ಚಟ್ಟಂಗೆರೆಯಲ್ಲಿ ಸಚಿನ್ ಮೈಂಡ್ ಸ್ಮಾರಕ ಶ್ರೇಷ್ಠತಾ ಪ್ರಶಸ್ತಿ ಪ್ರದಾನ -ಕಲಿಕಾ ಸಾಮಗ್ರಿ ವಿತರಣೆ

ಕೆ.ಆರ್.ಪೇಟೆ: ಸರ್ಕಾರಿ ಪ್ರೌಢಶಾಲೆ, ಚಟ್ಟಂಗೆರೆಯಲ್ಲಿ ಸಚಿನ್ ಮೈಂಡ್ ಮೆಮೋರಿಯಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ನಡೆಯಿತು
ಕಾರ್ಯಕ್ರಮದಲ್ಲಿ 2025–26ನೇ ಸಾಲಿನ ಶಾಲಾ ಟಾಪರ್ ಪ್ರಶಸ್ತಿಯನ್ನು ಶ್ರಾವಣಿ ಆರ್. ಕೆ. ಹಾಗೂ ಬೆಸ್ಟ್ ಆಲ್ ರೌಂಡರ್ ಪರ್ಫಾರ್ಮೆನ್ಸ್ ಪ್ರಶಸ್ತಿಯನ್ನು ಅಮೃತಾ ಆರ್. ಎಂ. ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಟ್ರೋಫಿ, ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಇತರ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾವನಾ ಪುಣೆಕರ್ ಅವರು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಜೀವನದ ಯಶಸ್ಸಿಗೆ ಮೂಲಭೂತ ಅಂಶಗಳಾಗಿವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ರೈಟಿಂಗ್ ಪ್ಯಾಡ್‌ಗಳನ್ನು ವಿತರಿಸಿದರು.
ಹಿರಿಯ ಜಠರ ಹಾಗೂ ಜೀರ್ಣಾಂಗ ಶಸ್ತ್ರಚಿಕಿತ್ಸಕ ತಜ್ಞ ವೈದ್ಯರಾದ ಡಾ. ಸಚಿನ್ ನಳೆ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಂದಿನ ಹತ್ತು ವರ್ಷಗಳಲ್ಲಿ ತಾನು ಏನಾಗಬೇಕು ಎಂಬ ಗುರಿಯನ್ನು ಈಗಲೇ ನಿಗದಿಪಡಿಸಿಕೊಂಡು ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಖಚಿತ ಎಂದು ತಿಳಿಸಿದರು. ಅವರು ಆರೋಗ್ಯಕರ ಜೀವನಶೈಲಿ ಮತ್ತು ಸಮಯ ನಿರ್ವಹಣೆಯ ಮಹತ್ವವನ್ನೂ ವಿವರಿಸಿದರು. ನಂತರ ವಿದ್ಯಾರ್ಥಿಗಳಿಗೆ ರೈಟಿಂಗ್ ಟೇಬಲ್‌ಗಳನ್ನು ವಿತರಿಸಿದರು.

ಸಾಫ್ಟ್ ವೇರ್ ಇಂಜಿನಿಯರ್ ರಚನಾ ಕಾಥನೆ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಭವಿಷ್ಯಕ್ಕೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು. ಅವರು ಡಿಜಿಟಲ್ ಲರ್ನಿಂಗ್‌ನ ಮಹತ್ವವನ್ನು ಸಹ ವಿವರಿಸಿದರು.
ಸಾಫ್ಟ್‌ವೇರ್ ಇಂಜಿನಿಯರ್ ಸಂಜೋಗ್ ರಾಮಟೆಕೆ ಅವರು ಮಾತನಾಡಿ, ಕನಸು ಮತ್ತು ಗುರಿ ಎರಡೂ ಸ್ಪಷ್ಟವಾಗಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅವರು ನಿರಂತರ ಅಭ್ಯಾಸ ಮತ್ತು ಧೈರ್ಯದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಮುಖ್ಯ ಶಿಕ್ಷಕರಾದ ಜೆ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಸಚಿನ್ ಮೈಂಡ್ ಅವರ ಸ್ಮರಣಾರ್ಥ ನೀಡಲಾಗಿರುವ ಟ್ರೋಫಿಗಳು, ನಗದು ಬಹುಮಾನಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದ ಗುರಿಗಳನ್ನು ಸಾಧಿಸಬೇಕು ಎಂದು ಕರೆ ನೀಡಿದರು. ಅವರು ಶಾಲೆಯ ಸಾಧನೆಗಳು ಮತ್ತು ಮುಂದಿನ ಶೈಕ್ಷಣಿಕ ಯೋಜನೆಗಳ ಬಗ್ಗೆ ಸಹ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಆರ್. ಜೆ., ಶಿಕ್ಷಕರಾದ ಹರೀಶ್.ಕೆ., ನಿರ್ಮಲ. ಬಿ, ಮನೋಜ್ ಕುಮಾರ್, ತೇಜಸ್ವಿನಿ, ಹರ್ಷಿತಾ ಹಾಗೂ ಅಂಜನಾ ಉಪಸ್ಥಿತರಿದ್ದರು. ಜೊತೆಗೆ ಬಳ್ಳೇಕೆರೆ ಸಣ್ಣೇಗೌಡ, ಪ್ರೇಮ ಬೆಟ್ಟೇ ಗೌಡ, ಲತಾ ರಂಗಸ್ವಾಮಿ ಮುಂತಾದ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಿಂದ ಧನ್ಯವಾದ ಸಮರ್ಪಣೆ ನಡೆಯಿತು. ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆ ಹಾಗೂ ಪೋಷಕರ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.







