ನಿಶ್ಯಬ್ದದ ಆ ನಾಲ್ಕು ಗಂಟೆಗಳು…. ಧನ್ಯವಾದ ಹೇಳಲೂ ನನ್ನ ಬಳಿ ಶಬ್ದಗಳಿರಲಿಲ್ಲ.. ಆಗಿದ್ದೇನು?
ಮಾತು ಬಾರದವರ ಮೌನ ಸಾವಿರಾರು ಭಾವನೆಗಳ ಮಹಾಸಾಗರ

ಮಧ್ಯಾಹ್ನ 12-30ರವರೆಗೂ ನೂರಾರು ವಿದ್ಯಾರ್ಥಿಗಳ ಮುಂದೆ ನಿರರ್ಗಳವಾಗಿ ಮಾತನಾಡುತ್ತಿದ್ದ ನನ್ನ ಧ್ವನಿ, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಇದ್ದಕ್ಕಿದ್ದಂತೆ ನಿಗೂಢವಾಗಿ ಮಾಯವಾಗುತ್ತದೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ!

ನಾನೊಬ್ಬ ಇಂಗ್ಲಿಷ್ ಉಪನ್ಯಾಸಕಿ. ನನ್ನ ವೃತ್ತಿಯೇ ಪಾಠ ಮಾಡುವುದು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವುದು. ತರಗತಿಯಲ್ಲಿ ನಿಂತು ಪಾಠ ಮಾಡುವುದು, ಮಕ್ಕಳೊಂದಿಗೆ ಬೆರೆಯುವುದು ನನ್ನ ದಿನಚರಿಯ ಭಾಗ. ಇಂದು ಬೆಳಿಗ್ಗೆ ಕಾಲೇಜಿಗೆ ಹೊರಡುವಾಗ ನನಗೆ ವಿಪರೀತ ಶೀತವಿತ್ತು. ಗಂಟಲಿನಲ್ಲಿ ಏನೋ ಮುಳ್ಳು ಚುಚ್ಚಿದಂತಹ ಕಿರಿಕಿರಿ ಇತ್ತು. ಆದರೂ ಬೋರ್ಡ್ ಮುಂದೆ ನಿಂತಾಗ, ಪಾಠ ಮಾಡುವ ಆ ತಲ್ಲೀನತೆಯಲ್ಲಿ ನನಗೆ ಆ ನೋವಿನ ಅರಿವೇ ಆಗಲಿಲ್ಲ. ಮೊದಲ ಎರಡು ತರಗತಿಗಳನ್ನು ಎಂದಿನಂತೆಯೇ ಉತ್ಸಾಹದಿಂದ ಮುಗಿಸಿದೆ.
ಆದರೆ, ಪಾಠ ಮುಗಿಸಿ ಸ್ಟಾಫ್ ರೂಮಿಗೆ ಬಂದ ಆ ಕ್ಷಣ, ನನಗೊಂದು ದೊಡ್ಡ ಆಘಾತ ಕಾದಿತ್ತು. ನನ್ನ ಗಂಟಲಿನಿಂದ ಒಂದೇ ಒಂದು ಶಬ್ದವೂ ಹೊರಬರುತ್ತಿರಲಿಲ್ಲ! ಗಂಟಲು ಸೋಂಕು ತೀವ್ರವಾಗಿ, ನನ್ನ ಧ್ವನಿಯೇ ಸಂಪೂರ್ಣ ನಿಂತುಹೋಗಿತ್ತು. ಬತ್ತಿಹೋದ ನದಿಯಂತೆ ನನ್ನ ಗಂಟಲು ಸ್ತಬ್ಧವಾಗಿತ್ತು. ಒಂದು ಕ್ಷಣ ನನಗೆ ಇದೊಂದು ಕನಸೋ ಅಥವಾ ಯಾರೋ ಮಾಡಿದ ಮಾಯಾಜಾಲವೋ ಎನಿಸಿತು. ಪದಗಳನ್ನೇ ನಂಬಿ ಬದುಕುತ್ತಿದ್ದ ನಾನು, ಈಗ ಅಕ್ಷರಶಃ ಮೌನದ ಬಂಧಿಯಾಗಿದ್ದೆ.

