ಕುಶಾಲನಗರ (ಆರ್ ಹೆಚ್): ಬಲವಂತದ ಮತಾಂತರ ಹಾಗೂ ಮಹಿಳಾ ದೌರ್ಜನ್ಯ ಖಂಡಿಸಿ ಹಾಗೂ ಧಾರ್ಮಿಕ ಅಸ್ಮಿತೆ ಉಳಿಸುವ ಉದ್ದೇಶದಿಂದ ಹಿಂದೂ ಸುರಕ್ಷಾ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.ಕಾವೇರಿ ನಿಸರ್ಗಧಾಮದಿಂದ ಬೃಹತ್ ಜಾಗೃತಿ ಜಾಥಾ ಆರಂಭವಾಯಿತು. ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಬಿ.ಅಮೃತ್ ರಾಜ್ ನೇತೃತ್ವದಲ್ಲಿ ಆರಂಭಗೊಂಡ
ಜಾಥಾದಲ್ಲಿ ಸಹಸ್ರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ಕೇಸರಿ ಧ್ವಜ, ಭಗವದ್ ಧ್ವಜ ಹಿಡಿದು ಭಾಗವಹಿಸುವ ಮೂಲಕ ಗಮನ ಸೆಳೆದರು. ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಮುಖಂಡರಾದ ಎಂ.ವಿ.ವಿಜಯ್ ,ಬಿ.ಬಿ.ಭಾರತೀಶ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಹುರುಪು ತುಂಬಿದರು.ಜಾಥಾದಲ್ಲಿ ಜೈ ಶ್ರೀರಾಮ್’, ಭಾರತ್ ಮಾತಾ ಕೀ ಜೈ’ ಘೋಷಣೆಗಳು ಮುಗಿಲು ಮುಟ್ಟಿದವು. ನಿಸರ್ಗಧಾಮದಿಂದ ಆರಂಭವಾದ ಜಾಥಾವು ಪಟ್ಟಣದ ಮುಖ್ಯರಸ್ತೆಯ ಮೂಲಕ ಗಣಪತಿ ದೇವಸ್ಥಾನದವರೆಗೆ ಸಾಗಿ, ಬಳಿಕ ಕಾರು ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆಯಾಗಿ ಪರಿವರ್ತನೆಗೊಂಡಿತು.

ಬೃಹತ್ ಬೆಂಬಲ: ಹಿಂದೂ ಜಾಗರಣ ವೇದಿಕೆ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ವಿವಿಧ ಸಂಘಟನೆಗಳು ಸೇರಿದಂತೆ 20ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು, ಯುವಕರು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಬಂದ್ ಮಾಡಿ ಎಲ್ಲಾ ಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಸ್ವಯಂಪ್ರೇರಿತ ಬಂದ್ : ಜಾಗೃತಿ ಜಾಥಾದ ಹಿನ್ನೆಲೆಯಲ್ಲಿ ಅರ್ಧದಿನ ಪಟ್ಟಣದ ವರ್ತಕರು ಸ್ವಯಂಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು.
ಬಿಗಿ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.ನೀರು ವಿತರಣೆ : ಜಾಥಾದಲ್ಲಿ ಪಾಲ್ಗೊಂಡಿರುವ ಹಿಂದೂ ಕಾರ್ಯಕರ್ತರಿಗೆ ಎನ್ಟಿಸಿ ಕೆಂದ್ರ ಕಾರ್ಯಕರ್ತರು ಕುಡಿಯುವ ನೀರಿನ ಬಾಟಲ್ ವಿತರಣೆ ಮಾಡಿದರು.

ಕಾರು ನಿಲ್ದಾಣದ ವೇದಿಕೆಯಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ,ಹಿಂದು ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕರು ಸತೀಶ್ ದಾವಣಗೆರೆ, ಜಾತಿ, ಮತ, ಪಕ್ಷ, ಪ್ರಾಂತ ಬೇಧ ಮರೆತು ಹಿಂದೂಗಳು ಒಂದಾದರೆ ಮಾತ್ರ ಮತಾಂತರಕ್ಕೆ ಕಡಿವಾಣ ಹಾಕಬಹುದು. ಹಿಂದೂ ಸಮಾಜ ಉಳಿದಿರುವುದೆ ಮಹಿಳೆಯರಿಂದ ಪ್ರತಿ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ದೇಶದ ಹಿರಿಮೆ ಹೇಳುವ ಕತೆ ಹೇಳಬೇಕು. 1995ರಲ್ಲೇ ಕೊಡಗಿನಲ್ಲಿ ಲವ್ ಜಿಹಾದ್ ಶುರುವಾಗಿದೆ.
