ArticlesLatestLife style

ಬಿರುನಾಣಿಯಿಂದ ಕೇರಳಕ್ಕೆ ರಸ್ತೆ ಬೇಡ… ಕೊಡಗನ್ನು ಕೊಲ್ಲಬೇಡಿ, ಬದುಕಲು ಬಿಡಿ!

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-8

ಕೇರಳಕ್ಕೆ ಕೊಡಗಿನಿಂದ ರಸ್ತೆ ಬೇಡವೆಂಬ ಒತ್ತಾಯಗಳು ಕೇಳಿ ಬರುತ್ತಿವೆ.. ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಮೇಲೆ ಆಗಿರುವ ಗಾಯಗಳಿಂದ ನರಳಾಡುವ, ಚೀರಾಡುವ ಪರಿಸ್ಥಿತಿ ಇಲ್ಲಿನವರದ್ದಾಗಿದೆ. ಮತ್ತೆ  ಬಿರುನಾಣಿ ಗ್ರಾಮ ಪಂಚಾಯಿತಿಯ ಪುಕೊಳ ಭಾಗದಿಂದ ಕೇರಳಕ್ಕೆ ರಸ್ತೆ ಆದರೆ  ಇದರ ವ್ಯಾಪ್ತಿಗೊಳಪಡುವ  ಬಿರುನಾಣಿ, ಬಾಡಗರ ಕೇರಿ, ಪೊರಡು, ತೆರಾಲು, ಟೀ ಶೆಟ್ಟಿಗೇರಿ ಮುಂತಾದ ಗ್ರಾಮಗಳಿಗೆ ಕಂಟಕ ಗ್ಯಾರಂಟಿ… ಹಾಗಾದರೆ ಏನಾಗುತ್ತದೆ ಎಂಬುದರ ಕುರಿತಂತೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಪ್ರಸ್ತಾಪಿಸಿದ್ದಾರೆ.

ಕೊಡಗಿನ ಬೆಟ್ಟ-ಗುಡ್ಡಗಳು ಈಗಾಗಲೇ ಗಾಯಗೊಂಡು ರಕ್ತ ಸುರಿಸುತ್ತಿವೆ. ಈ ವರ್ಷ ಕಾವೇರಿ ತಾಯಿಯ ಕಣ್ಣೀರು ಬತ್ತಿದಂತೆ ಮರೆನಾಡಿನ ಬಾವಿಗಳೆಲ್ಲಾ ಬರಿದಾಗಿ ಹೋಗಿವೆ.  ಒಂದು ತೊಟ್ಟು ನೀರಿಗಾಗಿ ಕಾವೇರಿಯ ಮಕ್ಕಳು ಅಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಬಿರುನಾಣಿ ಭಾಗದ ಪುಕೊಳ, ಬಾಡಗರ ಕೇರಿ, ಪೊರಡು, ತೆರಲು, ಟೀ ಶೆಟ್ಟಿಗೇರಿ ಕಾಡಿಗೆ ಕೊಡಲಿ ಹಾಕಿದರೆ, ಕಾವೇರಿ ತಾಯಿಯ ಉಸಿರು ನಿಂತುಹೋಗುತ್ತದೆ. ಪಶ್ಚಿಮ ಘಟ್ಟವೆಂಬ ಹಸಿರು ಸೀರೆ ಹರಿದು ಹೋಗುತ್ತದೆ. ಕಾವೇರಿ ತಾಯಿಯ ಒಡಲು ಶಾಶ್ವತವಾಗಿ ಒಣಗಿ ಹೋಗುತ್ತದೆ.

ನೆಲಜಿಯಲ್ಲಿ ನಡೆದ ಅತ್ಯಾಚಾರ!

