ಇವತ್ತು ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಹಿರಿಯರ ತ್ಯಾಗ ಮತ್ತು ಬಲಿದಾನ ಕಾರಣವಾಗಿದೆ. ಅವತ್ತು ಅವರು ನಿಸ್ವಾರ್ಥದಿಂದ ಹೋರಾಡದೆ ಹೋಗಿದ್ದರೆ ಸ್ವಾತಂತ್ರ್ಯ ಪಡೆಯುವುದು ಕಷ್ಟವಾಗುತ್ತಿತ್ತೇನೋ? ಆದರೆ ಅವತ್ತಿನ ಸ್ವಾತಂತ್ರ್ಯದ ಕಿಚ್ಚು ದೇಶವನ್ನಾರಿಸಿದ್ದರಿಂದ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟು ಹೋಗಬೇಕಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಪಡೆಯುವುದಷ್ಟೆ ಗುರಿಯಾಗಿತ್ತು. ಅದಕ್ಕಾಗಿ ನಿಸ್ವಾರ್ಥದ ಹೋರಾಟ ಮಾಡಿದ್ದರು. ಆ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತ್ಯಾಗಮಾಡಿದ್ದಾರೆ. ಅದೆಷ್ಟೋ ಜನರ ತ್ಯಾಗ ಬಲಿದಾನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಹೋಗಿದೆಯೋ ಗೊತ್ತಿಲ್ಲ. ಕಾಲ ಕಳೆದಂತೆ ಸ್ವಾತಂತ್ರ್ಯ ಹೋರಾಟಗಾರರು ನಮ್ಮಿಂದ ಮರೆಯಾಗುತ್ತಾ ಹೋಗಿದ್ದಾರೆ. ಬೆರಳಣಿಕೆಯ ಮಂದಿಯಷ್ಟೆ ಉಳಿದಿದ್ದಾರೆ. ಸ್ವಾತಂತ್ರ್ಯ ಪೂರ್ವದ ಹೋರಾಟದ ದಿನಗಳನ್ನು ಅವರ ನೆನಪಿನ ಮೂಸೆಯಿಂದ ಹೊರಬಂದಾಗ ಅದನ್ನು ಕೇಳುವ ನಮ್ಮ ಮೈಮನಗಳು ರೋಮಾಂಚನಗೊಳ್ಳುತ್ತವೆ.

ಇವತ್ತು ನಾವು ಕೇವಲ ನಾವಷ್ಟೆ ಬದುಕಲು ಹೋರಾಡುತ್ತಿದ್ದೇವೆ. ಆದರೆ ಅವತ್ತು ತಮ್ಮ ಬದುಕನ್ನು ಬದಿಗೊತ್ತಿ ದೇಶಕ್ಕಾಗಿ ಹೋರಾಡಿದ್ದರು. ಅವರು ಅವರಿಗಾಗಿ ಹೋರಾಡಿರಲಿಲ್ಲ. ದೇಶಕ್ಕಾಗಿ ಹೋರಾಡಿದ್ದರು. ಹಾಗೆಂದು ಅವತ್ತು ಸ್ವಾರ್ಥಿಗಳು ಇದ್ದಿರಲಿಲ್ಲ ಎಂದಲ್ಲ. ಇದ್ದರು ಅಂತಹವರ ಶೇಕಡವಾರು ಸಂಖ್ಯೆ ಕಡಿಮೆಯಿತ್ತು. ಅದು ಏನೇ ಇರಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಅವತ್ತಿನ ದಿನಗಳನ್ನು ಮೆಲುಕು ಹಾಕದೆ ಹೋದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬ ಹೋರಾಟಗಾರನನ್ನು ನೆನೆಯದೆ ಹೋದರೆ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರಲಾರದು.
ಇದನ್ನೂ ಓದಿ… ನೂರಾರು ಸಮಸ್ಯೆಗಳ ನಡುವೆ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ…!
ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಘಟನೆಗಳು ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿದೆ. ನಾವು ವರ್ಷಕ್ಕೊಮ್ಮೆಯಾದರೂ ಅದನ್ನು ಮೆಲುಕು ಹಾಕದೆ ಹೋದರೆ ಹೇಗೆ? 1947ನೇ ಆಗಸ್ಟ್ 15 ರಂದು ಭಾರದ ದೇಶ ಸ್ವಾತಂತ್ರ್ಯ ಪಡೆಯಿತು ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ…. ಅಲ್ಲಿ ತನಕ ಬ್ರಿಟೀಷರ ಹಿಡಿತದಲ್ಲಿದ್ದ ನಮಗೆ ಮೊದಲ ಬಾರಿಗೆ ದಾಸ್ಯದ ಬಿಡುಗಡೆ ದೊರೆತಿತ್ತು.