ವೀರ ಸೇನಾನಿಗಳ ನಾಡಿನಲ್ಲಿ ಇಂತಹ ಹುನ್ನಾರ ಹೇಗೆ ಶುರುವಾಯಿತು ಎನ್ನುವ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕು ಎಂದರು. ಲವ್ ಜಿಹಾದ್ ಎಂಬುದು ಎಲ್ಲರೂ ಅಂದುಕೊಷ್ಟು ಸುಲಭ ಅಲ್ಲ. ನಾವೆಲ್ಲರೂ ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ತುಷ್ಠೀಕರಣ ಮಾಡಬಾರದು ಎಂದು ಸಲಹೆ ನೀಡಿದರು.
ಪ್ರೀತಿ, ಪ್ರೇಮಕ್ಕೆ ಜಾತಿ ಇಲ್ಲ ಎನ್ನುತ್ತಾರೆ. ಹಿಂಸೆ ನೀಡಿ ತಲಾಖ್ ಕೊಟ್ಟಾಗ ಇವರೆಲ್ಲಾ ಎಲ್ಲಿ ಹೋಗಿದ್ದರು ? ಎಂದು ಜಾತ್ಯಾತೀತ ಮುಖಂಡರನ್ನು ಪ್ರಶ್ನಿಸಿದರು.ಶಾಂತಿದೂತರರು ಅನ್ನಿಸಿಕೊಂಡವರು ಸ್ವರ್ಗ ಸಿಗುವ ಆಸೆಯಿಂದ ಹಿಂದೂಗಳ ಹೆಣ್ಣುಮಕ್ಕಳನ್ನು ಮದುವೆ ಆಗುವ ಷಡ್ಯಂತರ ಮಾಡುತ್ತಿದ್ದಾರೆ ಈ ಬಗ್ಗೆ ಹಿಂದೂಬಾಂಧವರು ಎಚ್ಚರಿಕೆ ವಹಿಸಬೇಕು ಎಂದರು.

ತಾಯಿ ಭಾರತಿ ವಿಶ್ವಗುರು ಆಗಬೇಕು. ಭಾರತೀಯರು ಮುಸ್ಲಿಂ ವಿರೋಧಿಗಳಲ್ಲ. ಎಲ್ಲಾ ಮುಸ್ಲಿಂ, ಕ್ರಿಶ್ಚಿಯನ್ನರು ಕೆಟ್ಟವರಲ್ಲ. ವಂದೇ ಮಾತರಂ, ರಾಷ್ಟ್ರಗೀತೆಗೆ ಗೌರವ ಕೊಡದವರು ಮಾತ್ರ ರಾಷ್ಟ್ರದ್ರೋಹಿಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದ ಅವರು ನಮ್ಮ ವೀರ ರಕ್ತದ ಪರಿಚಯ ಇರುವವರು ಮತಾಂತರ ಆಗುವುದಿಲ್ಲ ಎಂದು ಹೇಳಿದರು.
ಹಿಂದು ಸುರಕ್ಷ ಸಮಿತಿ ಸಂಚಾಲಕ ಅಮೃತ ರಾಜ್ ಮಾತನಾಡಿ, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಲವಂತದ ಮತಾಂತರ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಜಾಗೃತಿ ಜಾಥಾ ನಡೆಸಲಾಗಿದೆ ಎಂದರು.
