ಸಮಾಜಕ್ಕೆ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕೊಡುಗೆ ಅಪಾರ: ಡಾ ಡಿ ತಿಮ್ಮಯ್ಯ

ಸರಗೂರು(ಆರ್ ಆರ್): ಶಿಕ್ಷಣ ಮತ್ತು ಸಮಾಜ ಸೇವೆಗೆ ಶಿವರಾತ್ರಿ ರಾಜೇಂದ್ರಶ್ರೀಗಳ ಕೊಡುಗೆ ಸ್ಮರಣೀಯ ಎಂದು ವಿಧಾನಪರಿಷತ್ ಸದಸ್ಯ ಡಾ ಡಿ ತಿಮ್ಮಯ್ಯ ಹೇಳಿದರು.
ತಾಲೂಕಿನ ಬಿಡಗಲು ಗ್ರಾಮದ ಪಡುವಲು ಶ್ರೀ ವಿರಕ್ತ ಮಠದಲ್ಲಿ ಶನಿವಾರ ನಡೆದ ಪೌರ್ಣಮಿ ಪೂಜೆ ಹಾಗೂ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜೀವನ ಸಾಧನೆ’ ವಿಷಯ ಕುರಿತು ಮಾತನಾಡಿದರು.
ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜೀವನ ಮತ್ತು ಸಾಧನೆ ಸಮಾಜಕ್ಕೆ ದಾರಿದೀಪವಾಗಿದ್ದು, ಶಿಕ್ಷಣ ಹಾಗೂ ಸಮಾಜ ಸೇವೆಯ ಮೂಲಕ ಜನರ ಬದುಕಿನಲ್ಲಿ ಪರಿವರ್ತನೆ ತರಲು ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ತಿಳಿಸಿದರು

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸುತ್ತೂರು ಮಠವನ್ನು ಧಾರ್ಮಿಕ ಕೇಂದ್ರದ ಜೊತೆಗೆ ಶಿಕ್ಷಣ ಮತ್ತು ಸಮಾಜ ಸೇವೆಯ ಪ್ರಮುಖ ಕೇಂದ್ರವಾಗಿ ಬೆಳೆಸಲು ಶ್ರಮಿಸಿದರು. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಆಶಯದೊಂದಿಗೆ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ನೀಡಿದರು. ಬಡವರು ಮತ್ತು ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯ ಪರಂಪರೆಯನ್ನು ಬಲಪಡಿಸಿದರು ಎಂದು ಹೇಳಿದರು.
ಪಾರಮಾರ್ಥಿಕ ಗವಿಮಠ, ಚಿದರವಳ್ಳಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ತತ್ವಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ. ‘ಕಾಯಕವೇ ಕೈಲಾಸ’ ಎಂಬ ಸಂದೇಶದ ಮೂಲಕ ಪ್ರಾಮಾಣಿಕ ದುಡಿಮೆಗೆ ಗೌರವ ನೀಡಬೇಕು ಹಾಗೂ ದುಡಿಮೆಯ ಫಲವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂಬ ಆಶಯವನ್ನು ಸಾರಿದರು.
ಜಾತಿ, ವರ್ಗ ಹಾಗೂ ಲಿಂಗಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಬಸವಣ್ಣನವರ ಚಿಂತನೆ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಗೆ ದಾರಿ ತೋರಿಸಿದೆ. ವಚನಗಳ ಮೂಲಕ ಸರಳ ಕನ್ನಡದಲ್ಲಿ ಜನರಿಗೆ ಸಾಮಾಜಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ತಲುಪಿಸಿದ ಬಸವಣ್ಣನವರ ವಿಚಾರಧಾರೆ ಇಂದಿನ ಪೀಳಿಗೆಗೂ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶಿಕ್ಷಣ ಹಾಗೂ ಸಮಾಜ ಸೇವೆಯ ಕಾರ್ಯಗಳನ್ನು ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳೊಂದಿಗೆ ಸ್ಮರಿಸುವುದು ಅರ್ಥಪೂರ್ಣವಾಗಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಸೇವೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿ ಪಡುವಲು ಶ್ರೀ ವಿರಕ್ತ ಮಠ, ಬಿಡಗಲು. ಶ್ರೀ ಮಹದೇವಸ್ವಾಮಿಗಳು ಆರ್ಶೀವಾದ ನೀಡಿದರು. ಕಾಳ ಒಡೆಯ ಗುರುಗಳ ಮಹಾವಿದ್ಯಾಪಿಠದ ಎಸ್ ಕೆ ಜಿ ಗುರುಕುಲ ಶಾಲಾ ಮಕ್ಕಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಅಭಿನಂದಿಸಿದರು.ವಿವಿಧ ತಾಲೂಕಿನಿಂದ ಹಾಗೂ ಗ್ರಾಮಗಳಿಗೆ ಬಂದ ಭಕ್ತರಿಗೆ ದಾಸೋಹ ನಡೆಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ನಿಕಟ ಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್, ಅ.ಭಾ.ವೀ.ಲಿಂ. ಮಹಾಸಭಾ, ಮಹಿಳಾ ಘಟಕ ಅಧ್ಯಕ್ಷ ಧನ್ಯ ಸತ್ಯೇಂದ್ರಮೂರ್ತಿ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಗುರುಸ್ವಾಮಿ, ಪೂಜೆ ಮತ್ತು ದಾಸೋಹದ ಸೇವಾರ್ಥದಾರರಾದ ಅಕ್ಕಮಹದೇವಮ್ಮ ಮತ್ತು ಭುಜಂಗಪ್ಪ ಕುಟುಂಬದವರು, ಕಮಾಂಡೋ ಹೈಟೆಕ್ ನರ್ಸರಿ, ಮನುಗನಹಳ್ಳಿ, ಕೆ. ಗಿರಿಕುಮಾರ್, ಹೇಮಾ ಮತ್ತು ಶ್ರೀ ಆರ್.ಎನ್. ಬಸವರಾಜು ಕುಟುಂಬದವರು, ರಾವಣೆ, ಬೆಂಗಳೂರು ಸೇರಿದಂತೆ ಹಲವು ಭಕ್ತರು ಸೇರಿದಂತೆ ಹಲವರು ಭಾಗಿಯಾಗಿದ್ದರು.







