LatestMysore

ಗಾವಡಗೆರೆಯಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ 84 ಅರ್ಜಿ ಸ್ವೀಕಾರ; 9ಕ್ಕೆ ಪರಿಹಾರ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿ ಕೇಂದ್ರದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಒಟ್ಟು 84 ಅರ್ಜಿಗಳು ಸ್ವೀಕೃತವಾದವು. ಈ ಪೈಕಿ 9 ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.

ಇನ್ನು ಶನಿವಾರ ಗಾವಡಗೆರೆಯ ಮರಾಠ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಹಸೀಲ್ದಾರ್ ಜೆ.ಮಂಜುನಾಥ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಜಾಸೇವೆ ಕಾರ್ಯಕ್ರಮವು ಜನರ ಮನೆಬಾಗಿಲಿಗೆ ಸರ್ಕಾರದ ಸೇವೆಗಳನ್ನು ನೀಡುವ ಗುರಿ ಹೊಂದಿದೆ.

ಗಾವಡಗೆರೆ ಹೋಬಳಿಯ ನಾಡಕಚೇರಿಯು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಗ್ರಾಮೀಣರ ಹಲವು ವರ್ಷಗಳ ಬೇಡಿಕೆ ಇದೀಗ ಈಡೇರಿದ್ದು, ಗಾವಡಗೆರೆ ಕೇಂದ್ರಸ್ಥಾನದಲ್ಲಿರುವ ಶ್ರೀ ಗುರುಲಿಂಗಜಂಗಮದೇವರ ಮಠದ ಸಮೀಪ ಒಂದು ಎಕರೆ ಸರ್ಕಾರಿ ಜಾಗ ಗುರುತಿಸಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ 55ಲಕ್ಷ ರೂ.ಗಳ ಅನುದಾನವೂ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ರಾಜ್ಯಾದ್ಯಂತ ಮಾಜಿ ಸೈನಿಕರು ಸರ್ಕಾರದಿಂದ ಭೂಮಿ ನೀಡಲು ಅಗ್ರಹಿಸಿ 2016ರಲ್ಲೇ ಕೋರ್ಟ್ ಮೊರೆ ಹೋಗಿದ್ದಾರೆ.  ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇದೆ.

ಈ ನಡುವೆ ಸರ್ಕಾರ 1947ರ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕರಿಗೆ ಜಮೀನು ನೀಡುವಷ್ಟು ಭೂಮಿ ಈಗಿನ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ನಿವೇಶನಗಳನ್ನು ನೀಡಲು ಮುಂದಾಗಿದ್ದು, ಹುಣಸೂರು ತಾಲೂಕಿನಲ್ಲೂ 8ಎಕರೆ ಭೂಮಿಯನ್ನು ಆಶ್ರಯ ಯೋಜನೆಯಡಿ ಗುರುತಿಸಿ ಕಾಯ್ದಿರಿಸಲಾಗಿದೆ. ನ್ಯಾಯಾಲಯದ ತೀರ್ಪು ಹೊರಬಂದ ನಂತೆರವಷ್ಟೇ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಂತೆ ಕ್ರಮವಹಿಸಲಾಗುವುದು ಎಂದರು.

ಗಾವಡಗೆರೆ ವ್ಯಾಪ್ತಿಯಲ್ಲಿರುವ ಮೂರು ಕೆರೆಗಳನ್ನು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಅದನ್ನು ಗ್ರಾಮ ಪಂಚಾಯಿತಿಗೆ ವರ್ಗಾಯಿಸುವ ಮೂಲಕ ಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಕೋರಿದಾಗ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಹಸೀಲ್ದಾರ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ಕೆ.ಹೊಂಗಯ್ಯ,ಲೋಕೋಪಯೋಗಿ ಎಇಇ ಯತೀಶ್, ಉಪತಹಸೀಲ್ದಾರ್ ಅರುಣ್‌ಕುಮಾರ್, ರಾಜಸ್ವ ಅನಿರೀಕ್ಷಕ  ಹೇಮಂತ್‌ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳಾದ ಶ್ರೀವತ್ಸ, ಸುನಿಲ್ ಚೈತ್ರ ವಿಜಯಕುಮಾರ್  ಮುಖಂಡರಾದ ಹೊನ್ನಪ್ಪರಾವ್ ಕಾಳಿಂಗೆ, ನಿಂಗರಾಜ್ ಮಲ್ಲಾಡಿ, ಸತ್ಯಪ್ಪ, ಗಣಪತಿರಾವ್ ಇಂದಲ್ಕರ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