕೇರಿಯಲ್ಲಿ ಈಗಾಗಲೇ ನಿರ್ಮಾಣವಾಗಿರುವ ಬೋಧಕ ಆಸ್ಪತ್ರೆಗೆ ತಕ್ಷಣ ಎಲ್ಲ ಸಲಕರಣೆ, ಯಂತ್ರ, ತಜ್ಞ ವೈದ್ಯರನ್ನು ಒದಗಿಸಿ. ಎಂಆರ್‌ಐ ಯಂತ್ರವನ್ನು ನಿರ್ವಹಿಸಲು ತಕ್ಷಣ ರೇಡಿಯಾಲಜಿಸ್ಟ್ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ. ಕ್ಯಾನ್ಸರ್ ಚಿಕಿತ್ಸಾ ವಿಭಾಗ ತಕ್ಷಣ ಆರಂಭಿಸಿ. ಅತ್ಯುತ್ತಮ ಕಟ್ಟಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಬೇಕು. ತಕ್ಷಣ ಖಾಲಿ ಇರುವ ಎಲ್ಲ ವೈದ್ಯರ ಹುದ್ದೆ ಭರ್ತಿ ಮಾಡಬೇಕು. ಕೊಡಗಿನ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 24 ಗಂಟೆ ತಜ್ಞ ವೈದ್ಯರು ಇರಬೇಕು.

ದಕ್ಷಿಣ ಕೊಡಗಿನಲ್ಲಿ, ಹಾಗೂ ಉತ್ತರ ಕೊಡಗಿನ ಚೆಂಬು, ಹಮ್ಮಿಯಾಲ, ಸುರ್ಲಾಬಿ ಇಂತಹ ಕಡೆಗಳಲ್ಲಿ ಇರುವಂತಹ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಎಲ್ಲಾ ತರದ ಔಷಧಿಗಳನ್ನು ಒದಗಿಸಬೇಕು. ಖಾಲಿ ಇರುವ ಸ್ಥಳಗಳಿಗೆ ವೈದ್ಯರನ್ನು ತಕ್ಷಣವೇ ನಿಯೋಜಿಸಬೇಕು.
ಔಷಧಿ ಕೊರತೆ ನೀಗಿಸಬೇಕು. ಜೀವ ರಕ್ಷಕ ಔಷಧಿ, ಮಾತ್ರೆ, ಇಂಜೆಕ್ಷನ್ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಕ್ ಇರಬೇಕು. ವೈದ್ಯರಿಗೆ ಕೊಡಗಿನಲ್ಲಿ ಕೆಲಸ ಮಾಡಲು ವಿಶೇಷ ಪ್ರೋತ್ಸಾಹ ಧನ ನೀಡಿದರೆ, ಹೆಚ್ಚಿನ ವೈದ್ಯರು ಸೇವೆ ಸಲ್ಲಿಸಲು ಮುಂದೆ ಬರುತ್ತಾರೆ. ಬಿಟ್ಟಂಗಾಲ, ಅಮ್ಮತ್ತಿ ಅಂತಹ ಉತ್ತರ ಕೊಡಗು-ದಕ್ಷಿಣ ಕೊಡಗಿನ ಮಧ್ಯಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬರಲಿ. ಅದರೊಂದಿಗೆ ಸಂಪೂರ್ಣ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವೂ ಬರಲಿ. ದೇಶಕ್ಕೆ ವೀರರನ್ನು ಕೊಟ್ಟ ಕೊಡಗಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಸಿಕ್ಕರೆ ಅದು ಕೊಡಗಿಗೆ ಸಂದ ಗೌರವವಾಗುತ್ತದೆ.
ಆಸ್ಪತ್ರೆಗಳ ಜೊತೆಗೆ, ಕೊಡಗಿನ ಹಳ್ಳಿಗಳಿಂದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕು. ರೋಗಿಯನ್ನು ‘ಗೋಲ್ಡನ್ ಅವರ್’ನಲ್ಲಿ ಆಸ್ಪತ್ರೆಗೆ ತಲುಪಿಸಲು ಗುಣಮಟ್ಟದ ರಸ್ತೆ ಅತ್ಯಗತ್ಯ. ರಸ್ತೆ ಇಲ್ಲದೆ ಆಂಬುಲೆನ್ಸ್‌ನಲ್ಲೇ ಜೀವ ಹೋಗುವ ಪರಿಸ್ಥಿತಿ ತಪ್ಪಬೇಕು. ಪ್ರತಿ ತಿಂಗಳು ಜಿಲ್ಲಾಧಿಕಾರಿಗಳೇ ಸರ್ಕಾರಿ ಆಸ್ಪತ್ರೆಗಳ ತಪಾಸಣೆ ಮಾಡಿದರೆ, ಲೋಪ ಸರಿಪಡಿಸಲು ಸಹಾಯವಾಗುತ್ತದೆ.
ಒಕ್ಕೊರಲಿನ ವಿನಂತಿ.. ಕಳಕಳಿಯ ಮನವಿ
ರಸ್ತೆ, ಸೇತುವೆ, ಪ್ರವಾಸೋದ್ಯಮ ಎಲ್ಲ ಬೇಕು. ಆದರೆ ಅದಕ್ಕಿಂತ ಮೊದಲು ಆರೋಗ್ಯ ಬೇಕು. ಬಡವ ಬದುಕಬೇಕು. ಆಡಳಿತ ವರ್ಗ ಕೊಡಗಿನ ಜನರ ನೋವಿಗೆ ಸ್ಪಂದಿಸಲಿ. ಕೊಡಗಿಗೆ ವೈದ್ಯರನ್ನು ಕೊಡಿ, ಔಷಧಿ ಕೊಡಿ, ಒಳ್ಳೆಯ ರಸ್ತೆ ಕೊಡಿ. ದೇಶಕ್ಕೆ ವೀರರನ್ನು ಕೊಟ್ಟ ಕೊಡಗಿನ ಋಣವನ್ನು ತೀರಿಸಲು ಇದು ಸಕಾಲ. ಬಡವನ ಜೀವಕ್ಕೆ ಬೆಲೆ ಕೊಡಿ. ಅದೇ ನಿಜವಾದ ಗ್ಯಾರಂಟಿ.

ಆನೆ ನಾಡಿಗೆ ನುಗ್ಗುತ್ತಿರುವುದೇಕೆ? ಕಾಡಾನೆ ಹಸಿವಿನ ಹಿಂದೆ ಅದೆಷ್ಟು ಸಂಕಟಗಳ ಕಥೆ!







