ದಸರಾ ಜಂಬೂಸವಾರಿಯಲ್ಲಿ 6ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಯೋ ನಿವೃತ್ತಿ
ಇಪ್ಪತ್ತೈದು ವರ್ಷಗಳ ಜಂಬೂ ಸವಾರಿಗೆ ವಿದಾಯ!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಗಮನಸೆಳೆಯುತ್ತಿದ್ದ ಅಭಿಮನ್ಯು ಈ ಬಾರಿ ದಸರಾದಲ್ಲಿ ಭಾಗವಹಿಸುತ್ತಿಲ್ಲ.ಆತನಿಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ ವಯೋ ನಿವೃತ್ತಿ ಫೋಷಿಸಲಾಗಿದೆ. ಹೀಗಾಗಿ ಈ ಸಲ ಅಭಿಮನ್ಯು ಇಲ್ಲದ ದಸರಾ ನಡೆಯಲಿದೆ.

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯಲ್ಲಿ ಅಭಿಮನ್ಯು ಅನುಭವಿ ಆನೆಯಾಗಿತ್ತು. ಇದು ಸುಮಾರು ಇಪ್ಪತ್ತೈದು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದು 1999ರಿಂದ ವಾದ್ಯಗೋಷ್ಠಿಯ ಗಾಡಿಯನ್ನು ಎಳೆಯುತ್ತಾ ದಸರಾದ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿತ್ತು. ನಿಜ ಹೇಳಬೇಕೆಂದರೆ ಜಂಬೂಸವಾರಿಯಲ್ಲಿ ಅರಮನೆ ಸಂಗೀತಗಾರರ ಗಾಡಿಯನ್ನು ಎಳೆಯುವುದು ಸುಲಭವಲ್ಲ. ಏಕೆಂದರೆ ಜಂಬೂಸವಾರಿ ವೇಳೆ ಬೃಹತ್ ಗಾಡಿಯಲ್ಲಿ ಸಂಗೀತಗಾರರು ಆಸೀನರಾಗಿ ಸಂಗೀತದ ಸುಧೆ ಹರಿಸುತ್ತಿದ್ದರೆ, ಅವರನ್ನು ಎಳೆಯುತ್ತಾ ಮುನ್ನಡೆಯ ಬೇಕು. ಈ ಗಾಡಿ ಸಾವಿರಾರು ಕೆಜಿಯಷ್ಟು ತೂಕವಿದ್ದು ಅದನ್ನು ನಿಯಂತ್ರಿಸುತ್ತಾ ಮುಂದೆ ಸಾಗಬೇಕಾಗಿತ್ತು.

ಹೀಗೆ 2019ರವರೆಗೂ ಇದೇ ಕಾರ್ಯವನ್ನು ಮಾಡುತ್ತಾ ಬಂದಿದ್ದ ಅಭಿಮನ್ಯು 2020ರಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ನಿವೃತ್ತಿಗೊಂಡಾಗ ಅದರ ಸ್ಥಾನವನ್ನು ವಹಿಸಿಕೊಂಡಿತು. ಅಲ್ಲಿಂದ 2025ರವರೆಗೆ ಆರು ಬಾರಿ ಅಂಬಾರಿ ಹೊತ್ತು ಮೈಸೂರು ದಸರಾಕ್ಕೆ ಕಳೆಕಟ್ಟಿತ್ತು.

ಇದೀಗ 61ವರ್ಷ ಪ್ರಾಯವಾಗಿರುವುದರಿಂದ ಸುಪ್ರೀಂಕೋರ್ಟ್ ಆದೇಶದಂತೆ ಸೇವಾ ಕಾರ್ಯದಿಂದ ನಿವೃತ್ತಿ ನೀಡಲಾಗಿದೆ. ಹೀಗಾಗಿ ದಸರಾದಲ್ಲಿ ಭಾಗವಹಿಸುತ್ತಿಲ್ಲ. ಜಂಬೂ ಸವಾರಿಯ ಸಂಪೂರ್ಣ ತಂಡವನ್ನು ಮುನ್ನಡೆಸುವ ನಾಯಕನಾಗಿ, ಮೈಸೂರು ದಸರಾದ ಶ್ರೇಷ್ಠ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದ ಅಭಿಮನ್ಯುವಿನ ಕಾರ್ಯ ಶ್ಲಾಘನೀಯವಾಗಿದೆ.

ಅಭಿಮನ್ಯು ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ಇದು ಎಲ್ಲಾ ಆನೆಗಳಂತೆ ಕೊಡಗಿನ ಅರಣ್ಯದಲ್ಲಿ ಅಂಡಲೆಯುತ್ತಾ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು.

ಬಲಿಷ್ಠನಾಗಿರುವ ಈತನನ್ನು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲು ಮತ್ತು ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತಾ ಬರಲಾಗುತ್ತಿತ್ತು. ಇದುವರೆಗೆ ದೇಶಾದ್ಯಂತ 300ಕ್ಕೂ ಹೆಚ್ಚು ಪುಂಡಾನೆಗಳು ಹಾಗೂ 80ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯುವ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಕೀರ್ತಿ ಇದರದ್ದಾಗಿದೆ.
B M Lavakumar
ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ಧವಾದ 12 ಆನೆಗಳ ಗಜಪಡೆ… ಆ.26ಕ್ಕೆ ಗಜಪಯಣ







