ArticlesLatest

ಕಾರ್ಗಿಲ್ ವಿಜಯೋತ್ಸವ… ನಮ್ಮ ಯೋಧರಿಗೊಂದು ಸಲ್ಯೂಟ್… ನಮ್ಮ ದೇಶ… ನಮ್ಮ ಹೆಮ್ಮೆ!

ಜುಲೈ 26, ಕಾರ್ಗಿಲ್ ವಿಜಯ್ ದಿವಸ್

ನಾವೀಗ ಎಚ್ಚರಿಕೆಯಿಂದ ಇರಬೇಕಾದ ಕಾಲ ಸನ್ನಿಹಿತವಾಗಿದೆ… ಈಗ ಶತ್ರುಗಳು ನಮ್ಮ ದೇಶದ ಹೊರಗೆ ಮಾತ್ರವಿಲ್ಲ ಒಳಗೂ ಇದ್ದಾರೆ.. ಅವರು ಯಾವಾಗ ನಮ್ಮ ಮೇಲೆಯೇ ದಾಳಿ ಮಾಡುತ್ತಾರೋ ಎಂಬುದನ್ನು ಅರಿಯದಾಗಿದೆ. ಇದಕ್ಕೆ ಉದಾಹರಣೆಗಳನ್ನು ಒಂದರ ಮೇಲೊಂದರಂತೆ ನೀಡಬಹುದಾಗಿದೆ…

ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವಾಗಲೆಲ್ಲ ಶತ್ರುಗಳ ಅಟ್ಟಹಾಸ ನಮ್ಮ ಮುಂದೆ ಬಂದು ನಿಲ್ಲುತ್ತವೆ..  ಅಷ್ಟೇ ಅಲ್ಲ ಸದಾ ಎಚ್ಚರವಾಗಿರಿ ಎಂಬುದನ್ನು ನೆನಪಿಸುತ್ತವೆ.. ನಮ್ಮ ಸೈನ್ಯ ಮೈಯೆಲ್ಲ ಕಣ್ಣಾಗಿ ಕಾಯುತ್ತಿದ್ದರೂ ಕೆಲವೊಮ್ಮೆ ಊಹೆ ಮಾಡದ ಘಟನೆಗಳು ನಡೆದು ಹೋಗಿವೆ.. ಅಲ್ಲಿ ಶತ್ರುಗಳ ಅಟ್ಟ ಹಾಸದ ಕೇಕೆ ಸಿಡಿಲಿನಂತೆ ಬಡಿದಿದೆ.  ಇದು ನಾವು ಶತ್ರುಗಳನ್ನು ನಿಗ್ರಹಿಸುತ್ತಾ ಬಂದಿದ್ದೇವೆ.. ಆದರೂ ಮೈಮರೆಯುವಂತಿಲ್ಲ… ಎಂಬ ಸಂದೇಶವನ್ನು ನಮಗೆ ರವಾನೆ ಮಾಡಿದೆ.

ನಮ್ಮ ಕೆಲವು  ನಾಯಕರು ದೇಶಕ್ಕಿಂತ ಅಧಿಕಾರ ಮುಖ್ಯ ಎಂಬ ಮನಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರು ಕೆಲವೊಮ್ಮೆ ದೇಶದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಾರೆ.. ದೇಶ ಉಳಿದರಷ್ಟೆ ಅಧಿಕಾರ ಎಂಬುದನ್ನು ಅವರು ಮರೆತಿದ್ದಾರೆ.. ಕಾರ್ಗಿಲ್ ವಿಜಯೋತ್ಸವದ ಈ ಸಂದರ್ಭದಲ್ಲಿ ನಮ್ಮ ನಾಯಕರಿಗೆ, ದೇಶದ ವಿರುದ್ಧ ಕತ್ತಿ ಮಸೆಯುವವರಿಗೆ ದೇವರು ಒಳ್ಳೆಯ ಬುದ್ದಿಕೊಡಲಿ ಎಂದಷ್ಟೇ ಭಾರತಾಂಬೆಯಲ್ಲಿ ಬೇಡಿಕೊಳ್ಳ ಬಹುದಾಗಿದೆ.

ನಿಜ ಹೇಳಬೇಕೆಂದರೆ ಜುಲೈ 26 ಬಂದಾಗಲೆಲ್ಲ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಯುತ್ತದೆ. ಇದು ನಮ್ಮ ದೇಶಭಕ್ತಿಯನ್ನು ಪ್ರದರ್ಶಿಸುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಸ್ಮರಿಸುವ ದಿನವಷ್ಟೇ ಅಲ್ಲ ಇದು ನಮಗೆ ಅರ್ಥಾತ್ ದೇಶಕ್ಕೆ ಎಚ್ಚರಿಕೆಯ ಗಂಟೆಯೂ ಹೌದು… ಶತ್ರುದೇಶವಾಗಿರುವ ಪಾಕಿಸ್ತಾನ ಹಸ್ತಲಾಘನ ಮಾಡುತ್ತಲೇ ಬೆನ್ನಿಗೆ ಚೂರಿ ಇರಿಯುತ್ತಾ ಬಂದಿದೆ. ಆದರೆ ಅದಕ್ಕೆ ತಕ್ಕ ಶಾಸ್ತಿಯನ್ನು ಭಾರತ ಮಾಡಿದೆ. ಅದಕ್ಕೊಂದು ಉದಾಹರಣೆ ಕಳೆದ ವರ್ಷ ನಡೆಸಿದ ಆಪರೇಷನ್ ಸಿಂಧೂರ್..

