ವಿರಾಟ್ ಕೊಹ್ಲಿ, ಆಲ್ಫ್ರೆಡ್ ನೋಬೆಲ್ ಜೀವನದ ಘಟನೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ
ಕಥೆ ಕೇಳೋಣ ಬನ್ನಿ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ, ರೂಪಕುಮಾರಸ್ವಾಮಿ ಪ್ರವಚನ

ಮೈಸೂರು: ವಿರಾಟ್ ಕೊಹ್ಲಿ, ಆಲ್ಫ್ರೆಡ್ ನೋಬೆಲ್ ಜೀವನದ ಘಟನೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ನಗರದ ಕುವೆಂಪುನಗರದ ಕಲಾಸುರುಚಿ ವೇದಿಕೆಯಲ್ಲಿ ನಡೆದ ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ 959ನೇ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ವಚನ ಹಾಗೂ ಕಥೆಯ ಸಮನ್ವಯದ ಮೂಲಕ ಶರಣರ ತತ್ವ, ನೈತಿಕ ಮೌಲ್ಯಗಳು ಮತ್ತು ಬದುಕಿನ ಆದರ್ಶಗಳನ್ನು ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಿದರು. ವಚನವೊಂದನ್ನು ಆಯ್ದು, ಅದಕ್ಕೆ ಪೂರಕವಾದ ನೈಜ ಜೀವನದ ಘಟನೆ ಹಾಗೂ ವ್ಯಕ್ತಿತ್ವಗಳ ಕಥನದ ಮೂಲಕ ಶ್ರೋತೃಗಳ ಮುಂದೆ ಅರ್ಥಪೂರ್ಣ ಚಿತ್ರಣವನ್ನು ತೆರೆದಿಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ವಚನ ಕುಮಾರಸ್ವಾಮಿ ಅವರು ವಚನ ಸಾಹಿತ್ಯ ಎಂದರೇನು? ವಚನ ಸಾಹಿತ್ಯ ಹುಟ್ಟಿಕೊಂಡ ಹಿನ್ನೆಲೆ, ಅದರ ಆಶಯ, ಸಾಮಾಜಿಕ ಸಂದೇಶ ಹಾಗೂ ಮಾನವ ಬದುಕಿಗೆ ವಚನಗಳು ನೀಡುವ ಮಾರ್ಗದರ್ಶನ ಕುರಿತು ಪರಿಚಯಾತ್ಮಕವಾಗಿ ವಿವರಿಸಿದರು. ವಚನ ಸಾಹಿತ್ಯವು ಕೇವಲ ಓದಿಗೆ ಸೀಮಿತವಾಗದೆ, ವ್ಯಕ್ತಿಯ ನುಡಿ, ನಡೆ, ಚಿಂತನೆ ಮತ್ತು ಬದುಕನ್ನು ರೂಪಿಸುವ ಜೀವನ ಸಾಹಿತ್ಯವಾಗಿದೆ ಎಂದರು. ಬಸವಣ್ಣನವರ ನುಡಿದಡೆ ಮುತ್ತಿನಹಾರದಂತಿರಬೇಕು ಎಂಬ ವಚನವನ್ನು ಪ್ರಸ್ತುತಪಡಿಸಿ, ಮಾತು ಮತ್ತು ನಡೆ ಒಂದಾಗಿರಬೇಕಾದ ಮಹತ್ವವನ್ನು ವಿವರಿಸಿದರು.

ಈ ವಚನಕ್ಕೆ ಪೂರಕವಾಗಿ ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯವರು ತಮ್ಮ ತಂದೆಗೆ ನೀಡಿದ್ದ ವಾಗ್ದಾನವನ್ನು ಪಾಲಿಸಿದ ಘಟನೆಯನ್ನು ಕಥೆಯ ರೂಪದಲ್ಲಿ ವಿವರಿಸಿದರು. ತಂದೆಯ ನಿಧನದ ಸಂದರ್ಭದಲ್ಲಿ ವೈಯಕ್ತಿಕ ನೋವಿನ ನಡುವೆಯೂ ತಮ್ಮ ಬದ್ಧತೆಯನ್ನು ಉಳಿಸಿಕೊಂಡು ಕ್ರಿಕೆಟ್ ಪಂದ್ಯವನ್ನು ಆಡಿದ ಅವರ ಘಟನೆಯ ಮೂಲಕ ಮಾತಿಗೆ ಬದ್ಧರಾಗಿರುವುದು, ಕರ್ತವ್ಯಪ್ರಜ್ಞೆ ಮತ್ತು ಮನೋಸ್ಥೈರ್ಯದ ಮಹತ್ವವನ್ನು ಮನದಟ್ಟಾಗಿಸಿದರು.

