ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ: ಡಾ. ಬಾಬಾಸಾಹೇಬ ಗಡ್ಡೆ ಅಭಿಮತ
ಬೀದರಿನ ವಚನ ಸಮೂಹ ಸಂಸ್ಥೆಯಿಂದ ಶ್ರಾವಣ ವಚನ ಚಿಂತನಾ ಕಾರ್ಯಕ್ರಮ

ಬೀದರ್: ಬೀದರಿನ ವಚನ ಸಮೂಹ ಸಂಸ್ಥೆ ವತಿಯಿಂದ ಆನ್ಲೈನ್ ಮೂಲಕ ಆಯೋಜಿಸಿದ್ದ ಶ್ರಾವಣ ಮಾಸದ ವಚನ ಚಿಂತನಾ ಮಾಲಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ನೂತನ ಅನುಭವ ಮಂಟಪದ ಸಂಯೋಜಕರಾದ ಡಾ. ಬಾಬಾಸಾಹೇಬ್ ಗಡ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಅನುಭವ ಮಂಟಪವು ಕೇವಲ ಧಾರ್ಮಿಕ ವಿಚಾರಗಳ ಚರ್ಚೆಯ ವೇದಿಕೆಯಾಗಿರಲಿಲ್ಲ. ಅದು ಸಮಾಜದ ವಿವಿಧ ವರ್ಗಗಳ ಜನರು ತಮ್ಮ ಅನುಭವ, ವಿಚಾರ, ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಿಶಿಷ್ಟ ಚಿಂತನಾ ವೇದಿಕೆಯಾಗಿತ್ತು ಎಂದರು.
ಪ್ರಜಾಪ್ರಭುತ್ವದ ಮೂಲ ಆಶಯಗಳಾದ ಸಮಾನ ಪ್ರಾತಿನಿಧ್ಯ, ಮುಕ್ತ ಚರ್ಚೆ, ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ, ನಿರ್ಧಾರಗಳ ಅನುಷ್ಠಾನ ಹಾಗೂ ಜನರಿಗೆ ಉತ್ತರದಾಯಿತ್ವ ಎಂಬ ಅಂಶಗಳು ಅನುಭವ ಮಂಟಪದ ಪರಂಪರೆಯಲ್ಲಿ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಮಾಜದ ಯಾವುದೇ ವರ್ಗ, ಜಾತಿ ಅಥವಾ ಲಿಂಗದ ವ್ಯಕ್ತಿಗೂ ತನ್ನ ಅನುಭವವನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶ ದೊರೆಯಬೇಕು ಎಂಬುದು ಶರಣರ ಚಿಂತನೆಯ ಪ್ರಮುಖ ಅಂಶವಾಗಿತ್ತು.
ಅಕ್ಕಮಹಾದೇವಿ ಸೇರಿದಂತೆ ಶರಣೆಯರು ಅನುಭವ ಮಂಟಪದ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಅಂದಿನ ಕಾಲದಲ್ಲಿಯೇ ಮಹಿಳೆಯರ ವಿಚಾರ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಕ್ಕೆ ನೀಡಿದ ಮಹತ್ವವನ್ನು ತೋರಿಸುತ್ತದೆ. ಅನುಭವ ಮಂಟಪದಲ್ಲಿ ಪ್ರಶ್ನಿಸುವುದಕ್ಕೆ, ಚರ್ಚಿಸುವುದಕ್ಕೆ ಮತ್ತು ವಿಚಾರವನ್ನು ವಿಮರ್ಶಾತ್ಮಕವಾಗಿ ನೋಡುವುದಕ್ಕೆ ಅವಕಾಶವಿತ್ತು. ಯಾವುದೇ ವಿಚಾರವನ್ನು ಕೇವಲ ಅಧಿಕಾರದ ಆಧಾರದ ಮೇಲೆ ಒಪ್ಪಿಕೊಳ್ಳದೆ, ಅನುಭವ, ವಿಚಾರ ಮತ್ತು ಸಂವಾದದ ಮೂಲಕ ಸತ್ಯವನ್ನು ಅರಿಯುವ ಪ್ರಯತ್ನ ನಡೆದಿತ್ತು.