ಇವತ್ತಿಗೂ ಪಾಕಿಸ್ತಾನ ನಂಬಿಕೆಗೆ ಅರ್ಹ ಅಲ್ಲ ಎಂಬುದನ್ನು ಹಲವು  ಸಂದರ್ಭಗಳಲ್ಲಿ ಸಾಬೀತು ಮಾಡಿದೆ. ಅದರ ಜತೆಗೆ ಬಾಂಗ್ಲಾ, ಚೀನಾ ಎಲ್ಲವೂ ಶತ್ರುಗಳೇ.. ಹೀಗಿರುವಾಗ ಶತ್ರುಗಳೊಂದಿಗೆ ಗಡಿ ಹಂಚಿಕೊಂಡಿರುವ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಅದರಿಂದ ನಿರೀಕ್ಷೆ ಮಾಡಲಾರದಷ್ಟು ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂಬುದಂತು ಸತ್ಯ.

ಹಾಗೆನೋಡಿದರೆ ನಮ್ಮ ದೇಶದೊಳಗೆ ಅತಿಕ್ರಮಣ ಮಾಡಿದ್ದ ಪಾಕಿಸ್ತಾನದ  ಸೈನಿಕರ ಸದ್ದಡಗಿಸಿದ ಜುಲೈ 26 ಕಾರ್ಗಿಲ್ ವಿಜಯೋತ್ಸವವಾಗಿದೆ. ಆ ಮೂಲಕ ನಮ್ಮ ದೇಶದ ರಕ್ಷಣೆಗಾಗಿ ಹುತಾತ್ಮರಾದ ಸುಮಾರು ಏಳುನೂರಕ್ಕೂ ಹೆಚ್ಚು ಯೋಧರನ್ನು ನೆನಪಿಸಿಕೊಳ್ಳುತ್ತಾ ಅವರ ತ್ಯಾಗ ಬಲಿದಾನಕ್ಕೊಂದು ನಮನ ಸಲ್ಲಿಸುತ್ತಾ ಮುನ್ನಡೆಯುತ್ತಿವುದು ನಮ್ಮ ಕರ್ತವ್ಯವಾಗಿದೆ.

ದೇಶದ ರಕ್ಷಣೆಗಾಗಿ ನಮ್ಮ ಲಕ್ಷಾಂತರ ಸೈನಿಕರು ಪ್ರಾಣಬಿಟ್ಟಿದ್ದಾರೆ. ಬಹುಶಃ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ ಎಂದರೆ ಗಡಿಯಲ್ಲಿ ಹಗಲು ರಾತ್ರಿ ಎನ್ನದೆ ದೇಶವನ್ನು ಕಾಯುತ್ತಿರುವ ಆ ಸೈನಿಕರೇ ಕಾರಣ. ಅಂತಹ ಸೈನಿಕರನ್ನು ನಾವೆಲ್ಲರೂ ಪ್ರತಿಕ್ಷಣವೂ ನೆನೆಯಬೇಕಾಗುತ್ತದೆ. ಅವರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ದೇಶವನ್ನು ಕಾಯುತ್ತಿದ್ದಾರೆ.  ಅದು ನಮಗಾಗಿ.. ನಮ್ಮ ರಕ್ಷಣೆಗಾಗಿ..

ಕಾರ್ಗಿಲ್ ಕದನ 1999ರಲ್ಲಿ ನಡೆದಾಗ ಇಡೀ ದೇಶ ಒಟ್ಟಾಗಿ ನಿಂತಿತು. ಸಂಘ ಸಂಸ್ಥೆಗಳು, ಮಾಧ್ಯಮಗಳು, ಮಕ್ಕಳು, ಗೃಹಿಣಿಯರು, ಸಿಬ್ಬಂದಿ, ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹೀಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುವುದರ ಮೂಲಕ ಸೈನಿಕರ ನೆರವಿಗೆ ನಿಂತರು. ಅವರಿಗೆ ಸ್ಥೈರ್ಯ ತುಂಬಿದರು. ನಿಜ ಹೇಳಬೇಕೆಂದರೆ ಅವತ್ತಿನ ಪರಿಸ್ಥಿತಿಯಲ್ಲಿ ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ತಯಾರಿರಲಿಲ್ಲ ಆದರೆ ಪಾಕಿಸ್ತಾನ ಸೇನೆ ಭಾರತದೊಳಗೆ ನುಗ್ಗಿಯಾಗಿತ್ತು.  ನಾವು ಯುದ್ಧ ಮಾಡುವುದು ಅನಿವಾರ್ಯವಾಗಿತ್ತು.

