LatestMysore

‘ಸಪ್ತ ಸಾಮಾಜಿಕ ಪಾಪ’ಗಳು ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿವೆ: ಡಾ. ಎಸ್. ಶಿವರಾಜಪ್ಪ

ಮೈಸೂರು: ‘ಸಪ್ತ ಸಾಮಾಜಿಕ ಪಾಪ’ಗಳು ನಮ್ಮ ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ ಎಂದು ಹಿರಿಯ ವಿದ್ವಾಂಸ, ಪ್ರಸಿದ್ಧ ಕನ್ನಡ ಲೇಖಕ ಹಾಗೂ ಸಂಶೋಧಕರಾದ ಡಾ. ಎಸ್. ಶಿವರಾಜಪ್ಪ ಹೇಳಿದರು.

ಮಹಾತ್ಮ ಗಾಂಧೀಜಿಯವರ ಜೀವನ, ಚಿಂತನೆಗಳು, ಆದರ್ಶಗಳು ಹಾಗೂ ಮಾನವೀಯ ಮೌಲ್ಯಗಳನ್ನು ಯುವಜನರಿಗೆ ಪರಿಚಯಿಸುವ ಹಾಗೂ ಅವುಗಳ ಪ್ರಸ್ತುತತೆಯನ್ನು ಇಂದಿನ ಬದುಕಿನೊಂದಿಗೆ ಸಂವಾದಗೊಳಿಸುವ ಉದ್ದೇಶದಿಂದ ಒಡನಾಡಿ ಸೇವಾ ಸಂಸ್ಥೆಯ ವತಿಯಿಂದ “ಗಾಂಧೀಜಿ-ಮೌಲ್ಯಗಳ ಪಯಣ” ಎಂಬ ವಿಚಾರ ಮಂಡನೆಯಲ್ಲಿ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಿ, “ದೈನಂದಿನ ಬದುಕಿನ ಗಾಂಧಿ ಆದರ್ಶಗಳು – ನಿರಂತರ ಚೇತನ” ಎಂಬ ವಿಷಯದ ಕುರಿತು ಅರ್ಥಪೂರ್ಣ ವಿಚಾರ ಮಂಡನೆ ಮಾಡಿದರು.

ದುಡಿಮೆ ಇಲ್ಲದೆ ಸಂಪತ್ತು, ಶೀಲವಿಲ್ಲದ ಶಿಕ್ಷಣ, ನೀತಿ ರಹಿತ ವಾಣಿಜ್ಯ, ಮಾನವೀಯತೆಯಿಲ್ಲದ ವಿಜ್ಞಾನ, ತತ್ತ್ವರಹಿತ ರಾಜಕೀಯ, ತ್ಯಾಗವಿಲ್ಲದ ಪೂಜೆ ಹಾಗೂ ಆತ್ಮಸಾಕ್ಷಿಯಿಲ್ಲದ ಭೋಗ – ಇವುಗಳ ಕುರಿತು ವಿವರಿಸಿದ ಅವರು, ಇಂದಿನ ಸಮಾಜದಲ್ಲಿಯೂ ಈ ಮೌಲ್ಯಗಳ ಪ್ರಸ್ತುತತೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಮಹಿಳೆಯರಿಗಾಗಿ ಒಡನಾಡಿ ಮಾಡುತ್ತಿರುವ ಕಾರ್ಯಕ್ರಮಗಳು ಗಾಂಧೀಜಿಯವರ ಕನಸಿನಲ್ಲಿ ಒಂದಾಗಿತ್ತು ಎಂದು ತಿಳಿಸಿ ಪ್ರೀತಿ ಜಗತ್ತನ್ನು ಗೆಲ್ಲುತ್ತದೆ”   ಎಂದು ಹೇಳಿದರು.

