ಹುಣಸೂರಿನ ಗೌರಿಪುರ ಕಂದಾಯ ಗ್ರಾಮ… 15–20 ದಿನಗಳಲ್ಲಿ ಹಕ್ಕುಪತ್ರ ವಿತರಣೆ
ಪ್ರಜಾ ಸೇವೆ ಆಂದೋಲನ’ದಲ್ಲಿ ಅಹವಾಲು ಸ್ವೀಕಾರ

ಹುಣಸೂರು(ನಂಜಾಪುರ ಮನುಕುಮಾರ್): ಹಲವಾರು ವರ್ಷಗಳಿಂದ ಬೇಡಿಕೆಯಲ್ಲಿರುವ ಗೌರಿಪುರ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಇನ್ನೂ 15ರಿಂದ 20 ದಿನಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದ ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ‘ಪ್ರಜಾ ಸೇವೆ ಆಂದೋಲನ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಗೌರಿಪುರ ಗ್ರಾಮಕ್ಕೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ ಒಂದು ವರ್ಷದಿಂದ ಬಾಕಿ ಉಳಿದಿತ್ತು. ಇದೀಗ ಸಮಸ್ಯೆ ನಿವಾರಣೆಯಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ನೀಡಿದರೆ ಎಲ್ಲ ಫಲಾನುಭವಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆಸಿ ನೋಂದಣಿ ಮಾಡಿಸಲಾಗುವುದು. ಬಳಿಕ ಪಂಚಾಯಿತಿಗೆ ಕಳುಹಿಸಿದ ನಂತರ ಇ-ಸ್ವತ್ತನ್ನೂ ಪಂಚಾಯಿತಿಯಿಂದ ಪಡೆಯಬಹುದು ಎಂದು ತಿಳಿಸಿದರು.
ಸಣ್ಣಪುಟ್ಟ ಸಮಸ್ಯೆಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು, ವಿವಿಧ ಇಲಾಖೆಗಳ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು ಹಾಗೂ ಇಲಾಖೆಗಳ ಆಡಳಿತವನ್ನು ಪಾರದರ್ಶಕವಾಗಿಡುವುದೇ ಪ್ರಜಾ ಸೇವೆ ಆಂದೋಲನದ ಉದ್ದೇಶವಾಗಿದೆ. ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ಸಾರ್ವಜನಿಕರು ಸಲ್ಲಿಸುವ ಯಾವುದೇ ದೂರುಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

41 ಗ್ರಾ.ಪಂ.ಗಳಲ್ಲೂ ಪ್ರಜಾ ಸೇವೆ ಕಾರ್ಯಕ್ರಮ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ. ಹೊಂಗಯ್ಯ ಮಾತನಾಡಿ, ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲೂ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಬೇರೆ ಹೋಬಳಿ ಅಥವಾ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗಳಿದ್ದರೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸರ್ಕಾರವು ಜನರ ಬಾಗಿಲಿಗೆ ಸೇವೆಗಳನ್ನು ತಲುಪಿಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಲು ಶ್ರಮಿಸುತ್ತಿದೆ. ಪ್ರಜಾ ಸೇವೆ ಆಂದೋಲನದ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ಥಗಿತಗೊಂಡ ಪಿಂಚಣಿ ಕೊಡಿಸಿ
ಕಳೆದ ಆರು ತಿಂಗಳಿಂದ ಪಿಂಚಣಿ ಸ್ಥಗಿತಗೊಂಡಿದ್ದು, ಅಗತ್ಯ ದಾಖಲೆಗಳನ್ನು ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಸಲ್ಲಿಸಿದ್ದರೂ ಹಣ ಬರುತ್ತಿಲ್ಲ ಎಂದು ಹೊನ್ನಿಕುಪ್ಪೆ, ನಂಜಾಪುರ ಹಾಗೂ ಬ್ಯಾಡರಹಳ್ಳಿ ಕಾಲೋನಿಯ ಹಲವರು ಸಭೆಯಲ್ಲಿ ಅಹವಾಲು ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಸರ್ಕಾರವು ₹32,000 ಆದಾಯ ಮಿತಿಯನ್ನು ನಿಗದಿಪಡಿಸಿತ್ತು. ಆದಾಯ ಹೆಚ್ಚಾಗಿ ದಾಖಲಾಗಿದ್ದ ರಾಜ್ಯದ 5ರಿಂದ 10 ಲಕ್ಷ ಪಿಂಚಣಿದಾರರ ಹಣವನ್ನು ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಇದೀಗ ಸರ್ಕಾರ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಿದ್ದು, ಇನ್ನೂ ಒಂದು ಅಥವಾ ಎರಡು ತಿಂಗಳಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ಸಾಗುವಳಿ ಹಕ್ಕು ನೀಡುವಂತೆ ಮನವಿ
ನಂಜಾಪುರ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮನುಕುಮಾರ್ ಮಾತನಾಡಿ, ಉದ್ದೂರು ಕಾವಲ್ ವ್ಯಾಪ್ತಿಯ ಸಂಬಂಧಪಟ್ಟ ಸೊಸೈಟಿ ಜಮೀನಿನಲ್ಲಿ ಉಳಿದಿರುವ ರೈತರಿಗೆ ಸಾಗುವಳಿ ಹಕ್ಕು ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ 12, ಸರ್ವೇ ಇಲಾಖೆಗೆ ಸಂಬಂಧಿಸಿದ 5 ಹಾಗೂ ಬೆಸ್ಕಾಂ, ಕೃಷಿ ಮತ್ತು ಅಬಕಾರಿ ಇಲಾಖೆಗೆ ತಲಾ ಒಂದೊಂದು ಅರ್ಜಿ ಸೇರಿದಂತೆ ಒಟ್ಟು 21 ಅರ್ಜಿಗಳು ಸ್ವೀಕರಿಸಲಾಗಿದೆ ಎಂದು ಪಿಡಿಒ ಅರುಣ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಾಜೇಂದ್ರ, ಸಿಡಿಪಿಒ ಬೋರೇಗೌಡ, ಕೆಎಸ್‌ಆರ್‌ಟಿಸಿ ಅಧಿಕಾರಿ ಸಿದ್ದರಾಜು, ರಾಜಸ್ವ ನಿರೀಕ್ಷಕ ಶ್ರೀಧರ್, ಗ್ರಾಮ ಲೆಕ್ಕಾಧಿಕಾರಿ ಮಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.







