ಈಗಾಗಲೇ ವಿಶ್ವವಿಖ್ಯಾತ ದಸರಾ ಉದ್ಘಾಟನೆಯಾಗಿ ಸಂಭ್ರಮ ಶುರುವಾಗಿದೆ. ಇದೀಗ. “ಮೈಸೂರು ದಸರಾ” ನವರಾತ್ರಿಯ ವೈಭವ ಕಣ್ಮನ ಸೆಳೆಯುತ್ತಿದೆ. ಇಡೀ ಮೈಸೂರು ನಗರ ನವ ವಧುವಿನಂತೆ ಸಿಂಗಾರ ಗೊಂಡಿದೆ…. ಅದರೊಳಗೆ ಸಂಭ್ರಮ ಅಲೆ ಅಲೆಯಾಗಿ ತೇಲಿ ಬರುತ್ತಿದೆ..

ಮೈಸೂರಿನ ಸುತ್ತಮುತ್ತಲ ಜಿಲ್ಲೆಗಳಿಂದ, ರಾಜ್ಯ ಅಲ್ಲದೆ, ಹೊರ ರಾಜ್ಯ, ವಿದೇಶಗಳಿಂದಲೂ ಜನರುಗಳು ತಂಡೋಪತಂಡವಾಗಿ ಮೈಸೂರಿಗೆ ಆಗಮಿಸುತ್ತಾರೆ. ಪ್ರವಾಸಿಗರ ಸ್ವರ್ಗ, ರಾಜರಾಳಿದ ನಾಡು, ಮೈಸೂರಿನ ಅಧಿದೇವತೆ ಚಾಮುಂಡಿಯ ಆಶೀರ್ವಾದ, ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಮೈಸೂರು ಒಳಗಿರುವ ಪ್ರಸಿದ್ಧ ಸ್ಥಳ ಪುರಾಣಗಳು, ಮೈಸೂರಿನ ಹೆಸರಿನೊಂದಿಗಿನ ಬೆಸೆದುಕೊಂಡಿರುವ ವಿಶೇಷತೆಗಳು, ಮೈಸೂರು ಕುರಿತು ಬಂದಿರುವ ಚಲನಚಿತ್ರ ಗೀತೆಗಳು, ಭಕ್ತಿ ಗೀತೆಗಳು, ಕಥೆ,ಪುರಾಣಗಳು, ಇವುಗಳೆಲ್ಲದರ ನಡುವೆ ಕರ್ನಾಟಕದ ಮೊದಲ ರಾಜಧಾನಿ ಮತ್ತು ಈಗ ಸಾಂಸ್ಕೃತಿಕ ರಾಜಧಾನಿ ನಮ್ಮ ಮೈಸೂರು ಎನ್ನುವ ವಿಶೇಷ ಸ್ಥಳ ಎಲ್ಲವನ್ನ ಒಳಗೊಂಡಿದೆ!.

ಮೈಸೂರು ಪಿಂಚಣಿದಾರರ ಸ್ವರ್ಗ ಕೂಡ. ಮೈಸೂರಿನಲ್ಲಿ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಮನ್ನಣೆ ಇದೆ. ಜೊತೆಗೆ ಇಲ್ಲಿ ಅನೇಕ ಸಾಹಿತಿಗಳು, ಸಂಗೀತಗಾರರು ವಾಸವಾಗಿದ್ದಾರೆ. ಅಲ್ಲದೆ ಮೈಸೂರು ಹಲವು ಪ್ರಥಮಗಳಿಗೆ ನಾಂದಿಯಾಗಿದೆ. ಮುಖ್ಯವಾಗಿ ಮೈಸೂರು ದಸರಾ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ಹೊತ್ತಲ್ಲಿ ಮೈಸೂರಿನ ಸವಿ ಸವಿ ನೆನಪುಗಳ ಮೆರವಣಿಗೆ ನಿಮಗಾಗಿ…..!.
ಮೈಸೂರು ದೇಶದ “ನಂಬರ್ ಒನ್ ಸ್ವಚ್ಛ ನಗರ” ಎಂಬ ಗರಿ ಹೊಂದಿರುವ ಊರು ಕೂಡ ಆಗಿದೆ. ಮೈಸೂರಿನ ಸುತ್ತಮುತ್ತ ಅನೇಕ ಗ್ರಾಮ್ಯ ಭಾಷೆಗೆ ಹೆಸರುವಾಸಿಯಾಗಿದೆ. ನಾವು ಬೇರೆ ಜಿಲ್ಲೆಗಳಿಗೆ ಪ್ರವಾಸ ಹೋದಾಗ ನೀವು ಯಾವ ಜಿಲ್ಲೆಯವರು? ಎಂದು ಕೇಳುತ್ತಾರೆ. ಆಗ ನಾವು ಮೈಸೂರು ಜಿಲ್ಲೆಯವರು ಎಂದು ಹೇಳಿದಾಗ “ಓ ನೀವು ಮೈಸೂರಿನವರ….” ಎಂದು ಸಂಭ್ರಮ ಪಡುತ್ತಾರೆ!.

ಮೈಸೂರಿನ ಯಾವುದೇ ಸ್ಥಳವಾಗಿರಬಹುದು ಅಂದರೆ….. ಅರಮನೆ, ಕೋಟಿ-ಕೊತ್ತಲಗಳು ಅವುಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವುದೇ ಒಂದು ರೀತಿಯಲ್ಲಿ ಮುದ ನೀಡುತ್ತದೆ. “ಮೈಸೂರು” ಎಂಬ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಹೆಮ್ಮೆ ನಮಗೆ!. ಜೊತೆಗೆ ನಾವು ಮೈಸೂರಿನಲ್ಲಿ ಇರುವುದು ಕೂಡ ನಮ್ಮಗಳ ಪುಣ್ಯವೇ ಸರಿ!!.
ಮೈಸೂರು ದಸರಾ ಸಂಬಂಧಿಸಿದ ವಿಶೇಷ ಲೇಖನಗಳಿಗಾಗಿ ಓದಿ
ನನಗೆ ಇನ್ನೂ ನೆನಪಿದೆ…….. ನಾವು ಬಾಲ್ಯದಲ್ಲಿ ಕಾಳಿಹುಂಡಿಯಲ್ಲಿ ವಾಸವಾಗಿದ್ದೆವು. ನಮ್ಮ ತಂದೆ ದಿ. ವೀರಭದ್ರಯ್ಯ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಅವರು ಅನ್ಯ ಕೆಲಸದ ನಿಮಿತ್ತ ಮೈಸೂರಿಗೆ ಹೋಗುವಾಗ ನಮ್ಮನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು. ” ನಾಳೆ ಮೈಸೂರಿಗೆ ಹೋಗೋಣ”- ಎಂದಾಗ ನಾವು ಆ ರಾತ್ರಿ ನಿದ್ದೆನೇ ಮಾಡುತ್ತಿರಲಿಲ್ಲ!. ಎಷ್ಟು ಹೊತ್ತಿಗೆ ಬೆಳಕು ಮೂಡುತ್ತದೆ ಎಂದು ಕಾಯುತ್ತಾ ಕುಳಿತಿದ್ದೆವು!. ನಮ್ಮ ತಂದೆ ಏಳುವುದಕ್ಕೆ ಮುಂಚೆ ಎದ್ದು ನಾವು ರೆಡಿಯಾಗುತ್ತಿದ್ದೆವು!. ಆಗ ಬಸ್ಸುಗಳು ಕೂಡ ಕಡಿಮೆ. ನಡೆದೇ ಒಂದು ಸ್ಥಳದವರಿಗೆ ಬಂದು, ನಂತರ ಬಸ್ ಹತ್ತ ಬೇಕಾಗಿತ್ತು.

