CinemaLatest

ಸೆನ್ಸಾರ್‌ಗೆ ಹೊರಟ ಪರಿಸರ ಕಾಳಜಿಯ ‘ಗಾಜು’ ಚಲನಚಿತ್ರ… ಶೀಘ್ರ ಬಿಡುಗಡೆ

ಬೆಂಗಳೂರು: ಪರಿಶ್ರಮ ಪ್ರೊಡಕ್ಷನ್ ಅವರ ‘ಗಾಜು’ ಉಪ ಶೀರ್ಷಿಕೆ ‘ದಿ ರೇವಲ್ಯೂಷನ್’ ಪರಿಸರ ಕಾಳಜಿಯ ಕನ್ನಡ ಚಲನಚಿತ್ರ ಇದೀಗ ಪೋಸ್ಟ  ಪ್ರೊಡಕ್ಷನ್‌ನ ಎಲ್ಲ ಕೆಲಸ ಮುಗಿಸಿ ಸೆನ್ಸಾರ್‌ಗೆ ಹೊರಟಿದೆ.

ಇತ್ತೀಚಿನ ದಿನಗಳಲ್ಲಿ ಗಾಜಿನ ಬಳಕೆ ಮಿತಿಮೀರಿದೆ, ಬಳಸಿದ ಗಾಜಿನ ಉತ್ಪನ್ನಗಳ ಸಮರ್ಥ ವಿಲೇವಾರಿ, ಮರುಬಳಕೆಯಿಲ್ಲವಾಗಿದೆ. ಹೀಗಾಗಿ ಗಾಜು ಪರಿಸರಕ್ಕೆ ಮತ್ತು ಜೀವಸಂಕುಲಕ್ಕೆ ಮಾರಕವಾಗುತ್ತಿದೆ. ಇಂದಿನ ಯುವಜನತೆ ಎಂಜಾಯ್‌ಮೆಂಟ್, ಕ್ರೇಜ್ ಅನ್ನೋ ಭ್ರಮೆಯಲ್ಲಿ ಮದ್ಯಪಾನ ಮಾಡಿ ಪ್ರವಾಸಿ ತಾಣಗಳಲ್ಲಿ, ರಸ್ತೆಗಳಲ್ಲಿ, ದೇವಸ್ಥಾನ ಎಲ್ಲೆಂದರಲ್ಲಿ ಖಾಲಿ ಬಾಟಲಿಗಳನ್ನು ಎಸೆಯುವುದು, ಗಾಜುಗಳನ್ನು ಒಡೆಯುವ ಕೆಲಸ ಮಾಡುತ್ತಿರುತ್ತಾರೆ.

ಇದರಿಂದ ಪರಿಸರಕ್ಕೆ, ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಹೇಗೆ ಹಾನಿಯಾಗುತ್ತದೆ. ಒಬ್ಬ ಚಿಕ್ಕ ಬಾಲಕ ತನ್ನ  ತಾಯಿಗೆ ಗಾಜಿನ ಚೂರು ಚುಚ್ಚಿದಾಗ ಏನು ಮಾಡುತ್ತಾನೆ? ಗಾಜಿನ ಬಳಕೆಯ  ವಿರುದ್ದ ಹೇಗೆ ಹೋರಾಡುತ್ತಾನೆ? ಹುಡುಗನ ಹೋರಾಟದಿಂದ ಸಮಾಜದಲ್ಲಿ ಏನೇನು ಬದಲಾವಣೆಯಾಗುತ್ತದೆ? ಎನ್ನುವದೇ ಚಿತ್ರದ ಸಾರ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಶ್ರವಣ ಬೆಳಗೊಳ ಸುತ್ತ-ಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು ಪ್ರೇಕ್ಷಕರು ಖಂಡಿತ ಇಷ್ಟ ಪಡುತ್ತಾರೆ. ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುತ್ತೇವೆ. ಶೀಘ್ರದಲ್ಲೇ ಟ್ರೈಲರ್ ಲಾಂಚ್  ಮಾಡುತ್ತೇವೆ ಎಂದು ನಿರ್ದೇಶಕ ವೆಂಕಟೇಶ ಗಿರಿಕ್ಷೇತ್ರ, ನಿರ್ಮಾಪಕ  ಡಾ.ಸಿ.ಎನ್.ಮಂಜುನಾಥ ಹೇಳುತ್ತಾರೆ.

ಚಿತ್ರರಂಗದ ಹಿರಿಯ ನಟರಾದ ರಾಮಕೃಷ್ಣ, ಬಲರಾಜ್ ವಾಡಿ, ಮಾಸ್ಟರ್ ವಿಸ್ಮಯ್ ವೆಂಕಟೇಶ್, ಅಪ್ಪಣ್ಣ ರಾಮದುರ್ಗ, ವಾಣಿ, ಮಿಲ್ಟ್ರಿ ಮಂಜು, ಸಂತೋಷ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಂತ್ರಿಕವರ್ಗದಲ್ಲಿ ನಾಗೇಂದ್ರ ರಂಗಾರಿ ಛಾಯಾಗ್ರಹಣ, ಹಾಡುಗಳಿಗೆ ರಿತ್ವಿಕ್ ಮುರಳೀಧರ್ ಸಂಗೀತ, ಮಸ್ತಾನ್ ನೃತ್ಯ ಸಂಯೋಜಿಸಿದ್ದಾರೆ.

ಸೂರ್ಯೋದಯ ಸಂಕಲನ.ಶಿವು ಪ್ರಸಾಧನ, ಕಾರ್ತಿಕ್‌ಸುಧನ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ವೆಂಕಟೇಶ್ ಗಿರಿಕ್ಷೇತ್ರ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಾಮಾಜಿಕ ಹೋರಾಟಗಾರ  ಡಾ.ಸಿ.ಎನ್.ಮಂಜುನಾಥ್ (ದಂಡೋರ ಮಂಜಣ್ಣ) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