ಯಳಂದೂರು: ಪಟ್ಟಣದ ಪ್ರಮುಖ ರಸ್ತೆಗಳ ಫುಟ್ ಪಾತ್ ಗಳನ್ನು ಅತಿಕ್ರಮಿಸಿಕೊಂಡು ಹಾಕಲಾಗಿದ್ದ ಅಂಗಡಿ, ಜಾಹೀರಾತು ಫಲಕ ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಸೋಮವಾರ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಆರೋಗ್ಯ ಅಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಜೆಸಿಬಿ ಮೂಲಕ ಫುಟ್ ಪಾತ್ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸಿದರು. ಕಾರ್ಯಾಚರಣೆ ವೇಳೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಕೆಲ ವ್ಯಾಪಾರಿಗಳು ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಜೀವನೋಪಾಯಕ್ಕಾಗಿ ಸಣ್ಣ ವ್ಯಾಪಾರ ನಡೆಸುತ್ತಿರುವ ಬಡ ವ್ಯಾಪಾರಿಗಳ ಮೇಲೆಯೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಫುಟ್ ಪಾತ್‌ಗಳನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾವುದೇ ವ್ಯಕ್ತಿಯ ಪ್ರಭಾವಕ್ಕೂ ಬಗ್ಗದೆ, ನಿಯಮಾನುಸಾರ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಫುಟ್ ಪಾತ್ ಗಳು ಅತಿಕ್ರಮಣದಿಂದ ಮುಚ್ಚಿಹೋಗಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ತೆರವು ಕಾರ್ಯಾಚರಣೆ ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ತೊಂದರೆಯಾಗದಂತೆ ಪರ್ಯಾಯ ಸ್ಥಳ ಕಲ್ಪಿಸಿ, ಎಲ್ಲರಿಗೂ ಸಮಾನವಾಗಿ ನಿಯಮಗಳನ್ನು ಅನ್ವಯಿಸಬೇಕು ಎಂಬುದು ವ್ಯಾಪಾರಿಗಳ ಒತ್ತಾಯವಾಗಿದೆ.








