LatestLife style

ನಾನು -ನನ್ನ ಹಿರಿಯರು ಕಲಿತ ಶಾಲೆ.. ಮುಂದಿನ ತಲೆಮಾರುಗಳಿಗೂ ಹೆಮ್ಮೆಯಾಗಿ  ಉಳಿಯಲಿ…

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-19

ನಮ್ಮ ಹಿಂದಿನ ಮತ್ತು ಆಜುಬಾಜು ತಲೆಮಾರಿನ ಬಹುತೇಕರು ಸರ್ಕಾರಿ ಶಾಲೆಗಳಲ್ಲಿಯೇ ಓದಿದವರು.. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಮತ್ತು ಅನುಭವ ಮರೆಯಲಾರದ್ದು.. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಗಳು  ಈಗ ಬಿಕೋ ಎನ್ನುತ್ತಿವೆ..  ಸರ್ಕಾರಿ ಶಾಲೆಗಳೇಕೆ ಹೀಗೆ ಆಗಿವೆ? ಗತವೈಭವ ಮರುಕಳಿಸಲು ಸಾಧ್ಯವಿಲ್ಲವೆ? ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ಕಾರ್ಯಪ್ಪ ಇಲ್ಲಿ ಬರೆದಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…

“ಖಾಸಗಿಗೆ ಸಿಗುವ ಎಲ್ಲಾ ಸೌಲಭ್ಯ, ಸರ್ಕಾರಿ ಶಾಲೆಯಲ್ಲೂ ಸಿಗಲಿ”

“ಶಿಕ್ಷಣ ಸೇವೆ, ವ್ಯಾಪಾರವಲ್ಲ – ಇದು ಪ್ರತಿಯೊಂದು ಮಗುವಿನ ಹಕ್ಕು”

ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳೆರಡೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಖಾಸಗಿ ಶಾಲೆಗಳು ತಂತ್ರಜ್ಞಾನ, ಕ್ರೀಡೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಿವೆ. ಅದೇ ರೀತಿ ಸರ್ಕಾರಿ ಶಾಲೆಗಳು ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿವೆ. ನಮ್ಮ ಗುರಿ ಯಾರನ್ನೂ ಕಡಿಮೆ ಮಾಡುವುದಲ್ಲ.

ನಮ್ಮ ಗುರಿ ಒಂದೇ. ಸರ್ಕಾರಿ ಶಾಲೆಗಳಲ್ಲೂ ಅದೇ ಗುಣಮಟ್ಟವನ್ನು ತರುವುದು. ಆಗ ಪೋಷಕರಿಗೆ ಆಯ್ಕೆಯ ಸ್ವಾತಂತ್ರ್ಯ ಸಿಗುತ್ತದೆ. ಈ ಎರಡೂ ವ್ಯವಸ್ಥೆಗಳು ಬಲಗೊಂಡಾಗ ಮಾತ್ರ ಕರ್ನಾಟಕ ಶಿಕ್ಷಣದಲ್ಲಿ ದೇಶಕ್ಕೇ ಮಾದರಿಯಾಗುತ್ತದೆ.

ಡಿಜಿಟಲ್ ಯುಗಕ್ಕೆ ತಕ್ಕ ಆಧುನಿಕ ಸರ್ಕಾರಿ ಶಾಲೆ 

ಇಂದಿನ ಡಿಜಿಟಲ್ ಯುಗದಲ್ಲಿ ಮಗುವಿಗೆ ಪುಸ್ತಕದ ಜ್ಞಾನದ ಜೊತೆಗೆ ತಂತ್ರಜ್ಞಾನದ ಕೌಶಲ್ಯವೂ ಬೇಕು. ಕೇರಳ, ದೆಹಲಿ, ತಮಿಳುನಾಡು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಕ್ಲಾಸ್, ವಿಜ್ಞಾನ-ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಮತ್ತು ಕ್ರೀಡಾಂಗಣಗಳೊಂದಿಗೆ ಮೇಲ್ದರ್ಜೆ ಮಾಡಿದಾಗ ಪೋಷಕರ ವಿಶ್ವಾಸ ಹೆಚ್ಚಿತು. ನಮ್ಮ ಊರಿನ ಸರ್ಕಾರಿ ಶಾಲೆ ನಮ್ಮ ಹೆಮ್ಮೆ. ಅದು ನಮ್ಮ ಹಿರಿಯರು ಸಮಾಜಕ್ಕಾಗಿ ನೀಡಿದ ಆಸ್ತಿ. ಅಲ್ಲಿ ನಮ್ಮ ಅಜ್ಜ ಅಕ್ಷರ ಕಲಿತರು, ನಮ್ಮ ತಂದೆ ಕಲಿತರು.

ಆ ಅದೇ ಬೆಂಚಿನಲ್ಲಿ ಇವತ್ತು ನಮ್ಮ ಮಗ ಕೂಡ ಹೆಮ್ಮೆಯಿಂದ ಕಲಿಯಬೇಕು. ಪ್ರತಿ ತರಗತಿಯಲ್ಲಿ ಡಿಜಿಟಲ್ ಬೋಧನೆ, ಪ್ರಾಯೋಗಿಕ ಕಲಿಕೆಗೆ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್, ಜ್ಞಾನದ ಬಾಗಿಲು ತೆರೆಯುವ ಗ್ರಂಥಾಲಯ, ಆರೋಗ್ಯಕ್ಕೆ ಆಟದ ಮೈದಾನ ಮತ್ತು ಕ್ರೀಡಾ ತರಬೇತಿಗೆ ವಿಶೇಷ ವೇದಿಕೆ, ಶುದ್ಧ ಕುಡಿಯುವ ನೀರು ಮತ್ತು ಸುರಕ್ಷಿತ ಶೌಚಾಲಯ ಇರುವ ಶಾಲೆ ನಮಗೆ ಬೇಕು. ಅತ್ಯಂತ ಮುಖ್ಯವಾಗಿ ಖಾಸಗಿ ಶಾಲೆಯಲ್ಲಿರುವಂತೆ ದೂರದ ಮಕ್ಕಳಿಗಾಗಿ ಪ್ರತಿ ಕ್ಲಸ್ಟರ್‌ಗೆ ಸುರಕ್ಷಿತ ಸರ್ಕಾರಿ ಶಾಲಾ ಬಸ್ ವ್ಯವಸ್ಥೆ ಕಡ್ಡಾಯವಾಗಿ ಜಾರಿಗೆ ಬರಬೇಕು.

ಗುಣಮಟ್ಟದ ಶಿಕ್ಷಕರು ಮತ್ತು ಪಾರದರ್ಶಕ ಅಭಿವೃದ್ಧಿ 

ಗುಣಮಟ್ಟದ ಶಿಕ್ಷಣಕ್ಕೆ ಗುಣಮಟ್ಟದ ಶಿಕ್ಷಕರೂ ಬೇಕು. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಿಗೂ ನಿಯಮಿತ ತರಬೇತಿ ಪಡೆದ, ಉತ್ಸಾಹಿ ಮತ್ತು ಸಮರ್ಪಿತ ಶಿಕ್ಷಕ ವೃಂದವನ್ನು ನೇಮಕ ಮಾಡಬೇಕು. ಶಿಕ್ಷಕರಿಗೆ ಹೊಸ ತಂತ್ರಜ್ಞಾನದ ಪರಿಕರ ಮತ್ತು ಪ್ರೋತ್ಸಾಹ ನೀಡಿದಾಗ ಅವರು ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಸಂಪೂರ್ಣವಾಗಿ ಉಚಿತವಾಗಿ ನೀಡಲಾಗದ ಸಂದರ್ಭದಲ್ಲಿ ತುಂಬಾ ಕಡಿಮೆ ಮತ್ತು ಎಲ್ಲರಿಗೂ ಭರಿಸಬಹುದಾದಂತಹ ಕನಿಷ್ಠ ಶುಲ್ಕವನ್ನು ನಿಗದಿಪಡಿಸಬಹುದು.

ಆ ಹಣವನ್ನು ನೇರವಾಗಿ ಅದೇ ಶಾಲೆಯ ಲ್ಯಾಬ್, ಲೈಬ್ರರಿ, ಆಟದ ಸಾಮಗ್ರಿಗಳ ಅಭಿವೃದ್ಧಿಗೆ ಬಳಸಬೇಕು. ಆದರೆ ಬಡ ಮತ್ತು ಅರ್ಹ ಮಕ್ಕಳಿಗೆ ಈ ಫೀಸ್‌ನಿಂದ ಸಂಪೂರ್ಣ ವಿನಾಯಿತಿ ಇರಬೇಕು. ಶಾಲೆಯ ಅಭಿವೃದ್ಧಿ ಕೆಲಸವನ್ನು ಗ್ರಾಮಸಭೆಯಲ್ಲಿ ಚರ್ಚಿಸಿ ಪಾರದರ್ಶಕವಾಗಿ ಮಾಡಿದರೆ ಜನರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಭವಿಷ್ಯದ ಭರವಸೆ 

ಒಂದು ಸಕಾರಾತ್ಮಕ ಪ್ರಸ್ತಾವನೆಯನ್ನು ಇಡೋಣ. ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಆಧುನಿಕಗೊಳಿಸಿ, ಉತ್ತಮ ಶಿಕ್ಷಕ ವೃಂದವನ್ನು ನೇಮಕ ಮಾಡಿದ ನಂತರ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಕೆಲಸಗಳಲ್ಲಿ ಮೊದಲ ಆದ್ಯತೆ ನೀಡುವ ನೀತಿಯನ್ನು ಜಾರಿಗೆ ತರಬೇಕು. ಆಗ ಸರ್ಕಾರಿ ಶಾಲೆಯ ಮಗು ಕೇವಲ ಉಚಿತ ಶಿಕ್ಷಣ ಪಡೆಯುವುದಿಲ್ಲ, ಅವನ ಭವಿಷ್ಯಕ್ಕೂ ಒಂದು ಭರವಸೆ ಸಿಗುತ್ತದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ.

ಅಂಗನವಾಡಿ ಮಟ್ಟದಿಂದಲೇ ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನು ಕಲಿಸುವ ದ್ವಿಭಾಷಾ ಮಾಧ್ಯಮವನ್ನು ಆರಂಭಿಸಿದರೆ, ನಮ್ಮ ಮಗು ತನ್ನ ಬೇರನ್ನು ಉಳಿಸಿಕೊಂಡೇ ಜಗತ್ತಿನ ಜೊತೆ ಸ್ಪರ್ಧಿಸಬಹುದು. ಶಾಲೆಗಳ ಆಧುನೀಕರಣದಿಂದ ಗ್ರಾಮದಲ್ಲಿ ಕಂಪ್ಯೂಟರ್ ಶಿಕ್ಷಕ, ಲ್ಯಾಬ್ ಸಹಾಯಕ, ಕ್ರೀಡಾ ತರಬೇತುದಾರ, ಗ್ರಂಥಪಾಲಕರಿಗೆ ಸ್ಥಳೀಯವಾಗಿಯೇ ಉದ್ಯೋಗವೂ ಸೃಷ್ಟಿಯಾಗುತ್ತದೆ.

ಪೂರ್ವಜರ ಆಸ್ತಿ ಮತ್ತು ಸರ್ಕಾರದ ಕರ್ತವ್ಯ 

ಸಾಧಾರಣವಾಗಿ ಸರ್ಕಾರಿ ಶಾಲೆಗಳ ಜಾಗ ಅತ್ಯಂತ ವಿಶಾಲವಾಗಿದೆ. ನಮ್ಮ ಪೂರ್ವಜರು ಸರ್ಕಾರಿ ಶಾಲೆಗಳಿಗೆ ಜಾಗವನ್ನು ಬಹುತೇಕ ದಾನವಾಗಿ ಕೊಟ್ಟಿರುತ್ತಾರೆ. ಅವರು ಯಾವ ಉದ್ದೇಶಕ್ಕೆ ಜಾಗವನ್ನು ಕೊಟ್ಟಿದ್ದಾರೆ ಅದೇ ಉದ್ದೇಶ ತರತಲಾಂತರಕ್ಕೂ ಮುಂದುವರೆಯಬೇಕು.

ಈಗಿನ ಆಧುನಿಕ ಶಿಕ್ಷಣ ನೀತಿಗೆ ತಕ್ಕಂತೆ ಸರ್ಕಾರಿ ಶಾಲೆಗಳು ಬದಲಾಗಲೇಬೇಕು. ಶಿಕ್ಷಣವು ಸೇವೆ. ಇದು ಪ್ರತಿಯೊಂದು ಮಗುವಿನ ಹಕ್ಕು. ಬೇರೆಲ್ಲ ಉಚಿತ ಭಾಗ್ಯಗಳನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದರೆ ಅದು ವಿದ್ಯಾರ್ಥಿಗಳಿಗೂ ಒಳ್ಳೆಯದು, ಶಿಕ್ಷಕರಿಗೂ ಒಳ್ಳೆಯದು, ಸಮಾಜಕ್ಕೂ ಅತ್ಯಂತ ಒಳ್ಳೆಯದು.

ಮಾನ್ಯ ರಾಜ್ಯ ಸರ್ಕಾರದಲ್ಲಿ ನಮ್ಮ ವಿನಮ್ರ ಆಗ್ರಹ 

ಪ್ರತಿ ಗ್ರಾಮದ ಸರ್ಕಾರಿ ಶಾಲೆಯನ್ನು ಸಂಪೂರ್ಣವಾಗಿ ಆಧುನೀಕರಿಸಬೇಕು. ಉತ್ತಮ ಶಿಕ್ಷಕರನ್ನು ನೇಮಿಸಬೇಕು. “ಕರ್ನಾಟಕ ಶಿಕ್ಷಣ ಕ್ರಾಂತಿ” ಎಂಬ ವಿಶೇಷ ಯೋಜನೆಯಡಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಹುದ್ದೆಗಳಲ್ಲಿ ಆದ್ಯತೆಯ ನೀತಿಯನ್ನು ಪರಿಗಣಿಸಬೇಕು.

ಖಾಸಗಿ ಶಾಲೆಯ ಮಾದರಿಯಲ್ಲಿ ಸರ್ಕಾರಿ ಶಾಲೆಗಳಿಗೂ ಬಸ್ ಸೌಲಭ್ಯ ಕಲ್ಪಿಸಬೇಕು. ಶಿಕ್ಷಣಕ್ಕೆ ನಾವು ನೀಡುವ ಆದ್ಯತೆಯೇ ನಾಳಿನ ಕರ್ನಾಟಕದ ಬಲ. ಆದ್ದರಿಂದ ಈ ಕೂಡಲೇ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕೆಂದು ಕಳಕಳಿಯಿಂದ ಕೋರುತ್ತೇವೆ.

ಏಕೆಂದರೆ ಒಂದು ಉತ್ತಮ ಶಾಲೆ ಒಂದು ಇಡೀ ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತದೆ.

ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ 

admin
the authoradmin

Leave a Reply