1947 ಆಗಸ್ಟ್ 14ರ ಮಧ್ಯರಾತ್ರಿ ಜವಾಹರ್ ಲಾಲ್ ನೆಹರೂ ಅವರು ಐತಿಹಾಸಿಕ ಭಾಷಣದಲ್ಲಿ ಮಧ್ಯರಾತ್ರಿಯ ಗಂಟೆ ಬಾರಿಸುತ್ತಲೇ ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ ಭಾರತ ಎಚ್ಚೆತ್ತು ಜೀವ ತಳೆಯುತ್ತದೆ ಸ್ವತಂತ್ರವಾಗುತ್ತದೆ ಇತಿಹಾಸದಲ್ಲಿ ಎಂದಾದರೂ ಒಮ್ಮೆ ಬರುವ ಮಹತ್ವದ ಘಳಿಗೆಯೊಂದುಂಟು ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪಾದಾರ್ಪಣೆ ಮಾಡುತ್ತೇವೆ ಒಂದು ಯುಗ ಮುಕ್ತಾಯವಾಗುತ್ತದೆ ದೀರ್ಘಕಾಲದಿಂದ ಅದುಮಿ ಹಿಡಿಯಲ್ಪಟ್ಟ ರಾಷ್ಟ್ರವೊಂದರ ಚೇತನ ನುಡಿಯ ತೊಡಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ… ಹರ್ ಘರ್ ತಿರಂಗ… ಪ್ರತಿ ಮನೆಯಲ್ಲಿ ಹೆಮ್ಮೆ, ಪ್ರತಿ ಹೃದಯದಲ್ಲಿ ದೇಶಭಕ್ತಿ ಮೊಳಗಲಿ…
ಈ ಮಾತು ಇಂದಿಗೂ ಅನುರಣಿಸುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದವು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಕೊನೆಯಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೇ ಮಡಿಯಿರಿ ಎಂಬ ಕರೆ ನೀಡಿದ್ದು ಇತಿಹಾಸ ಸೃಷ್ಟಿಸಿತು. ಸ್ವಾತಂತ್ರ್ಯ ನಂತರ ನಾವು ಹತ್ತು ಹಲವು ಮೈಲಿಗಲ್ಲುಗಳನ್ನು ನೆಡುತ್ತಾ ಮುಂದೆ ಸಾಗಿದ್ದೇವೆ. ಆದರೆ ಸ್ವಾತಂತ್ರ್ಯ ಕಳೆದುಕೊಂಡು ಬ್ರಿಟೀಷರು ಅಧಿಪತ್ಯ ಸಾಧಿಸಲು ನಾವೇ ಕಾರಣ ಎನ್ನುವುದು ಅಷ್ಟೇ ಸತ್ಯ ಇದಕ್ಕೆ ನಮ್ಮೊಳಗಿನ ಒಳಜಗಳವೂ ಕಾರಣ ಎನ್ನುವುದು ಇತಿಹಾಸದ ಸತ್ಯವಾಗಿ ಉಳಿದಿದೆ.

