ಕೃತಕ ಅಭಾವ ಸೃಷ್ಟಿಸಿ ಗೊಬ್ಬರಕ್ಕೆ ರೈತರಿಂದ ಹೆಚ್ಚು ದರ ವಸೂಲಿ ಆರೋಪ: ಕ್ರಮಕ್ಕೆ ಕೆಆರ್ ಎಸ್ ಪಕ್ಷ ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರೈತರು ಪ್ರಸ್ತುತ ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗಿದೆ. ಆದರೆ ಜಿಲ್ಲೆಯ ಕೆಲವು ರಸಗೊಬ್ಬರ ಮಾರಾಟಗಾರರು ಸರ್ಕಾರ ನಿಗದಿಪಡಿಸಿರುವ ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ತೊಂದರೆ ಉಂಟು ಮಾಡುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಆರ್ ಎಸ್ ಪಕ್ಷದ ರೈತ ಘಟಕ ಆಕ್ರೋಶ ವ್ಯಕ್ತಪಡಿಸಿದ್ದು ಈ ಸಂಬಂಧ ಹುಣಸೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಈ ಕುರಿತಂತೆ ಕೆಆರ್ ಎಸ್ ಪಕ್ಷದ ರೈತ ಘಟಕದ ಮೈಸೂರು ಜಿಲ್ಲಾಧ್ಯಕ್ಷ ಸ್ವಾಮಿ,. ಪ್ರಧಾನ ಕಾರ್ಯದರ್ಶಿ ಮೂರ್ತಿ, ಹುಣಸೂರು ತಾಲೂಕಿನ ರೈತ ಘಟಕ ಅಧ್ಯಕ್ಷರು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್. ರಂಗಣ್ಣ. ರವಿ ಸತೀಶ್ ಪದಾಧಿಕಾರಿಗಳು ಮತ್ತು ಸೈನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಸಬ್ಸಿಡಿ ವ್ಯಾಪ್ತಿಗೆ ಬರುವ 45 ಕೆಜಿ ಯೂರಿಯಾ ಚೀಲದ ನಿಗದಿತ ದರ ₹266 ಆಗಿದ್ದರೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
50 ಕೆಜಿ ಡಿಎಪಿ ಗೊಬ್ಬರದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ರೈತರು ಗೊಬ್ಬರ ಖರೀದಿಸುವ ಸಂದರ್ಭದಲ್ಲಿ ಅನಾವಶ್ಯಕ ಲಿಂಕ್ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರಿ ಹಣ ಸುಲಿಗೆ ಮಾಡುತ್ತಿರುವ ಆರೋಪಗಳೂ ಇವೆ. ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟ ಕೇಂದ್ರಗಳ ಮೇಲೆ ತಕ್ಷಣ ವಿಶೇಷ ಪರಿಶೀಲನೆ ನಡೆಸಬೇಕು, ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುವ ಡೀಲರ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅಗತ್ಯವಿದ್ದಲ್ಲಿ ಪರವಾನಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತರಿಗೆ ಅಗತ್ಯ ಪ್ರಮಾಣದಲ್ಲಿ ಯೂರಿಯಾ, ಡಿಎಪಿ ಹಾಗೂ ಇತರೆ ರಸಗೊಬ್ಬರಗಳ ಸಮರ್ಪಕ ಪೂರೈಕೆ ಖಚಿತಪಡಿಸಬೇಕು. ಎಲ್ಲಾ ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಹಾಗೂ ದಾಸ್ತಾನು ವಿವರಗಳ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಬೇಕು. ಗೊಬ್ಬರ ಸಂಬಂಧಿತ ದೂರುಗಳನ್ನು ಸಲ್ಲಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಗೊಬ್ಬರ ಖರೀದಿಯೊಂದಿಗೆ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಲು ಒತ್ತಡ ಹೇರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಗೊಬ್ಬರ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರೈತರ ಹಿತದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.