ಅವರು ಹಿಮಶಿಖರದ ತುತ್ತ ತುದಿಯಲ್ಲಿ ನಿಂತು ಭಾರತದ ಸೈನಿಕರ ಮೇಲೆ ದಾಳಿ ಮಾಡುವುದು ಸುಲಭವಾಗಿತ್ತು. ಆದರೆ ತಳಭಾಗದಿಂದ ಮೇಲಕ್ಕೇರಿ ಯುದ್ಧ ಮಾಡುವುದು ಕಠೀಣಾತಿ ಕಠಿಣವಾಗಿತ್ತು. ಆದರೆ ತಮ್ಮ ಎಲ್ಲ ಯುದ್ಧ ಸಾಮಗ್ರಿಗಳ ನಡುವೆ ದೇಶದ ಪ್ರತಿಯೊಬ್ಬ ಯೋಧನಲ್ಲಿಯೂ ಇದ್ದ ಒಂದೇ ಒಂದು ಅಸ್ತ್ರ ಧೈರ್ಯ ಮತ್ತು ಮಾತೃಭೂಮಿಯ ರಕ್ಷಣೆ. ಅದಕ್ಕಾಗಿ ಹಿಮಚ್ಛಾದಿತ ಪ್ರದೇಶಗಳಲ್ಲಿ ಎದೆಗುಂದದೆ, ಸಾವು ಮಗ್ಗಲಲ್ಲೇ ಇದ್ದರೂ ಅದಕ್ಕೆ ಹೆದರದೆ ಒಂದೇ ಮಾತರಂ ಮಂತ್ರ ಜಪಿಸುತ್ತಲೇ ಮುಂದೆ ನುಗ್ಗಿದ್ದರು.

ಹೀಗೆ ನುಗ್ಗಿದ ಸಾಹಸಿಗಳ ಪೈಕಿ ಕೆಲವರು ಹುತಾತ್ಮರಾದರು. ಇನ್ನು ಕೆಲವರು ಅಂಗವಿಕಲರಾದರು. ಹೀಗಿದ್ದರೂ ತನ್ನ ಪಕ್ಕದಲ್ಲಿಯೇ ಹೆಣವಾಗುತ್ತಿದ್ದ ಸಹ ಯೋಧರ ನಡುವೆ ಬಹಳಷ್ಟು ಸೈನಿಕರು ಮುನ್ನುಗ್ಗಿ ಶತ್ರುಗಳನ್ನು ಎದುರಿಸಿದರು. ಅದರ ಪರಿಣಾಮವೇ ಇವತ್ತು ನಾವೆಲ್ಲರೂ ಹೆಮ್ಮೆಯಿಂದ ಕಾರ್ಗಿಲ್ ದಿವಸವನ್ನು ಆಚರಿಸುವಂತಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿನ ನಮ್ಮ ಯೋಧರ ಸಾಹಸಗಾಥೆಗಳನ್ನು ಇವತ್ತಿಗೂ ನಾವು ನೆನಪಿಸಿಕೊಳ್ಳಬೇಕಾಗಿದೆ.

ಕಾರ್ಗಿಲ್ ಯುದ್ಧಕ್ಕೆ ಎಲ್ಲವೂ ಮುಗಿದೇ ಹೋಯಿತಾ? ಇಲ್ಲ.. ಅದಾದ ನಂತರ  ಇಲ್ಲಿವರೆಗೆ ನಾವು ನೂರಾರು ಯೋಧರನ್ನು ಕಳೆದುಕೊಂಡಿದ್ದೇವೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದೇವೆ. ಸ್ವಾತಂತ್ರ್ಯ ನಂತರ ದೇಶದ ರಕ್ಷಣೆಗಾಗಿ ಸಾವಿರಾರು ಸೈನಿಕರು ಪ್ರಾಣಬಿಟ್ಟಿದ್ದಾರೆ. ಬಹುಶಃ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ ಎಂದರೆ ಗಡಿಯಲ್ಲಿ ಹಗಲು ರಾತ್ರಿ ಎನ್ನದೆ ದೇಶವನ್ನು ಕಾಯುತ್ತಿರುವ ಸೈನಿಕರೇ ಕಾರಣವಲ್ಲವೆ?. ಅಂತಹ ಸೈನಿಕರನ್ನು ನಾವೆಲ್ಲರೂ ಪ್ರತಿಕ್ಷಣವೂ ನೆನೆಯೋಣ… ಹಾಗೆಯೇ ದೇಶಕ್ಕಾಗಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ..  ನಮ್ಮ ಯೋಧರಿಗೊಂದು ಹೆಮ್ಮೆಯ ಸಲ್ಯೂಟ್..

-B M Lavakumar

ಖ್ಯಾತ ಬರಹಗಾರರ ವಿವಿಧ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

admin
the authoradmin

Leave a Reply