ಮೈಸೂರು: ಮೈಸೂರಿನ ವಿಶ್ವ ವಿಖ್ಯಾತ ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಕಂಬಳ ಕ್ರೀಡೆ ಆಯೋಜಿಸುವುದಕ್ಕೆ ಪರಿಸರಕ್ಕಾಗಿ ನಾವು ಸಂಘಟನೆ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಸರ್ಕಾರ ಕಂಬಳ ಕ್ರೀಡೆ ಆಯೋಜನೆ ಕೈಬಿಡದಿದ್ದರೆ ರೈತ ಸಂಘಗಳು, ಪರಿಸರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಘಟನೆ ಪದಾಧಿಕಾರಿಗಳು ನಾವು ವಿರೋಧಿಸುತ್ತೇವೆ. ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬವು ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ, ಸಾಂಸ್ಕೃತಿಕ ವೈಶಿಷ್ಟ್ಯಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಹೊಂದಿರುತ್ತದೆ. ಪ್ರತಿ ವರ್ಷ ನವರಾತ್ರಿ ಸಮಯದಲ್ಲಿ ನಡೆಯುವ ಈ ವೈಭವದ ಹಬ್ಬಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಯುವ ದಸರಾ ಇತ್ಯಾದಿ ಹೊಸ ಕಾರ್ಯಕ್ರಮಗಳ ಸೇರ್ಪಡೆಯಾಗಿ ದಸರಾ ಸಮಯದಲ್ಲಿ ವಿಪರೀತ ಜನಜುಂಗುಳಿ, ವಾಹನ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯಗಳು ಜನರಲ್ಲಿ ರೇಜಿಗೆ ಹುಟ್ಟಿಸುತ್ತಿವೆ ಮತ್ತು ಬಸವಳಿಯುವಂತೆ ಮಾಡುತ್ತಿವೆ.
ಇಂತಹ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜನರು ಸೇರುವ ಕಂಬಳ ಕ್ರೀಡೆಯ ಆಯೋಜನೆ ಮೈಸೂರಿನ ಲಕ್ಷಾಂತರ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ಮೂಡಿಸಲು ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಕಂಬಳ ಕ್ರೀಡೆ ಕರಾವಳಿ ಪ್ರದೇಶದ (ತುಳುನಾಡಿನ) ಜನಪ್ರಿಯ ಗ್ರಾಮೀಣ ಕ್ರೀಡೆ. ಶತಶತಮಾನಗಳಿಂದ ತುಳುನಾಡಿನ ರೈತರು ಭತ್ತದ ಸುಗ್ಗಿ ಕೊಯ್ದು ಮಾಡಿದ ನಂತರ ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಕೆಸರು ಗದ್ದೆ ಅರ್ಥಾತ್ ಕಂಬಳವನ್ನು ಪ್ರಾರಂಭಿಸಿದರು. ಇಲ್ಲಿನ ಭೌಗೋಳಿಕ ಅಂಶಗಳು ಈ ಕ್ರೀಡೆ ಹುಟ್ಟಲು ಪ್ರಮುಖ ಕಾರಣ. ಈ ಕ್ರೀಡೆಯು ಕರಾವಳಿಯ ಪ್ರಾದೇಶಿಕ ಸೊಗಡನ್ನು, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು, ಧಾರ್ಮಿಕ ಆಚರಣೆಗಳನ್ನು ಹೊಂದಿರುತ್ತದೆ. ತುಂಬಾ ನೇಮ ನಿಷ್ಠೆಯಿಂದ ಕಂಬಳವನ್ನು ನಡೆಸುತ್ತಾರೆ ಎಂದು ಕಂಬಳ ಕ್ರೀಡೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ವುಳ್ಳವರು ಹೇಳುತ್ತಾರೆ.
ಇಂತಹ ಕಂಬಳವನ್ನು ಕರಾವಳಿ ಪ್ರದೇಶದಿಂದ ಮೈಸೂರಿನ ದಸರಾ ಸಂದರ್ಭದಲ್ಲಿ ತಂದು ಹೇರುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ. ಇದನ್ನು ಮೈಸೂರಿನ ಜನರು ವಿರೋಧಿಸುವಂತೆ ಕರಾವಳಿ ಭಾಗದ ಜನರೂ ವಿರೋಧಿಸುತ್ತಾರೆ. ಜುಲೈ ತಿಂಗಳು ಬಂದರೂ ಮಳೆ ಬರದೆ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಕೆಲವು ಕಡೆ ರೈತರು ಬಿತ್ತನೆ ಮಾಡಲಾಗುತ್ತಿಲ್ಲ ಮತ್ತು ಬಿತ್ತನೆ ಮಾಡಿರುವ ಕಡೆ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರದ ಆದ್ಯತೆಯಾಗಬೇಕು.
ಕೇವಲ ಎರಡು ದಿನಗಳ ಕ್ರೀಡೆಗೆ 400 ಕೋಣಗಳನ್ನು, ಪ್ರತಿ ಕೋಣದ ಜವಾಬ್ದಾರಿಗೆ 50 ಜನರಂತೆ 20 ಸಾವಿರ ಜನರನ್ನು ಮೈಸೂಂಗೆ ಕರೆತರುವುದು, ಕೆಸರು ಗದ್ದೆ ನಿರ್ಮಾಣಕ್ಕೆ 27 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಕಡಿಯುವುದು, ನೀರಿನ ತೀವ್ರ ಅಭಾವವಿರುವಾಗ ಲಕ್ಷಾಂತರ ಲೀಟರ್ ನೀರು ಪೋಲು ಮಾಡುವುದು ವಿವೇಕದ ನಡೆಗಳಲ್ಲ ಎಂದಿದ್ದಾರೆ.

ಮೈಸೂರಿನ ದಸರಾ ಹಬ್ಬದ ಆಚರಣೆಯಲ್ಲಿರುವ ನ್ಯೂನತೆಗಳನ್ನು ಲೋಪದೋಷಗಳನ್ನು ಸರಿಪಡಿಸುವುದು, ಸ್ಥಳೀಯ ಕಲೆಗಳಿಗೆ ಮತ್ತು ಕಲಾವಿದರಿಗೆ ಅವಕಾಶ ಕೊಡುವುದು, ಕಲಾವಿದರಿಗೆ ಸೂಕ್ತ ಸಂಭಾವನೆ ಕೊಡುವುದು ಮತ್ತು ಗೌರವಯುತವಾಗಿ ನಡೆಸಿಕೊಳ್ಳುವುದು ತುಂಬಾ ಮುಖ್ಯ. ಸರ್ಕಾರ ಇನ್ನು ಮುಂದಾದರು ಈ ಬಗ್ಗೆ ಅರಿತು ಮೇಲಿನ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ದಸರಾ ಸಂದರ್ಭದಲ್ಲಿ ಕಂಬಳ ಕ್ರೀಡೆ ಆಯೋಜಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಎನ್.ಎಸ್ ರಂಗರಾಜು, ಪರಶುರಾಮೇಗೌಡ, ಮ ಗು ಸದಾನಂತ, ಭಾನುಮೋಹನ್, ಬಿಟ್ಟಯ್ಯ ಕೋಟೆ ಮೊದಲಾದವರು ಇದ್ದರು.








