LatestMysore

ಅಸಹಾಯಕ ದಲಿತ ಯುವಕನಿಗೆ ಬಿ.ಪಿ.ಎಲ್ ಕಾರ್ಡ್ ಕೊಡಿಸಿ ಮಾನವೀಯತೆ ಮೆರೆದ  ದಸಂಸ

ಹುಣಸೂರು: ತಾಲ್ಲೂಕು ಗಾವಡಗೆರೆ ಹೋಬಳಿ, ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟ ಮಾದಿಗ ಜಾತಿಗೆ ಸೇರಿದ  ರಘುಪ್ರಸಾದ್ ಎಂಬ ಬಿ.ಪಿ.ಎಲ್ ರೇಷನ್ ಕಾರ್ಡ್ ನ್ನು ದಲಿತ ಸಂಘರ್ಷ ಸಮಿತಿ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದೆ.

ಈ ಸಂಬಂಧ ದಸಂಸದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಾಗಿರುವ ವೆಂಕಟರಮಣ ಮತ್ತು ಸುಶೀಲಮ್ಮ ದಂಪತಿಗಳ ಮಗನಾದ ರಘುಪ್ರಸಾದ್ ಎಂಬ ಯುವಕ  ಕಳೆದ 1 ತಿಂಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದನು.

ಆಸ್ಪತ್ರೆಯ ವೈದ್ಯಾಧಿಕಾರಿಗಳು ಈತನನ್ನು ಪರಿಶೀಲಿಸಿ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಹೃದಯ ಶಸ್ತ್ರಚಿಕಿತ್ಸೆ ಆಗಬೇಕು. ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ತೆಗೆದುಕೊಂಡು ಬನ್ನಿ ಎಂದು ತಿಳಿಸಿದಾಗ ರಘುಪ್ರಸಾದ್ ನ ಕುಟುಂಬಕ್ಕೆ ಬಿ.ಪಿ.ಎಲ್ ರೇಷನ್ ಕಾರ್ಡ್ ಇರಲಿಲ್ಲ. ರೇಷನ್ ಕಾರ್ಡ್ ಇಲ್ಲದಿದ್ದರೆ ಶಸ್ತ್ರಚಿಕಿತ್ಸೆಗೆ ತಗುಲುವ ವೆಚ್ಚ 2 ಲಕ್ಷಗಳನ್ನು ನೀವೇ ಕಟ್ಟಬೇಕಾಗುತ್ತದೆ ಎಂದು ತಿಳಿಸಿದಾಗ ಮೊದಲೇ ಕಡುಬಡತನದಲ್ಲಿರುವ ಇವರ ಕುಟುಂಬವು 2 ಲಕ್ಷಗಳನ್ನು ಕಟ್ಟುವ ಸ್ಥಿತಿಯಲ್ಲಿರಲಿಲ್ಲ.

ಹೇಗಾದರೂ ಮಾಡಿ ಚಿಕಿತ್ಸೆ ಕೊಡಿ ಎಂದು ವೈದ್ಯಾಧಿಕಾರಿಗಳಲ್ಲಿ ಕೇಳಿದಾಗ ಉಚಿತವಾಗಿ ಮಾಡಲು ಆಗುವುದಿಲ್ಲ. ಬಿ.ಪಿ.ಎಲ್ ರೇಷನ್ ಕಾರ್ಡ್ ಮಾಡಿಕೊಂಡಾದರೂ ಬನ್ನಿ.  ನಿಮ್ಮ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತೇವೆಂದು ಹೇಳಿ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದರು.

ರಘುಪ್ರಸಾದನ ಪರಿಸ್ಥಿತಿಯನ್ನು ಅವರ ಸಂಬಂಧಿ ಭಾಗ್ಯ ಸಿಸ್ಟರ್ ರವರು ದಸಂಸ ಗಮನಕ್ಕೆ ತಂದು ಹೇಗಾದರೂ ಮಾಡಿ ಬಿಪಿಎಲ್ ಕಾರ್ಡನ್ನು ಮಾಡಿಸಿಕೊಟ್ಟು ರಘುಪ್ರಸಾದ್ ಎಂಬುವನ ಕಷ್ಟಕ್ಕೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದರು. ತಕ್ಷಣವೇ ದಸಂಸ ವು ತಾಲ್ಲೂಕಿನ ಶಾಸಕರಾದ ಜಿ.ಡಿ ಹರೀಶ್ ಗೌಡ ರವರ ಗಮನಕ್ಕೆ ತಂದಾಗ ಹುಣಸೂರಿನ ತಹಸೀಲ್ದಾರ್  ಮಂಜುನಾಥ್ ಮತ್ತು ಆಹಾರ ಶಿರಸ್ತೆದಾರರಾದ ಲಕ್ಷ್ಮಿ ಮೇಡಂ ರವರಿಗೆ ಸಂಕಷ್ಟದಲ್ಲಿರುವ ರಘು ಪ್ರಸಾದನಿಗೆ ಬಿ.ಪಿ.ಎಲ್ ಕಾರ್ಡ್ ಮಾಡಿಸಿಕೊಡುವಂತೆ ಸೂಚನೆ ನೀಡಲಾಗಿತ್ತು.

