Latest

ವಿದ್ಯಾರ್ಥಿಗಳು ಓದುವ, ಬರೆಯುವ ಸಂಸ್ಕೃತಿ  ‌ಮೈಗೂಡಿಸಿಕೊಳ್ಳಬೇಕು: ಮಹಾದೇವ ಶಂಕನಪುರ

ನಾ  ಮೆಚ್ಚಿದ ಪುಸ್ತಕ, ಓದು ಮತ್ತು ಅವಲೋಕನ.. ವಿಶೇಷ ಉಪನ್ಯಾಸ

ಕುಶಾಲನಗರ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾಹಿತಿಗಾಗಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಅವಲಂಬಿಸುತ್ತಿರುವ ಇಂದಿನ ವಿದ್ಯಾರ್ಥಿಗಳು ಓದುವ ಬರೆಯುವ ಸಂಸ್ಕೃತಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಮೈಸೂರು ವಿವಿದ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಮಹಾದೇವ ಶಂಕನಪುರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಸರ್ಕಾರಿ ಪ್ರಧಮ ದರ್ಜೆ ಕಾಲೇಜು, ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ನಾ ಮೆಚ್ಚಿದ ಪುಸ್ತಕ, ಓದು ಮತ್ತು ಅವಲೋಕನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಓದುವ, ಬರೆಯುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು.ಯಾವುದೇ ಕಾರಣಕ್ಕೂ ನಮ್ಮ ಸಾಂಪ್ರದಾಯಿಕ ಓದುಬರಹವನ್ನು ಮುಂದುವರೆಸಿಕೊಂಡು ಹೋಗುವತ್ತ ಹೆಚ್ಚಿನ ಒತ್ತು ನೀಡಬೇಕು ಎಂದರು.

ಪುಸ್ತಕಗಳು ನಮಗೆ ಒಂದು ರೀತಿಯ ಜ್ಞಾನ ಭಂಡಾರವಿದ್ದಂತೆ.ಅಪಾರವಾದ ಜ್ಞಾನವನ್ನು ಧಾರೆ ಎರೆಯುತ್ತವೆ ಎಂದರು.ವ್ಯಕ್ತಿಯನ್ನು, ಸಮಾಜವನ್ನು ಹಾಗೂ ಅಜ್ಞಾನದಿಂದ ಜ್ಞಾನದ ಕಡೆಗೆ,ಕತ್ತಲೆಯಿಂದ ಬೆಳಕಿನಡೆಗೆ ನಮ್ಮನ್ನ ನಡೆಸುವಲ್ಲಿ ಪುಸ್ತಕಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.

ಪುಸ್ತಕಗಳನ್ನು ಓದುವುದರಿಂದ ನಮಗೆ ತುಂಬ ಪ್ರಯೋಜನ ಇದ್ದು,ಜ್ಞಾನ ವೃದ್ಧಿಗೆ ಹಾಗೂ ಜ್ಞಾನೋದಯಕ್ಕೆ ನಾವು ಪುಸ್ತಕಗಳನ್ನು ಓದಬೇಕು ಎಂದರು.ಪುಸ್ತಕಗಳು ದೇಶವಿದೇಶಗಳ ವರ್ತಮಾನಗಳನ್ನು,ಇತಿಹಾಸ, ವಿಜ್ಞಾನವನ್ನು ತಿಳಿದುಕೊಳ್ಳಲು ಹಾಗೂ ನಾವು ಹೇಗೆ ಜೀವನ ರೂಪಿಸಿಕೊಳ್ಳಬೇಕು,ಹೇಗೆ ಬದುಕನ್ನು ಕಟ್ಟಿಕೊಳ್ಳಬೇಕು,ಹೇಗೆ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು

ಏಕಾಗ್ರತೆ,ಕಲ್ಪನಾಶಕ್ತಿಯನ್ನು ವೃದ್ಧಿಸಿಕೊಳ್ಳಲು ಹಾಗೂ ಮನಸ್ಸನ್ನು ಶಾಂತಿಗೊಳಿಸಲು ಪುಸ್ತಕಗಳ ಓದು ಬಹಳ ಮುಖ್ಯವಾಗಿದೆ ಎಂದರು. ನಾಗರಿಕ ಸಮಾಜ ನಿರ್ಮಾಣಕ್ಕೆ ಪುಸ್ತಕಗಳು ಅಡಿಗಲ್ಲು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡಲು, ನ್ಯಾಯ,ನೀತಿ,ಮಾನವೀಯತೆ,ಸಮಾನತೆಯ ತತ್ವಗಳನ್ನು ಮೈಗೂಡಿಸಿಕೊಂಡು ಮಾನವರಾಗಿ ಬದುಕಲು ಪುಸ್ತಕಗಳು ಸಹಾಯವನ್ನು ಮಾಡುತ್ತವೆ.ಆದ್ದರಿಂದ ವಿದ್ಯಾರ್ಥಿಗಳು ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮೈಸೂರು ಜಿಲ್ಲಾ ಪಂಚಾಯತಿ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡಗೌಡ ಮಾತನಾಡಿ, ವಿದ್ಯಾರ್ಥಿಗಳು ನಿರಂತರವಾಗಿ ಹಾಗೂ ಕಠಿಣ ಪರಿಶ್ರಮದಿಂದ ಆಧ್ಯಯನ ನಡೆಸುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.ಇಂದಿನ‌ ಯುವ ಜನಾಂಗ ವಿಟಮಿನ್ ಡಿ ಕೊರತೆಯನ್ನು ಅನುಭವಿಸುತ್ತಿದ್ದಾರೆ.ಕಾರಣ ಏನು ಅಂದರೆ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುತ್ತಿಲ್ಲ.ಇದರಿಂದ ದೇಹಕ್ಕೆ ಯಾವುದೇ ಶ್ರಮವಿಲ್ಲದಂತೆ ಆಗಿದೆ.ಜೊತೆಗೆ ಯುವಕರು ಸೋಮಾರಿಗಳಾಗುತ್ತಿದ್ದಾರೆ ಎಂದರು.ವಿದ್ಯಾರ್ಥಿಗಳ ಓದಿನ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ತೇರ್ಗಡೆಯಾಗುವ ಮೂಲಕ ಉನ್ನತ ಸ್ಥಾನಮಾನವನ್ನು ಹೊಂದಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಪುಟ್ಟರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುಸ್ತಕ ಕುರಿತು ವಿದ್ಯಾರ್ಥಿಗಳಾದ ಸಾನಿಕ, ಎಚ್.ಪಲ್ಲವಿ,ಪಿ.ಅಂಥೋನಿ,ಬಂದಿನಿ,ನಿವೇದಿತ,ನಿತ್ಯಶ್ರೀ,ಎಸ್.ಅನನ್ಯ ಮಾತನಾಡಿದರು. ಈ ಸಂದರ್ಭ  ಐಕ್ಯೂಎಸಿ ಸಂಚಾಲಕಿ ಡಾ. ಮಧುಶ್ರೀ,ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕೆ.ಪಿ.ಕುಸುಮ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಸುನೀಲ್ ಕುಮಾರ್ ಪಾಲ್ಗೊಂಡಿದ್ದರು.

admin
the authoradmin

ನಿಮ್ಮದೊಂದು ಉತ್ತರ