ArticlesDasaraLatest

ಮೈಸೂರು ಅರಮನೆ ಸಿಂಹಾಸನಕ್ಕಿದೆ ಪೌರಾಣಿಕ ನಂಟು… ಇದರ ಇತಿಹಾಸವೇ ರೋಚಕ!

ಮೈಸೂರು ಎಂದಾಕ್ಷಣ ವಿದ್ಯುದ್ದೀಪದಿಂದ ಜಗಮಗಿಸುವ ಅರಮನೆ ಕಣ್ಮುಂದೆ ಬರುತ್ತದೆ.. ಹಾಗೆಯೇ ಅದರೊಳಗಿನ ರತ್ನಖಚಿತ ಸಿಂಹಾಸನವೂ  ಗಮನಸೆಳೆಯುತ್ತದೆ.. ಸಿಂಹಾಸನದ ಬಗ್ಗೆ ತಿಳಿಯುತ್ತಾ ಹೋದರೆ ಇದರ ಸುತ್ತ ಸುತ್ತಿಕೊಂಡಿರುವ ಹತ್ತು ಹಲವು ವಿಶೇಷತೆಗಳು ನಮ್ಮನ್ನು ಅಚ್ಚರಿಗೀಡು ಮಾಡುತ್ತವೆ. ಅಷ್ಟೇ ಅಲ್ಲದೆ ಇದರ ಮಹತ್ವವೂ ಅರಿವಾಗುತ್ತದೆ…

ಬನ್ನಿ ಹಾಗಾದರೆ ಸಿಂಹಾಸನದ ಕುರಿತಂತೆ ತಿಳಿಯೋಣ… ಅರಮನೆಯಲ್ಲಿರುವ ಸಿಂಹಾಸನಕ್ಕೆ ಕಳೆಕಟ್ಟಬೇಕಾದರೆ ದಸರಾ ಬರಬೇಕು. ಅದರಲ್ಲೂ ಖಾಸಗಿ ದರ್ಬಾರ್ ವೇಳೆ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸೀನರಾಗುವುದನ್ನು  ಕಣ್ತುಂಬಿಕೊಳ್ಳುವುದೇ ಒಂದು ಸುಂದರ ಅನುಭವ..

ಇನ್ನು ರತ್ನಖಚಿತ ಸಿಂಹಾಸನದ ಬಗ್ಗೆ ಹೇಳಬೇಕೆಂದರೆ ಮಾಮೂಲಿ ದಿನಗಳಲ್ಲಿ ಭದ್ರತೆಯಲ್ಲಿರುವ ಸಿಂಹಾಸನ ಬಿಡಿ, ಬಿಡಿಯಾಗಿರುತ್ತದೆ. ದಸರಾ ಸಂದರ್ಭ ಗೆಜ್ಜಗಹಳ್ಳಿಯಿಂದ ಬರುವ ಜನ ಇದನ್ನು ಜೋಡಿಸುತ್ತಾರೆ. ನವರಾತ್ರಿ ಆರಂಭದ ದಿನ ಸಿಂಹಾಸನಕ್ಕೆ ಸಿಂಹ ಜೋಡಣೆಯನ್ನು ವಿಧಿ ವಿಧಾನದಂತೆ ಮಾಡಲಾಗುತ್ತದೆ.

ರತ್ನಖಚಿತ ಸಿಂಹಾಸನದ ಇತಿಹಾಸವನ್ನು ತಿರುವಿ ಹಾಕಿದರೆ, ಒಂದಷ್ಟು  ರೋಮಾಂಚನಕಾರಿ ವಿಚಾರಗಳು ಹೊರಬರುತ್ತವೆ.  ಅದು ಏನೆಂದರೆ? ಈ ಸಿಂಹಾಸನ  ಹಸ್ತಿನಾವತಿಪುರದ ರಾಜರಾದ ಪಾಂಡವರದ್ದಾಗಿದೆಯಂತೆ. ಆ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನಂತೆ.

ಇದನ್ನೂ ಓದಿ… ಮೈಸೂರು ಅರಮನೆ ಸಿಂಹಾಸನಕ್ಕಿದೆ ಪೌರಾಣಿಕ ನಂಟು… ಇದರ ಇತಿಹಾಸವೇ ರೋಚಕ!

1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಠಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದೂ ಅದರಂತೆ ಭೂಮಿಯಿಂದ ಹೊರತೆಗೆಯಲಾಯಿತಂತೆ.

ಆ ನಂತರ ಈ ಸಿಂಹಾಸನವನ್ನು ಸುಮಾರು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ ಇದಾದ ಬಳಿಕ ವಿಜಯನಗರದ ಅವನತಿಯ ವೇಳೆಗೆ ಸಿಂಹಾಸನವನ್ನು ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ಸಾಮಂತ ರಾಜರ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ.

ಮುಂದೆ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗಪಟ್ಟಣದಲ್ಲಿದ್ದ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು  ವಶಪಡಿಸಿಕೊಂಡರು.

ಇದನ್ನೂ ಓದಿ.. ಮೈಸೂರು ದಸರಾ!.. ರಾಜರ ಕಾಲದ ಜಂಬೂಸವಾರಿ ಹೇಗಿತ್ತು? ಅಲ್ಲಿಂದ ಇಲ್ಲಿವರೆಗೆ!

