ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ್ದ ಸುದರ್ಶನ್-ಶೈಲಶ್ರೀ ಜೋಡಿ… ಇದು ನಟಿ ಶೈಲಶ್ರೀ ಕಥೆ!

ಅಮಿತಾಬ್‍ಬಚ್ಚನ್ ಜಯಾಬಾಧುರಿ ತಾರಾಜೋಡಿಗಿಂತ ಮೊದಲೇ ಲಂಬೂ-ಕುಳ್ಳಿ ಸೀನಿಯಾರಿಟಿಯಲ್ಲಿ ಅಗ್ರಸ್ಥಾನ ಗಳಿಸಿ ಯಶಸ್ವಿ ತಾರಾಜೋಡಿ ಎನಿಸಿದ್ದವರು ಆರ್.ಎನ್. ಸುದರ್ಶನ್-ಶೈಲಶ್ರೀ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.. ಚಂದನವನದಲ್ಲಿ ಮಿಂಚಿದ ಹಿರಿಯ ನಟಿಯರಲ್ಲಿ ಒಬ್ಬರಾದ ಶೈಲಶ್ರೀ ಅವರ ಬದುಕು ನಟನೆ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ..
ಬಾಲಿವುಡ್‍ನ ಬಚ್ಚನ್-ಬಾಧುರಿ ಜೋಡಿಯು ಜನಪ್ರಿಯತೆಯಲ್ಲಿ ಸೈ ಎನಿಸಿಕೊಂಡರೆ ಸ್ಯಾಂಡಲ್ ವುಡ್ ನ ಶೈಲಶ್ರೀ-ಸುದರ್ಶನ್ ಜೋಡಿಯು ಆದರ್ಶ ದಂಪತಿಯಾಗಿ ಸೈ ಎನಿಸಿಕೊಂಡಿದ್ದು ಇತಿಹಾಸ. ಮೂಲತಃ ತಮಿಳುನಾಡಿನವರಾದ ಇವರ ತಂದೆ ಸಂಗೀತ ವಿದ್ವಾನ್ ಎಂ.ಡಿ. ಭಾಗವತರ್ ಮತ್ತು ತಾಯಿ ಅಣ್ಣಾಮಲೈ ವಿಶ್ವವಿದ್ಯಾಲಯದ ಸಂಗೀತ ವಿದೂಷಿ ವೀಣಾ ಜ್ನಾನಾಂಬಾಳ್.

ಈ ದಂಪತಿಗೆ ಇಬ್ಬರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು. ಒಟ್ಟು ಐವರ ಕುಟುಂಬದಲ್ಲಿ ಒಬ್ಬರಾಗಿ ಶೈಲಾ ಅಂಬಾಳ್ ಉರುಫ್ ಶೈಲಶ್ರೀ 14.1.1946ರಂದು ಅಂದಿನ ಮದ್ರಾಸ್ ನಗರದಲ್ಲಿ ಜನಿಸಿದರು. ಪೋಷಕರ ಆಸೆಯಂತೆ ಅತ್ತ ಕಲೆಕ್ಟರೂ ಆಗಲಿಲ್ಲ, ಇತ್ತ ಸಂಗೀತ ವಿದೂಷಿಯೂ ಆಗಲಿಲ್ಲ. ಬದಲಿಗೆ ತುಂಬಾ ತುಂಟಿಯಾಗಿ ನಾಟ್ಯ ಮತ್ತು ಅಭಿನಯ ಕಲೆಯನ್ನು ಕರಗತ ಮಾಡಿಕೊಂಡರು. ತಮ್ಮಿಷ್ಟದಂತೆ ಕೆಲಕಾಲ ಪೈಲೆಟ್ ಹುದ್ದೆ ಅಲಂಕರಿಸಿದ್ದರು.
ಒಮ್ಮೆ ಕಲಾಮಂದಿರದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಶೈಲಶ್ರೀ ಪ್ರತಿಭೆಯನ್ನು ಗುರುತಿಸಿದ ನಟ-ನಿರ್ಮಾಪಕ ಭಾಸ್ಕರನ್ ನಾಯರ್, ಕಾಲಕ್ರಮೇಣ ನಾಯಕನಟ ಸತ್ಯನ್‍ಮಾಸ್ಟರ್ ಶಿಫಾರಸ್ಸಿನಿಂದ ಮಲಯಾಳಂ ಚಿತ್ರರಂಗಕ್ಕೆ ಪರಿಚಯಿಸಿದರು. 1964ರಲ್ಲಿ ತೆರೆಕಂಡ ಸಾವಿತ್ರಿ ಪಿಕ್ಚರ್ಸ್ ನಿರ್ಮಾಣದಲ್ಲಿ “ಗಾಳಿಗೋಪುರ” ಕನ್ನಡ ಚಿತ್ರದ ರೀಮೇಕ್ ಪುಟ್ಟಣ್ಣಕಣಗಾಲ್ ನಿರ್ದೇಶನದಲ್ಲಿ “ಕಳಂಜುಕಿಟ್ಟಿಯತಂಗಂ” ಮಲಯಾಳಂ ಫಿಲಂ ಮೂಲಕ ಪೂರ್ಣ ಪ್ರಮಾಣದಲ್ಲಿ ಸಿನಿಲೋಕ ಪ್ರವೇಶಿಸಿದರು.

