ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ನಿಸರ್ಗ ರಮಣೀಯತೆಯ ಜತೆಗೆ ದೈವಿಕ ಶಕ್ತಿಯನ್ನು ಹೊಂದಿರುವ ಗ್ರಾಮದ ಜನರ ಭಕ್ತಿಯ ತಾಣವಾಗಿರುವ ಕುಂತಮ್ಮನ ಬೆಟ್ಟದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಾರದು.. ಹೀಗಾಗಿ ಯಾವುದಪ್ಪಾ ಈ ಬೆಟ್ಟ ಎಂಬ ಪ್ರಶ್ನೆ ಮೂಡದಿರದು.. ಈ ಬೆಟ್ಟದ ಬಗ್ಗೆ ತಿಳಿಯ ಬೇಕೆಂದರೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿರುವ ಕುಂತಿ ಬೆಟ್ಟಕ್ಕೆ ಬರಬೇಕಾಗುತ್ತದೆ..

ಕುಂತಿಬೆಟ್ಟದ ಕುಂತಮ್ಮನನ್ನು ಮಳೆದೇವರೆಂದೇ ಕರೆಯಲಾಗುತ್ತದೆ.. ಮಳೆ ಬಾರದೆ ಬಸವಳಿದಾಗ ಈಕೆಯ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರೆ ವರುಣ ಕೃಪೆ ತೋರುತ್ತಾನೆ ಎಂಬ ನಂಬಿಕೆ ಜನವಲಯದಲ್ಲಿದೆ. ಹೀಗಾಗಿ ಹಿಂದಿನಿಂದಲೂ ಈ ಸಂಪ್ರದಾಯ ರೂಢಿಯಲ್ಲಿದೆ. ಹಾಗೆಂದು ಕುಂತಿಬೆಟ್ಟದ ಕುಂತಮ್ಮನ ದರ್ಶನ ಪಡೆಯುವುದು ಸುಲಭವೇನಲ್ಲ. ಈಕೆಯ ಸನ್ನಿಧಿಗೆ ಹೋಗಬೇಕಾದರೆ ಕಲ್ಲುಮುಳ್ಳಿನ ಏರುದಾರಿಯಲ್ಲಿ ಸಾಗಬೇಕಾಗುತ್ತದೆ.

ಸಮುದ್ರಮಟ್ಟದಿಂದ ಸುಮಾರು ಎರಡು ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಕುಂತಿಬೆಟ್ಟಕ್ಕೆ ಸಾಗುವಾಗ ಆಯಾಸವಾದರೂ ಸುತ್ತಲಿನ ಪ್ರಕೃತಿಯ ನೋಟ ತಮ್ಮೆಲ್ಲ ಆಯಾಸವನ್ನು ಹೊಡೆದೋಡಿಸಿ ಹುರುಪು ತುಂಬುತ್ತಿರುತ್ತದೆ.

ಬೆಟ್ಟದ ಮೇಲ್ಭಾಗವನ್ನು ತಲುಪಿದಾಗ ತಮ್ಮ ಆಯಾಸ ದೂರವಾಗಿ ಭಕ್ತಿ ತುಂಬಿ ಬರುತ್ತದೆ. ಬೆಟ್ಟದ ಒಂದು ಕಡೆ ಗುಹೆಯಿದ್ದು ಇಲ್ಲಿ ಕುಂತಿಯ ವಿಗ್ರಹಗಳಿವೆ. ಇದಕ್ಕೆ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲರೂ ಈ ಬೆಟ್ಟಕ್ಕೆ ತೆರಳಿ ಕುಂತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಬರುತ್ತಾರೆ. ಹೀಗೆ ಮಾಡಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಕುಂತಿಬೆಟ್ಟವು ಒಂದಷ್ಟು ವಿಶೇಷತೆಗಳನ್ನು ಹೊಂದಿದ್ದು, ಇಲ್ಲಿಗೆ ಭಕ್ತರು ಬರಿಗಾಲಿನಲ್ಲಿ ಕಲ್ಲುಮುಳ್ಳು ಹಾದಿಯಲ್ಲಿ ಸಾಗಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಮಹಿಳೆಯರು ಪುರುಷರೆನ್ನದೆ ಎಲ್ಲರೂ ನಿಗದಿತ ದಿನದಂದು ಬೆಟ್ಟಕ್ಕೆ ತೆರಳುತ್ತಾರೆ. ಕುಂತಮ್ಮನಿಗೆ ವಿಶೇಷವಾಗಿ ಹಲಸಿನ ಹಣ್ಣು, ಬಾಳೆಹಣ್ಣು ಮತ್ತು ಬೆಲ್ಲನ್ನದ ನೈವೇದ್ಯ ಅರ್ಪಿಸುತ್ತಾರೆ. ಅದರಲ್ಲೂ ಹಲಸಿನ ಹಣ್ಣು ಪ್ರಿಯವಾಗಿರುವುದರಿಂದ ಬೆಟ್ಟಕ್ಕೆ ಭಕ್ತರು ಹಲಸಿನ ಹಣ್ಣನ್ನು ಹೊತ್ತೊಯ್ಯುತ್ತಾರೆ. ಮಹಿಳೆಯರು ಒಂದೆಡೆ ಕುಳಿತು ಹಲಸಿನ ಹಣ್ಣನ್ನು ಕೊಯ್ದು ಬಿಡಿಸಿ ಅದರಿಂದ ನೈವೇದ್ಯ ತಯಾರಿಸುತ್ತಾರೆ.

