ArticlesLatestLife style

ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠ ಮತ್ತು ಗಜರಾಜಗಿರಿಗೊಂದು ಆಧ್ಯಾತ್ಮಿಕ ಪಯಣ

ಪ್ರಕೃತಿಯ ಮಡಿಲಲ್ಲಿ ಅರಳಿದ ಶಿವಯೋಗದ ಅನುಭೂತಿ

ಕೆಲವು ಪ್ರವಾಸಗಳು ಕೇವಲ ಒಂದು ಸ್ಥಳವನ್ನು ತೋರಿಸುತ್ತವೆ. ಕೆಲವು ಪ್ರವಾಸಗಳು ಇತಿಹಾಸವನ್ನು ಪರಿಚಯಿಸುತ್ತವೆ. ಆದರೆ ಇನ್ನೂ ಕೆಲವು ಪ್ರವಾಸಗಳು ನಮ್ಮೊಳಗೇ ಒಂದು ಹೊಸ ಅನುಭೂತಿಯನ್ನು ಹುಟ್ಟಿಸುತ್ತವೆ. ಅಂತಹ ಅಪರೂಪದ ಅನುಭವ ನನಗೆ ದೊರೆತದ್ದು ಕೆ.ಆರ್.ಪೇಟೆ ತಾಲ್ಲೂಕಿನ ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠದ ಪ್ರವಾಸದಲ್ಲಿ.

ಮೈಸೂರಿನಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ ಬೆಂಗಳೂರಿನ ಬಸವಧರ್ಮ ಕೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಸವ ಜಯಂತಿ ಹಾಗೂ ಸಾಧಕರ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಟ್ರಸ್ಟ್‌ನ ಸಂಸ್ಥಾಪಕರಾದ ಬಸವಪ್ರಿಯ ನಾಗರಾಜು ಅವರು ಅಲ್ಲಮಪ್ರಭುದೇವರ “ಹರಿವ ನೀರಿಗೆ ಮೈಯೆಲ್ಲ ಕಾಲು…” ಎಂಬ ವಚನದ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು.

ಭಾನುವಾರದ ಬೆಳಗ್ಗೆ ಹತ್ತು ಗಂಟೆಗೆ ನಾನು, ನನ್ನ ಶ್ರೀಮತಿಯವರ ತಂದೆ ಬಸವರಾಜು ಮತ್ತು ಅವರ ಚಿಕ್ಕಮ್ಮ ಚಂದ್ರಕಲಾ ಹಾಗೂ ಶರಣು ವಿಶ್ವವಚನ ಫೌಂಡೇಷನ್‌ನ ಕೇಂದ್ರೀಯ ಸಂಚಾಲಕರಾದ ವಿ. ಲಿಂಗಣ್ಣ ಅವರೊಂದಿಗೆ ಕಾರಿನಲ್ಲಿ ಪ್ರಯಾಣ ಆರಂಭಿಸಿದೆವು.

ಕೆ.ಆರ್.ಎಸ್. ಮಾರ್ಗವಾಗಿ ಸಾಗುತ್ತಿದ್ದಂತೆ ಕಾವೇರಿ ನದಿಯ ನಯನಮನೋಹರ ದೃಶ್ಯ, ಹಸಿರಿನಿಂದ ಕಂಗೊಳಿಸುತ್ತಿದ್ದ ಹೊಲಗಳು, ತೆಂಗಿನ ತೋಟಗಳು ಹಾಗೂ ಮಲೆನಾಡಿನ ಸೊಬಗನ್ನು ನೆನಪಿಸುವ ಗ್ರಾಮೀಣ ಪರಿಸರ ನಮ್ಮ ಪ್ರಯಾಣವನ್ನು ಸಾರ್ಥಕಗೊಳಿಸಿತು. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಬೂಕನಕೆರೆ ಮಾರ್ಗವಾಗಿ ಸುಮಾರು ಹನ್ನೊಂದೂವರೆ ಗಂಟೆಗೆ ಕಾಪನಹಳ್ಳಿ ಗವಿಮಠ ತಲುಪಿದೆವು.

ಮೊದಲ ನೋಟದಲ್ಲೇ ಈ ಕ್ಷೇತ್ರದ ಪ್ರಶಾಂತ ವಾತಾವರಣ ಮನಸ್ಸಿಗೆ ಮುದ ನೀಡಿತು. ಮುಂಭಾಗದಲ್ಲೇ ನಿರಂತರವಾಗಿ ಹರಿಯುವ ಅಂತರಗಂಗೆ, ಪಕ್ಕದಲ್ಲೇ ಆನೆಯ ಆಕಾರದಲ್ಲಿ ಕಾಣುವ ಗಜರಾಜಗಿರಿ ಬೆಟ್ಟ, ಸುತ್ತಲೂ ಹರಡಿರುವ ಹಸಿರು ವನಸಿರಿ—ಇವೆಲ್ಲವೂ ಈ ಕ್ಷೇತ್ರದ ಪಾವಿತ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಐಕ್ಯಸ್ಥಳದ ದರ್ಶನ ಪಡೆದು ಭಕ್ತಿಯಿಂದ ನಮಸ್ಕರಿಸಿದೆವು. ಆ ಕ್ಷಣದಲ್ಲಿ ಅಲ್ಲಿನ ಮೌನವೇ ಒಂದು ಉಪದೇಶದಂತೆ ಭಾಸವಾಯಿತು.

ನಂತರ ಸುಮಾರು ನಲವತ್ತೈದು ನಿಮಿಷಗಳ ಕಾಲ ಅಲ್ಲಮಪ್ರಭುದೇವರ “ಹರಿವ ನೀರಿಗೆ ಮೈಯೆಲ್ಲ ಕಾಲು…” ಎಂಬ ವಚನದ ಕುರಿತು ಮಾತನಾಡುವ ಅವಕಾಶ ದೊರೆಯಿತು. ನೀರು, ಬೆಂಕಿ ಮತ್ತು ಗಾಳಿಯ ಗುಣಗಳನ್ನು ಉದಾಹರಿಸುತ್ತಾ, ಶರಣರು ತಮ್ಮ ಬದುಕನ್ನು ಹೇಗೆ ಲಿಂಗಮಯವನ್ನಾಗಿ ರೂಪಿಸಿಕೊಂಡರು ಎಂಬುದನ್ನು ವಿವರಿಸಿದೆ. ಅಲ್ಲಮಪ್ರಭುಗಳ “ಕಾಲುಗಳೆಂಬವು ಗಾಳಿ ಕಂಡಯ್ಯ…” ಹಾಗೂ ಬಾಲಸಂಗಯ್ಯ ಅಪ್ರಮಾಣದೇವರ “ತನ್ನ ತಾನರಿತು ತಾನಾರೆಂದು ತಿಳಿದಡೆ ತಾನೇ ದೇವ” ಎಂಬ ವಚನಗಳ ಮೂಲಕ ಆತ್ಮಜ್ಞಾನವೇ ಶಿವಜ್ಞಾನದ ಹೆಬ್ಬಾಗಿಲು ಎಂಬ ಸಂದೇಶವನ್ನು ಹಂಚಿಕೊಂಡೆ.

ಶ್ರೀಮಠದ ಇತಿಹಾಸ ಮತ್ತು ಇಂದಿನ ಪುನರುಜ್ಜೀವನ

ಉಪನ್ಯಾಸದ ಬಳಿಕ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚೆನ್ನವೀರ ಮಹಾಸ್ವಾಮಿಗಳು ಶ್ರೀಮಠದ ಇತಿಹಾಸವನ್ನು ಹೃದಯಸ್ಪರ್ಶಿಯಾಗಿ ವಿವರಿಸಿದರು. ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯರಾದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ತಪಸ್ಸು, ಶಿವಯೋಗ ಮತ್ತು ಐಕ್ಯದ ಮಹಿಮೆಯಿಂದ ಈ ಕ್ಷೇತ್ರವು ಶತಮಾನಗಳಿಂದ ಭಕ್ತರ ಆರಾಧನಾ ಕೇಂದ್ರವಾಗಿ ಬೆಳೆದಿದೆ ಎಂದು ತಿಳಿಸಿದರು.

ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ನಂತರ ಈ ಕ್ಷೇತ್ರವನ್ನು ಶ್ರೀ ಜಯದೇವ ಸ್ವಾಮಿಗಳು, ಶ್ರೀ ಲೋಲಕ ಸ್ವಾಮಿಗಳು ಹಾಗೂ ಶ್ರೀ ಚಂದ್ರಶೇಖರ ಸ್ವಾಮಿಗಳು ತಮ್ಮ ತಪಸ್ಸು, ಸೇವೆ ಮತ್ತು ಧಾರ್ಮಿಕ ಚಟುವಟಿಕೆಗಳ ಮೂಲಕ ಬೆಳಗಿಸಿದರು. ಅವರ ಪರಿಶ್ರಮದಿಂದ ಈ ಪುಣ್ಯಕ್ಷೇತ್ರದ ಮಹಿಮೆ ಸುತ್ತಮುತ್ತಲಿನ ಗ್ರಾಮಗಳಲ್ಲಷ್ಟೇ ಅಲ್ಲ, ದೂರದ ಭಕ್ತರ ಮನಗಳಿಗೂ ತಲುಪಿತು. ನಂತರ ಹಲವು ಸ್ವಾಮೀಜಿಗಳು ಅಲ್ಪಾವಧಿಗೆ ಇಲ್ಲಿದ್ದು ಶ್ರೀಮಠದ ಸೇವೆ ಸಲ್ಲಿಸಿ ತಮ್ಮ ಮೂಲ ಕ್ಷೇತ್ರಗಳಿಗೆ ಮರಳಿದರು.

ಪ್ರಸ್ತುತ ಶ್ರೀಮಠದ ಪೀಠಾಧ್ಯಕ್ಷರಾಗಿರುವ ಶ್ರೀ ಸ್ವತಂತ್ರ ಚೆನ್ನವೀರ ಮಹಾಸ್ವಾಮಿಗಳವರ ಬದುಕೇ ಈ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಕೇವಲ ಏಳು ವರ್ಷದ ಬಾಲಕನಾಗಿದ್ದಾಗಲೇ ಅವರು ಈ ಮಠದಲ್ಲಿ ಪೂಜೆ-ಪುನಸ್ಕಾರಗಳಲ್ಲಿ ತೊಡಗಿ, ಕ್ಷೇತ್ರದ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು.

ಅವರ ಸರಳತೆ, ಸೇವಾಭಾವ, ಶಿಸ್ತು, ಭಕ್ತಿಭಾವ ಮತ್ತು ಲವಲವಿಕೆಯ ವ್ಯಕ್ತಿತ್ವವನ್ನು ಗಮನಿಸಿದ ಸುತ್ತಮುತ್ತಲಿನ ಹದಿನೆಂಟು ಗ್ರಾಮಗಳ ಭಕ್ತರು ಹಾಗೂ ಹಿರಿಯರು, ಈ ಪವಿತ್ರ ಕ್ಷೇತ್ರದ ಮುಂದಿನ ನೇತೃತ್ವವನ್ನು ಅವರೇ ವಹಿಸಬೇಕು ಎಂಬ ಏಕಮತದ ನಿರ್ಧಾರಕ್ಕೆ ಬಂದರು. ಅದರಂತೆ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ಮುದೋಳ ಗ್ರಾಮದ ಮೂಲದ ಶ್ರೀ ಸ್ವತಂತ್ರ ಚೆನ್ನವೀರ ಮಹಾಸ್ವಾಮಿಗಳನ್ನು ಕಾಪನಹಳ್ಳಿ ಶ್ರೀಮಠದ ಉತ್ತರಾಧಿಕಾರಿಯಾಗಿ, ಪಟ್ಟಾಧಿಕಾರಿಯಾಗಿ ಮಾಡಿದರು.