1966ರಲ್ಲಿ ಬಿಡುಗಡೆಯಾದ ಡಾ.ರಾಜ್‍ಕುಮಾರ್, ಭಾರತಿ ನಟಿಸಿದ ಅ.ನ.ಕೃ.ಕಾದಂಬರಿ ಆಧಾರಿತ ಸಂಗೀತಪ್ರಧಾನ ಚಿತ್ರ “ಸಂಧ್ಯಾರಾಗ” ಇವರ ಪ್ರಪ್ರಥಮ ಕನ್ನಡ ಚಿತ್ರ. 1967ರಲ್ಲಿ ತೆರೆಕಂಡು ಚಂದನವನದಲ್ಲಿ ಪ್ರಚಂಡ ಸಂಚಲನ ಉಂಟು ಮಾಡಿದ “ಬಂಗಾರದ ಹೂವು” ಚಿತ್ರದಲ್ಲಿ ರಾಜ್‍ಕುಮಾರ್, ಕಲ್ಪನಾ ಜತೆ ಸರಿಸಮಾನ ಪಾತ್ರವನ್ನು ಅಮೋಘವಾಗಿ ಅಭಿನಯಿಸಿ ಕನ್ನಡನಾಡಿನ ಮನೆಮಗಳಾದರು.
ಇಲ್ಲಿಂದ ಹಿಂದಿರುಗಿ ನೋಡದೇ ಸತತ 35 ವರ್ಷಕಾಲ ಬಿಡುವಿಲ್ಲದಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳ ಒಟ್ಟಾರೆ 100ಕ್ಕೂಹೆಚ್ಚು ಚಿತ್ರಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ನೂತನ ದಾಖಲೆ ನಿರ್ಮಿಸಿದರು. ಸ್ವಯಂ ಶೈಲಶ್ರೀ ಅದೆಷ್ಟೋ ಬಾರಿ ಹೇಳಿರುವಂತೆ ಇವರ ಅಚ್ಚುಮೆಚ್ಚಿನ ಭಾಷೆ-ಕನ್ನಡ.. ಕನ್ನಡ- ಕನ್ನಡಿಗರು. ಈ ಕಾರಣಕ್ಕೆ ಇವರು ಕನ್ನಡ ಚಿತ್ರರಂಗದ ಧೀಮಂತ ನಟ ನಿರ್ಮಾಪಕ ನಿರ್ದೇಶಕ, ಚಂದನವನ ಪಿತಾಮಹ ಆರ್. ನಾಗೇಂದ್ರರಾಯರ ಕಿರಿಯಪುತ್ರ ಆರ್.ಎನ್.ಸುದರ್ಶನ್‍ರನ್ನು ಮೆಚ್ಚಿ ಮದುವೆಯಾದರು. ಕುಟುಂಬದವರ ವಿರೋಧವಿದ್ದರೂ ತಾವು ಪ್ರೀತಿಸಿದ ಕನ್ನಡ ಕುವರನನ್ನೇ ಬಾಳಸಂಗಾತಿಯಾಗಿ ಪಡೆದರು.

