LatestMysoreNews

ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ

ಮಾದಾರ ಧೂಳಯ್ಯ, ಹಡಪದ ಲಿಂಗಮ್ಮನವರ ಸಂದೇಶ ಪರಿಚಯಿಸಿದ ರೂಪಾ ಕುಮಾರಸ್ವಾಮಿ

ಬೆಂಗಳೂರು: ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಹಾಗೂ ವೀರಶೈವ ಸಮಾಜ ಆಫ್ ನಾರ್ಥ್ ಅಮೇರಿಕಾ (VSNA) ಇವರ ಜಂಟಿ ಸಹಯೋಗದಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.

12ನೇ ಶತಮಾನದ ಶರಣರ ಚಿಂತನೆಗಳು ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾಗಿರದೆ, ಇಂದಿಗೂ ಮಾನವೀಯ ಬದುಕಿಗೆ ದಾರಿದೀಪವಾಗಿವೆ. ವಚನಕಾರರು ತಮ್ಮ ಬದುಕಿನ ಅನುಭವ, ಕಾಯಕನಿಷ್ಠೆ, ಅಂತರಂಗದ ಶುದ್ಧತೆ, ಸಾಮಾಜಿಕ ಸಮಾನತೆ, ದಾಸೋಹ, ಭಕ್ತಿ ಮತ್ತು ಜ್ಞಾನವನ್ನು ಸರಳವಾದ ನುಡಿಗಳ ಮೂಲಕ ಸಮಾಜಕ್ಕೆ ನೀಡಿದರು. ಈ ಅಮೂಲ್ಯ ಪರಂಪರೆಯಲ್ಲಿ ಪ್ರಸಿದ್ಧರಷ್ಟೇ ಅಲ್ಲದೆ, ಇತಿಹಾಸದ ಪುಟಗಳಲ್ಲಿ ಹೆಚ್ಚು ಬೆಳಕಿಗೆ ಬಾರದ ಅನೇಕ ಶರಣ–ಶರಣೆಯರ ಕೊಡುಗೆಯೂ ಮಹತ್ವದ್ದಾಗಿದೆ. ಅಂತಹ ಅಜ್ಞಾತ ಹಾಗೂ ಅಲ್ಪಪರಿಚಿತ ವಚನಕಾರರ ಬದುಕು ಮತ್ತು ಸಾಹಿತ್ಯವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ವಿಚಾರ ಸಂಕಿರಣದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಚನ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಅಲ್ಪಪರಿಚಿತ ಶರಣ–ಶರಣೆಯರ ಜೀವನ, ಕಾಯಕ ಮತ್ತು ವಚನ ಸಂದೇಶಗಳನ್ನು ಪರಿಚಯಿಸಿದರು.

ಕಾಯಕವೇ ಕೈಲಾಸವೆಂದು ಬದುಕಿದ ಮಾದಾರ ಧೂಳಯ್ಯ

ಚರ್ಮದ ಕಾಯಕವನ್ನು ಯಾವುದೇ ಕೀಳರಿಮೆಯಿಲ್ಲದೆ ಗೌರವದಿಂದ ಸ್ವೀಕರಿಸಿ, ಕಾಯಕದ ಘನತೆಯನ್ನು ತಮ್ಮ ಬದುಕಿನ ಮೂಲಕವೇ ಸಾರಿದ ಶರಣ ಮಾದಾರ ಧೂಳಯ್ಯನವರು, ‘ಕಾಮಧೂಮ ಧೂಳೇಶ್ವರ’ ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳಲ್ಲಿ ಕಾಯಕದ ಮಹತ್ವ, ಭಕ್ತಿ, ಜ್ಞಾನ, ಆತ್ಮಶುದ್ಧತೆ ಹಾಗೂ ಮೋಕ್ಷದ ಪರಿಕಲ್ಪನೆಗಳು ಆಳವಾಗಿ ವ್ಯಕ್ತವಾಗಿವೆ. ಬಸವಣ್ಣ, ಚೆನ್ನಬಸವಣ್ಣ ಹಾಗೂ ಪ್ರಭುದೇವರಂತಹ ಮಹಾಶರಣರ ಸಾನ್ನಿಧ್ಯದಿಂದ ತಮ್ಮ ತನು–ಮನ–ಪ್ರಾಣಗಳು ನಿರ್ಮಲವಾದವು ಎಂಬ ಭಾವವನ್ನು ಧೂಳಯ್ಯನವರು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾಯಕವು ಮೇಲಲ್ಲ, ಕೀಳಲ್ಲ; ಪ್ರಾಮಾಣಿಕವಾಗಿ ಮಾಡುವ ಕಾಯಕವೇ ಶ್ರೇಷ್ಠ ಎಂಬ ಶರಣರ ಆಶಯವನ್ನು ಅವರ ವಚನಗಳು ಪ್ರತಿಧ್ವನಿಸುತ್ತವೆ. ಸುಮಾರು ೧೦೬ ವಚನಗಳನ್ನು ರಚಿಸಿರುವ ಮಾದಾರ ಧೂಳಯ್ಯನವರು, ತಮ್ಮ ಸರಳವಾದ ವಚನಭಾಷೆಯ ಮೂಲಕ ಕಾಯಕನಿಷ್ಠೆ ಮತ್ತು ಆತ್ಮನಿಷ್ಠೆಯ ಮಹತ್ವವನ್ನು ಸಾರಿದ್ದಾರೆ. ಸಮಾಜದಲ್ಲಿ ಕಾಯಕದ ಆಧಾರದ ಮೇಲೆ ವ್ಯಕ್ತಿಯನ್ನು ಅಳೆಯುವ ಮನೋಭಾವಕ್ಕೆ ಶರಣರ ಚಿಂತನೆಗಳು ನೀಡಿದ ಪರ್ಯಾಯ ದೃಷ್ಟಿಕೋನವನ್ನು ಧೂಳಯ್ಯನವರ ಬದುಕು ಸ್ಪಷ್ಟಪಡಿಸುತ್ತದೆ ಎಂದು ವಿವರಿಸಿದರು.