ನಂತರ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ ಎಂಬ ವಚನದ ಆಶಯವನ್ನು ವಿವರಿಸಿ, ಜ್ಞಾನವು ಅಜ್ಞಾನವನ್ನು ನಿವಾರಿಸುವ ಬೆಳಕಾಗಿದೆ ಎಂಬ ಸಂದೇಶವನ್ನು ನೀಡಿ ಈ ವಚನಕ್ಕೆ ಪೂರಕವಾಗಿ ಆಲ್ಫ್ರೆಡ್ ನೋಬೆಲ್ ಅವರ ಜೀವನದ ಒಂದು ಹೃದಯಸ್ಪರ್ಶಿ ಘಟನೆಯನ್ನು ಕಥೆಯ ಮೂಲಕ ಪರಿಚಯಿಸಿದರು. ನೋಬೆಲ್ ಪ್ರಶಸ್ತಿಯ ಹಿನ್ನೆಲೆ, ಜ್ಞಾನ, ವಿಜ್ಞಾನ, ಮಾನವೀಯತೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಚಿಂತನೆಗಳ ಕುರಿತು ಕಥನದ ಮೂಲಕ ಶ್ರೋತೃಗಳಲ್ಲಿ ವಿಶೇಷ ಆಸಕ್ತಿ ಮೂಡಿಸಿದರು.

ರೂಪಾ ಕುಮಾರಸ್ವಾಮಿ ಅವರು ಶರಣರ ವಚನಗಳ ಆಶಯವನ್ನು ಕಥೆಗಳ ಮೂಲಕ ಪರಿಚಯಿಸುವ ಸಂದರ್ಭದಲ್ಲಿ ಲೇಸೆನೆಸಿಕೊಂಡು ಐದು ದಿನ ಬದುಕಿದಡೇನು ವಚನಕ್ಕೆ ಪೂರಕವಾಗಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನ ಮತ್ತು ವ್ಯಕ್ತಿತ್ವಕ್ಕೆ ಪೂರಕವಾದ ವಚನವನ್ನು ಪ್ರಸ್ತುತಪಡಿಸಿದರು. ಗಣಿತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಶ್ರೀನಿವಾಸ ರಾಮಾನುಜನ್ ಅವರ ಪ್ರತಿಭೆ, ಜ್ಞಾನಪ್ರೇಮ ಮತ್ತು ಸಾಧನೆಯ ಹಾದಿಯನ್ನು ವಚನದ ತಾತ್ವಿಕ ಸಂದೇಶದೊಂದಿಗೆ ಜೋಡಿಸಿ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಎನ್ನ ವಾಮಕ್ಷೇಮ ನಿಮ್ಮದಯ್ಯ ಎಂಬ ವಚನದ ಆಶಯವನ್ನು ಮುಂದಿಟ್ಟುಕೊಂಡು, ದ.ರಾ. ಬೇಂದ್ರೆ ಅವರ ಜೀವನದ ಘಟನೆಯನ್ನು ಕಥೆಯ ಮೂಲಕ ವಿವರಿಸಿದರು. ವ್ಯಕ್ತಿಯ ಜೀವನದಲ್ಲಿ ದಯೆ, ಕರುಣೆ, ಪರೋಪಕಾರ, ಮಾನವೀಯತೆ ಮತ್ತು ಇತರರ ಒಳಿತನ್ನು ಬಯಸುವ ಮನೋಭಾವ ಎಷ್ಟು ಮುಖ್ಯ ಎಂಬುದನ್ನು ವಚನ ಮತ್ತು ಕಥೆಯ ಸಮನ್ವಯದ ಮೂಲಕ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ನಿರ್ವಹಣಾಕಾರರಾದ ವಿಜಯ ಸಿಂಧುವಳ್ಳಿ, ಸಂಯೋಜಕರಾದ ಬಿ. ಬಾಲಕೃಷ್ಣಯ್ಯ ಮತ್ತು ಕೆ.ಎಂ ನಾಗರಾಜು, ಅನೇಕ ಸಾಹಿತಿಗಳು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.







