ಸಾಮರಸ್ಯದ ಬೀಜಗಳನ್ನು ಬಿತ್ತುವಲ್ಲಿ ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಾಹಿತಿಗಳ ಕೊಡುಗೆ ಅನನ್ಯ: ಸಜಗೌ

ಮೈಸೂರು : ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಾಹಿತಿಗಳ ಕೊಡುಗೆ ಅಪಾರ ಮತ್ತು ಅನನ್ಯ. ತಮ್ಮ ಸಮುದಾಯದ ಸಂವೇದನೆಗಳ ಜೊತೆಗೆ, ಇತರೆ ಸಮುದಾಯದ ಸಂವೇದನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ಕನ್ನಡ ಸಾಹಿತ್ಯದ ಬಹುತ್ವದ ಬೇರುಗಳನ್ನು ಸುಭದ್ರಗೊಳಿಸಿದ್ದಾರೆ. ನಾಡಿನ ಸರ್ವಜನಾಂಗದ ತೋಟದಲ್ಲಿ ವೈಚಾರಿಕತೆ ಮತ್ತು ಸಾಮರಸ್ಯದ ಬೀಜಗಳನ್ನು ಬಿತ್ತುತ್ತಾ ಬಂದಿದ್ದಾರೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಶ್ಲಾಘಿಸಿದರು.
ಸಿರಿಗನ್ನಡ ವೇದಿಕೆಯ ಮೈಸೂರು ನಗರ ಘಟಕ ಹಾಗೂ ಖುಷಿ ಪ್ರಕಾಶನದ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕವಿ ಆದಿಲ್ ಪಾಷ ಅವರ ‘ನೀ ನನ್ನ ಚೈತ್ರ’, ‘ಹರ್ಷೋತ್ಸವ’ ಹಾಗೂ ‘ಆದಿರಾಗ’ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಅನುಭಾವಿ ಕವಿ ಸಂತ ಶಿಶುನಾಳ ಶರೀಫರ ಆದಿಯಾಗಿ ಬೊಳುವಾರು ಮಹಮ್ಮದ್ ಕುಂಞ, ಕೆ.ಎಸ್. ನಿಸಾರ್ ಅಹಮದ್, ಸಾರಾ ಅಬೂಬಕ್ಕರ್, ಭಾನು ಮುಷ್ತಾಕ್, ರಹಮತ್ ತರೀಕೆರೆ, ಅಬ್ಬಾಸ್ ಮೇಲಿನಮನಿ, ಡಿ.ಬಿ. ರಜಿಯಾ, ಬಿ.ಎಂ. ಹನೀಫ್, ಆರೀಫ್ ರಾಜಾ, ಫಾತಿಮಾ ರಲಿಯಾ, ಶಿ.ಜು. ಪಾಷ ಮೊದಲಾದ ಬರಹಗಾರರು ಕನ್ನಡ ಸಾಹಿತ್ಯದ ದನಿ ಮತ್ತು ಬನಿಯನ್ನು ವೃದ್ಧಿಸಿದ್ದಾರೆ. ಅದರಲ್ಲೂ ಭಾನು ಮುಷ್ತಾಕ್ ಅವರು ಕನ್ನಡಕ್ಕೆ ಮೊಟ್ಟ ಮೊದಲಿಗೆ ಬೂಕರ್ ಪ್ರಶಸ್ತಿ ತಂದುಕೊಡುವ ಮೂಲಕ ನಮ್ಮ ಸಾಹಿತ್ಯಕ್ಕೆ ಮತ್ತೊಮ್ಮೆ ಜಾಗತಿಕವಾಗಿ ಖ್ಯಾತಿ ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಕವಿ ಆದಿಲ್ ಪಾಷರ ಕನ್ನಡ ಪ್ರೀತಿ ಮತ್ತು ಅಭಿಮಾನ ಅನನ್ಯವಾದುದು. ಶುದ್ಧವಾಗಿ ಕನ್ನಡ ಬರೆಯುವ ಮತ್ತು ಮಾತನಾಡುವ ಅವರು ಮುಸ್ಲಿಂ ಸಂವೇದನೆಗಳಿಗೆ ಕಟ್ಟು ಬೀಳದೆ ತಮ್ಮ ಕಾವ್ಯ ಕೃಷಿ ಮಾಡಿರುವುದು ಗಮನಾರ್ಹ. ಅವರ ಕವಿತೆಗಳಲ್ಲಿ ಕನ್ನಡ ಕಾಳಜಿ, ಭಾವೈಕ್ಯತೆಯ ಬೆಳಕು, ಪರಿಸರ ಪ್ರೇಮ, ಜೀವಪರವಾದ ನಿಲುವು ಎದ್ದುಕಾಣುತ್ತದೆ ಎಂದು ಸಜಗೌ ವಿಶ್ಲೇಷಿಸಿದರು.

ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಓರ್ವ ಉತ್ತಮ ಕವಿಗೆ ಜಾತಿ, ಧರ್ಮದ, ಭಾಷೆಯ ಗಡಿಗಳು ಇರುವುದಿಲ್ಲ. ಆದ್ದರಿಂದ, ಕವಿ ಯಾವುದೇ ಒಂದು ಧರ್ಮವನ್ನು ವೈಭವೀಕರಿಸದೆ ಸಾಹಿತ್ಯ ಕೃಷಿ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕರೆ ನೀಡಿದರು.
ಇಡೀ ವಿಶ್ವ ಯುದ್ಧ ಭಯದಲ್ಲಿದೆ. ಯುದ್ಧಕಾಗಿ ಅಪಾರ ಹಣ ವ್ಯಯಿಸಲಾಗುತ್ತಿದೆ. ಎಲ್ಲಾ ದೇಶಗಳು ಯುದ್ಧ ಸಾಮಗ್ರಿಗಳನ್ನು ತಯಾರು ಮಾಡಲು ಬಳಸುವ ಹಣದಲ್ಲಿ ವಿಶ್ವದ ಒಂದು ಶತಮಾನದ ಬಡ ಜನರ ಅಗತ್ಯಗಳನ್ನು ಪೂರೈಸಬಹುದು. ವಿನಾಶಕಾರಿಯಾದ ಅಣುಬಾಂಬುಗಳ ತಯಾರಿಕೆಯಿಂದ ಜೀವಕುಲ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ‘ನೀ ನನ್ನ ಚೈತ್ರ’ ಕವನ ಸಂಕಲನ ಕುರಿತು ಹಿರಿಯ ಕಥೆಗಾರ ಡಾ. ಯಲ್ಲಪ್ಪ ಕೆ.ಕೆ. ಪುರ, ‘ಹರ್ಷೋತ್ಸವ’ ಕವನ ಸಂಕಲನ ಕುರಿತು ಸಾಹಿತಿ ಟಿ. ಸತೀಶ್ ಜವರೇಗೌಡ, ‘ಆದಿರಾಗ’ ಕವನ ಸಂಕಲನ ಕುರಿತು ಕವಯಿತ್ರಿ ಸೌಗಂಧಿಕಾ ಜೋಯಿಸ್ ಮಾತನಾಡಿದರು.
ವೇದಿಕೆಯಲ್ಲಿ ಡಯಟ್ ನ ಹಿರಿಯ ಉಪನ್ಯಾಸಕಿ ಅಲ್ ಹುಸ್ನ, ಕೃತಿಕಾರ ಆದಿಲ್ ಪಾಷ (ಆದೀಶ) ಸಿರಿಗನ್ನಡ ವೇದಿಕೆಯ ನಗರ ಘಟಕ ಗೌರವಾಧ್ಯಕ್ಷ ಬಿ. ಬಾಲಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಎಸ್. ರಾಘವೇಂದ್ರ, ಜಂಟಿ ಕಾರ್ಯದರ್ಶಿಗಳಾದ ಮೊಹಮ್ಮದ್ ಹುಮಾಯೂನ್ ಮತ್ತು ಪರಮೇಶ್ ಕೆ. ಉತ್ತನಹಳ್ಳಿ ಉಪಸ್ಥಿತರಿದ್ದರು.