ಇದೇ ಪ್ರಜಾಪ್ರಭುತ್ವದ ಚರ್ಚಾ ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿದೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಚಿಂತನೆಗಳು ಕೇವಲ ಮಾತುಗಳಾಗಿ ಉಳಿಯದೆ ಸಾಮಾಜಿಕ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕು ಎಂಬ ಸಂದೇಶವನ್ನು ನೀಡಿದವು. ಹೀಗಾಗಿ ಅನುಭವ ಮಂಟಪವು ವಿಚಾರ ಮಂಡಿಸುವುದರ ಜೊತೆಗೆ ಸಾಮಾಜಿಕ ಪರಿವರ್ತನೆಯ ಆಶಯವನ್ನೂ ಹೊಂದಿತ್ತು. ಇಂದಿನ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿತ್ವ, ಚರ್ಚೆ, ಜನರ ಭಾಗವಹಿಸುವಿಕೆ, ಕಾನೂನಿನ ಆಳ್ವಿಕೆ ಮತ್ತು ಸರ್ಕಾರದ ಉತ್ತರದಾಯಿತ್ವಗಳಿಗೆ ಮಹತ್ವವಿದೆ.
ಇದೇ ಹಿನ್ನೆಲೆಯಲ್ಲಿ ಅನುಭವ ಮಂಟಪದ ಪರಂಪರೆಯನ್ನು ಅಧ್ಯಯನ ಮಾಡಿದಾಗ, 12ನೇ ಶತಮಾನದಲ್ಲಿಯೇ ಭಾರತದಲ್ಲಿ ಮುಕ್ತ ಚರ್ಚೆ, ಸಮಾನತೆ ಮತ್ತು ಜನಭಾಗವಹಿಸುವಿಕೆಯ ಆಧಾರದ ಮೇಲೆ ರೂಪುಗೊಂಡ ವಿಶಿಷ್ಟ ಚಿಂತನಾ ವೇದಿಕೆಯಾಗಿ ಅನುಭವ ಮಂಟಪವನ್ನು ಗುರುತಿಸಬಹುದು. ಅನುಭವ ಮಂಟಪದ ಆಶಯಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಪ್ರಶ್ನಿಸುವ ಮನೋಭಾವ, ಸಮಾನತೆಯ ದೃಷ್ಟಿಕೋನ, ಪರಸ್ಪರ ಗೌರವ, ಸಂವಾದ ಮತ್ತು ಸಾಮಾಜಿಕ ಲಹೊಣೆಗಾರಿಕೆಯ ಮೌಲ್ಯಗಳನ್ನು ಬೆಳೆಸುವ ಮೂಲಕವೇ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಬಲಪಡಿಸಬಹುದು ಎಂದರು.

ವಿಚಾರಗಳು ಪ್ರಚಾರವಾಗದೆ ಆಚಾರವಾಗಬೇಕು..
ಇಂದು ಸಮಾಜದಲ್ಲಿ ವಿಚಾರವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ವಿಚಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಆಚಾರವಂತರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಚಾರಗಳು ಕೇವಲ ಪ್ರಚಾರವಾಗದೆ, ನಮ್ಮ ಬದುಕಿನ ಆಚಾರವಾಗಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಶ್ರಾವಣ ಮಾಸ ವಚನ ಚಿಂತನಾ ಮಾಲಿಕೆ ಸಮಾರೋಪ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶರಣ ಸಂಸ್ಕೃತಿಯು ಕೇವಲ ನೋಡುವ ಸಂಸ್ಕೃತಿಯಲ್ಲ; ನಡೆ-ನುಡಿಯಲ್ಲಿ ವ್ಯಕ್ತವಾಗುವ ಸಂಸ್ಕೃತಿ. ಶರಣರ ಬದುಕಿನ ಮಹತ್ವವನ್ನು ವಿವರಿಸಿದ ಅವರು, ವಚನಗಳು ಕೇವಲ ಓದಲು ಮತ್ತು ಕೇಳಲು ಇರುವ ಸಾಹಿತ್ಯವಲ್ಲ. ಅವು ವ್ಯಕ್ತಿಯ ಬದುಕನ್ನು ಪರಿವರ್ತಿಸುವ ಜೀವನ ಮೌಲ್ಯಗಳಾಗಿವೆ. ವಚನಗಳಲ್ಲಿರುವ ಸತ್ಯ, ಕಾಯಕ, ದಾಸೋಹ, ಸಮಾನತೆ, ನೈತಿಕತೆ ಮತ್ತು ಮಾನವೀಯತೆಯ ಆಶಯಗಳನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಇಂದಿನ ಕಾಲಘಟ್ಟದಲ್ಲಿ ನೈತಿಕ ನೆಲಗಟ್ಟು ದುರ್ಬಲವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಸಮಾಜದಲ್ಲಿ ಶೋಷಣೆ, ಸುಲಿಗೆ ಮತ್ತು ಅನೈತಿಕ ಚಟುವಟಿಕೆಗಳು ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಮೌಲ್ಯಾಧಾರಿತ ಬದುಕಿನ ಅಗತ್ಯ ಮತ್ತಷ್ಟು ಹೆಚ್ಚಾಗಿದೆ. ನೈತಿಕವಾಗಿ ನಮ್ಮ ನೆಲಗಟ್ಟನ್ನು ಗಟ್ಟಿಗೊಳಿಸಿಕೊಳ್ಳಬೇಕಾದರೆ ನಾವು ಮತ್ತೆ ಹನ್ನೆರಡನೇ ಶತಮಾನದ ಶರಣರ ಚಿಂತನೆಯತ್ತ ಮುಖ ಮಾಡಬೇಕು.