1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಿ ಪ್ರಥಮವಾಗಿ ಸಿಂಹಾರೋಹಣ ಮಾಡಿದರೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ಈ ರತ್ನಖಚಿತ ಸಿಂಹಾಸನವು ಚಿನ್ನದ  ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ.  ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ… ಮೈಸೂರು ಅರಮನೆ ಸಿಂಹಾಸನಕ್ಕಿದೆ ಪೌರಾಣಿಕ ನಂಟು… ಇದರ ಇತಿಹಾಸವೇ ರೋಚಕ!

ಸಿಂಹಾಸನದ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು  ಒದಗಿಸಲಾಗಿದೆ. ಉಭಯ ಪಾಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ.

ಪೂರ್ವ ಮುಖಭಾಗದಲ್ಲಿ ಆನೆಗಳನ್ನೂ, ದಕ್ಷಿಣಭಾಗದಲ್ಲಿ ಕುದುರೆಗಳನ್ನು, ಪಶ್ಚಿಮದಲ್ಲಿ  ಕಾಲುದಳವನ್ನು, ಉತ್ತರದಲ್ಲಿ ರಥಗಳನ್ನು ಕೆತ್ತಲಾಗಿದೆ. ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ… ಮೈಸೂರು ದಸರಾ ವಿಶ್ವವಿಖ್ಯಾತಿಯಾಗಿದ್ದು ಹೇಗೆ? ಇದು ದಸರಾ ಇತಿಹಾಸದ ಮೆಲುಕು

ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ  ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ.

ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ  ಸಂಸ್ಕೃತದ  96 ಸಾಲುಗಳ ಆಶೀರ್ವಾದ ಪೂರ್ವಕ ಶ್ಲೋಕಗಳಿವೆ. ಇಂತಹ ಸಿಂಹಾಸನವನ್ನು ಕಾಪಾಡಿಕೊಂಡು ಬಂದಿದ್ದು ಮೈಸೂರು ಮಹಾರಾಜರ ಕೀರ್ತಿಯಾಗಿದೆ. ಈ ಸಿಂಹಾಸನವನ್ನು 1897ರಲ್ಲಿ ನಡೆದ ಹಳೆಯ ಅರಮನೆಯ ಅಗ್ನಿ ದುರಂತದಲ್ಲಿ ರಕ್ಷಿಸಿದ್ದೇ ಒಂದು ಬಹು ದೊಡ್ಡ ಸಾಧನೆ.

ಇದನ್ನೂ ಓದಿ… ಮೈಸೂರು ದಸರಾದ ಕಥೆ ಹೇಳುವ ‘ಸೀತಾವಿಲಾಸ ಛತ್ರ’ ಇದು ಇತಿಹಾಸದ ಸಾಕ್ಷಿ!

ಅವತ್ತು ಅರಮನೆ ಬೆಂಕಿಯಲ್ಲಿ ಉರಿಯುತ್ತಿದ್ದರೆ ಬ್ರಿಟೀಷ್ ಪ್ರತಿನಿಧಿಗಳು ಮತ್ತು ಅರಮನೆಯಲ್ಲಿದ್ದ ಸೇವಕರು ಹಾಗೂ ಬೆಂಕಿ ಆರಿಸಲು ಬಂದಿದ್ದ ಸ್ವಯಂಸೇವಕರು ತಮ್ಮ ಮಾನವ ಶಕ್ತಿಯನ್ನು ಬಳಸಿ ಸಿಂಹಾಸನಕ್ಕೆ ಕಿಂಚಿತ್ತು ಧಕ್ಕೆಯಾಗದಂತೆ ಸುರಕ್ಷಿತವಾಗಿ ಹೊರಕ್ಕೆ ತಂದಿದ್ದರು.

ಇನ್ನು ಈ ಸಿಂಹಾಸನದ ಮಹತ್ವದ ಕುರಿತಂತೆ ಕಾಳಿ ಪುರಾಣದಲ್ಲಿ ಈ ಸಿಂಹಾಸನಾಧಿಪತಿಯು ದೇವರಿಗೂ ಮತ್ತು ಪ್ರಜೆಗಳಿಗೂ ಪ್ರತಿನಿಧಿಯಾಗಿದ್ದಾನೆಂದು ವರ್ಣಿಸಲಾಗಿದೆ.

ಇದನ್ನೂ ಓದಿ… ಮೈಸೂರಿನ ಕಟ್ಟಿಗೆಯ ಅರಮನೆ ಏನಾಯಿತು? ಇದು ಅಂಬಾವಿಲಾಸ ಅರಮನೆ ರಹಸ್ಯ!

ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ಅರಮನೆಯಲ್ಲಿರುವಂತಹ ಸಿಂಹಾಸನವನ್ನು ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ ಹೀಗಾಗಿಯೇ ಈ ಸಿಂಹಾಸನ ಶ್ರೇಷ್ಟವೂ… ವಿಶ್ವವಿಖ್ಯಾತಿಯೂ ಆಗಿದೆ.

ಧ್ವನಿ: ಪೃಥ್ವಿದೇವರಾಜ್

B M Lavakumar

 

 

 

admin
the authoradmin

ನಿಮ್ಮದೊಂದು ಉತ್ತರ