ನೆಲಜಿ ಭಾಗದ 80 ಎಕರೆಯ ಮಧ್ಯಭಾಗದಲ್ಲಿ ಹಸಿರು ಕಾಡನ್ನು ನಿರ್ದಯವಾಗಿ ನಾಶ ಮಾಡಿ, ಕೆರೆ ನಿರ್ಮಾಣದ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಸಿದಿರಿ. ಕಾವೇರಿ ತಾಯಿಯ ಎದೆಯ ಮೇಲೆಯೇ ಚೂರಿ ಇಳಿಸಿದಿರಿ. ಆ ಮಣ್ಣು ಇಂದಿಗೂ ಅಳುತ್ತಿದೆ. ಆ ಕಡಿದ ಮರಗಳ ರಕ್ತದ ಕಲೆ ಇನ್ನೂ ಮಾಸಿಲ್ಲ. ನೆಲಜಿಯ ಗಾಯ ಒಣಗುವ ಮುನ್ನವೇ ಮತ್ತೆ ಪುಕೊಳದಲ್ಲಿ ಕೊಡಲಿ ಹಾಕಲು ಬಂದಿದ್ದೀರಾ? ಒಂದೊಂದೇ ಭಾಗವಾಗಿ ಕಾವೇರಿಯ ದೇಹವನ್ನು ಕತ್ತರಿಸಿ ತಿನ್ನುತ್ತಿದ್ದೀರಲ್ಲಾ? ನೆಲಜಿಯ ಕಣ್ಣೀರು ನೆಲ ಸೇರುವ ಮುನ್ನವೇ ಬಿರುನಾಣಿಗೆ ಕೈ ಹಾಕಿದರೆ ಕಾವೇರಿ ತಾಯಿ ಹೇಗೆ ತಡೆದುಕೊಳ್ಳಬೇಕು?

ನೆಮ್ಮದಿಯಿಂದ ಬದುಕಲು ಬಿಡಿ! 

ಇದು ಶೇ.90ರಷ್ಟು ಕೊಡವ ಮಕ್ಕಳೇ ತಲೆತಲಾಂತರದಿಂದ ಬಾಳಿ ಬದುಕಿದ ಕಾವೇರಿಯ ಪುಣ್ಯಭೂಮಿ. ಈ ರಸ್ತೆ ಬಂದರೆ ಹೊರಗಿನವರ ದಂಡು ನುಗ್ಗಿ ಬರುತ್ತದೆ. ಕಾವೇರಿ ತಾಯಿಯ ಮಡಿಲಿನ ಬಿರುನಾಣಿ, ಪುಕೊಳ, ಬಾಡಗರ ಕೇರಿ, ಪೊರಡು, ತೆರಲು, ಟೀ ಶೆಟ್ಟಿಗೇರಿ ಎಲ್ಲಾ “ಮಿನಿ ಕೇರಳ” ಆಗಿ ಹೋಗುತ್ತದೆ.  ಕಾವೇರಿಯ ಭಾಷೆ ಸಾಯುತ್ತದೆ. ಐನ್‌ಮನೆ ಉರುಳುತ್ತದೆ. ಕೈಲ್‌ಪೊಳ್ದ್, ಕಾವೇರಿ ಸಂಕ್ರಮಣ ಎಲ್ಲಾ ನೆನಪು ಮಾತ್ರ ಆಗುತ್ತದೆ. ಎಲ್ಲಾ ಕಡೆಯಿಂದ ನಿರಂತರವಾಗಿ ಏಕೆ ಕಾವೇರಿ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಿದ್ದೀರಾ?  ಕಾವೇರಿಯ ಮಕ್ಕಳಿಗೆ ನಾಳೆ ಒಂದು ಹಿಡಿ ಮಣ್ಣು ಕೂಡ ಉಳಿಯುವುದಿಲ್ಲ.

ನೋವು ಅರ್ಥವಾಗುತ್ತಿಲ್ಲವೇ? 

ಹಿಂದೊಮ್ಮೆ ಕಾವೇರಿಯ ಕಣ್ಣೀರಿಗೆ ಬೆಲೆ ಕೊಟ್ಟು ಈ ಪಾಪದ ಕೆಲಸ ನಿಲ್ಲಿಸಿದ್ದಿರಿ. ಈಗ ಮತ್ತೆ ಅದೇ ಚೂರಿಯನ್ನು ಕಾವೇರಿ ತಾಯಿಯ ಎದೆಗೆ ಇಡುತ್ತಿದ್ದೀರಾ? ಕಾವೇರಿಯದೇ ಕೆಲವು ಮಕ್ಕಳು ಅರಿವಿಲ್ಲದೆ ಇದಕ್ಕೆ ಜೈ ಎನ್ನುತ್ತಿರುವುದನ್ನು ನೋಡಿದರೆ ಕಾವೇರಿ ತಾಯಿಯ ಎದೆ ಒಡೆದು ಹೋಗುತ್ತದೆ. ಅಯ್ಯೋ, ಸ್ವಾರ್ಥಕ್ಕಾಗಿ ತಾಯಿಯ ಸಮಾಧಿ ತೋಡುತ್ತಿದ್ದೀರಲ್ಲಾ?

ಕೇರಳದ ವರದಿಗಾರರು ಕಾವೇರಿಯ ಮಡಿಲಿಗೆ ಬಂದು ಸಮಸ್ಯೆ ಬಗೆಹರಿಸಲು ಹೊರಟಿದ್ದಾರೆ. ಕಾವೇರಿಯ ಮನೆಯ ವಿಷಯದಲ್ಲಿ ನಿಮಗೆ ಏಕೆ ಇಷ್ಟು ಆಸಕ್ತಿ? ಕಾವೇರಿಯ ಕಾಡನ್ನು, ಕಾವೇರಿಯ ನೀರನ್ನು ಕದಿಯಲು ಹಾಕಿದ ಬಲೆಯಲ್ಲವೇ ಇದು? ಕಾವೇರಿ ತಾಯಿಯ ನೋವು ಅರ್ಥವಾಗುತ್ತಿಲ್ಲವೇ?  ಕಾವೇರಿಯ ನಿರ್ಧಾರವನ್ನು ಕಾವೇರಿಯ ಮಕ್ಕಳೇ ಮಾಡಿಕೊಳ್ಳಲು ಬಿಡಿ.

ನಿಜವಾದ ಅಭಿವೃದ್ದಿ ಯಾವುದು?

ಕೊಡಗಿಗೆ ಹೊಸ ಕಾಡು ಕಡಿಯುವ ರಸ್ತೆ ಬೇಡ. ಈಗಿರುವ ರಸ್ತೆಗಳನ್ನೇ ಅಗಲೀಕರಿಸಿ, ಅಗತ್ಯ ಇರುವ ಕಡೆ ಫ್ಲೈ ಓವರ್ ಮಾಡಿ, ಗುಣಮಟ್ಟದಿಂದ ಮೇಲ್ದರ್ಜೆಗೆ ಏರಿಸಿ. ಬತ್ತಿದ ಕಾವೇರಿಯ ಬಾವಿ-ಕೆರೆಗಳಿಗೆ ಮರುಜೀವ ನೀಡಿ. ಅದೇ ಕಾವೇರಿಗೆ ಸ್ವರ್ಗ. ಕೃಷಿ ಮತ್ತು ತೋಟಗಾರಿಕೆಯನ್ನು ಉಳಿಸುವ ಯೋಜನೆಗಳು ಇಂದಿನ ತುರ್ತು ಅಗತ್ಯ.

ದಯವಿಟ್ಟು ಕೊಡಗನ್ನು ಕೊಲ್ಲಬೇಡಿ! ಕೊಡಗನ್ನು ಬದುಕಲು ಬಿಡಿ! ಏಕೆ ಕಾವೇರಿಯ ಮಕ್ಕಳನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ? ಎಲ್ಲಾ ಕಡೆಯಿಂದ ನಿರಂತರವಾಗಿ ಏಕೆ ಕಾವೇರಿ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಿದ್ದೀರಾ??  ನೆಲಜಿಯಲ್ಲಿ ಕಾಡು ಕಡಿದಂತೆ ಬಿರುನಾಣಿಯನ್ನೂ ಕಡಿಯಬೇಡಿ! “ಅಭಿವೃದ್ಧಿ” ಎಂಬ ಹೆಸರಿನಲ್ಲಿ ಕಾವೇರಿ ತಾಯಿಯ ಕತ್ತು ಹಿಸುಕಬೇಡಿ. ಬಿರುನಾಣಿ ಭಾಗದಿಂದ ಕೇರಳಕ್ಕೆ ರಸ್ತೆ ಬೇಡವೇ ಬೇಡ. ಇಲ್ಲವಾದರೆ ಕಾವೇರಿ ತಾಯಿ ಶಾಶ್ವತವಾಗಿ ಅತ್ತೇ ಅತ್ತೇ ಕಲ್ಲಾಗುತ್ತಾಳೆ.   ಕಾವೇರಿಯ ಮಕ್ಕಳು ಅನಾಥರಾಗುತ್ತಾರೆ.

ಕೊನೆಮಾತು… ಕಾವೇರಿ ತಾಯಿಯನ್ನು ಉಳಿಸಿ… ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ…

ಕಾಯಪಂಡ ವಿಷ್ಣುನಾಚಪ್ಪ ಅವರು ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

 

 

admin
the authoradmin

Leave a Reply

Translate to any language you want