LatestMysore

ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ… ವಿರೋಧ ಮಾಡುತ್ತಿರುವುದು ಏಕೆ ಗೊತ್ತಾ?

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು ಅದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಆದರೆ ಈ ಕಂಬಳಕ್ಕೆ ಎಲ್ಲ ಕಡೆಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳದೆ ತನ್ನಪಾಡಿಗೆ ಕೆಲಸಗಳನ್ನು ಮುಂದುವರೆಸಿರುವುದು ಸದ್ಯದ ಬೆಳವಣಿಗೆಯಾಗಿದೆ.

ಕಂಬಳ ಬೇಡವೇ ಬೇಡವೆಂದು ಕ್ರಿಯಾ ಸಮಿತಿಯ  ಕಾರ್ಯದರ್ಶಿ ಮೈ ನಾ  ಲೋಕೇಶ್ ಒತ್ತಾಯಿಸಿದ್ದು, ಅವರು ವಿರೋಧಿಸುವುದಕ್ಕೂ ಹಲವು ಕಾರಣಗಳನ್ನು ನೀಡಿದ್ದಾರೆ. ಅದು ಏನೆಂದರೆ ದಸರಾಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಆದರೆ ಕಂಬಳ ವೀಕ್ಷಣೆಗೆ ಕೇವಲ ಹದಿನೈದು ಸಾವಿರ ಜನರಿಗೆ ಸ್ಥಳಾವಕಾಶ ಮಾಡಿದರೆ ಹೇಗೆ? ಇದರಿಂದ ಸಮಸ್ಯೆಯಾಗುವುದಿಲ್ಲವೆ? ಎನ್ನುವುದು ಅವರ ಪ್ರಶ್ನೆಯಾಗಿದೆ.

ಸಮಾಜದ ಎಲ್ಲಾ ಸ್ತರಗಳಿಂದ, ದಸರಾ  ಸಂದರ್ಭದಲ್ಲಿ ಕಂಬಳ ಕ್ರೀಡೆ  ಆಯೋಜನೆಗೆ  ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ, ಸರ್ಕಾರ ಪ್ರತಿಷ್ಟೆಗಾಗಿ  ಕಂಬಳಕ್ಕೆ ಸಿದ್ದತೆ  ನಡೆಸುತ್ತಿರುವ ಹಠಮಾರಿ  ಧೋರಣೆಯನ್ನು ಖಂಡಿಸಿರುವ ಅವರು, ಕಂಬಳದ  ಉಸ್ತುವಾರಿ  ವಹಿಸಿರುವ ಪುತ್ತೂರು  ಶಾಸಕರಾದ  ಅಶೋಕ  ರೈ, ಕಂಬಳದ  ವೀಕ್ಷಣೆಗ  ಇಪ್ಪತ್ತೈದು  ಲಕ್ಷ  ಜನರು  ಸೇರುವ  ನಿರೀಕ್ಷೆ  ವ್ಯಕ್ತಪಡಿಸಿರುವುದರಿಂದ, ಹದಿನೈದು ಸಾವಿರ ಸ್ಥಳಾವಕಾಶದ ಮಾಡಿರುವುದರಿಂದ ಅನಾಹುತ ಸಂಭವಿಸುವ ಅಪಾಯವಿದ್ದು, ಪೋಲೀಸ್  ಇಲಾಖೆ ಕಂಬಳ ಕ್ರೀಡಾ ಆಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಕಳದ ತಿಂಗಳು ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಉದ್ಯಾನವನ ಮಸೂದೆಯನ್ನು, ಸಾರ್ವಜನಿಕರ  ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ, ಮಸೂದೆ ವಾಪಸ್ ಪಡೆಯುವ  ಸಂದರ್ಭದಲ್ಲಿ  ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ .ಶಿವಕುಮಾರ್ ರವರು  ‘ತಮ್ಮ ಸರ್ಕಾರ  ಜನರ ಭಾವನೆಗಳಿಗೆ ಬೆಲೆ  ನೀಡುವ  ಸರ್ಕಾರ’ ಎಂಬ ಸ್ವಾಗತಾರ್ಹ ಹೇಳಿಕೆ ನೀಡಿದ್ದು, ಅದರಂತೆ ಈ ಕೂಡಲೇ ಸರ್ಕಾರ, ಜನರ  ಭಾವನೆಗೆ  ಬೆಲೆ  ನೀಡಿ ಕಂಬಳವನ್ನು  ಕೈಬಿಡುವ ನಿರ್ಧಾರ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