ಗಾಂಧೀಜಿಯವರ ಚಿಂತನೆಗಳನ್ನು ವಿಶಾಲವಾದ ಸಾಮಾಜಿಕ ಹಾಗೂ ಮಾನವೀಯ ಹಿನ್ನೆಲೆಯಲ್ಲಿ ವಿವರಿಸಿದ ಡಾ. ಶಿವರಾಜಪ್ಪ ಅವರು ಹರಿಶ್ಚಂದ್ರ ಕಾವ್ಯ, ಅಕ್ಕಮಹಾದೇವಿ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಮದರ್ ತೆರೇಸಾ ಹಾಗೂ ಬುದ್ಧ ಮುಂತಾದ ಮಹಾನ್ ವ್ಯಕ್ತಿಗಳ ಜೀವನ ಮತ್ತು ಸಂದೇಶಗಳನ್ನು ಕೂಡ ನೆನಪಿಸಿದರು. ಸತ್ಯ, ಸಮಾನತೆ, ಸ್ವಾತಂತ್ರ್ಯ, ಸಹಬಾಳ್ವೆ ಹಾಗೂ ಮಾನವೀಯತೆಯಂತಹ ಮೌಲ್ಯಗಳು ಸಮಾಜದ ಪ್ರಗತಿಗೆ ಅತ್ಯಗತ್ಯವೆಂದು ಹೇಳಿದರು.

ವಿಶೇಷವಾಗಿ ಸ್ತ್ರೀ ಸಬಲೀಕರಣ ಮತ್ತು ಸ್ತ್ರೀ ಸಮಾನತೆ ಕುರಿತು ಗಾಂಧೀಜಿಯವರ ನಿಲುವನ್ನು ವಿವರಿಸಿದ ಅವರು, ಮಹಿಳೆಯರ ಗೌರವ, ಸ್ವಾತಂತ್ರ್ಯ ಮತ್ತು ಸಮಾನ ಹಕ್ಕುಗಳನ್ನು ಗೌರವಿಸುವ ಸಮಾಜ ನಿರ್ಮಾಣದ ಅಗತ್ಯವನ್ನು ಒತ್ತಿಹೇಳಿದರು. ದೇಶ-ವಿದೇಶಗಳಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಿಸುವುದನ್ನು ಉಲ್ಲೇಖಿಸಿದ ಅವರು, ಗಾಂಧೀಜಿಯವರ ಹೆಸರನ್ನು ಸ್ಮರಿಸುವುದಷ್ಟೇ ಸಾಕಾಗುವುದಿಲ್ಲ; ಅವರ ಮೌಲ್ಯಗಳನ್ನು ನಮ್ಮ ನಡೆ-ನುಡಿ, ಚಿಂತನೆ ಮತ್ತು ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ ಎಂದು ಹೇಳಿದರು.

ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾದ ಚಟುವಟಿಕೆಗಳು ನಡೆಯದಂತೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂಬ ಸಂದೇಶವನ್ನು ನೀಡಿದರು. ಒಡನಾಡಿ ಸಂಸ್ಥೆಯ ಮಕ್ಕಳನ್ನುದ್ದೇಶಿಸಿ ಹಾಗೂ ಪ್ರಸ್ತುತ ಯುವಸಮಾಜವನ್ನು ಕುರಿತು ಮಾತನಾಡಿದ ಅವರು, ಶಿಸ್ತು, ಸರಳತೆ, ಪರಿಶ್ರಮ, ಸತ್ಯನಿಷ್ಠೆ ಮತ್ತು ಮಾನವೀಯತೆಗಳನ್ನು ಜೀವನದ ಭಾಗವನ್ನಾಗಿಸಿಕೊಳ್ಳುವಂತೆ ಕರೆ ನೀಡಿದರು. ಗಾಂಧೀಜಿಯವರನ್ನು ನೆನೆಯುವುದು ಎಂದರೆ ಅವರ ಚಿತ್ರಕ್ಕೆ ನಮಿಸುವುದಷ್ಟೇ ಅಲ್ಲ; ಅವರ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ ಎಂದು ತಿಳಿಸಿದರು. ಕಾರ್ಯಕ್ರಮವು ಗಾಂಧೀಜಿಯವರ ವಿಚಾರಗಳನ್ನು ಕೇವಲ ಇತಿಹಾಸದ ನೆನಪಾಗಿ ಉಳಿಸದೆ, ಇಂದಿನ ಪೀಳಿಗೆಯ ಬದುಕಿನೊಂದಿಗೆ ಸಂಪರ್ಕಿಸುವ ಅರ್ಥಪೂರ್ಣ ವೇದಿಕೆಯಾಗಿ ಮೂಡಿಬಂತು.