ಮಧ್ಯಾಹ್ನ ಊಟದ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ನನ್ನ ಸಂಕಟವನ್ನು ಹೇಳಿಕೊಳ್ಳಲು ನನ್ನ ಬಳಿ ಪದಗಳೇ ಇರಲಿಲ್ಲ. ರೆಕ್ಕೆ ಕತ್ತರಿಸಿದ ಹಕ್ಕಿಯಂತಾಗಿತ್ತು ನನ್ನ ಸ್ಥಿತಿ. ಕೇವಲ ‘ಕೈ ಸನ್ನೆ’ಗಳ ಮೂಲಕವೇ ನನ್ನ ಅಸಹಾಯಕತೆಯನ್ನು ಅವರಿಗೆ ತೋರಿಸಬೇಕಾಯಿತು. ನನ್ನ ಸ್ಥಿತಿಯನ್ನು ಕಂಡ ಸಹೋದ್ಯೋಗಿಗಳು ತುಂಬಾ ಕಾಳಜಿಯಿಂದ ಧ್ವನಿ ಸರಿಹೋಗಲು ಒಂದಿಷ್ಟು ಮನೆಮದ್ದುಗಳನ್ನು ಮಾಡಿಕೊಳ್ಳುವಂತೆ ಒತ್ತಾಯಿಸಿದರು. “ಬಿಸಿ ನೀರಿಗೆ ಉಪ್ಪು ಹಾಕಿ ಗಾರ್ಗಲ್ ಮಾಡು, ಗಂಟಲಿನ ಊತ ಕಡಿಮೆಯಾಗುತ್ತದೆ” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು “ಕಾಳುಮೆಣಸಿನ ಪುಡಿಗೆ ಜೇನುತುಪ್ಪ ಬೆರೆಸಿ ನೆಕ್ಕು, ಬೇಗ ದನಿ ಬರುತ್ತದೆ” ಎಂದು ಸಲಹೆ ನೀಡಿದರು.
ಇನ್ನೊಬ್ಬರು “ರಾತ್ರಿ ಮಲಗುವಾಗ ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಹಾಕಿ ಕುಡಿಯುವುದನ್ನು ಮರೆಯಬೇಡ” ಎಂದು ಪ್ರೀತಿಯಿಂದ ತಾಕೀತು ಮಾಡಿದರು. ಅವರ ಆ ಕಾಳಜಿ ಕಂಡು ಮನಸ್ಸು ತುಂಬಿಬಂದರೂ, ಧನ್ಯವಾದ ಹೇಳಲೂ ನನ್ನ ಬಳಿ ಶಬ್ದಗಳಿರಲಿಲ್ಲ. ಸಂಜೆ ಕಾಲೇಜು ಮುಗಿದ ನಂತರ, ನನ್ನ ನಿತ್ಯದ ಅಭ್ಯಾಸದಂತೆ ಜಿಲ್ಲಾ ಗ್ರಂಥಾಲಯಕ್ಕೆ ಹೋದೆ. ಅಲ್ಲಿನ ಪುಸ್ತಕಗಳ ಮೌನದ ನಡುವೆ ನನ್ನ ಮೌನವೂ ಸೇರಿಕೊಂಡಿತ್ತು. ಗ್ರಂಥಪಾಲಕರೊಂದಿಗೆ ಮಾತನಾಡಲೂ ನನ್ನ ಬಳಿ ಧ್ವನಿ ಇರಲಿಲ್ಲ. ಬ್ಯಾಗಿನಲ್ಲಿದ್ದ ಪುಟ್ಟ ನೋಟ್ಪ್ಯಾಡ್ ತೆಗೆದು, ನನಗೆ ಬೇಕಾದ ಪುಸ್ತಕದ ಹೆಸರನ್ನು ಬರೆದು ತೋರಿಸಿದೆ. ಅಂದು ಆ ಬಿಳಿ ಹಾಳೆಯ ಮೇಲಿನ ಅಕ್ಷರಗಳೇ ನನ್ನ ಮೂಕ ವೇದನೆಯನ್ನು ಹೇಳುತ್ತಿದ್ದವು.