ಹಡಪದ ಅಪ್ಪಣ್ಣನವರ ಧರ್ಮಪತ್ನಿ ಮಹಾಶರಣೆ ನಿಜಮುಕ್ತೆ ಹಡಪದ ಲಿಂಗಮ್ಮ

ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶರಣ  ಹಡಪದ ಅಪ್ಪಣ್ಣನವರ ಧರ್ಮಪತ್ನಿಯಾದ ಹಡಪದ ಲಿಂಗಮ್ಮನವರು, ಶರಣ ಚಳವಳಿಯಲ್ಲಿ ಮಹಿಳೆಯರ ಚಿಂತನಾ ಸಾಮರ್ಥ್ಯ, ಆಧ್ಯಾತ್ಮಿಕ ಪ್ರಜ್ಞೆ ಹಾಗೂ ಸಾಮಾಜಿಕ ಬದ್ಧತೆಗೆ ಮಹತ್ವದ ಉದಾಹರಣೆಯಾಗಿದ್ದಾರೆ. ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಸುಮಾರು ೧೧೪ ವಚನಗಳು, ಒಂದು ಸ್ವರವಚನ ಹಾಗೂ ಮಂತ್ರಗೋಪ್ಯವನ್ನು ರಚಿಸಿರುವ ಹಡಪದ ಲಿಂಗಮ್ಮನವರ ವಚನಗಳಲ್ಲಿ ನೈತಿಕತೆ, ಆತ್ಮಶೋಧನೆ, ಭಕ್ತಿ, ಸದಾಚಾರ ಮತ್ತು ಆಧ್ಯಾತ್ಮಿಕ ಬೋಧನೆಗಳು ಅಡಕವಾಗಿವೆ.

ಅವರ ವಚನಗಳನ್ನು ‘ಬೋಧೆಯ ವಚನಗಳು’ ಎಂದೇ ಕರೆಯಲಾಗುತ್ತದೆ. ಬದುಕನ್ನು ಹೇಗೆ ಶುದ್ಧಗೊಳಿಸಿಕೊಳ್ಳಬೇಕು, ನುಡಿ–ನಡೆಗಳಲ್ಲಿ ಹೇಗೆ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಭಕ್ತಿಯ ಮಾರ್ಗದಲ್ಲಿ ಹೇಗೆ ಮುನ್ನಡೆಯಬೇಕು ಎಂಬುದಕ್ಕೆ ಅವರ ವಚನಗಳು ಮಾರ್ಗದರ್ಶನ ನೀಡುತ್ತವೆ ಎಂದು ತಿಳಿಸಿದರು. ಮಹಿಳೆಯರು ಕೇವಲ ಶರಣ ಚಳವಳಿಯ ಭಾಗವಾಗಿರದೆ, ಅದರ ಚಿಂತನಾ ಪರಂಪರೆಯನ್ನು ಶ್ರೀಮಂತಗೊಳಿಸಿದ ಸೃಜನಶೀಲ ವಚನಕಾರರಾಗಿದ್ದರು ಎಂಬುದಕ್ಕೆ ಹಡಪದ ಲಿಂಗಮ್ಮನವರ ಸಾಹಿತ್ಯ ಪ್ರಮುಖ ಸಾಕ್ಷಿಯಾಗಿದೆ ಎಂದರು.

ವಚನ ಸಾಹಿತ್ಯ ರಕ್ಷಣೆಯಲ್ಲಿ ಕಿನ್ನರಿ ಬೊಮ್ಮಯ್ಯನವರ ಅನನ್ಯ ಪಾತ್ರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೆರಿಕಾದ ವೀರಶೈವ ಸಮಾಜ ಆಫ್ ನಾರ್ಥ್ ಅಮೇರಿಕಾ (VSNA) ನಿಕಟಪೂರ್ವ ಅಧ್ಯಕ್ಷ ಹರೀಶ್ ಆರ್. ಹಿರೇಮಠ್ ಅವರು ಮಾತನಾಡಿ, ವಚನ ಸಾಹಿತ್ಯದ ಸಂರಕ್ಷಣೆಯಲ್ಲಿ ಕಿನ್ನರಿ ಬೊಮ್ಮಯ್ಯನವರ ಪಾತ್ರ ಅನನ್ಯವಾಗಿದೆ. ಆಂಧ್ರಪ್ರದೇಶದ ಪೂದೂರು ಮೂಲದ ಅಕ್ಕಸಾಲಿಗ ಕಾಯಕದ ಬೊಮ್ಮಯ್ಯನವರು ಕಲ್ಯಾಣಕ್ಕೆ ಆಗಮಿಸಿ, ಕಿನ್ನರಿ ವಾದ್ಯ ನುಡಿಸುವ ಕಾಯಕದೊಂದಿಗೆ ಜಂಗಮ ದಾಸೋಹವನ್ನು ನಡೆಸಿದರು.

