LatestMysoreSports

ಈ ವಯಸ್ಸಿನಲ್ಲಿ ಬೇಕಾ ಎಂದು ಹಿಯಾಳಿಸಿದವರಿಗೆ ಸಾಧನೆಯಿಂದಲೇ ಉತ್ತರ ಕೊಟ್ಟ ಜಮ್ಮಡ ಪ್ರೀತ್‌ ಅಪ್ಪಯ್ಯ

ಮೂಲತಃ ಕೊಡಗಿನವಳಾಗಿದ್ದ ಕಾರಣದಿಂದ ಚಿಕ್ಕ ವಯಸ್ಸಿನಿಂದಲೇ ಬೆಟ್ಟ, ಗುಡ್ಡ ಹತ್ತುವುದು ಸಹಜವಾಗಿ ಬಂದಿತು. ಅದೇ ಕಾರಣಕ್ಕೆ ರಾಜ್ಯದ ಹಲವೆಡೆ ಚಾರಣ ಮಾಡಿದ್ದೇನೆ. ಹಿಮಾಲಯ ಹತ್ತುವುದನ್ನು ಸವಾಲಾಗಿ ಸ್ವೀಕರಿಸಿ ಏರಿದ್ದೇನೆ. ಶೂಟಿಂಗ್‌ ಎಂಬುದನ್ನು ಹವ್ಯಾಸವಾಗಿ ಶುರು ಮಾಡಿದ್ದು, ಈಗ ಹೆಚ್ಚು ಸಾಧನೆಗೆ ತಂದು ನಿಲ್ಲಿಸಿದೆ. ಮುಂದೆ ಪಿಸ್ತೂಲು ತರಬೇತಿ ಪಡೆದು ಅಲ್ಲಿಯೂ ಸಾಧನೆ ಮಾಡುವ ಆಸೆಯಿದೆ. ಪ್ರಾರಂಭದಲ್ಲಿ ಅನೇಕರು ನನಗೆ ಈ ವಯಸ್ಸಿನಲ್ಲಿ ಬೇಕಾ ಎಂದು ಹಿಯಾಳಿಸಿದ್ದು ನೆನಪಿದೆ. ಆದರೆ, ಸಾಧನೆ, ಹವ್ಯಾಸಗಳಿಗೆ ವಯಸ್ಸು ಅಡ್ಡ ತರಬಾರದು. ಅದನ್ನು ಮೀರಿ ಪ್ರಯತ್ನಿಸಿದ್ದೇ ಸಾಧನೆಗೆ ಕಾರಣ ಹೀಗೆಂದು  ಸಂತಸ ಹಂಚಿಕೊಂಡವರು ಕ್ರೀಡಾಪಟು ಜಮ್ಮಡ ಪ್ರೀತ್‌ ಅಪ್ಪಯ್ಯ

ಬೆಂಗಳೂರು ವಿಶ್ವ ವಿದ್ಯಾನಿಲಯದ ಶೂಟಿಂಗ್‌ ರೆಂಜ್‌ ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ರೆಫೆಲ್‌ ಅಸೋಸಿಯೇಷನ್‌(ಕೆಎಸ್‌ಆರ್‌ಎ) ವತಿಯಿಂದ ನಡೆದ 14ನೇ ರಾಜ್ಯ ಶೂಟಿಂಗ್‌ ಸ್ಪರ್ಧೆ ಮತ್ತು ಚಾಂಪಿಯನ್‌ ಶಿಪ್‌ 2026ರಲ್ಲಿ ಎರಡು ಚಿನ್ನದ ಪದಕಗಳಿಸಿದ  ಅವರನ್ನು ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್‌ವತಿಯಿಂದ ನಗರದ ಚಾಮುಂಡಿಪುರಂನ ಅಪೂರ್ವ ಹೋಟೆಲ್‌ ನಲ್ಲಿ  ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಇದೇ ವೇಳೆ ಕ್ರೀಡಾಪಟು ಜಮ್ಮಡ ಪ್ರೀತ್‌ ಅಪ್ಪಯ್ಯ ಅವರ ಸಾಧನೆಯನ್ನು ಶ್ಲಾಘಿಸಿ ಮಾತನಾಡಿದ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್  ಅವರು ಮಹಿಳೆಯಾಗಿ ಜಮ್ಮಡ ಪ್ರೀತ್‌ ಅಪ್ಪಯ್ಯರ ಉತ್ಸಾಹ, ಆಶಯ ನೋಡಿದರೆ ಪುರುಷರಿಗೂ ಮಾದರಿಯಾಗಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರ್ತಿ ಅರುಣ್ ಸಿನ್ಹಾ ಎರಡು ಕಾಲು ಕಳೆದುಕೊಂಡ ಬಳಿಕವೂ ಎರಡು ವರ್ಷದ ಅವಧಿಯಲ್ಲೇ ಮೌಂಟ್ ಎವರೆಸ್ಟ್ ಏರಿ ಸಾಧನೆ ತೋರಿದರು. ಅಂತೆಯೇ ಇವರ ಸಾಧನೆ ಸಾಮಾನ್ಯವಾದುದಲ್ಲ. ತುಂಬಾ ಉದಾತವಾದ ಸಂಕಲ್ಪವನ್ನು ಹೊಂದಿ ಕ್ರೀಡೆಯಲ್ಲಿ ಮುನ್ನಡೆಯುತ್ತಿದ್ದು, ಹುಟ್ಟು ಯೋಧರ ನಾಡಿನಿಂದ ಬಂದು ಇಂತಹ ಸಾಧನೆ ಮೆಚ್ಚುವಂತಹದಾಗಿದೆ ಎಂದರು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ  ಅವರು, ಕೊಡಗು ಎಂದರೆ ನಮ್ಮೆಲ್ಲರಿಗೂ ಅಚ್ಚುಮೆಚ್ಚು ಅಂತಹ ಕಡೆಯಿಂದ ಬಂದು ನಗರದಲ್ಲಿ ನೆಲೆಸಿ ನೀವು ಮಾಡಿರುವ ಸಾಧನೆ ನಿಜಕ್ಕೂ ಮೈಸೂರಿಗೆ ಹೆಮ್ಮೆಯ ಸಂಗತಿ ಹಾಗೂ ಸಂತಸದ ವಿಚಾರವಾಗಿದೆ. ನಿಮ್ಮ ಕ್ರೀಡಾಸ್ಪೂರ್ತಿ ಇತರ ಎಲ್ಲರಿಗೂ ಸ್ಪೂರ್ತಿದಾಯಕ ಆಗಲಿ ಎಂದರು. ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ನಿಮ್ಮ ಕ್ರೀಡಾ ಸಾಧನೆ ನಿಜಕ್ಕೂ ಗಮನಾರ್ಹ. ನಿಮಗೆ ಬೆಂಬಲ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇವರ ಬೆಂಬಲಕ್ಕೆ ಸದಾ ನಾವೆಲ್ಲರೂ ಇರುತ್ತೇವೆ. ಇಂತಹ ಅಭಿನಂದನೆಗಳು ನಡೆದಾಗ ಮಾತ್ರ ನಿಮ್ಮ ಸಾಧನೆಗೆ  ಸ್ಪೂರ್ತಿಯಾಗಲಿದೆ ಎಂದರು.   ಅಭಿನಂದಿಸುತ್ತೇನೆ ಎಂದರು

ಕೆಪಿಎಂಪಿಕೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ವಿಕ್ರಂ ಅಯ್ಯಂಗಾರ್‌ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪ್ರತಿಭೆ ತೋರಿರುವ ಇಂತಹ ಸಾಧಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಕಾರ ಅಗತ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವುದಕ್ಕೆ 50ಲಕ್ಷದಷ್ಟು ವೆಚ್ಚ ಭರಿಸಬೇಕಿದೆ. ಹೀಗಾಗಿ ಸರ್ಕಾರಗಳು ಇಂತಹ ಕ್ರೀಡೆಗಳಿಗೂ ನೆರವು ನೀಡುವ ಕೆಲಸ ಮಾಡಬೇಕಿದೆ. ಇಂತಹ ಸಾಧಕರೊಂದಿಗೆ ಸದಾ ಸಂಸ್ಥೆ ಇರಲಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ನಿರೂಪಕ ಅಜಯ್ ಶಾಸ್ತ್ರಿ, ಗಗನ್ ಗೌಡ, ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುರೇಂದ್ರ, ರಾಕೇಶ್ ಇನ್ನಿತರರು ಸಾಕ್ಷಿಯಾದರು.

admin
the authoradmin

Leave a Reply