ಆ ಕ್ಷಣದಲ್ಲಿ ನನ್ನ ಎದೆಯಾಳದಲ್ಲಿ ಬೆಟ್ಟದಷ್ಟು ನೋವು ಮಡುಗಟ್ಟಿತು. “ನಾಲಿಗೆಯಿದ್ದವನು ನಾಡು ಗೆದ್ದ” ಎನ್ನುತ್ತಾರೆ, ಆದರೆ ನಾಲಿಗೆ ಇದ್ದರೂ ಮಾತು ಬಾರದವರ ಪಾಡೇನು? ಹುಟ್ಟಿನಿಂದಲೋ ಅಥವಾ ಬದುಕಿನ ಯಾವುದೋ ತಿರುವಿನಲ್ಲೋ ಮಾತು ಕಳೆದುಕೊಂಡ (ಮೂಕ) ಜೀವಗಳು ಈ ಜಗತ್ತನ್ನು ಹೇಗೆ ಎದುರಿಸುತ್ತಿರಬಹುದು? ಕೇವಲ ಮೂರ್ನಾಲ್ಕು ಗಂಟೆಗಳ ಕಾಲ ಧ್ವನಿ ಕಳೆದುಕೊಂಡ ನನಗೇ ಉಸಿರುಗಟ್ಟಿದಂತಾಗುತ್ತಿದೆ ಎಂದರೆ, ಜೀವನಪೂರ್ತಿ ಮೌನದ ಕತ್ತಲ ಕೋಣೆಯಲ್ಲಿ ಬಂಧಿಯಾಗಿರುವವರ ಸಂಕಟ ಎಷ್ಟಿರಬಹುದು?
ಅವರ ಮನಸ್ಸಿನಲ್ಲೂ ಸಾವಿರಾರು ಕನಸುಗಳಿರುತ್ತವೆ, ಆದರೆ ಅವುಗಳಿಗೆ ಹಾರಲು ರೆಕ್ಕೆಗಳಿರುವುದಿಲ್ಲ. ಎದೆಯೊಳಗೆ ಭಾವನೆಗಳ ಜ್ವಾಲಾಮುಖಿಯೇ ಕುದಿಯುತ್ತಿದ್ದರೂ, ಅದನ್ನು ಹೊರಹಾಕಲು ಪದಗಳ ದಾರಿಯೇ ಇರುವುದಿಲ್ಲ. “ಹೃದಯ ತುಂಬಿದರೂ ತುಟಿ ಬಿಚ್ಚದ ಮೂಕನಂತೆ” ಎಂಬ ಮಾತಿನಂತೆ, ಇವರದು ತುಂಬಿ ತುಳುಕುವ ಭಾವನೆಗಳ ಕೊಡವಾದರೂ, ಅದನ್ನು ಹೇಳಿಕೊಳ್ಳಲು ದನಿಯೇ ಇಲ್ಲದ ಅಸಹಾಯಕ ಸ್ಥಿತಿ. ಯಾರಾದರೂ ನೋಯಿಸಿದಾಗ ಪ್ರತಿಭಟಿಸಲಾಗದೆ, ಪ್ರೀತಿ ಉಕ್ಕಿದಾಗ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳಲಾಗದೆ, ದುಃಖವಾದಾಗ ಜೋರಾಗಿ ಅಳಲೂ ಆಗದೆ ಗಂಟಲಲ್ಲೇ ಬಿಕ್ಕಳಿಸುವ ಆ ಜೀವಗಳ ವೇದನೆ ಅದೆಷ್ಟು ಘೋರ!

ಮಳೆಬಿಲ್ಲನ್ನು ನೋಡಿ ಸಂಭ್ರಮಿಸಲು ಮನಸ್ಸಿದ್ದರೂ, ಆ ಖುಷಿಯನ್ನು ಹಂಚಿಕೊಳ್ಳಲು ಪದಗಳಿಲ್ಲದೆ ಒಳಗೊಳಗೇ ನಗುವ ಮುಗ್ಧ ಜೀವಗಳವು. ಕಣ್ಣುಗಳೇ ಅವರ ಭಾಷೆ, ಕೈ ಸನ್ನೆಗಳೇ ಅವರ ಲಿಪಿ. ಬೆಳದಿಂಗಳಿಲ್ಲದ ಅಮಾವಾಸ್ಯೆಯ ರಾತ್ರಿಯಂತೆ, ಶಬ್ದಗಳೇ ಇಲ್ಲದ ಅವರ ಬದುಕಿನ ಪಯಣ ಎಷ್ಟು ಕಠಿಣವಲ್ಲವೇ? ಗಾಜಿನ ಪಂಜರದೊಳಗೆ ಬಂಧಿಯಾದ ಹಕ್ಕಿಯಂತೆ, ಹೊರಗಿನ ಜಗತ್ತನ್ನು ನೋಡುತ್ತಾ, ಎಲ್ಲವನ್ನೂ ಅನುಭವಿಸುತ್ತಾ, ಆದರೆ ಏನನ್ನೂ ಹೇಳಲಾಗದೆ ತಳಮಳಿಸುವ ಅವರ ಕಣ್ಣುಗಳಲ್ಲಿರುವ ಆ ನೋವನ್ನು ಓದುವ ವ್ಯವಧಾನ ಮತ್ತು ಹೃದಯವಂತಿಕೆ ಈ ಓಡುವ ಜಗತ್ತಿಗೆಲ್ಲಿದೆ?
