ಮೈಸೂರು: ಮಳಲಿ ಗ್ರಾಮದ ಪ್ರಮೀಳಾ ಹಾಗೂ ನಾಗರಾಜಮೂರ್ತಿ ಅವರ ಪುತ್ರಿ ಮಾನಸ ಮತ್ತು ಕಟ್ಟಹಳ್ಳಿ ಗ್ರಾಮದ ಮಂಜುಳ ಹಾಗೂ ದೊಡ್ಡರಾಮಪ್ಪ ಅವರ ಪುತ್ರ ಭರತ್ ಕುಮಾರ್ ಅವರ ವಿವಾಹವು ಶ್ರೀ ಸಂಗಮ ಕ್ಷೇತ್ರದಲ್ಲಿ ಶ್ರೀ ಮಹಾದೇವತಾತರವರ ಪವಿತ್ರ ಸನ್ನಿಧಿಯಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ಸಂಪಾದಕತ್ವದ “ವಚನಸಿರಿ” ಕೃತಿಯನ್ನು ಸೋಮಳ್ಳಿ ವೀರಸಿಂಹಾಸ ಶೀಲಾಮಠದ ಪೂಜ್ಯ ಶ್ರೀ ಸಿದ್ಧಮಲ್ಲಸ್ವಾಮಿಗಳು ಲೋಕಾರ್ಪಣೆ ಮಾಡಿದರು. ಜಕ್ಕಳ್ಳಿ ಮಠದ ಪೂಜ್ಯ ಶ್ರೀ ಶಿವಕುಮಾರಸ್ವಾಮಿಗಳು ಮತ್ತು ತಳೂರು ದಾಸೋಹ ಮಠದ ಶ್ರೀ ಮಹಾದೇವಸ್ವಾಮಿಗಳು, ಕಾರ್ಯಕ್ರಮಕ್ಕೆ ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ವಿಶೇಷವಾಗಿ, ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಸುಮಾರು 1000 ಮಂದಿಗೆ ವಚನ ಸಾಹಿತ್ಯದ ಅರಿವು ಮೂಡಿಸುವ ಉದ್ದೇಶದಿಂದ “ವಚನಸಿರಿ” ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಇದೇ ಸಂದರ್ಭದಲ್ಲಿ ವಚನ ಸಾಹಿತ್ಯದ ಪ್ರಸಾರ ಮತ್ತು ಶರಣ ಸಂಸ್ಕೃತಿಯ ಸೇವೆಯನ್ನು ಗುರುತಿಸಿ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವರಾಜ್, ಮಹದೇವಸ್ವಾಮಿ, ಗುರುಕಿರಣ್, ಎಚ್.ಡಿ.ಕೋಟೆ ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಕೆ.ಎಂ. ಮಹೇಶ್, ಕೆಂಡಗಣ್ಣಸ್ವಾಮಿ, ಲೋಕೇಶ್ ಮೂರ್ತಿ ಸೇರಿದಂತೆ ಅನೇಕ ಗಣ್ಯರು, ಬಂಧು-ಬಳಗ ಹಾಗೂ ಭಕ್ತರು ಉಪಸ್ಥಿತರಿದ್ದರು. ವಿವಾಹ ಮಹೋತ್ಸವವು ಧಾರ್ಮಿಕತೆ, ಸಾಹಿತ್ಯ ಸೇವೆ ಮತ್ತು ಶರಣ ಸಂಸ್ಕೃತಿಯ ಸಂದೇಶವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ವಿಶಿಷ್ಟ ಕಾರ್ಯಕ್ರಮವಾಗಿ ಗಮನ ಸೆಳೆಯಿತು.