ಡಾ. ಎಸ್. ಶಿವರಾಜಪ್ಪ ಅವರ ವಿಚಾರ ಮಂಡನೆಯು ಮಕ್ಕಳಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಗಾಂಧೀಜಿಯವರ ಆದರ್ಶಗಳ ಕುರಿತು ಆಳವಾದ ಚಿಂತನೆ ಮೂಡಿಸುವಂತಿತ್ತು. ಸತ್ಯ, ಅಹಿಂಸೆ, ಸರಳತೆ, ಸ್ವಾವಲಂಬನೆ, ಸ್ವಾತಂತ್ರ್ಯ, ಸಮಾನತೆ, ಸ್ತ್ರೀ ಸಬಲೀಕರಣ ಹಾಗೂ ಸಹಬಾಳ್ವೆಯಂತಹ ಗಾಂಧೀಜಿಯವರ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ “ಗಾಂಧೀಜಿ–ಮೌಲ್ಯಗಳ ಪಯಣ”ದ ಆಶಯ ಸಾರ್ಥಕವಾಗುತ್ತದೆ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.

ಇದೇ ಸಂದರ್ಭದಲ್ಲಿ  ಒಡನಾಡಿಯ ಸ್ಟ್ಯಾನ್ಲಿ ಪರಶುರವರು     ಗಾಂಧೀಜಿಯವರ ಚರಕವು ಕೇವಲ ನೂಲಿನ ಉತ್ಪಾದನೆಯ ಸಾಧನವಲ್ಲ; ಅದು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಪ್ರತೀಕವಾಗಿತ್ತು ಎಂದು ವಿವರಿಸಿ ಅವರು, ಸ್ವಾವಲಂಬನೆಯ ಮಹತ್ವವನ್ನು ಮಕ್ಕಳಿಗೆ ಹಾಗೂ ಯುವಜನರಿಗೆ ಮನವರಿಕೆ ಮಾಡಿಕೊಟ್ಟರು.

ಸರಳತೆ, ಶಿಸ್ತು, ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಬದುಕಿನ ಪ್ರಮುಖ ಮೌಲ್ಯಗಳಾಗಿದ್ದವು ಎಂದ ಅವರು, ಸತ್ಯಾಗ್ರಹದ ಹೋರಾಟಗಳ ಸಂದರ್ಭದಲ್ಲಿ ದೀರ್ಘಕಾಲ ಜೈಲುವಾಸ ಅನುಭವಿಸಿದರೂ ಗಾಂಧೀಜಿಯವರು ಶಿಸ್ತು, ಪರಿಶ್ರಮ ಮತ್ತು ಸರಳತೆಯನ್ನು ತಮ್ಮ ಜೀವನದಲ್ಲಿ ನಿರಂತರವಾಗಿ ಪಾಲಿಸಿಕೊಂಡು ಬಂದಿದ್ದನ್ನು ಉದಾಹರಣೆಗಳೊಂದಿಗೆ ವಿವರಿಸಿದರು

ಒಡನಾಡಿ ಸಂಸ್ಥೆಯಲ್ಲಿ ಗಾಂಧಿಜಿಯ ವಿಚಾರಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳ ಪ್ರತಿ ಶನಿವಾರ ಸರಣಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ವಿವಿಧ ವಿಷಯ ತಜ್ಞರು ಗಾಂಧೀಜಿಯ ಕುರಿತಾಗಿ ಮಾತನಾಡಲಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