ಕುಶಾಲನಗರ (ಆರ್ ಹೆಚ್ ) : ರಾಜ್ಯದಲ್ಲಿ ಬರ ಮತ್ತು ಅತಿವೃಷ್ಟಿ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಿಸಿ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿ ವಾಸ್ತವ ಸ್ಥಿತಿಗತಿಯ ಬಗ್ಗೆ ಸರ್ಕಾರಕ್ಕೆ ಹಾಗೂ ಕಂದಾಯ ಸಚಿವರಿಗೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಬುಧವಾರ ಕೊಡಗು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ಶಾಸಕ ಡಾ.ಮಂತರ್ ಗೌಡ ಮತ್ತು ಜಿಲ್ಲಾಧಿಕಾರಿ ಜೆ.ಸೋಮಶೇಖರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಲಾಶಯದ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವು, ಜಲಾನಯನ ಪ್ರದೇಶದಲ್ಲಿನ ಮಳೆಯ ಪ್ರಮಾಣ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಪಶ್ಚಿಮ ಘಟ್ಟ ಹಾಗೂ ಕೊಡಗು ಜಿಲ್ಲೆಯಲ್ಲಿ ತಡವಾಗಿ ಮುಂಗಾರು ಮಳೆ ಆರಂಭಗೊಂಡು ಸಾಕಷ್ಟು ಅನಾಹುತಗಳು ಸಂಭವಿಸಿವೆ. ಹಾನಿಯಾಗಿರುವ ಸ್ಥಳಗಳಿಗೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತದೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕಾವೇರಿ ತಾಯಿ ಕೃಪೆ ತೋರಿದರೆ ಮಂಡ್ಯದಿಂದ ತಮಿಳುನಾಡಿನ ವರೆಗೂ ಸಂಭ್ರಮ ಕಾಣುತ್ತದೆ. ಆದರೆ ಕೊಡಗಿನಲ್ಲಿ ಈ ಸಂಭ್ರಮ ಇಲ್ಲ. ಮಳೆಯಿಂದ ಸಂಕಷ್ಟ ಅನುಭವಿಸುವ ಜನರ ಬವಣೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗಿರುವ ಧಕ್ಕೆ ಅಧಿಕ ಪ್ರಮಾಣದಲ್ಲಿ ಉಂಟಾಗಿದೆ. ಜಿಲ್ಲಾಡಳಿತ ಹಾಗೂ ಶಾಸಕರೊಂದಿಗೆ ಚರ್ಚೆ ಮಾಡಿ ಸರ್ಕಾರ ಹಾಗೂ ಕಂದಾಯ ಸಚಿವರಿಗೆ ವರದಿ ಸಲ್ಲಿಸುತ್ತೇವೆ ಎಂದರು.
ದಕ್ಷಿಣ ಭಾರತದ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ, ರಾಜ್ಯದ ಜನರ ದಹತಣಿಸುತ್ತ,ನೀರಾವರಿ ಹಾಗೂ ಜಲವಿದ್ಯುತ್ ಉತ್ಪಾದನೆ ಶಕ್ತಿ ತುಂಬುವ ಕಾವೇರಿ ಮುನಿಸಿದರೆ ಬೆಳಕಿನಿಂದ ಹಿಡಿದು ಕುಡಿಯುವ ನೀರು ,ಅನ್ನ,ಆಹಾರಕ್ಕೂ ಸಮಸ್ಯೆ ಉಂಟಾಗುವ ಆತಂಕ ಈ ಬಾರಿ ಇತ್ತು.ಆದರೆ ಕಾವೇರಿ ಕೃಪೆಯಿಂದ ಈಗ ಅದು ನಿವಾರಣೆ ಆಗುತ್ತಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಜನರ ಪರವಾಗಿದೆ.ಆದ್ದರಿಂದ ಪ್ರಕೃತಿ ಹಾಗೂ ಕಾವೇರ ತಾಯಿಯನ್ನು ನಾವೆಲ್ಲರೂ ಜನರ ಮೇಲೆ ಕೃಪೆ ತೋರು ಪ್ರಾರ್ಥಿಸೋಣ ಎಂದರು.
ಸಚಿವ ಸಂಪುಟ ವಿಸ್ತಾರಣೆ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳಾದ ಶಾಸಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಒಂದು ಮನೆ ಇದ್ದಂತೆ ಮನೆಯಲ್ಲಿ ಅಣ್ಣತಮ್ಮಂದಿರಿಗೆ ಸಮಸ್ಯೆ ಬರುವುದು ಸಹಜ ಎಲ್ಲವೂ ಸರಿ ಹೋಗುತ್ತದೆ ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಜೆ.ಸೋಮಶೇಖರ್, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ್ಜ ಉತ್ತಪ್ಪ,ತಾಲ್ಲೂಕು ಸಮಿತಿ ಅಧ್ಯಕ್ಷ ಶಶಿಧರ್,ಮುಖಂಡರಾದ ಕೆ.ಪಿ.ಚಂದ್ರಕಲಾ, ಜಿ.ಆರ್.ಪುಷ್ಪಲತಾ, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಎಂಜಿನಿಯರ್ ಕಿರಣ್ ದೇವಯ್ಯ ಮತ್ತಿತರರು ಭಾಗವಹಿಸಿದ್ದರು.
