ಇವತ್ತು ಆಧುನಿಕತೆ ನಿರೀಕ್ಷೆ ಮೀರಿ ಬೆಳೆದಿದೆ.. ಹಾಗಾಗಿ ಎಲ್ಲವೂ ಗೊತ್ತಾಗಿ ಬಿಡುತ್ತದೆ. ಆದರೆ ಆರೇಳು ಶತಮಾನಗಳ ಹಿಂದೆ ಹೀಗಿರಲಿಲ್ಲ. ಆದರೂ ಕೆಲವೊಂದು ವಿಚಾರಗಳಲ್ಲಿ ಇವತ್ತಿನಂತೆ ಅವತ್ತೂ ಕುತೂಹಲವಿತ್ತು. ಅದರಲ್ಲೂ ಕುಟುಂಬದಲ್ಲಿ ಯಾರಾದರೂ ಗರ್ಭಿಣಿ ಆಗಿದ್ದರೆ ಹುಟ್ಟುವ ಮಗು ಗಂಡಾಗುತ್ತೋ? ಹೆಣ್ಣಾಗುತ್ತೋ? ಎಂಬ ಕಾತರವಂತು ಇದ್ದೇ ಇತ್ತು…
ಕೆಲವರು ಕುತೂಹಲ ತಣಿಸಲು ಗರ್ಭಿಣಿಯಾಗುತ್ತಿದ್ದಂತೆಯೇ ಸ್ಕ್ಯಾನಿಂಗ್ ಮೂಲಕ ಭ್ರೂಣ ಗಂಡೋ ಅಥವಾ ಹೆಣ್ಣೋ ಎಂದು ಪತ್ತೆ ಮಾಡುವುದು ಕಾನೂನು ಬಾಹಿರವೆಂದು ತಿಳಿದಿದ್ದರೂ ವಾಮಮಾರ್ಗದ ಮೂಲಕ ಅಂತಹ ದುಸ್ಸಾಹಸಕ್ಕೆ ಮುಂದಾಗಿ ಸಿಕ್ಕಿ ಬಿದ್ದ ಘಟನೆಗಳು ಬೇಕಾದಷ್ಟಿವೆ. ಕೆಲವರಿಗೆ ಭ್ರೂಣ ಪತ್ತೆಯನ್ನೇ ದಂಧೆಯನ್ನಾಗಿ ಮಾಡಿಕೊಂಡು ಹಣಕ್ಕಾಗಿ ಮಾಡಬಾರದ್ದೆಲ್ಲವನ್ನು ಮಾಡಿ ಕಂಬಿ ಹಿಂದೆ ಹೋದ ಘಟನೆಗಳಿವೆ. ಅದೆಲ್ಲವೂ ಆಚೆಗಿರಲಿ… ಇಲ್ಲಿ ಹೇಳುತ್ತಿರುವುದು ಚೈನಾ ಚಾರ್ಟ್ ಬಗ್ಗೆ..

ಹಿಂದಿನ ಕಾಲದಲ್ಲಿ ಚೈನಾ ಚಾರ್ಟ್ ಮೂಲಕ ತಮಗೆ ಹುಟ್ಟುವ ಮಗು ಗಂಡೋ? ಹೆಣ್ಣೋ? ಎಂಬುದನ್ನು ತಿಳಿದುಕೊಳ್ಳುತ್ತಿದ್ದರಂತೆ. ಈ ಚೈನಾ ಚಾರ್ಟ್ ಅವತ್ತಿನ ಕಾಲದಲ್ಲಿ ಜನಪ್ರಿಯವಾಗಿತ್ತು. ಇದು ಶೇ97ರಷ್ಟು ನಿಖರವಾದ ಫಲಿತಾಂಶವನ್ನು ನೀಡುತ್ತಿತ್ತು ಎನ್ನುವುದು ಅವತ್ತಿನ ನಂಬಿಕೆಯಾಗಿತ್ತು. ಇವತ್ತು ಇದರ ಬಗ್ಗೆ ಹೇಳುವುದು ಅಪ್ರಸ್ತುತವೇ.. ಆದರೆ ಹಿಂದಿನ ಕಾಲದಲ್ಲಿ ಇಂತಹದೊಂದು ಚಾರ್ಟ್ ಇತ್ತು ಎನ್ನುವುದೇ ಅಚ್ಚರಿಯ ವಿಚಾರವಾಗಿದೆ.