ಈ ಪಿಡುಗು ಯಾವುದೇ ವರ್ಗಕ್ಕೆ ಸೀಮಿತ ಅಲ್ಲ. ಬಡವರು, ಶ್ರೀಮಂತರು ಬಲಿಯಾಗುತ್ತಿದ್ದಾರೆ. ದೇಶದ ವಿವಿಧೆಡೆ ನಡೆಯುತ್ತಿದ್ದ ಪ್ರಕರಣ ಕೊಡಗಿಗೂ ಕಾಲಿಟ್ಟಿದೆ. ಭಾರತೀಯರು ಸಂವೇದನಶೀಲರು. ಹಾಗಾಗಿ ಮತಾಂತರ ಪ್ರಕರಣಗಳು ಹೆಚ್ಚು ಹೊರಗೆ ಬರುತ್ತಿಲ್ಲ. ಕುಶಾಲನಗರದ ಕಾಲೇಜುಗಳು, ವಾಣಿಜ್ಯ ಕೇಂದ್ರಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ಮುಂದುವರಿಸಲಾಗುತ್ತದೆ.ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಹಿಂದೂ ಸುರಕ್ಷತಾ ಸಮಿತಿ ಮುಖಂಡ ಭರತ್ ಮಾಚಯ್ಯ ಮಾತನಾಡಿ,ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಇಂದಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅಗತ್ಯ ಇದೆ. ಭಗವದ್ಗೀತೆ ಸೇರಿದಂತೆ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಾಗುವುದು ಎಂದರು.

ಹಿಂದೂ ಜಾಗರಣ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿ, ಲವ್ ಜಿಹಾದ್ ಪ್ರಕರಣ ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿದೆ. ಹಿಂದೂ ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ. ಕೊಡಗಿನ ಮೂಲೆ ಮೂಲೆಗಳಲ್ಲಿ ಬೇರೆ ಕೋಮಿನ ಅಂಗಡಿಗಳಲ್ಲಿ ಹಿಂದೂ ಯುವತಿಯರನ್ನು ಸೇರಿಸಿಕೊಂಡು ಮತಾಂತರ ನಡೆಯುತ್ತಿದೆ. ಕಾಲೇಜು ಹಂತದಲ್ಲೇ ಇಂತಹ ಪ್ರಯತ್ನ ನಡೆಯುತ್ತಿದೆ. ಮತಾಂತರ ಪ್ರಕರಣಗಳನ್ನು ದಿಕ್ಕು ತಪ್ಪಿಸುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ದೂರು ಕೊಟ್ಟವರ ಮೇಲೆಯೇ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಜವಾಬ್ದಾರಿಯನ್ನು ಮರೆತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಇದಕ್ಕೆ ಪ್ರೇರೇಪಣೆ ಮಾಡುತ್ತಿದೆ. ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿದ್ದರೆ ಕುಶಾಲನಗರದಲ್ಲಿ ಇಂತಹ ಪ್ರಕರಣ ನಡೆಯುತ್ತಿರಲಿಲ್ಲ. ಲವ್ ಜಿಹಾದ್, ಗೋಹತ್ಯೆ ಪ್ರಕರಣ ಮಾಡಿರುವುದು, ಮಾಡುತ್ತಿರುವುದು ಯಾರು ಎನ್ನುವುದು ಪೊಲೀಸರಿಗೆ ಗೊತ್ತಿದೆ. ಕ್ರಮ ತೆಗೆದುಕೊಳ್ಳದಿದ್ದರೆ ಕೊಡಗಿನ ಜಾಗೃತ ಹಿಂದೂ ಸಮಾಜ ಹೀಗೆ ಕುಳಿತುಕೊಳ್ಳುವುದಿಲ್ಲ. ಪ್ರಕರಣ ನಡೆದಿರುವ ವಾಣಿಜ್ಯ ಕೇಂದ್ರದ ಮಾಲೀಕರನ್ನು ತನಿಖೆಗೆ ಒಳಪಡಿಸಬೇಕು. ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭ ಮುಖಂಡರಾದ ಚಿಲ್ಲನ ಗಣಿಪ್ರಸಾದ್, ವಸಂತ ರೈ, ಚಂದ್ರಶೇಖರ ಹೇರೂರು, ಜ್ಯೋತಿ ಕುದುಪಜೆ, ಪ್ರಶಾಂತ್, ಹಿಂದೂ ಜಾಗರಣ ವೇದಿಕೆ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು








