ಮೈಸೂರು: ದಾರಿ ತಪ್ಪಿದ ಬದುಕಿಗೆ ದೀಪಸ್ತಂಭ ವಚನ ಸಾಹಿತ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕ ಹಾಗೂ ಕದಳಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಜಯಲಕ್ಷ್ಮಿಪುರಂನ ಮಹಾಜನ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಆಂದೋಲನ ದತ್ತಿ, ಬೆಳಕವಾಡಿ ಲಿಂಗೈಕ್ಯ ಮಹದೇವಮ್ಮ ಪಟೇಲ್–ಶಿವರುದ್ರಪ್ಪ ದತ್ತಿ ಹಾಗೂ ಡಾ. ಎಸ್.ಎ. ಪುಟ್ಟಸ್ವಾಮಿ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕಾರ್ಗಿಲ್ ವಿಜಯೋತ್ಸವ… ನಮ್ಮ ಯೋಧರಿಗೊಂದು ಸಲ್ಯೂಟ್… ನಮ್ಮ ದೇಶ… ನಮ್ಮ ಹೆಮ್ಮೆ!
ವಚನ ಸಾಹಿತ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ, ನೈತಿಕ ಮೌಲ್ಯಗಳ ಬೆಳವಣಿಗೆಗೆ ಹಾಗೂ ಏಕಾಗ್ರತೆಯನ್ನು ಬೆಳೆಸುವ ಜೀವನ ಮಾರ್ಗದರ್ಶಿಯಾಗಿದೆ. ಇಂದಿನ ವಿದ್ಯಾರ್ಥಿಗಳು ಅನೇಕ ಆಕರ್ಷಣೆಗಳು ಮತ್ತು ಗೊಂದಲಗಳ ನಡುವೆ ಬದುಕುತ್ತಿರುವ ಸಂದರ್ಭದಲ್ಲಿ, ವಚನಗಳ ಸಂದೇಶವು ಅವರ ಮನಸ್ಸನ್ನು ಸ್ಥಿರಗೊಳಿಸಿ ಗುರಿಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ ಎಂಬ ವಚನವನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ಗುರಿಯಿಂದ ವಿಚಲಿತರಾಗದೆ ಏಕಾಗ್ರತೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ವಚನಗಳ ಅಧ್ಯಯನ ಮತ್ತು ಆಚರಣೆ ಆತ್ಮವಿಶ್ವಾಸ, ಶಿಸ್ತು ಹಾಗೂ ಚಿಂತನಶೀಲತೆಯನ್ನು ಬೆಳೆಸುತ್ತದೆ ಎಂದರು.

ಸಮುದ್ರ ತೀರದಲ್ಲಿರುವ ದೀಪಸ್ತಂಭವು ದಾರಿ ತಪ್ಪಿದ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ತೋರಿಸುವಂತೆ, ವಚನ ಸಾಹಿತ್ಯವು ಜೀವನದಲ್ಲಿ ದಾರಿ ತಪ್ಪುವ ಸ್ಥಿತಿಯಲ್ಲಿರುವ ಮನುಷ್ಯರಿಗೆ ಸತ್ಯ, ಧರ್ಮ ಮತ್ತು ಮಾನವೀಯತೆಯ ಬೆಳಕನ್ನು ತೋರಿಸಿ ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ. ಯಾವುದೇ ವಸ್ತುವಿಗೆ ಕೈಪಿಡಿ ಇರುವಂತೆ, ಮಾನವ ಜೀವನಕ್ಕೂ ವಚನ ಸಾಹಿತ್ಯವೇ ಅತ್ಯುತ್ತಮ ಜೀವನ ಕೈಪಿಡಿಯಾಗಿದೆ. ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರೂ ಆದರ್ಶ ವ್ಯಕ್ತಿತ್ವ ಹೊಂದಿದ ನಾಗರಿಕರಾಗಿ ರೂಪುಗೊಳ್ಳಬಹುದು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಡಾ. ಜಯಪ್ಪ ಹೊನ್ನಾಳಿ ಮಾತನಾಡಿ, ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ದಯೆ, ಕರುಣೆ, ಅನುಕಂಪ, ಪ್ರೀತಿ, ಸ್ನೇಹ, ವಾತ್ಸಲ್ಯ, ಕಾಯಕ ಮತ್ತು ದಾಸೋಹದಂತಹ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತುವ ವಚನಗಳು ವಿದ್ಯಾರ್ಥಿಗಳ ಬದುಕಿಗೆ ಅಕ್ಷರಶಃ ದಾರಿದೀಪವಾಗಿವೆ.

ಕಾಗೆಯೊಂದಗಳ ಕಂಡರೆ ಕರೆಯದೆ ತನ್ನ ಬಳಗವ ಎಂಬ ವಚನವನ್ನು ಉಲ್ಲೇಖಿಸಿ, ಜೀವಜಗತ್ತಿನಿಂದಲೂ ಸಹಬಾಳ್ವೆ ಮತ್ತು ಹಂಚಿಕೆಯ ಪಾಠ ಕಲಿಯಬೇಕು. ಶರಣರು ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ದುಡಿತದ ಮಹತ್ವವನ್ನು ಸಾರಿದ್ದು, ಬೆವರಿನ ಅಭಿಷೇಕವೇ ಪರಮಾತ್ಮನಿಗೆ ಶ್ರೇಷ್ಠ ಪೂಜೆ ಎಂದು ಬೋಧಿಸಿ ಸಮಾಜಮುಖಿ ಬದುಕಿನತ್ತ ನಮ್ಮನ್ನು ಕೊಂಡೊಯ್ಯುತ್ತಾರೆ. ಇಂತಹ ವಚನಗಳು ಅಜ್ಞಾನದ ಕತ್ತಲಲ್ಲಿ ದಿಕ್ಕುತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಬೆಳಕಿನ ಪಂಜುಗಳಾಗಿ ಸರಿದಾರಿ ತೋರಿಸುತ್ತವೆ ಎಂದರು.
ಮಹಾಜನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಕಾರ್ಯಕ್ರಮವನ್ನು ಉದ್ಘಾಟಿಸಿ, ವಚನ ಸಾಹಿತ್ಯವು ವಿದ್ಯಾರ್ಥಿಗಳಲ್ಲಿ ವಿವೇಚನೆ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಜಾಗೃತಿಗೊಳಿಸುತ್ತದೆ ಎಂದರು.

ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ ನಾವು ಆಡುವ ಮಾತುಗಳು ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು ಮತ್ತು ಸ್ಪಟಿಕದ ಶಲಾಕೆಯಂತಿರಬೇಕು. ನಮ್ಮ ಸನ್ಮಾರ್ಗದ ನುಡಿಗಳಿಗೆ ಆ ಶಿವನು ಕೂಡ ತಲೆದೂಗುವಂತಿರಬೇಕು. ಮಾನವನಿಗೆ ಮಾತೇ ಮಾಣಿಕ್ಯ. ನಾವು ಬಳಸುವ ಭಾಷೆ ಮತ್ತು ಸೌಜನ್ಯದ ಮಾತುಗಳು ಸಮಾಜದಲ್ಲಿ ನಮಗೆ ಗೌರವ ತಂದುಕೊಡುತ್ತವೆ. ಪ್ರತಿಯೊಬ್ಬರೂ ತಮ್ಮ ಸದ್ವಿಚಾರ ಹಾಗೂ ಮೃದು ವಚನಗಳ ಮೂಲಕ ವಾತಾವರಣವನ್ನು ಸೌಹಾರ್ದಯುತವಾಗಿಡಲು ಶ್ರಮಿಸಬೇಕು ಎಂದರು.

ಕಾರ್ಯಕ್ರಮವು ಮಹಾಜನ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಪದ್ಮ ನಿರಂಜನ್ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಅವರು ವಚನ ಕುಮಾರಸ್ವಾಮಿ ಅವರ ಪರಿಚಯ ಮಾಡಿಕೊಟ್ಟರು.
ಶೈಲಾ ಸ್ವಾಮಿ ಬೆಳಕವಾಡಿ ಅವರು ಆಂದೋಲನ ದತ್ತಿಯ ಪರಿಚಯ ನೀಡಿದರು. ಸುಜಾತ ಬಸವರಾಜ್ ಅವರು ಲಿಂಗೈಕ್ಯ ಮಹದೇವಮ್ಮ ಪಟೇಲ್–ಶಿವರುದ್ರಪ್ಪ ದತ್ತಿಯ ಪರಿಚಯ ಮಾಡಿಕೊಟ್ಟರು.

ಪ್ರೇಮಾಸ್ವಾಮಿ ಅವರು ಡಾ. ಎಸ್.ಎ. ಪುಟ್ಟಸ್ವಾಮಿ ದತ್ತಿಯ ಕುರಿತು ಪರಿಚಯ ನೀಡಿದರು. ವೀಣಾ ಮುದ್ದುಮಲ್ಲೇಶ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದತ್ತಿ ದಾಸೋಹಿಗಳಾದ ಶಿವರುದ್ರಪ್ಪ ಹಾಗೂ ಸೌಮ್ಯ, ಶಿಕ್ಷಕರು, ವಿದ್ಯಾರ್ಥಿಗಳು, ಶರಣ ಸಾಹಿತ್ಯಾಸಕ್ತರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಜನಮನಕನ್ನಡದಲ್ಲಿ ಆರೋಗ್ಯ, ಲೈಫ್ ಸ್ಟೈಲ್ ಗೆ ಸಂಬಂಧಿಸಿದಂತೆ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…