ಅಕ್ಕಮಹಾದೇವಿಯವರ ಪರಮ ವೈರಾಗ್ಯವನ್ನು ಲೋಕಕ್ಕೆ ಪರಿಚಯಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಶರಣರನ್ನು ಹಾಗೂ ವಚನ ಸಾಹಿತ್ಯವನ್ನು ರಕ್ಷಿಸುವ ದಂಡಿನ ಅಧಿಪತ್ಯವನ್ನು ಕಿನ್ನರಿ ಬೊಮ್ಮಯ್ಯನವರು ವಹಿಸಿದ್ದರು. ಶರಣರ ಅಮೂಲ್ಯ ವಚನ ಕಟ್ಟುಗಳನ್ನು ಸಂರಕ್ಷಿಸಲು ಅವರು ಕೈಗೊಂಡ ಸಾಹಸ ಮತ್ತು ತ್ಯಾಗವು ವಚನ ಸಾಹಿತ್ಯದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

ಉಳವಿಯ ನಿಬಿಡಾರಣ್ಯದಲ್ಲಿ ಹರಿಯುತ್ತಿದ್ದ ನದಿಯ ಪಥವನ್ನು ಬದಲಿಸಿ, ಗವಿಯನ್ನು ಜಲದುರ್ಗವನ್ನಾಗಿ ಪರಿವರ್ತಿಸಿ ವಚನ ಕಟ್ಟುಗಳನ್ನು ರಕ್ಷಿಸಿದ ಮಹಾನ್ ಸಾಹಸಿಯಾಗಿ ಕಿನ್ನರಿ ಬೊಮ್ಮಯ್ಯನವರು ಸ್ಮರಣೀಯರಾಗಿದ್ದಾರೆ.

ಉಳವಿಯಲ್ಲಿ ಅವರು ಲಿಂಗೈಕ್ಯರಾಗಿದ್ದು, ಅವರ ಸಮಾಧಿಯ ಮೇಲೆ ಶಾಸನವಿದ್ದು, ಬೀದರ್ ಜಿಲ್ಲೆಯ ಹಳ್ಳಿಖೇಡದಲ್ಲಿಯೂ ಅವರ ಸ್ಮರಣೆಯನ್ನು ಸಾರುವ ಸುಂದರ ದೇವಾಲಯವಿದೆ ಎಂದು ಹರೀಶ್ ಆರ್. ಹಿರೇಮಠ್ ಎಂದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್. ಎಸ್. ಸತೀಶ್, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ಕಾಲೇಜಿನ ಬಸವ ಅಧ್ಯಯನ ಕೇಂದ್ರದ ಸಂಚಾಲಕರಾದ ಸಂತೋಷ್ ಜಿ. ವಿ. ಅವರು ಉಪಸ್ಥಿತರಿದ್ದರು.

ವಚನ ಕೋಗಿಲೆ ಪ್ರಶಸ್ತಿ ಪುರಸ್ಕೃತ ಅನುರಾಗ ಗದ್ದಿ ಅವರು ಪ್ರಾರ್ಥನೆ ನೆರವೇರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯಮಂಗಲ ಮಹಾದೇವ ಅವರು ಸ್ವಾಗತ ಭಾಷಣ ಮಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಐ.ಕ್ಯೂ.ಎ.ಸಿ. (IQAC) ಸಂಯೋಜಕರಾದ ಡಾ. ಆರ್. ನಾಗಸುಧಾ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ವಿಭಾ ವಿ. ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು.

ಒಟ್ಟಾರೆ, ‘ಅಜ್ಞಾತ ವಚನಕಾರರು–ಭಾಗ 2’ ಅಂತಾರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣವು ಮಾದಾರ ಧೂಳಯ್ಯ ಮತ್ತು ಹಡಪದ ಲಿಂಗಮ್ಮ ಮತ್ತು ಕಿನ್ನರಿ ಬೊಮ್ಮಯ್ಯನವರಂತಹ ಅಲ್ಪಪರಿಚಿತ ವಚನಕಾರರ ಅಮೂಲ್ಯ ಸಾಹಿತ್ಯ ಮತ್ತು ಶರಣರ ಜೀವನ ಸಂದೇಶಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಅರ್ಥಪೂರ್ಣ ವೇದಿಕೆಯಾಗಿ ಮೂಡಿಬಂದಿತು.

admin
the authoradmin

ನಿಮ್ಮದೊಂದು ಉತ್ತರ