ಈ ಯೋಚನೆಗಳ ಸುಳಿಯಲ್ಲಿ ನಾನು ಮುಳುಗಿದ್ದಾಗಲೇ ನನ್ನ ಫೋನ್ ರಿಂಗಣಿಸಿತು. ಸಹೋದ್ಯೋಗಿಯೊಬ್ಬರು ನನ್ನ ಆರೋಗ್ಯ ವಿಚಾರಿಸಲು ಕರೆ ಮಾಡಿದ್ದರು. ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕೆಂಬ ತೀವ್ರ ಆಸೆಯಿದ್ದರೂ, ಗಂಟಲಿನಿಂದ ಶಬ್ದವೇ ಹೊರಡದ ಕಾರಣ ನನ್ನಿಂದ ಮಾತನಾಡಲು ಸಾಧ್ಯವಾಗಲಿಲ್ಲ. ಅಸಹಾಯಕಳಾಗಿ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿ ನನ್ನ ಸ್ಥಿತಿಯನ್ನು ತಿಳಿಸಿದೆ.
ಅದಾದ ಕೆಲವೇ ಕ್ಷಣಗಳಲ್ಲಿ ನನ್ನ ಅವ್ವ ಕರೆ ಮಾಡಿದರು. ಅವ್ವನ ಧ್ವನಿಯಲ್ಲಿ ಎಲ್ಲಿಲ್ಲದ ಸಂತಸವಿತ್ತು. ತನ್ನ ದಿನದ ಸಿಹಿ ಸುದ್ದಿಯನ್ನು ನನ್ನೊಂದಿಗೆ ಹಂಚಿಕೊಳ್ಳಲು ಅವರು ಮಗುವಿನಂತೆ ಸಂಭ್ರಮದಿಂದ ಮಾತನಾಡುತ್ತಿದ್ದರು. ಆ ಕಡೆಯಿಂದ ಅವ್ವನ ನಗುವಿನ ಸದ್ದು ಕೇಳಿಸುತ್ತಿದ್ದರೆ, ಈ ಕಡೆಯಿಂದ ನನ್ನ ಕಣ್ಣಂಚು ತೇವವಾಗಿತ್ತು. ಅವ್ವನ ಖುಷಿಗೆ ದನಿಯಾಗಲು, “ಅವ್ವಾ ನನಗೂ ತುಂಬಾ ಖುಷಿಯಾಯಿತು” ಎಂದು ಹೇಳಲು ನನ್ನ ಗಂಟಲು ಸಹಕರಿಸಲಿಲ್ಲ. ಕೇವಲ ಮೌನದಲ್ಲೇ ಅವ್ವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಒಳಗೊಳಗೇ ಕರಗಿಹೋದೆ.

ಇಂದಿನ ಈ ನಾಲ್ಕು ಗಂಟೆಗಳ ಅನುಭವ ನನಗೆ ಬದುಕಿನ ದೊಡ್ಡ ಸತ್ಯವೊಂದನ್ನು ಕಲಿಸಿದೆ. ನಮಗೆ ದೇವರು ಕೊಟ್ಟಿರುವ ‘ಮಾತು’ ಎಂತಹ ಅಮೂಲ್ಯ ವರ ಎಂಬುದು ಅದು ಇಲ್ಲದಿದ್ದಾಗಲೇ ತಿಳಿಯುವುದು. ಮಾತು ಬಾರದವರ ಮೌನವು ಕೇವಲ ಶಬ್ದದ ಕೊರತೆಯಲ್ಲ, ಅದು ಹೇಳಲಾಗದ ಸಾವಿರಾರು ಭಾವನೆಗಳ ಮಹಾಸಾಗರ.
ಈ ಬರಹವನ್ನು ಓದುತ್ತಿರುವ ನೀವೂ ಒಮ್ಮೆ ಯೋಚಿಸಿ… ನಮ್ಮ ಸುತ್ತಮುತ್ತಲಿರುವ ಮಾತು ಬಾರದ ಜೀವಗಳ ಕಣ್ಣುಗಳಲ್ಲಿರುವ ಮೌನ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹೃದಯವಂತಿಕೆ ನಮ್ಮಲ್ಲಿದೆಯೇ?
ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಜನಮನಕನ್ನಡದಲ್ಲಿ ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..