ಅತ್ಯಂತ ಮನೋಜ್ಞಅಭಿನಯ ನೀಡಿದ್ದ ಲಕ್ಷಾಧೀಶ್ವರ, ಬಂಗಾರದ ಪಂಜರ, ನಮ್ಮಊರು, ಜಾಣರಜಾಣ, ಬಾಗೀರಥಿ, ಅರಿಶಿನಕುಂಕುಮ, ಮನಸ್ಸಾಕ್ಷಿ, ಮಾತೃಭೂಮಿ, ಮನಸ್ಸಿದ್ದರೆ ಮಾರ್ಗ, ಮುಂತಾದ ಚಿತ್ರಗಳು ಸೇರಿದಂತೆ ಒಟ್ಟು 56 ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ಅಭಿನಯಿಸಿರುವ ಶೈಲಶ್ರೀ 1965 ರಿಂದ 1995 ವರೆಗೆ ಚಾಲ್ತಿಯಲ್ಲಿದ್ದ ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ರಾಜಾಶಂಕರ್, ರಮೇಶ್, ರಾಜೇಶ್, ಸುದರ್ಶನ್, ಶಿವಾಜಿಗಣೇಶನ್, ಮುಂತಾದ ದಕ್ಷಿಣ ಭಾರತದ ಬಹುತೇಕ ಎಲ್ಲಾ ಹೀರೋಗಳ ಜತೆ ನಟಿಸಿದರು. ಇವರ ಕಟ್ಟಕಡೆಯ ಚಿತ್ರ 2014ರಲ್ಲಿ ತೆರೆಕಂಡ“ವಿಶ್ವವಿನಾಯಕ”
ಪತಿ ಸುದರ್ಶನರೊಡನೆ ಸೇರಿ ಸಹನಿರ್ಮಾಪಕಿಯಾಗಿ ಕ್ಯಾನ್ಸರ್ ರೋಗ ಹಿನ್ನೆಲೆಯುಳ್ಳ ಭಾರತದ ಮೊಟ್ಟಮೊದಲ ಚಿತ್ರ “ನಗುವಹೂವು” ತೆರೆಗಿತ್ತರು. ಸುದರ್ಶನ್ ಹೀರೋ ಮತ್ತು ಶೈಲಶ್ರೀ ಹೀರೋಯಿನ್ ಪಾತ್ರದಲ್ಲಿ ನಟಿಸಿದ್ದ ಈ ಕನ್ನಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿತು. ಬೇರೆ ಬೇರೆ ಭಾಷೆ ಚಿತ್ರದ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಪಡೆದಿರುವ ಇವರಿಗೆ 2019ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. 2022ರಲ್ಲಿ ಜನಪ್ರಿಯ ಟಿ.ವಿ.ಸೀರಿಯಲ್ “ಜನನಿ” ಮತ್ತು “ಪಂಚ್‍ಕಜ್ಜಾಯ” ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಕಲಾವಿದೆಯಾಗೂ ನಾಡಿನಾದ್ಯಂತ ಮನೆಮಾತಾದರು