ಕಳೆದ ಏಳು ವರ್ಷಗಳಿಂದ ಅವರ ಮಾರ್ಗದರ್ಶನದಲ್ಲಿ ಶ್ರೀಮಠವು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯುತ್ತಿದೆ. ಭಕ್ತರಿಗೆ ಕ್ಷೇತ್ರದ ಇತಿಹಾಸವನ್ನು ಪರಿಚಯಿಸುವುದು, ಶರಣ ತತ್ವದ ಪ್ರಸಾರ, ಪೂಜಾ ಕೈಂಕರ್ಯಗಳ ಅಭಿವೃದ್ಧಿ ಹಾಗೂ ಕ್ಷೇತ್ರದ ಸಮಗ್ರ ಪ್ರಗತಿಗಾಗಿ ಅವರು ಶ್ರಮಿಸುತ್ತಿರುವುದು ಗಮನಾರ್ಹವಾಗಿದೆ.

ಮಹಾಸ್ವಾಮಿಗಳು ಇತಿಹಾಸವನ್ನು ವಿವರಿಸುತ್ತಿದ್ದಾಗ ಅದು ಕೇವಲ ಘಟನೆಗಳ ನಿರೂಪಣೆಯಾಗಿರಲಿಲ್ಲ; ಶರಣರ ಬದುಕು, ಗುರುಪರಂಪರೆ ಮತ್ತು ಈ ಕ್ಷೇತ್ರದ ಆಧ್ಯಾತ್ಮಿಕ ವೈಭವವು ನಮ್ಮ ಕಣ್ಮುಂದೆ ಅನಾವರಣಗೊಳ್ಳುತ್ತಿರುವ ಅನುಭವವನ್ನು ಉಂಟುಮಾಡಿತು. ಅವರ ಮಾತುಗಳನ್ನು ಆಲಿಸಿದ ನಂತರ ಗವಿಮಠ ಮತ್ತು ಗಜರಾಜಗಿರಿಯ ದರ್ಶನ ನಮಗೆ ಕೇವಲ ಪ್ರವಾಸವಾಗಿರದೆ, ಗುರುಪರಂಪರೆಯ ಪಾವನ ಹೆಜ್ಜೆಗುರುತುಗಳನ್ನು ಅನುಸರಿಸಿದ ಆತ್ಮಯಾತ್ರೆಯಾಯಿತು.

ಕಾರ್ಯಕ್ರಮದ ಬಳಿಕ ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿ ಗಜರಾಜಗಿರಿಯತ್ತ ಹೆಜ್ಜೆ ಹಾಕಿದೆವು. ಬೆಟ್ಟದ ತಪ್ಪಲಿನಲ್ಲಿ ಕಾರನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಏರಲು ಆರಂಭಿಸಿದೆವು. ಕೆಲವೇ ದೂರದಲ್ಲಿ ಎರಡು ಗವಿಗಳು ಎದುರಾದವು. ಒಂದರಲ್ಲಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರು ಶಿವಯೋಗ ಸಾಧನೆ ನಡೆಸುತ್ತಿದ್ದರು ಹಾಗೂ ವಚನಗಳನ್ನು ರಚಿಸುತ್ತಿದ್ದರು. ಮತ್ತೊಂದು ಗವಿ ಅವರ ವಿಶ್ರಾಂತಿಯ ಸ್ಥಳವಾಗಿತ್ತು. ಶಿವಯೋಗ ನಡೆದ ಗವಿಯಲ್ಲಿ ಮಂಗಳಗೀತೆ ಹಾಡಿ ಕರ್ಪೂರ ಬೆಳಗಿಸಿದ ಕ್ಷಣ ನಮ್ಮೆಲ್ಲರ ಮನಸ್ಸಿನಲ್ಲಿ ವರ್ಣಿಸಲಾರದ ಆಧ್ಯಾತ್ಮಿಕ ಸ್ಪಂದನ ಮೂಡಿತು. ಗವಿಯ ನಿಶ್ಶಬ್ದತೆಯೇ ಧ್ಯಾನಕ್ಕೆ ಆಹ್ವಾನ ನೀಡುವಂತಿತ್ತು.

ಮುಂದೆ ಸಂಪೂರ್ಣ ಕಲ್ಲಿನಿಂದ ಆವೃತವಾಗಿದ್ದ ಗಜರಾಜಗಿರಿಯನ್ನು ಏರಿದೆವು. ಪ್ರತಿಯೊಂದು ಹೆಜ್ಜೆಯೂ ಆಯಾಸಕ್ಕಿಂತ ಹೆಚ್ಚಾಗಿ ಉತ್ಸಾಹವನ್ನು ತುಂಬುತ್ತಿತ್ತು. ಶಿಖರ ತಲುಪಿದಾಗ ಕಂಡ ಹಸಿರು ಪ್ರಕೃತಿ, ಅಂತರಗಂಗೆಯ ಹರಿವು, ದೂರದ ಗ್ರಾಮಗಳ ನೋಟ ಮನಸ್ಸಿಗೆ ಹೇಳಲಾರದ ಸಂತೋಷವನ್ನು ನೀಡಿತು. ಅಲ್ಲಿದ್ದ ಗರುಡಗಂಭ ಮತ್ತು ಪುಟ್ಟ ಗುಡಿಯು ಈ ಕ್ಷೇತ್ರದ ಆಧ್ಯಾತ್ಮಿಕ ಗಾಂಭೀರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು.

ಸಂಜೆ ಶ್ರೀಮಠಕ್ಕೆ ಮರಳಿ ಚಹಾ ಸವಿದು ಮೈಸೂರಿನತ್ತ ಹಿಂದಿರುಗಿದೆವು. ಆದರೆ ಹಿಂದಿರುಗಿದ್ದು ದೇಹ ಮಾತ್ರ; ಮನಸ್ಸು ಇನ್ನೂ ಗಜರಾಜಗಿರಿಯ ಗಾಳಿಯಲ್ಲಿ, ಅಂತರಗಂಗೆಯ ಕಲರವದಲ್ಲಿ ಮತ್ತು ಸ್ವತಂತ್ರ ಸಿದ್ಧಲಿಂಗೇಶ್ವರರ ಗವಿಯ ಮೌನದಲ್ಲಿ ವಿಹರಿಸುತ್ತಲೇ ಇತ್ತು. ಈ ಭಾನುವಾರ ನನಗೆ ಕೇವಲ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿನವಾಗಿರಲಿಲ್ಲ. ಶರಣರ ಹೆಜ್ಜೆಗುರುತುಗಳನ್ನು ಅನುಸರಿಸಿದ, ಪ್ರಕೃತಿಯೊಂದಿಗೆ ಬೆರೆತ, ಇತಿಹಾಸವನ್ನು ಆಲಿಸಿದ ಮತ್ತು ವಚನಗಳ ಜೀವನ ಸಂದೇಶವನ್ನು ಮತ್ತೊಮ್ಮೆ ಅನುಭವಿಸಿದ ಒಂದು ಆತ್ಮಯಾತ್ರೆಯಾಗಿತ್ತು.

ನೆನಪಿನ ಪುಟದಲ್ಲಿ ಹಸಿರಾಗಿ ಉಳಿದ ಕೊಡಗಿನ ಒಂದು ದಿನದ ಪಯಣ… ಹೇಗಿತ್ತು ಗೊತ್ತಾ?

admin
the authoradmin

Leave a Reply