ArticlesLatest

ಗುರು ಸೇವೆಯೇ ಗುರಿ ಸಾಧನೆಗೆ ಹೆದ್ದಾರಿ… ನಾವು ಗುರುವಿನ ಮಹತ್ವ ಅರಿತು ಮುನ್ನಡೆಯೋಣ.

ಗುರುಪೂಜೆಯ ಹಬ್ಬವೇ ‘ಗುರುಪೂರ್ಣಿಮೆ’. ವ್ಯಾಸ ಮಹರ್ಷಿಗಳ ಜನ್ಮೋತ್ಸವದ ಹೆಸರಿನಲ್ಲಿ ಇದು ನಡೆಯುವುದರಿಂದ ಇದನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಕರೆಯಲಾಗುವುದು.  ಗುರು ಇಲ್ಲದೆ ಗುರಿ ಸಾಧನೆ ಅಷ್ಟು ಸುಲಭವಲ್ಲ.  ಹಾಗಾಗಿ ‘ಗುರು ಏನ್ ಮಹಾ’ ಎನ್ನದೆ ‘ಗುರುವೇ ನಮಃ’ ಎಂದು ಗುರು ಪರಂಪರೆಗಿಂದು ನಮಿಸಿ, ಈ ದಿನವಾದರೂ ಗುರುವಿನ ಮಹತ್ವ ಅರಿತು ಮುನ್ನಡೆಯೋಣ.

ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಸಂಬಂಧ ಮಹೋನ್ನತವಾದುದು. ಅದರ ಗಾಢತೆ ಊಹಾತೀತ! ಗುರು-ಶಿಷ್ಯ ಪ್ರೀತಿಯ ಔನ್ನತ್ಯವನ್ನು, ಸಾಧನೆಯ ಉತ್ತುಂಗವನ್ನು, ಸಾರ್ಥಕತೆಯ ಬೆಳಕನ್ನು ಜಗತ್ತಿಗೆ ಚೆಲ್ಲಿ ಹೋಗಿರುವ ಅನೇಕ ಶ್ರೇಷ್ಠಾತಿಶ್ರೇಷ್ಠ ಗುರು-ಶಿಷ್ಯ ಪರಂಪರೆಯೇ ನಮ್ಮ ಸಂಸ್ಕೃತಿಯ ಬೇರಿನಲ್ಲಿದೆ.  ಪರಮಹಂಸ-ವಿವೇಕರ ಪವಿತ್ರ ಗುರು-ಶಿಷ್ಯ ಬಾಂಧವ್ಯದ ಬೆಳಕೊಂದೇ ಸಾಕು ಇವತ್ತಿಗೂ ಭಾರತವನ್ನು ಜ್ಞಾನ ಮಾರ್ಗದಲ್ಲಿ ಬೆಳಗುತ್ತಿದೆ.  ತಂದೆ-ತಾಯಿಗಿಂತಲೂ ಗುರುವಿನ ಸ್ಥಾನ ಹಿರಿದು.  ಅದನ್ನೇ ಸರ್ವಜ್ಞ ‘ತಂದೆಗೂ-ಗುರುವಿಗೂ ಒಂದು ಅಂತರ ಉಂಟು, ತಂದೆ ತೋರುವನು ಸದ್ಗುರುವ, ಗುರುರಾಯ ಬಂಧನವ ಕಳೆವ ಸರ್ವಜ್ಞ’ ಎಂದು ಹೇಳಿರುವ.

ತಂದೆ-ತಾಯಿ, ಬಂಧು-ಬಳಗ … ಹೀಗೆ ಎಲ್ಲ ಸಂಬಂಧಕ್ಕಿಂತಲೂ ಮಿಗಿಲಾದ ಗುರು-ಶಿಷ್ಯ ಸಂಬಂಧಕ್ಕೆ ಸಮ ಜಗದಲ್ಲಿ ಮತ್ತೊಂದಿಲ್ಲ.  ಗುರು ಇದ್ದರೇನೇ ಸುಂದರ ಬಾಳು-ಭವಿಷ್ಯ.  ಹಿಂದೆ ಗುರು, ಮುಂದೆ ಗುರಿ ಇದ್ದಾಗ ಮಾತ್ರ ಸಾಧನೆ ಸಾಧ್ಯ.  ಇಲ್ಲದಿರೆ ಬರೀ ಶೂನ್ಯ.  ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು.  ಶ್ರೀರಾಮ, ಶ್ರೀ ಕೃಷ್ಣರೂ ಕೂಡ ವಶಿಷ್ಟ, ವಿಶ್ವಾಮಿತ್ರ, ಸಾಂದೀಪನಿಗಳಂಥ ಗುರುಗಳ ಸೇವೆ ಮಾಡಿ ಫಲ ಪಡೆದವರು.  ‘ಗುರುದೇವೋಭವ’ ಎಂದು ಗುರುವನ್ನು ದೈವಸ್ವರೂಪದಲ್ಲಿಟ್ಟು ನಮ್ಮ ಸಂಸ್ಕೃತಿಯಲ್ಲಿ ಕರೆಯಲಾಗುತ್ತಿದೆ.  ಭಗವಂತ ಅಂಥ ನಾವು ಹೆಸರಿಸಿ ಪೂಜಿಸುವ ವಿಶ್ವಚೈತನ್ಯ ಸಾಮಾನ್ಯ ಮನಸ್ಸಿಗೆ ಗೂಢ, ಅಗೋಚರ.  ಆದರೆ ಗುರುದೇವ ಕಣ್ಣಿಗೆ ಕಾಣುವ ಸಾಕ್ಷಾತ್ ಪರಬ್ರಹ್ಮದೇವ.  ಆದ್ದರಿಂದಲೇ ಆಚಾರ್ಯ ಓಶೋ ಗುರುವನ್ನು ‘ಭಗವಂತನ ವಿಳಾಸ’ ಎಂದಿದ್ದಾರೆ.

ಗುರುರ್ಬ್ರಹ್ಮಾ ಗುರುರ್ವಿಷ್ಣು

ಗುರುದೇವೋ ಮಹೇಶ್ವರ

ಗುರುಸಾಕ್ಷಾತ್ ಪರಬ್ರಹ್ಮಾ

ತಸ್ಮೈಶ್ರೀ ಗುರುವೇ ನಮಃ

ಗುರುವಿನ ಮಹತ್ವವೇ ಅಂಥಾದ್ದು! ಓರ್ವ ಶ್ರೇಷ್ಠಗುರು ಸಹಸ್ರಾರು ಶ್ರೇಷ್ಠ ಶಿಷ್ಯರನ್ನು ಸೃಷ್ಠಿಸಬಲ್ಲ.  ಬ್ರಹ್ಮಜ್ಞಾನವನ್ನೇ ನೀಡಬಲ್ಲ.  ಗುರುದೇವ ಮನಸ್ಸು ಮಾಡಿದಲ್ಲಿ ಏನು ಬೇಕಾದರೂ ಮಾಡಬಲ್ಲ.  ಅಗಾಧ ಅರಿವಿನ ಹಣತೆಯನ್ನು ಪ್ರಜ್ವಲವಾಗಿ ಬೆಳಗಬಲ್ಲ.  ಅದಕ್ಕೇನೇ ಗುರುವನ್ನು ಸೃಷ್ಟಿಕರ್ತನಾದ ಬ್ರಹ್ಮನಿಗೆ ಹೋಲಿಸಿ ‘ಗುರುಬ್ರಹ್ಮಾ’ ಎಂದು ನಮಿಸುವುದು.

‘ಸಾಮೃತ್ಯೆಃ ಪಾಣಿರ್ಘ್ನಂತೆ ಗುರುವೋನ ವಿಷೋಕ್ಷಿತೈಃ| ಲಾಲನಾಶ್ರಯಿಣೋ ದೋಷಾಸ್ತಾಡನಾಶ್ರಯಿಣೋ ಗುಣಾಃ||’ ಅಂದರೆ ಗುರುಗಳು ಕೈಗೆ ಅಮೃತವನ್ನು ಹಚ್ಚಿಕೊಂಡು ಶಿಷ್ಯರನ್ನು ಹೊಡೆಯುತ್ತಾರೆ.  ವಿಷವನ್ನು ಹಚ್ಚಿಕೊಂಡಲ್ಲ.  ಮಕ್ಕಳನ್ನು ಮುದ್ದಿಸುವುದರಿಂದ ದೋಷಗಳು ಚಿಗುರಿಕೊಳ್ಳುತ್ತವೆ.  ದಂಡಿಸುವುದರಿಂದ ಗುಣಗಳು ಕಾಣಿಸಿಕೊಳ್ಳುತ್ತವೆ.  ದುರ್ಗುಣಗಳಿಂದ ದೂರವಿರಿಸಿ ಸದ್ಗುಣ ಸಂಪನ್ನರಾಗುವತ್ತ ಶಿಷ್ಯೋತ್ತಮರನ್ನು ತಮ್ಮ ಅಮೃತಕರಗಳಿಂದ ಗುರು ಸಂರಕ್ಷಿಸುವ.  ಹಾಗಾಗಿ ಗುರುವನ್ನು ಸಂರಕ್ಷಕನಾದ ವಿಷ್ಣುವಿಗೆ ಹೋಲಿಸಿ ‘ಗುರುರ್ವಿಷ್ಣು’ ಎಂದು ಪೂಜಿಸುತ್ತೇವೆ.