ಭಾರತ ದೇಶ 18ನೇ ಶತಮಾನದ ಪ್ರಾರಂಭದಲ್ಲಿ ರಾಜ ಮಹಾರಾಜರ ನವಾಬರ ಒಳಜಗಳದಿಂದ ಛಿದ್ರ ಛಿದ್ರವಾಗಿ ಯುದ್ಧಗಳು ನಡೆಯತ್ತಲೇ ಇದ್ದವು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯವರು ಆ ವೇಳೆಗೆ ಸರಿಯಾಗಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು. ಇಲ್ಲಿನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ದೇಶದ ಆಡಳಿತವನ್ನು ವ್ಯಾಪಾರಕ್ಕಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ ಕ್ರಮೇಣ ಈ ರಾಷ್ಟ್ರದ ಆಡಳಿತಗಾರರಾದರು ಎನ್ನುವುದನ್ನು ಒಂದೇ ಮಾತಿನಲ್ಲಿ ಹೇಳಿ ಮುಗಿಸಿಬಿಡಬಹುದು.
ಇದನ್ನೂ ಓದಿ… 80ನೇ ಸ್ವಾತಂತ್ರೋತ್ಸವಕ್ಕೆ ಹೊಡೀರಿ ಚಪ್ಪಾಳೆ…. ಯಾರಿಗೆಲ್ಲ ನಮ್ಮ ಚಪ್ಪಾಳೆ?
ಬ್ರಿಟಿಷರು ತಮ್ಮ ರಾಜ್ಯ ವಿಸ್ತರಣಾ ನೀತಿಯಿಂದ ನಮ್ಮದೇ ರಾಜರುಗಳನ್ನು ಮುಂದಿಟ್ಟುಕೊಂಡೇ ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ಕೆಲವು ಭಾರತೀಯ ರಾಜರುಗಳು ವಿರೋಧಿಸಿದರೆ ಮತ್ತೆ ಕೆಲವರು ಕೈಜೋಡಿಸಿದರು ಇದರ ಪರಿಣಾಮದಿಂದಾಗಿ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಏನೇನು ನಡೆಯಿತು? ಅದರ ವಿರುದ್ಧ ಭಾರತೀಯರು ಹೇಗೆ ದಂಗೆ ಎದ್ದು ಹೋರಾಟ ನಡೆಸಿದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ.

1857ರಲ್ಲಿ ಬ್ರಿಟಿಷರ ವಿರುದ್ಧ ಮಹಾ ಪ್ರತಿರೋಧದ ಸಿಪಾಯಿ ದಂಗೆಯಿಂದ ಶುರುವಾಗಿ ಸ್ವಾತಂತ್ರ್ಯ ಹೋರಾಟ ವಿವಿಧ ಆಯಾಮಗಳಲ್ಲಿ ನಡೆದಿದೆ. ಬಿಪಿನ್ ಚಂದ್ರಪಾಲ್, ಅರವಿಂದ್ ಘೋಷ್, ಲಾಲ ಲಜಪತ್ ರಾಯ್, ಭಗತ್‌ಸಿಂಗ್, ಸಾಹೋರ್ಕರ್ ಮುಂತಾದ ಅನೇಕ ನಾಯಕರುಗಳು ಬ್ರಿಟೀಷರ ವಿರುದ್ಧ ಕ್ರಾಂತಿ ಮಾರ್ಗ ಅನುಸರಿಸಿದರು. ಈ ವೇಳೆಗೆ ಸರಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಮೋಹನದಾಸ ಕರಂಚAದ್ ಗಾಂಧಿಯವರು ಭಾರತಕ್ಕೆ ಹಿಂದಿರುಗಿ ತಮ್ಮ ಅಹಿಂಸಾತ್ಮಕ ಚಳವಳಿ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ನೀಡಿದರು.
ಕ್ವಿಟ್ ಇಂಡಿಯಾ, ಅಸಹಕಾರ ಚಳವಳಿ ಹೀಗೆ ಅಹಿಂಸಾತ್ಮಕ ಚಳುವಳಿಗಳನ್ನು ನಡೆಸಿದರು. ಅಂತಹ ಹೋರಾಟಗಳು ಹೆಚ್ಚು ಹೆಚ್ಚು ನಡೆದವು ಈ ಹೋರಾಟಕ್ಕೆ ಮಣಿದ ಬ್ರಿಟೀಷರು ಸ್ವಾತಂತ್ರ್ಯ ನೀಡಿ ಹೊರಟು ಹೋದರು.