8ನೇ ಸೆಪ್ಟೆಂಬರ್ 2017ರಂದು ಇವರ ಪತಿಯಾದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ, ಹಿನ್ನೆಲೆಗಾಯಕ ಆರ್.ಎನ್. ಸುದರ್ಶನ್ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು. ಪತಿಯ ಕಾಲಾನಂತರ ಒಂದು ಕಾಲಕ್ಕೆ ಪೈಲಟ್ ಆಗಿ, ನಂತರ ಶ್ರೀಮಂತ ನಟಿಯಾಗಿ ಮೆರೆದ ಶೈಲಶ್ರೀ ತಮಲ್ಲಿದ್ದ ಎಲ್ಲ ಚರಸ್ಥಿರ ಆಸ್ತಿಯನ್ನು ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಪ್ರಸ್ತುತ, ಈ ಹಿರಿಯ ಕಲಾವಿದೆ ಬೆಂಗಳೂರಿನ ವೃದ್ಧಾಶ್ರಮ ಒಂದರಲ್ಲಿ ತಮ್ಮ ಅಂತಿಮ ಹಂತದ ಜೀವನವನ್ನು ದುರಂತ ಸ್ಥಿತಿಯಲ್ಲಿ ಸಾಗಿಸುತ್ತಿದ್ದಾರೆ.
ಇವರಿಗೆ ಕೀರ್ತಿ ತಂದ ಪ್ರಮುಖ ಚಿತ್ರಗಳು.. ಸಂಧ್ಯಾರಾಗ, ಬಂಗಾರದಹೂವು, ಮನಸ್ಸಿದ್ದರೆ ಮಾರ್ಗ, ನಕ್ಕರೆ ಅದೇ ಸ್ವರ್ಗ, ಜಾಣರಜಾಣ, ದೇವರ ಗೆದ್ದ ಮಾನವ, ಜೇಡರಬಲೆ, ಬೇಡಿ ಬಂದವಳು, ಧೂಮಕೇತು, ಮನಸ್ಸಾಕ್ಷಿ, ಮೈಸೂರು ಟಾಂಗ, ಮಂಕುದಿಣ್ಣೆ, ಲಕ್ಷಾಧೀಶ್ವರ, ನಮ್ಮಊರು, ಬ್ರೋಕರ್ ಭೀಷ್ಮಾಚಾರಿ, ಮಕ್ಕಳೇ ಮನೆಗೆ ಮಾಣಿಕ್ಯ, ಕಾಡಿನ ರಹಸ್ಯ, ಕಾಣಿಕೆ, ಮಾತೃಭೂಮಿ, ಹೂಬಿಸಿಲು, ಸುವರ್ಣಭೂಮಿ, ಭಾಗೀರಥಿ, ಕಳ್ಳರಕಳ್ಳ, ವಾಗ್ಧಾನ, ಅರಿಶಿನಕುಂಕುಮ

ನಗುವಹೂವು, ಮಾಲತಿಮಾಧವ, ಬಾಳಪಂಜರ, ಕಾಣದಕೈ, ಕೌಬಾಯ್ ಕುಳ್ಳ, ಭಾರತದರತ್ನ, ಹೇಮರೆಡ್ಡಿಮಲ್ಲಮ್ಮ, ಬಂಗಾರದಪಂಜರ, ಮಗಮೊಮ್ಮಗ, ಮಾಯಾಮನುಷ್ಯ, ಮುಗಿಯದಕತೆ, ವಂಶಜ್ಯೋತಿ, ಸಾಕಿದಸರ್ಪ, ಜಾಗೃತಿ ತಾಯಿಯ ಮಡಿಲಲ್ಲಿ, ಮರೆಯದ ಹಾಡು, ನಂಬರ್ ಐದು ಎಕ್ಕಾ, ಅವಳ ಅಂತರಂಗ, ಕರ್ತವ್ಯ, ಬಿಂಬ, ಮಿಠಾಯಿಮನೆ, ಗುರು, ಶಿವಭಕ್ತಮಾರ್ಕಂಡೇಯ, ಮುಖಾಮುಖಿ, ಸೂಪರ್, ಹುಚ್ಚವೆಂಕಟ್, ವಿಶ್ವವಿನಾಯಕ (ಕಟ್ಟಕಡೆಯ ಚಿತ್ರ).

ಹೆಚ್ಚಿನ ಸಿನಿಮಾ ಸ್ಟೋರಿ, ಸುದ್ದಿಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.. ಓದಿ…