ಕೊಡಗಿನ ಹೆಬ್ಬಾಗಿಲಲ್ಲಿ ಅದ್ದೂರಿ ಸ್ವಾಗತ…
ನೆರೆ ಮತ್ತು ಅತಿವೃಷ್ಟಿ ವೀಕ್ಷಣೆಗೆ ಕೊಡಗಿಗೆ ಬುಧವಾರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆ ಪಟ್ಟಣದ ಟೋಲ್ ಗೇಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಸಚಿವ ನರೇಂದ್ರ ಸ್ವಾಮಿ ಅವರು ಜಿಲ್ಲಾ ಗಡಿಭಾಗದಲ್ಲಿ ಕಾವೇರಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಮಂತರ್ ಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸಚಿವರಿಗೆ ಪುಷ್ಪಹಾರ ಹಾಕಿ ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂಭ್ರಮಿಸಿದರು.

ರೈತರ ಕೃಷಿ ಜಮೀನುಗಳಿಗೆ ಸಚಿವರ ಭೇಟಿ…
ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರ ಕೃಷಿ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಬುಧವಾರ ಭೇಟಿ ನೀಡಿ ಮಳೆಯ ಕೊರತೆಯಿಂದ ಉಂಟಾಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿದರು. ಹಾರಂಗಿ ಕೃಷಿಕ ಮಹೇಂದ್ರ ಎಂಬುವವರ ಕಾಫಿ,ಮೆಣಸು ಹಾಗೂ ಅಡಿಕೆ ತೋಟಕ್ಕೆ ಭೇಟಿ ನೀಡಿದ ಸಚಿವರು ಮುಂಗಾರು ಮಳೆ ಕೊರತೆಯಿಂದ ಕಾಫಿ,ಮೆಣಸು ಕಾಳುಕಟ್ಟದೆ ಇರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಹುದುಗೂರು ಕೃಷಿಕ ಅಚ್ಚಯ್ಯ ಅವರ ಭತ್ತದ ಗದ್ದೆ ಭೇಟಿ ನೀಡಿದಾಗ ಮಳೆ ಹಿನ್ನಡೆ ಯಿಂದಾಗಿ ಭತ್ತದ ಗದ್ದೆಗಳನ್ನು ಹದ ಮಾಡಿದೆ ಹಾಗೆಯೇ ಬಿಟ್ಡಿರುವುದನ್ನು ವೀಕ್ಷಣೆ ಮಾಡಿದರು. ಕಣಿವೆ ಬಳಿಯ ರೈತ ದೀವಕರ್ ಅವರ ಜೋಳದ ಹೊಲಕ್ಕೆ ಭೇಟಿ ನೀಡಿ ಬಳಿಸುಳಿ ರೋಗ ಕಾಣಿಸಿಕೊಂಡಿರುವುದನ್ನು ಖುದ್ದು ವೀಕ್ಷಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಅವರು ಮಳೆಯ ಹಿನ್ನಡೆಯಿಂದ ಜೋಳ ಕೃಷಿಗೆ ಉಂಟಾಗಿರುವ ಬಿಳಿಸುಳಿರೋಗದ ಬಗ್ಗೆ ಸಚಿವರಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಿದರು.
ರೈತರೊಂದಿಗೆ ಮಾತನಾಡಿದ ಸಚಿವರು ಜೋಳ ಹೊರತು ಪಡಿಸಿ ಪರ್ಯಾಯ ಬೆಳೆ ಬೆಳೆಯಲು ರೈತರು ಮುಂದೆ ಬರಬೇಕು. ಕೃಷಿ ಅದಿಕಾರಿಗಳು ಕೂಡ ಹವಾಮಾನ ಬದಲಾವಣೆ ತಕ್ಕಂತೆ ರೈತರು ಯಾವ ಬೆಳೆಯನ್ನು ಬೆಳೆಯಬಹುದು ಎಂಬ ಬಗ್ಗೆ ಸರಿಯಾದ ಸಲಹೆಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೈತರ ಸಭೆ ಏರ್ಪಡಿಸಿ ರೈತರು ಯಾವ ಬೆಳೆ ಬೆಳೆಯಬೇಕು. ಬೆಳೆ ಹಾಗೂ ಗೊಬ್ಬರ ಬಳಕೆ ಬಗ್ಗೆ ಮಾಹಿತಿ,ಸಲಹೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಸೋಮಶೇಖರ್,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ಆನಂದ್ ಪ್ರಕಾಶ್ ಮೀನಾ, ಕೃಷಿ ಇಲಾಖೆಯ,ಜಂಟಿ ನಿರ್ದೇಶಕ ಚಂದ್ರಶೇಖರ್, ಉಪ ನಿರ್ದೇಶಕ ಸೋಮಶೇಖರ್, ತಾಲ್ಲೂಕು ಸಹಾಯಕ ನಿರ್ದೇಶಕ ವೀರಣ್ಣ,ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶಶಿಧರ್, ತಾಲ್ಲೂಕು ಸಹಾಯಕ ನಿರ್ದೇಶಕಿ ಲಿಖಿತರಾಜ್ ,ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್,ರೈತ ಮುಖಂಡರಾದ ವಿಶ್ವನಾಥ್, ಕಪನ್ನಪ್ಪ,ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.