ನಮಗೆ ಯಾವುದಕ್ಕೆಲ್ಲ ಸ್ವಾತಂತ್ರ್ಯ ಬೇಕಾಗಿದೆ?
ಸ್ವಾತಂತ್ರ್ಯ ನಂತರದ ಭಾರತಕ್ಕೆ ಇನ್ನು ಕೂಡ ಹಲವು ವಿಚಾರದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಇವತ್ತು ಹಲವು ರೀತಿಯಲ್ಲಿ ನಮ್ಮ ಸ್ವಾತಂತ್ರ್ಯ ಹರಣದ ಕೆಲಸಗಳು ನಡೆಯುತ್ತಿವೆ. ಶ್ರೀಮಂತರು ಶ್ರೀಮಂತರಾಗಿ ಮೆರೆಯುತ್ತಿದ್ದರೆ, ಬಡವ ಇನ್ನೂ ಹೊತ್ತಿನ ಕೂಳಿಗೆ ಹೋರಾಟ ಮಾಡುತ್ತಿದ್ದಾನೆ.
ಬಡವ ಬಲ್ಲಿದ, ಮೇಲ್ಜಾತಿ, ಕೀಳು ಜಾತಿ, ಹೆಣ್ಣು ಗಂಡು ಹೀಗೆ ಹತ್ತಾರು ಅಂತರಗಳು ನಮ್ಮ ಸುತ್ತಲೂ ಇವೆ. ಜತೆಗೆ ಭ್ರಷ್ಟಾಚಾರ, ಅಧಿಕಾರದ ಹಪಾಹಪಿಗಳು, ಕುಟುಂಬ ರಾಜಕಾರಣಗಳು, ವರದಕ್ಷಿಣೆ ಪಿಡುಗು, ಲೈಂಗಿಕ ದೌರ್ಜನ್ಯ, ಮಾನವ ಸಾಗಾಣಿಕೆ, ನಿರುದ್ಯೋಗ ಸಮಸ್ಯೆ, ರೈತರ ಮೇಲೆ ನಿರ್ಲಕ್ಷ್ಯ ಹೀಗೆ ಹತ್ತಾರು ಸಮಸ್ಯೆಗಳಿಂದ ದೇಶ ಬಳಲುತ್ತಿದೆ. ಇದೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸ‍್ವಾತಂತ್ರ್ಯ ನಂತರದ ಈ ಕಾಲಘಟ್ಟದಲ್ಲಿ ಆಗಬೇಕಿದೆ.

ಯುವಜನತೆಗೆ ಉದ್ಯೋಗ… ಬೆಳೆಬೆಳೆದ ರೈತನಿಗೆ ಉತ್ತಮ ದರ… ಶ್ರಮಜೀವಿಗಳಿಗೆ ತಕ್ಕಂತೆ ಫಲ… ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಬೇಕಾದ ವಾತಾವರಣ.. ಅಪರಾಧ ಕೃತ್ಯಗಳಿಗೆ ಕಡಿವಾಣ… ಭ್ರಷ್ಟಚಾರ ನಿಗ್ರಹ.. ಹೀಗೆ ಒಂದೇ ಎರಡೇ ಆಗಬೇಕಾಗಿದ್ದು ಬಹಳಷ್ಟಿದೆ. ಇದೆಲ್ಲವೂ ಸರಿಹೋದ ದಿನ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ.
B M Lavakumar









ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಅಸಾಧಾರಣ ಅಪರೂಪ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ಲವ ಸರ್. -ಕುಮಾರಕವಿ ಬೋ.ನಾ.ನಟರಾಜ, ಮೈಸೂರು/ಬೆಂಗಳೂರು