ಮೈಸೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್ ಹಾಕಿ ವಿಕೃತ ಸಂತೋಷ ಪಡುವ ವಿಕೃತರಿಗೆ ಕೊರತೆಯಿಲ್ಲ. ಇಂಥವರ ಕಾಮೆಂಟ್ ಗಳಿಂದ ಹಲವರು ಮುಜುಗರ ಅನುಭವಿದ್ದಾರೆ. ಅಷ್ಟೇ ಅಲ್ಲದೆ ಹಲವರ ಮೇಲೆ ದೂರು ದಾಖಲಾಗಿ ಜೈಲ್ ಸೇರಿದ್ದಾರೆ. ಆದರೂ ಕೆಲವರು ಬುದ್ದಿ ಕಲಿತಿಲ್ಲ. ನಟಿಯರಿಗೆ, ಮಹಿಳೆಯರಿಗೆ ಎಲ್ಲರಿಗೂ ಕಾಮೆಂಟ್ ಮಾಡುತ್ತಿದ್ದು ಇದೀಗ ಅನಾಮಿಕನೊಬ್ಬ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷ ಹರೀಶ್ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ್ದು ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ವರ್ಷ ಹರೀಶ್ ಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ dkgowda8456 ಹೆಸರಿನ ಅನಾಮಿಕ ಖಾತೆಯಿಂದ ಅಶ್ಲೀಲ ಕಮೆಂಟ್ ಮಾಡಲಾಗಿದೆ. ಇದರಿಂದ ವಿಚಲಿತರಾಗಿರುವ ವರ್ಷ ಹರೀಶ್ ಗೌಡ ಅವರು, ಅಶ್ಲೀಲ ಕಾಮೆಂಟ್ ಹಾಕಿ ಮಾನಸಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪಿಯನ್ನು ಪತ್ತೆ ಮಾಡಿ, ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವರ್ಷ ಹರೀಶ್‌ಗೌಡ ಅವರು ಸಾರ್ವಜನಿಕ ವಲಯದಲ್ಲಿ ಸಕ್ರಿಯವಾಗಿದ್ದು, ವರ್ಷ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳು ಹಾಗೂ ಕಷ್ಟ-ಸುಖಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದಾರೆ. ವರ್ಷ ಅವರ ಜನಪರ ಕಾರ್ಯವೈಖರಿಯನ್ನು ಸಹಿಸದ ಕೆಲವರು ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡುತ್ತಿರುವ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲಿ ನಮ್ಮ ಮಹಿಳೆಯರನ್ನು ಗೌರವ ದಿಂದ ಪೂಜಿಸಲಾಗುತ್ತಿದೆ. ಆದರೆ ಸಾಮಾಜಿಕಲ ಜಾಲತಾಣದಲ್ಲಿ ವಿಕೃತ ಮನಸ್ಸಿನವರ ಸಂಖ್ಯೆ ಹೆಚ್ಚಾಗಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇಂತಹ ಮನಸ್ಥಿತಿಯವರಿಗೆ ಯುವತಿಯರು, ಮಹಿಳೆಯರು ಯಾರೆಂದು ನೋಡದೆ ಕಾಮೆಂಟ್ ಮಾಡುವುದು ಕಂಡು ಬರುತ್ತಿದ್ದು ಅಂಥವರ ವಿರುದ್ಧ ದೂರು ನೀಡುವ ಮೂಲಕ ಅವರನ್ನು ಮಟ್ಟ ಹಾಕಲು ಹೆಣ್ಣು ಮಕ್ಕಳು ಮುಂದಾಗ ಬೇಕಾಗಿದೆ.
ಇನ್ನು ದೂರಿನ ಜೊತೆಗೆ ವರ್ಷ ಹರೀಶ್ ಗೌಡರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಣುವವರ ಮೇಲೆ ಕಾನೂನು ಕ್ರಮವಾಗ ಬೇಕೆಂಬುದು ನನ್ನ ಆಶಯವಾಗಿದ್ದು ಇನ್ನೂ ಮುಂದೆ ಯಾವ ಮಹಿಳೆಯರ ಬಗ್ಗೆಯೂ ಮಾತನಾಡದೆ ಇರುವ ಬಗ್ಗೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ತಿಳಿಸಿದ್ದಾರೆ.