ಆ ನಂತರ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ದಸಂಸವು ನಿರಂತರ ಶ್ರಮವಹಿಸಿದ ಪರಿಣಾಮವಾಗಿ  ಆಹಾರ ಮತ್ತು ನಾಗರೀಕ ಇಲಾಖೆಯ ಇನ್ಸ್ ಪೆಕ್ಟರ್ ಗಳಾದ ಕುಮಾರ್ ಮತ್ತು ಸುರೇಶ್ ರವರುಗಳು ಕಟ್ಟೆಮಳಲವಾಡಿ ಗ್ರಾಮದ ರಘುಪ್ರಸಾದ್ ರವರ ಮನೆಯ ಬಳಿಗೆ ಹೋಗಿ ಪರಿಶೀಲಿಸಿ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿ ರಘುಪ್ರಸಾದನಿಗೆ ಬಿ.ಪಿ.ಎಲ್ ಕಾರ್ಡ್ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿದ್ದರು.  ನಂತರ ಇವರ ವರದಿಯ ಆಧಾರದ ಮೇಲೆ ಇಂದು ರಘುಪ್ರಸಾದನಿಗೆ ಆಹಾರ ಮತ್ತು ನಾಗರೀಕ ಇಲಾಖೆಯ ಜಿಲ್ಲಾ ನಿರ್ದೇಶಕರು ಬಿಪಿಎಲ್ ಕಾರ್ಡ್ ನ್ನು ಮಂಜೂರು ಮಾಡಿಕೊಟ್ಟಿರುತ್ತಾರೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದ ರಘುಪ್ರಸಾದನಿಗೆ ಬಿಪಿ.ಎಲ್ ಕಾರ್ಡ್ ಮಾಡಿಸಿಕೊಳ್ಳಲು ಕಾಳಜಿ ವಹಿಸಿದ ಹುಣಸೂರು ಶಾಸಕರಾದ ಜಿ.ಡಿ ಹರೀಶ್ ಗೌಡ, ತಹಸೀಲ್ದಾರ್ ರವರಾದ ಮಂಜುನಾಥ್, ಆಹಾರ ಮತ್ತು ನಾಗರೀಕ  ಇಲಾಖೆಯ ಶಿರಸ್ತೆದಾರರಾದ ಲಕ್ಷ್ಮಿಮೇಡಂ, ಇನ್ಸ್ ಪೆಕ್ಟರ್ ಕುಮಾರ್, ಸುರೇಶ್  ರವರಿಗೆ ಹುಣಸೂರು ತಾಲ್ಲೂಕು ದಸಂಸ ವು ನೊಂದ ಜನರ ಪರವಾಗಿ ಅಭಿನಂದಿಸುತ್ತದೆ.

ಬಿ.ಪಿ.ಎಲ್ ಕಾರ್ಡ್ ನ್ನು ಪಡೆದುಕೊಂಡ ರಘುಪ್ರಸಾದ್ ಮಾತನಾಡಿ ನಾನು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಯಾರಿಂದಲೋ ವಿಷಯ ತಿಳಿದುಕೊಂಡು ನಿಂಗರಾಜ್ ಮಲ್ಲಾಡಿ ಅಣ್ಣ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಗೆ ಕಟ್ಟಬೇಕಾಗಿದ್ದ ಹಣವನ್ನು ಕಟ್ಟಲಾಗದೆ ಪರಿತಪಿಸುತ್ತಿರುವಾಗ  ನನ್ನ ಪರಿಸ್ಥಿತಿಯ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿ ಕಟ್ಟಬೇಕಾಗಿದ್ದ ಹಣವನ್ನು ಸಹ ಮನ್ನಾ ಮಾಡಿಸಿ, ನನಗೆ ಸಾಂತ್ವಾನ ಹೇಳಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.

ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಿಪಿಎಲ್ ಕಾರ್ಡ್ ಇಲ್ಲದೆ, ಹಣವೂ ಇಲ್ಲದೆ ಸಂಕಷ್ಟದ ನೋವಿನಲ್ಲಿದ್ದ ನನಗೆ ಬಿಪಿಎಲ್ ಕಾರ್ಡ್ ಮಾಡಿಸಿಕೊಟ್ಟು ನನ್ನ ನೋವಿಗೆ ಸ್ಪಂದಿಸಿದ ನನ್ನ ಅಣ್ಣನ ಸ್ಥಾನದಲ್ಲಿರುವ ನಿಂಗರಾಜ್ ಮಲ್ಲಾಡಿ ಅಣ್ಣನವರಿಗೆ ಕೃತಜ್ಞತೆಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಇವರು ನಮ್ಮಂತಹ ಬಡ ಜನರ ಕಷ್ಟಗಳನ್ನು ಪರಿಹರಿಸಲು ದೇವರು ಸದಾ ಇವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಕಟ್ಟೆಮಳಲವಾಡಿ ಗ್ರಾಮದ ಭಾಗ್ಯ ಸಿಸ್ಟರ್ ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