ಇದೇ ವೇಳೆ ದೇವರಿಗೆ ಬೇಕಾದ ಬೆಲ್ಲದ ಅನ್ನದ ನೈವೇದ್ಯವೂ ತಯಾರಾಗುತ್ತದೆ. ಗುಹೆಯೊಳಗಿರುವ ಉದ್ದದ ಕುಂತಮ್ಮನ ವಿಗ್ರಹಕ್ಕೆ ಹೂವುಗಳಿಂದ ಅಲಂಕಾರ ಮಾಡಿ ಹಣ್ಣುಕಾಯಿ ಸೇರಿದಂತೆ ನೈವೇದ್ಯವನ್ನು ಅರ್ಪಿಸಿ ಉತ್ತಮವಾಗಿ ಮಳೆಯಾಗಿ ಊರು ಕೇರಿ ಸುಭೀಕ್ಷೆಯಿಂದ ಕೂಡಿರಲೆಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸುತ್ತಾರೆ. ಇದಾದ ನಂತರ ಎಲ್ಲರೂ ಒಂದೆಡೆ ಕುಳಿತು ಊಟ ಮಾಡಿ ಸಂಜೆಯಾಗುತ್ತಿದ್ದಂತೆಯೇ ಮನೆಗೆ ಹಿಂತಿರುಗುತ್ತಾರೆ.

ಬೆಟ್ಟಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಹಿಂತಿರುಗುತ್ತಿದ್ದಂತೆಯೇ ಕುಂತಮ್ಮ ಕೃಪೆ ತೋರಿ ಮಳೆ ಸುರಿಸುತ್ತಾಳೆ ಎಂಬ ನಂಬಿಕೆ ಹಿಂದಿನಿಂದಲೂ ಜನರಲ್ಲಿದೆ. ಕೊನೆಪಕ್ಷ ಪೂಜೆ ಸಲ್ಲಿಸಿದ ದಿನ ಮೋಡ ಕವಿದು ಒಂದೆರಡು ಹನಿಯಾದರೂ ಬೀಳುತ್ತದೆಯಂತೆ. ಈ ವರ್ಷವೂ ಅದೇ ರೀತಿ ನಡೆದಿದೆ

ದ್ವಾಪರಯುಗದಲ್ಲಿ ಪಾಂಡವರ ತಾಯಿ ಕುಂತಿ ಈ ಬೆಟ್ಟದಲ್ಲಿ ನೆಲೆಸಿದ್ದಳೆಂದೂ ಆಕೆಯನ್ನು ಹುಡುಕಿಕೊಂಡು ಮಗ ಭೀಮ ಇಲ್ಲಿಗೆ ಬಂದಿದ್ದನೆಂಬ ದಂತಕತೆಯಿದೆ. ಅದಕ್ಕೆ ಪೂರಕವೆಂಬಂತೆ ಪಾದದ ಅಚ್ಚೆಯಂತಿರುವ ಬಂಡೆಕಲ್ಲು ಕಾಣ ಸಿಗುತ್ತದೆ.

ಈಗಲೂ ಕುಂತಿ ಬೆಟ್ಟದಲ್ಲಿ ನೆಲೆಸಿರುವ ಕುಂತಮ್ಮ ಸುತ್ತಮುತ್ತಲಿನ ಗ್ರಾಮಗಳನ್ನು ಕಾಪಾಡುತ್ತಾಳೆ ಎಂಬ ನಂಬಿಕೆಯಲ್ಲಿಯೇ ಆಕೆಯನ್ನು ಜನ ಪ್ರಾರ್ಥಿಸುತ್ತಾರೆ. ಅದು ಏನೇ ಇರಲಿ ಕುಂತಿಬೆಟ್ಟ ಒಂದು ಸುಂದರ ನಿಸರ್ಗ ತಾಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.








