ಮೈಸೂರು: ಸಂಸ್ಕಾರಯುತ ಬದುಕಿಗೆ ವಚನ ಸಾಹಿತ್ಯ ದಾರಿದೀಪ ಎಂದು ಸರಗೂರು ತಾ. ಬಿಡಗಲು ಪಡುವಲು ಶ್ರೀ ವಿರಕ್ತಮಠದ ಶ್ರೀ ಮಹದೇವಸ್ವಾಮೀಜಿ ಹೇಳಿದರು.
ಬೆಂಗಳೂರಿನ ಬಸವಕೇಂದ್ರ ಚಾರಿಟಬಲ್ ಟ್ರಸ್ಟ್, ಗದ್ಧಿಗೆಯ ಶ್ರೀ ಕೆಂಡಗಣ್ಣಸ್ವಾಮಿ ಹಾಗೂ ಶ್ರೀ ಮಲೆ ಮಹದೇಶ್ವರಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಕೆಂಡಗಣ್ಣಸ್ವಾಮಿ ಗದ್ಧಿಗೆಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ, ದಾಸೋಹ ತತ್ವಗಳು ಮನುಷ್ಯನನ್ನು ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುತ್ತವೆ.

ದಾಸೋಹವು ಕೇವಲ ಅನ್ನ ನೀಡುವ ಕ್ರಿಯೆಯಲ್ಲ. ಅದು ಶ್ರೇಷ್ಠ ಜೀವನ ಮೌಲ್ಯವಾಗಿದೆ. ದಾಸೋಹ ಮಾಡುವವರು ಹಾಗೂ ಸ್ವೀಕರಿಸುವವರು ಅದು ವ್ಯರ್ಥವಾಗದಂತೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ದಾಸೋಹದ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಕಳಸವುಳ್ಳ ಶಿವಾಲಯವೊಂದಕ್ಕೆ ಚೌಕದಲ್ಲಿ ಎರಡು ಕಂಬ ವಿಷಯ ಕುರಿತು ಉಪನ್ಯಾಸ ನೀಡಿ ದೇಹವೇ ದೇಗುಲ ಆದಾಗ, ಮಾನವನು ಮಹಾದೇವನಾಗುತ್ತಾನೆ. ಮನುಷ್ಯನ ಆಂತರಿಕ ವಿಕಾಸಕ್ಕೆ ಷಟ್ಸ್ಥಲ ತತ್ತ್ವ ಪರಿಣಾಮಕಾರಿ ಸಾಧನವಾಗಿದೆ. ಭಕ್ತಸ್ಥಲದಿಂದ ಆರಂಭವಾಗುವ ಆಧ್ಯಾತ್ಮಿಕ ಪಯಣ ಐಕ್ಯಸ್ಥಲದಲ್ಲಿ ಪರಿಪೂರ್ಣತೆಯನ್ನು ಹೊಂದುತ್ತದೆ.

ದೇವರ ಮೇಲೆ ಭಕ್ತಿ, ಗುರುಗಳ ಮೇಲೆ ಗೌರವ ಹಾಗೂ ಜೀವನದಲ್ಲಿ ವಿನಯವನ್ನು ಬೆಳೆಸಿಕೊಳ್ಳುವುದೇ ಭಕ್ತಸ್ಥಲ. ಯಾರೇ ಹೊಗಳಿದರೂ ಹಿಗ್ಗದೆ, ಯಾರೇ ತೆಗಳಿದರೂ ಕುಗ್ಗದೆ ಸಮಚಿತ್ತದಿಂದ, ಪ್ರಸನ್ನಭಾವದಿಂದ ಬದುಕುವುದೇ ನಿಜವಾದ ಐಕ್ಯಸ್ಥಲ. ಈ ಆರು ಸ್ಥಲಗಳನ್ನು ಬದುಕಿರುವಾಗಲೇ ಅನುಭವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹಿನ್ಕಲ್ ಬಸವರಾಜು ಮಾತನಾಡಿ ಶರಣರು ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಮಹತ್ತರ ತತ್ವವನ್ನು ಲೋಕಕ್ಕೆ ಸಾರಿದ್ದಾರೆ. ಕಾಯಕವನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಅದನ್ನು ಶಿವಸೇವೆಯೆಂದು ಭಾವಿಸಿ ನಿಷ್ಠೆಯಿಂದ ನಿರ್ವಹಿಸಬೇಕು.

ಕಾಯಕ ನಿರ್ವಹಿಸುವ ಸಂದರ್ಭದಲ್ಲಿ ಯಾರೇ ಬಂದರೂ, ಯಾವುದೇ ಅಡೆತಡೆ ಎದುರಾದರೂ ಕರ್ತವ್ಯದಿಂದ ವಿಮುಖರಾಗದೆ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಪರಶಿವನ ಪ್ರೀತಿಗೆ ಪಾತ್ರರಾಗಲು ಸಾಧ್ಯ.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ವಚನ ಸಾಹಿತ್ಯವು ನಮ್ಮ ನಾಡಿನ ಅಮೂಲ್ಯ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯಾಗಿದ್ದು, ಅದರಲ್ಲಿರುವ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಗದ್ದಿಗೆ ಶ್ರೀ ಕೆಂಡಗಣ್ಣಸ್ವಾಮಿ ಹಾಗೂ ಮಹದೇಶ್ವರಸ್ವಾಮಿ ದೇವಸ್ಥಾನದ ಕೋರ್ಟ್ ರಿಸೀವರ್ ಪುಣ್ಯಶೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಹಿನ್ಕಲ್ ಬಸವರಾಜು, ಸಾಲಿಗ್ರಾಮ ತಾಲೂಕು ಭೇರ್ಯ ವೀರಶೈವ ಲಿಂಗಾಯತ ಸಮಾಜದ ಬಿ.ಎಂ. ಪ್ರಕಾಶ್, ಬನ್ನೂರು ವೀರಶೈವ ಲಿಂಗಾಯತ ಭಕ್ತಮಂಡಳಿಯ ಅಧ್ಯಕ್ಷ ಎಂ. ಗುರುಸ್ವಾಮಿ, ನಿವೃತ್ತ ರೇಷ್ಮೆ ನಿರೀಕ್ಷಕರಾದ ಶಾಂತರಾಜು, ಆರ್, ವೇದ, ಸವಿತಾ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರಿನ ಬಸವ ಧರ್ಮಕೇಂದ್ರ ಅಧ್ಯಕ್ಷ ಬಸವಪ್ರಿಯ ನಾಗರಾಜು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮವನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ನಿರೂಪಿಸಿದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಉಮಾಪತಿ, ರತ್ನಪುರಿ ಮಹೇಶ್, ದೇವಮ್ಮ ಸಿದ್ಧಲಿಂಗಪ್ಪ, ಸುಶೀಲಮ್ಮ, ಶಿವಕುಮಾರ್, ಬನ್ನೂರಿನ ವಿಜಯ್ ಕುಮಾರ್, ಟಿ ಸಿ ಮಲ್ಲೇಶ್, ಮೂರ್ತಿ ಉಪಸ್ಥಿತರಿದ್ದರು.








