LatestMysore

ವಚನಗಳು ಬದುಕಿನಲ್ಲಿ ಅರಳಿದಾಗ ಮಾನವ ಲಿಂಗಮಯನಾಗಿ ಮಹಾದೇವನಾಗುತ್ತಾನೆ: ವಚನ ಕುಮಾರಸ್ವಾಮಿ

ಕೆ.ಆರ್.ಪೇಟೆ: ವಚನಗಳು ಕೇವಲ ಓದುವ ಸಾಹಿತ್ಯವಲ್ಲ; ಅವು ಬದುಕಿನ ದಾರಿದೀಪಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯ ದೇಹ, ಮನಸ್ಸು ಮತ್ತು ಚಿಂತನೆ ಲಿಂಗಮಯವಾಗಿ ರೂಪುಗೊಂಡು, ಮಾನವ ಮಹಾದೇವನಾಗುವ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಬಸವಧರ್ಮ ಕೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೆ.ಆರ್.ಪೇಟೆ ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದ ಅವರು, ಅಲ್ಲಮಪ್ರಭುಗಳ ಪ್ರಸಿದ್ಧ ವಚನವಾದ ಹರಿವ ನೀರಿಗೆ ಮೈಯೆಲ್ಲ ಕಾಲು, ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ, ಬೀಸುವ ಗಾಳಿಗೆ ಮೈಯೆಲ್ಲ ಕೈ, ಗುಹೇಶ್ವರ ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗ ಎಂಬ ವಚನವನ್ನು ಆಳವಾಗಿ ವಿಶ್ಲೇಷಿಸಿದರು.

ನೀರು ತನ್ನ ಪ್ರತಿಯೊಂದು ಹನಿಯಿಂದ ಜೀವಜಗತ್ತಿಗೆ ಜೀವ ನೀಡುತ್ತದೆ. ಬೆಂಕಿ ತನ್ನ ಸಂಪೂರ್ಣ ಅಸ್ತಿತ್ವದಿಂದ ಬೆಳಕು ಮತ್ತು ಉಷ್ಣವನ್ನು ಹರಡುತ್ತದೆ. ಗಾಳಿ ತನ್ನ ಎಲ್ಲ ದಿಕ್ಕುಗಳಿಂದ ಜೀವಿಗಳಿಗೆ ಉಸಿರಾಗಿ, ಚೈತನ್ಯವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಕೃತಿಯ ಈ ಮೂರು ಶಕ್ತಿಗಳಂತೆ ಶರಣರು ತಮ್ಮ ದೇಹದ ಪ್ರತಿಯೊಂದು ಅಂಗವನ್ನೂ ಶಿವತತ್ವದ ಕಾರ್ಯಕ್ಕೆ ಸಮರ್ಪಿಸಿಕೊಂಡ ಕಾರಣ ಅವರ ಬದುಕು ಲಿಂಗಮಯವಾಯಿತು. ಆದ್ದರಿಂದಲೇ ಅವರು ದೇವರ ಪ್ರತಿರೂಪರಾದರು.

ಇದೇ ಆಶಯವನ್ನು ಇನ್ನಷ್ಟು ಸ್ಪಷ್ಟಪಡಿಸುವ ಅಲ್ಲಮಪ್ರಭುಗಳ “ಕಾಲುಗಳೆಂಬವು ಗಾಳಿ ಕಂಡಯ್ಯ…” ಎಂಬ ವಚನವನ್ನು ಉಲ್ಲೇಖಿಸಿದ ಅವರು, ಶರಣನ ದೇಹದ ಪ್ರತಿಯೊಂದು ಅಂಗವೂ ದೈವಸಾಧನೆ ಮತ್ತು ಲೋಕಕಲ್ಯಾಣಕ್ಕಾಗಿ ಮೀಸಲಾಗಿರಬೇಕು ಎಂಬ ಸಂದೇಶವನ್ನು ಮನದಟ್ಟು ಮಾಡಿದರು.

ಮುಂದುವರಿದು ಬಾಲಸಂಗಯ್ಯ ಅಪ್ರಮಾಣದೇವರ “ತನ್ನ ತಾನರಿತು ತಾನಾರೆಂದು ತಿಳಿದಡೆ ತಾನೇ ದೇವ” ಎಂಬ ವಚನವನ್ನು ಉದಾಹರಿಸಿದ ಅವರು, ಆತ್ಮಜ್ಞಾನವೇ ಶಿವಜ್ಞಾನಕ್ಕೆ ಮೊದಲ ಮೆಟ್ಟಿಲು. ತನ್ನೊಳಗಿನ ದೈವತ್ವವನ್ನು ಅರಿತು, ಬಸವಣ್ಣನವರು ಬೋಧಿಸಿದ ಕಾಯಕ, ದಾಸೋಹ, ಸಮಾನತೆ ಮತ್ತು ಸದಾಚಾರದ ಮೌಲ್ಯಗಳನ್ನು ಆಚರಣೆಗೆ ತಂದಾಗ ಮಾನವ ಮಹಾದೇವನಾಗುವ ಉನ್ನತ ಸ್ಥಿತಿಯನ್ನು ತಲುಪಬಹುದು ಎಂದು ಹೇಳಿದರು.

ವಚನಗಳನ್ನು ಪಠಿಸುವುದಕ್ಕಿಂತ ಅವುಗಳ ತಾತ್ವಿಕ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಆಗ ವ್ಯಕ್ತಿಯ ಬದುಕು ಮಾತ್ರವಲ್ಲ, ಸಮಾಜವೂ ಪರಿವರ್ತನೆಗೊಳ್ಳುತ್ತದೆ. ಇದೇ ಬಸವಾದಿ ಶರಣರ ವಚನಗಳ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚೆನ್ನವೀರ ಮಹಾಸ್ವಾಮಿಗಳು, ಬಸವಣ್ಣನವರು ಅಜ್ಞಾನ, ಅಸಮಾನತೆ ಮತ್ತು ಮೂಢನಂಬಿಕೆಗಳಿಂದ ಬಳಲುತ್ತಿದ್ದ ಸಮಾಜವನ್ನು ಜ್ಞಾನದ ಬೆಳಕಿನೆಡೆಗೆ ಕರೆದೊಯ್ದ ಮಹಾನ್ ಸಮಾಜ ಸುಧಾರಕರಾಗಿದ್ದರು.

ಸೂಳೆ ಸಂಕವ್ವೆಯಂತಹ ಮಹಿಳೆಯನ್ನು ಸಮಾಜ ತಿರಸ್ಕರಿಸಿದ್ದ ಕಾಲದಲ್ಲಿ, ಬಸವಣ್ಣನವರು ಆಕೆಯೊಳಗಿನ ಭಕ್ತಿ ಮತ್ತು ಮಾನವೀಯತೆಯನ್ನು ಗುರುತಿಸಿ ಶರಣ ಸಂಕವ್ವೆಯನ್ನಾಗಿ ರೂಪಿಸಿದರು. ವ್ಯಕ್ತಿಯ ಶ್ರೇಷ್ಠತೆಯನ್ನು ಜನ್ಮ ಅಥವಾ ಜಾತಿಯಿಂದಲ್ಲ, ಅವರ ಗುಣ, ಕಾಯಕ, ಭಕ್ತಿ ಮತ್ತು ಜ್ಞಾನದಿಂದ ಅಳೆಯಬೇಕು ಎಂಬ ಬಸವಣ್ಣನವರ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರು ಬಸವಧರ್ಮ ಕೇಂದ್ರದ ಅಧ್ಯಕ್ಷ ಬಸವಪ್ರಿಯ ನಾಗರಾಜ್ ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಸಂದೇಶವನ್ನು ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ತಲುಪಿಸುವ ಅಗತ್ಯವಿದೆ. ಬಸವತತ್ವವು ಕೇವಲ ನಗರಗಳಿಗೆ ಸೀಮಿತವಾಗದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಪರಿಚಯವಾಗಬೇಕು.

ಜೊತೆಗೆ ಬಸವಾದಿ ಶರಣರ ಜೀವನ ಹಾಗೂ ಅವರು ನಡೆದಾಡಿದ ಪವಿತ್ರ ಶರಣ ಕ್ಷೇತ್ರಗಳ ಮಹತ್ವವನ್ನು ಜನರಿಗೆ ಪರಿಚಯಿಸುವ ಕಾರ್ಯ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಬಸವಧರ್ಮ ಕೇಂದ್ರ ಚಾರಿಟಬಲ್ ಟ್ರಸ್ಟ್ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಸವತತ್ವದ ಪ್ರಚಾರ ಮತ್ತು ಪ್ರಸಾರಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಿರುಗಾವಲು ಗ್ರಾಮದ ವನ್ಯಜೀವಿ ಛಾಯಾಗ್ರಾಹಕ ಕೆ ಜಿ ಸಿದ್ಧಲಿಂಗಪ್ರಸಾದ್, ಕೆ ಆರ್ ಪೇಟೆ ತಾ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಸುಜೇಂದ್ರ ಕುಮಾರ್, ನಾಗಮಂಗಲ ತಾ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಎಂ. ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಟ್ಟೆಹಳ್ಳಿ ಬಸವಕೇಂದ್ರದ ಅಧ್ಯಕ್ಷ ಕೆ ಟಿ ಪ್ರಕಾಶ್, ಗವಿಮಠದ ಬಸವ ವಿಕಾಸ್, ಬೆಂಗಳೂರು ವಕೀಲೆ ಚಂದ್ರಕಲಾ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಬಸವರಾಜು, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ನಂಜಯ್ಯ, ಗವಿಮಠದ ಬಸವರಾಜಸ್ವಾಮಿಗಳು ಮತ್ತು ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

admin
the authoradmin

Leave a Reply