ಹಾಗೆನೋಡಿದರೆ ಹುಟ್ಟುವ ಮಗುವಿನ ಬಗೆಗಿನ ಕುತೂಹಲ ಇಂದು ನಿನ್ನೆಯದಲ್ಲ. ಮಾನವ ಸೃಷ್ಠಿಯಾದಂದಿನಿಂದ ಅದು ಮುಂದುವರೆದುಕೊಂಡು ಬಂದಿದೆ. ಸುಮಾರು 700 ವರ್ಷಗಳ ಹಿಂದೆಯೇ ಹುಟ್ಟಲಿರುವ ಮಗುವನ್ನು ಅದು ಹೊಟ್ಟೆಯಲ್ಲಿರುವಾಗಲೇ ‘ಚಾರ್ಟ್’ ಮೂಲಕ ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳುತ್ತಿದ್ದರು ಅಂದ್ರೆ ನಮಗೆ ಅಚ್ಚರಿಯಾಗಬಹುದು ಆದ್ರೆ ಇದು ಸತ್ಯ.
ಈ ಚಾರ್ಟ್ ಇವತ್ತಿಗೂ ಚೀನಾದ ಬೀಜಿಂಗ್ ಸೈನ್ಸ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಭದ್ರವಾಗಿದೆಯಂತೆ. ಇಷ್ಟಕ್ಕೂ ಈ ‘ಚೈನಾ ಚಾರ್ಟ್ ಸಿಕ್ಕಿದ್ದು ರಾಜನೊಬ್ಬನ ಸಮಾಧಿಯಲ್ಲಿ ಎಂದು ಹೇಳಲಾಗಿದೆ. ಈ ಚಾರ್ಟ್ ನ ನೋಡಿ ಅವತ್ತಿನ ಕಾಲದಲ್ಲಿ ಅವರ ಕುತೂಹಲ ತಣಿಸುತ್ತಿತ್ತು.

ಈ ಚಾರ್ಟ್ ಬಗ್ಗೆ ಹೇಳಬೇಕೆಂದರೆ . ಚಾರ್ಟ್ ನ ಒಂದು ಭಾಗದಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 12 ತಿಂಗಳುಗಳನ್ನು ಹಾಗೂ ಇನ್ನೊಂದು ಭಾಗದಲ್ಲಿ 18 ರಿಂದ 45ರವರೆಗೆ ಮಹಿಳೆಯ ವಯಸ್ಸನ್ನು ಬರೆಯಲಾಗಿದೆ. ಇಲ್ಲಿ ಒಟ್ಟು 336 ಚೌಕಳಿಯಿದ್ದು ಇದರಲ್ಲಿ ‘ಗಂಡು(B)’ ಮತ್ತು ‘ಹೆಣ್ಣು(G)’ ಎಂದು ಸೂಚಿಸಲಾಗಿರುತ್ತದೆ. ಇದನ್ನು ನೋಡುವುದು ಹೇಗೆಂದರೆ.. ಉದಾಹರಣೆಗೆ ಮಹಿಳೆಯೊಬ್ಬಳಿಗೆ 18 ವರ್ಷವಾಗಿದ್ದು, ಅವಳು ಜನವರಿಯಲ್ಲಿ ಋತುಚಕ್ರ ನಿಂತು ಗರ್ಭಿಣಿಯಾಗಿದ್ದರೆ ಆಕೆಗೆ ಹುಟ್ಟುವ ಮಗು ‘ಹೆಣ್ಣು’ ಎಂದು ತೋರಿಸುತ್ತದೆ. ಇನ್ನು ಗರ್ಭಿಣಿ ಮಹಿಳೆಗೆ 25 ವರ್ಷವಾಗಿದ್ದು, ಆಕೆ ಫೆಬ್ರವರಿಯಲ್ಲಿ ಗರ್ಭಿಣಿಯಾಗಿದ್ದರೆ ಆಗ ಆಕೆಗೆ ಹುಟ್ಟುವ ಮಗುವನ್ನು ‘ಗಂಡು’ ಎಂದು ತೋರಿಸುತ್ತದೆ.
ಇದು ಎಷ್ಟರ ಮಟ್ಟಿಗೆ ನಿಖರವೋ ಗೊತ್ತಿಲ್ಲ. ಶೇಕಡವಾರು ಫಲಿತಾಂಶ ಎಷ್ಟರ ಮಟ್ಟಿಗೆ ಚಾರ್ಟ್ ನಲ್ಲಿ ಇದ್ದಂತೆ ಆಗಿದೆ ಎನ್ನುವುದರ ಚರ್ಚೆಗಿಂತ ಅವತ್ತಿನ ಕಾಲದಲ್ಲಿಯೇ ಹುಟ್ಟುವ ಮಗುವಿನ ಬಗ್ಗೆ ತಮ್ಮ ಕುತೂಹಲ ತಣಿಸಿಕೊಳ್ಳಲು ಇಂತಹದೊಂದು ಚಾರ್ಟ್ ನ್ನು ತಯಾರಿಸಿದ್ದರು ಎನ್ನುವುದೇ ನಮಗೊಂದು ವಿಸ್ಮಯವಾಗಿದೆ.
B M Lavakumar