ಬಸ್ಸು ಮೈಸೂರಿನ ಪ್ರಸಿದ್ಧ ಕಡೆಗೆ ಪ್ರಯಾಣ ಮಾಡಿದಾಗ ನಮ್ಮದೆಲ್ಲ ಒಂದೇ ಯೋಚನೆ ಮೈಸೂರು ಎಷ್ಟು ಹೊತ್ತಿಗೆ ಬರುತ್ತದೆ ಎಂದು!. ಮೈಸೂರಿಗೆ ಎಂಟ್ರಿ ಕೊಟ್ಟ ತಕ್ಷಣ ನಾವು ಮೈಸೂರಿನ ಸುತ್ತಮುತ್ತಲ ಪ್ರದೇಶಗಳನ್ನು ನೋಡುತ್ತಿದ್ದೆವು. ಅದರಲ್ಲೂ ಮೈಸೂರಿನ ಸಿಟಿ ಬಸ್ ಸ್ಟ್ಯಾಂಡಿಗೆ ಬಂದ ನಂತರ ನಮಗೆ ಅರಮನೆ ದೂರದಿಂದಲೇ ಕೈಬೀಸಿ ಕರೆಯುತ್ತಿತ್ತು!.
ಅಲ್ಲಿನ ಜನಜಂಗುಳಿ….. ಬಸ್ಸುಗಳು…… ಎಲ್ಲವೂ ನಮ್ಮ ಮನಸೆಳೆಯುತ್ತಿದ್ದವು. ಮಧ್ಯಾಹ್ನ ಹೋಟೆಲ್ ನಲ್ಲಿ ತಿಂಡಿ ತಿಂದು ಅಥವಾ ಊಟ ಮಾಡಿ ನಮಗೆ ಬೇಕಾಗಿದ್ದ ಕೆಲವು ಪದಾರ್ಥಗಳನ್ನು ತೆಗೆದುಕೊಂಡು ಮೈಸೂರಿನಿಂದ ಮತ್ತೆ ನಮ್ಮ ಹಳ್ಳಿ ಕಡೆಗೆ ವಲ್ಲದ ಮನಸ್ಸಿನಿಂದ ಸಾಗುತ್ತಿದ್ದೆವು.

ಈಗ ನಮಗೆ ಹಳ್ಳಿಯಿಂದ ಮೈಸೂರಿಗೆ ಕಾಲುದಾರಿ ಎನ್ನುವಂತಾಗಿದೆ!. ಹೆಚ್ಚು ಕಡಿಮೆ ಒಂದು ಗಂಟೆಯಲ್ಲಿ ನಾವು ಹಳ್ಳಿಯಿಂದ ಮೈಸೂರಿಗೆ ಬರಬಹುದು. ಸದ್ಯಕ್ಕೆ ಮೈಸೂರಿನಲ್ಲಿ ಕಳೆದ 35ವರ್ಷಗಳಿಂದ ವಾಸವಾಗಿರುವುದರಿಂದ ಮೈಸೂರಿನೊಂದಿಗೆ ಇರುವ ಒಡನಾಟ ಬೆಟ್ಟದಷ್ಟು ಬೆಳೆದಿದೆ!. ಮೈಸೂರಿನ ಸಂಸ್ಕೃತಿ ನಮ್ಮ ಮನೆ-ಮನ ಸೆಳೆದಿದೆ. ಈ ಸಂದರ್ಭದಲ್ಲಿ ನನ್ನ ಎಲ್ಲಾ ಓದುಗರಿಗೂ ವಿಶ್ವವಿಖ್ಯಾತ- 2026ರ ಮೈಸೂರು ದಸರಾ ಉತ್ಸವಕ್ಕೆ ಆತ್ಮೀಯ ಸ್ವಾಗತ.
ಮೈಸೂರು ದಸರಾ ಸಂಬಂಧಿಸಿದ ವಿಶೇಷ ಲೇಖನ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..