ಗುರು ರುದ್ರನಂತೆ ಪ್ರಳಯಕಾರಿಯೂ ಹೌದು.  ಲಯಕಾರಿಯೂ ನಿಜ. ‘ಶಿವೇತರಕ್ಷತಯೇ’ ಎಂಬಂತೆ, ಯಾವುದು ಮಂಗಳಕರವಲ್ಲದ್ದೋ ಅದನ್ನು ಗುರುವಾದವನು ನಾಶಗೊಳಿಸುತ್ತಾನೆ.  ತನ್ಮೂಲಕ ಶಿಷ್ಯರ ಬದುಕನ್ನು ಮಂಗಳಮಯ ಮಾಡುತ್ತಾನೆ.  ಮಾನವನಲ್ಲಿರುವ ಕೆಡಕನ್ನು ದಹಿಸಿ ಒಳಿತನ್ನು ಧಾರೆಯೆರೆದು ಉತ್ತಮೋತ್ತಮ ಶಿಷ್ಯ ಪರಂಪರೆಯನ್ನು ಬೆಳೆಸುವಲ್ಲಿ ಗುರುವೇ ದೀಪಧಾರಿ.  ಆದ್ದರಿಂದಲೇ ಇಂಥ ಗುರುದೇವನನ್ನು ಲಯಕರ್ತನಾದ ರುದ್ರನಿಗೆ ಹೋಲಿಸಿ ‘ಗುರುದೇವೋ ಮಹೇಶ್ವರ’ ಎಂದು ಆರಾಧಿಸುವುದು.

ಗುರುವಿನ ಗುಣದ ಬೃಹತ್ತು ಮತ್ತು ಮಹತ್ತು ಹಾಗೂ ಮಹಾಶಕ್ತಿ ಎಷ್ಟೆಂಬುದನ್ನು, ಹಾಗೆಯೇ ಗುರು ಎಂಬುವ ಹೇಗಿರುವ ಎಂಬ ತತ್ವವನ್ನು ಸಾರುವ ಸುಭಾಷಿತವೊಂದು ಹೀಗಿದೆ-

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ

ಚಕ್ಷುರುನ್ಮೀರಿತಂ ದೇವ ತಸ್ಮೈಶ್ರೀ ಗುರುವೇ ನಮಃ

ಅಂದರೆ, ಶಿಷ್ಯನ ಅಜ್ಞಾನವೆಂಬ ಕಣ್ಣು ಬೇನೆಯನ್ನು ಜ್ಞಾನವೆಂಬ ಅಂಜನದ ಕಡ್ಡಿಯಿಂದ ಗುಣಪಡಿಸಿ ಅವನ ಕೀರ್ತಿ ಎಲ್ಲೆಡೆ ಹರಡುವಂತೆ ಮಾಡಿದ ಶ್ರೀ ಗುರುವಿಗೆ ನಮನಗಳು ಎಂದರ್ಥ.

ಆದರೆ ಇವತ್ತಿನ ದಿನಗಳಲ್ಲಿ ಅಧಃಪತನಕ್ಕಿಳಿಯುತ್ತಿರುವ ನಮ್ಮ ಸಮಾಜದ ಅರ್ಥಾತ್ ದೇಶದ ಪರಿಸ್ಥಿತಿ ನೋಡಿದಾಗ ‘ಗುರು’ ಆದವನು ನಿಜಕ್ಕೂ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದಾನೆಯೇ? ಹಾಗೆಯೇ ಆಧ್ಯಾತ್ಮಿಕ ಗುರು ಎನಿಸಿಕೊಂಡವರು ಕಾಯಾ ವಾಚಾ ಮನಸಾ ತಮ್ಮ ಕರ್ತವ್ಯದ ಕಾಯಕವನ್ನು ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಶ್ರೀ ಸಾಮಾನ್ಯನಲ್ಲಿ ಮೂಡದಿರದು!

 

admin
the authoradmin

Leave a Reply