ಶರಣರು ನುಡಿದದ್ದನ್ನು ನಡೆದು ತೋರಿಸಿದವರು. ಅವರ ವಚನಗಳಲ್ಲಿ ವ್ಯಕ್ತಿ ಮತ್ತು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜೀವನ ಮೌಲ್ಯಗಳಿವೆ. ಮಕ್ಕಳಲ್ಲಿ ಬಾಲ್ಯದಿಂದಲೇ ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ. ಶರಣರ ವಚನಗಳನ್ನು ಮಕ್ಕಳಿಗೆ ಹಾಗೂ ಸಮಾಜದ ಪ್ರತಿಯೊಬ್ಬರಿಗೂ ಸರಳವಾಗಿ ಮನವರಿಕೆ ಮಾಡಿಕೊಟ್ಟು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಆಗ ಮಾತ್ರ ವಚನ ಸಾಹಿತ್ಯದ ಆಶಯಗಳು ಸಮಾಜದಲ್ಲಿ ಜೀವಂತವಾಗಿರಲು ಸಾಧ್ಯ.
ಶರಣ ಸಂಸ್ಕೃತಿಯು ಕೇವಲ ಆಚರಣೆ ಅಥವಾ ಪ್ರದರ್ಶನಕ್ಕೆ ಸೀಮಿತವಾಗದೆ, ನಮ್ಮ ನಡೆ, ನುಡಿ ಮತ್ತು ನೈತಿಕ ಬದುಕಿನಲ್ಲಿ ಪ್ರತಿಫಲಿಸಬೇಕು. ವಿಚಾರ ಮತ್ತು ಆಚಾರ ಒಂದಾದಾಗ ಮಾತ್ರ ವ್ಯಕ್ತಿಯ ಹಾಗೂ ಸಮಾಜದ ನಿಜವಾದ ಪರಿವರ್ತನೆ ಸಾಧ್ಯ ಎಂದು ಅವರು ಆಶೀರ್ವಚನ ನೀಡಿದರು.
ವಚನ ಸಾಹಿತ್ಯವು ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಪ್ರಶ್ನೆಗಳ ಮೂಲಕವೇ ಉತ್ತರವನ್ನು ಕಂಡುಕೊಳ್ಳುವ ಚಿಂತನಾ ಶಕ್ತಿಯನ್ನು ವಚನಗಳು ನಮ್ಮಲ್ಲಿ ಬೆಳೆಸುತ್ತವೆ ಎಂದು ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರಮಹಾಸ್ವಾಮೀಜಿ ಹೇಳಿದರು. ವಚನಗಳನ್ನು ಕೇವಲ ಓದಿ ಅಥವಾ ಕೇಳುವುದಕ್ಕೆ ಸೀಮಿತಗೊಳಿಸದೆ, ಅವುಗಳಲ್ಲಿರುವ ವಿಚಾರಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರಶ್ನಿಸುವ, ಚಿಂತಿಸುವ ಮತ್ತು ಸತ್ಯವನ್ನು ಅರಿಯುವ ಮನೋಭಾವದ ಮೂಲಕ ವಚನ ಸಂಸ್ಕಾರವನ್ನು ಗಟ್ಟಿಗೊಳಿಸಿಕೊಳ್ಳಬೇಕು. ವಚನ ಸಾಹಿತ್ಯವು ವ್ಯಕ್ತಿಯ ಚಿಂತನೆಗೆ ದಿಕ್ಕು ನೀಡುವುದರ ಜೊತೆಗೆ, ಉತ್ತಮ ಮೌಲ್ಯಗಳು ಮತ್ತು ಮಾನವೀಯ ಗುಣಗಳನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ ಎಂದರು.

ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾದ ಚೆನ್ನಬಸವಣ್ಣ ಲಂಗೋಟಿ ಅವರು ಅಲ್ಲಮಪ್ರಭುಗಳ ವಚನವನ್ನು ಪಠಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ; ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ; ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ; ಗುಹೇಶ್ವರಾ, ನಿಮ್ಮ ಶರಣ ಸಂಗನ ಬಸವಣ್ಣನ ಸಾನ್ನಿಧ್ಯದಿಂದ ನಾನು ಸದ್ಭಕ್ತನಾದೆನಯ್ಯಾ” ಎಂಬ ಅಲ್ಲಮಪ್ರಭುಗಳ ವಚನವನ್ನು ಅವರು ಪ್ರಸ್ತುತಪಡಿಸಿ ವಚನದ ಮೂಲಕ ಕೇವಲ ತತ್ವವನ್ನು ನುಡಿಯುವುದಕ್ಕಿಂತ, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸದ್ಭಕ್ತಿ ಮತ್ತು ಶರಣ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ತಿಳಿಸಿದರು.
ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶರಣ ಅಲ್ಲಮಪ್ರಭು ನಾವದಗೇರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 12ನೇ ಶತಮಾನದ ಅನುಭವ ಮಂಟಪದಲ್ಲಿ 770 ಅಮರ ಗಣಂಗಳು ಇದ್ದರು ಎಂಬ ಪರಂಪರೆಯನ್ನು ಸ್ಮರಿಸುತ್ತಾ, ಅದರ ದ್ಯೋತಕವಾಗಿ ಇಂದಿನ ವಚನ ಚಿಂತನಾ ಮಾಲಿಕೆಯಲ್ಲಿ 770 ಶರಣರನ್ನು ಆನ್ಲೈನ್ ವೇದಿಕೆಯ ಮೂಲಕ ಒಗ್ಗೂಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿತ್ತು. ಈ ವಚನ ಚಿಂತನಾ ಮಾಲಿಕೆಯಲ್ಲಿ ಈಗಾಗಲೇ 770ಕ್ಕೂ ಹೆಚ್ಚು ಶರಣರು ಭಾಗವಹಿಸಿರುವುದು ಸಂತಸದ ಸಂಗತಿ. ಶರಣರ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸುವ ಹಾಗೂ ವಚನ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇದು ಒಳ್ಳೆಯತನದ ಕಡೆಗೆ ಇಡುತ್ತಿರುವ ಮಹತ್ವದ ಹೆಜ್ಜೆ ಎಂದ ಅವರು 770 ಶರಣರ ಚಿಂತನೆ, ಅನುಭವ ಮತ್ತು ವಚನ ಸಂದೇಶಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಪ್ರಯತ್ನವು ವಚನ ಸಾಹಿತ್ಯದ ಪ್ರಸಾರಕ್ಕೆ ಹೊಸ ಆಯಾಮ ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಚಿತ್ರದುರ್ಗ ಮುರುಘಾಮಠದ ಖ್ಯಾತ ಸಂಗೀತ ಕಲಾವಿದರಾದ ತೋಟಪ್ಪ ಉತ್ತಂಗಿ ಅವರು ವಚನ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ರಾಮದುರ್ಗ–ನಾಗನೂರ ಬಸವಾಶ್ರಮದ ಕಾರ್ಯದರ್ಶಿ ನಿವೇದಿತಾ ಡಿ.ಪಿ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೂಜ್ಯರು, ಗಣ್ಯರು ಹಾಗೂ ವಚನಾಭಿಮಾನಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ವಚನ ಸಮೂಹ ಸಂಸ್ಥೆಯ ನಿರ್ದೇಶಕರಾದ ಶಿವಕುಮಾರ ಸಾಲಿ ಅವರು ವಂದಿಸಿದರು. ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಿರೂಪಿಸಿದರು.







