ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ- ಮುಟ್ಲು ಎಂಬ ಕುಗ್ರಾಮದಲ್ಲಿ ಒಬ್ಬಳೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿ ಇಡೀ ಶಾಲೆಯನ್ನು ಪ್ರತಿನಿಧಿಸಿ ತಾನು ಉತ್ತೀರ್ಣಳಾಗಿರುವ ಸಂತೋಷದಲ್ಲಿರುವಾಗಲೇ ಆಕೆಯನ್ನು ಮದುವೆಯಾಗ ಬೇಕಾಗಿದ್ದ ಯುವಕನೇ ಮನೆಯಿಂದ ಎಳೆದೊಯ್ದು ಕತ್ತಿಯಿಂದ ಆಕೆಯ ರುಂಡ ಕಡಿದು ಅಟ್ಟಹಾಸ ಮೆರೆದಿದ್ದನು. ಇದೀಗ ಎರಡು ವರ್ಷಗಳ ಬಳಿಕ ಈ ಹಂತಕನಿಗೆ ಕೊಡಗು ಜಿಲ್ಲಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅವತ್ತು (9-5-2024) ಅಂತಹದೊಂದು ಅಮಾನುಷ ಘಟನೆ ನಡಯುತ್ತದೆ ಎನ್ನುವುದನ್ನೇ ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಅಂತಹ ಭೀಕರ ಘಟನೆ ನಡೆದು ಹೋಗಿತ್ತು. ಕೊಡಗಿನಲ್ಲಿ ಕೊಲೆಗಳು ಹಲವು ಕಾರಣಗಳಿಗೆ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇರುತ್ತವೆ. ಇದೆಲ್ಲದರ ನಡುವೆ ಈ ಕೊಲೆ ಮಾತ್ರ ಯಾರು ಕ್ಷಮಿಸಲಾರದ್ದಾಗಿತ್ತು. ಎಸ್ ಎಸ್ ಎಲ್ ಸಿ ಉತ್ತೀರ್ಣಳಾಗಿ ಮುಂದಿನ ಬದುಕಿನ ಕನಸಿನಲ್ಲಿರುವಾಗಲೇ ಆ ಹುಡುಗಿ ಭೀಕರವಾಗಿ ಕೊಲೆಯಾಗಿ ಹೋಗಿದ್ದಳು. ಇಷ್ಟಕ್ಕೂ ಆ ಹುಡುಗಿ ಮಾಡಿದ ತಪ್ಪಾದರೂ ಏನು? ಕತ್ತಿಯಿಂದ ಅವಳ ರುಂಡವನ್ನು ಕಡಿದು ತುಂಡು ಮಾಡಿ ಪೊದೆಯಲ್ಲಿ ಎಸೆಯುವಷ್ಟು ರೋಷ ಅವನಿಗೆ ಬಂದಿದ್ದು ಹೇಗೆ? ಎಂದು ಜನ ಮಾತನಾಡಿಕೊಂಡಿದ್ದರಲ್ಲದೆ ಅವನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದರು. ಇವತ್ತು ನ್ಯಾಯಾಲಯ ಅಂತಹದೊಂದು ತೀರ್ಪು ನೀಡಿದ್ದು ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ.
ಈ ಘಟನೆ ಹೇಳುವ ಮುನ್ನ ಅಲ್ಲಿನ ಪರಿಸರದ ಬಗ್ಗೆಯೂ ಹೇಳಬೇಕಾಗುತ್ತದೆ. ಕೊಡಗಿನ ದಟ್ಟಕಾಡುಗಳ ನಡುವೆ ಮನೆ ಮಾಡಿಕೊಂಡು ಸುತ್ತ ಮುತ್ತ ಕಾಫಿ, ಏಲಕ್ಕಿ, ಕರಿಮೆಣಸು, ಭತ್ತ ಬೆಳೆದುಕೊಂಡು ಬದುಕುವ ಕುಟುಂಬಗಳು ಈಗಲೂ ಇವೆ. ಈ ಪೈಕಿ ಕೆಲವರು ಅನುಕೂಲವಾಗಿದ್ದರೆ, ಮತ್ತೆ ಕೆಲವರು ಕಷ್ಟದ ಬದುಕನ್ನು ಅನುಭವಿಸುತ್ತಿದ್ದಾರೆ. ಇವತ್ತಿಗೂ ಬಹಳಷ್ಟು ಜನ ಒಂದು ಬೆಂಕಿ ಪೆಟ್ಟಿಗೆ ಬೇಕಾದರೂ ಕಿ.ಮೀ.ಗಟ್ಟಲೆ ನಡೆಯಬೇಕು. ಇನ್ನೂ ಶಾಲೆಗೆ ಐದಾರು ಕಿ,ಮೀ. ನಡೆದುಕೊಂಡು ಹೋಗ ಬೇಕಾದ ಪರಿಸ್ಥಿತಿಯಿದೆ. ಮೇಲ್ನೋಟಕ್ಕೆ ಇಡೀ ಜಿಲ್ಲೆ ಅಭಿವೃದ್ಧಿಯಾಗಿ ಹೈಟೆಕ್ ಜೀವನ ಸಾಗಿಸುವಂತೆ ಕಾಣಿಸುತ್ತಿದ್ದರೂ ಕೆಲವು ಗ್ರಾಮಗಳು ಇನ್ನೂ ಕೂಡ ಕುಗ್ರಾಮಗಳಾಗಿಯೇ ಉಳಿದಿವೆ.

ಅದರಂತೆ ಯುವತಿಯ ಕೊಲೆ ನಡೆದಿರುವ ಗ್ರಾಮ ಸೇರಿದಂತೆ ಸೂರ್ಲಬ್ಬಿ, ಮುಟ್ಲು, ಕುಂಬಾರಗಡಿಗೆ, ಹಮ್ಮಿಯಾಲ ಹೀಗೆ ಸುತ್ತಮುತ್ತಲಿನ ಗ್ರಾಮಗಳ ಜನ ಇವತ್ತಿಗೂ ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಾರೆ. ಬಹಳಷ್ಟು ಯುವಕರು ವಿದ್ಯಾವಂತರು ಉದ್ಯೋಗಕ್ಕಾಗಿ ಊರು ಬಿಟ್ಟಿದ್ದಾರೆ. ಹೀಗಾಗಿ ವಯಸ್ಸಾದವರು ಸೇರಿದಂತೆ ಕೆಲವರು ತೋಟ ನೋಡಿಕೊಂಡು ವಾಸ ಮಾಡುತ್ತಿದ್ದಾರೆ. ಇನ್ನು ಶಾಲೆಗಳಲ್ಲಿ ಒಬ್ಬರೋ ಇಬ್ಬರೋ ವಿದ್ಯಾರ್ಥಿಗಳಿದ್ದರೆ ಅದೇ ಹೆಚ್ಚು. ಹೆಚ್ಚಿನ ಮಕ್ಕಳು ಓದಿಗಾಗಿ ಪಟ್ಟಣ ಸೇರಿದ್ದಾರೆ.
ಹೀಗಿರುವಾಗಲೇ ಸೂರ್ಲಬ್ಬಿ ಎಂಬ ಸರ್ಕಾರಿ ಪ್ರೌಢ ಶಾಲೆಗೆ ಇವತ್ತು ಕೊಲೆಯಾಗಿ ಹೋಗಿರುವ ಮೀನಾ ಎಂಬ ವಿದ್ಯಾರ್ಥಿನಿ ಎಂಟನೇ ತರಗತಿಗೆ ಸೇರ್ಪಡೆಯಾಗಿದ್ದಳು. ಈಕೆ ಅಲ್ಲಿಂದ ಐದಾರು ಕಿ.ಮೀ. ದೂರದಲ್ಲಿರುವ ಕುಂಬಾರಗಡಿಗೆ ಮುಟ್ಲು ಗ್ರಾಮದವಳಾಗಿದ್ದಳು. ಈಕೆ ಮುಟ್ಲು ಗ್ರಾಮದ ಸುಬ್ರಹ್ಮಣಿ ಮತ್ತು ಜಾನಕಿ ದಂಪತಿಯ ಆರು ಮಕ್ಕಳಲ್ಲಿ ಕೊನೆಯಳಾಗಿದ್ದಳು. ಇವಳಿಗೆ ಮೂವರು ಅಕ್ಕಂದಿರು, ಇಬ್ಬರು ಅಣ್ಣಂದಿರು ಇದ್ದರು. ಸುಬ್ರಹ್ಮಣಿಯದು ಕೃಷಿ ಕುಟುಂಬವಾಗಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಜೋಪಡಿಯಂತಹ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಇಂತಹ ಕಷ್ಟದ ಬದುಕಿನಲ್ಲಿಯೂ ಮೀನಾ ಶಾಲೆಗೆ ಹೋಗುವ ನಿರ್ಧಾರ ಮಾಡಿದ್ದಳು.
ಕುಗ್ರಾಮದ ಶಾಲೆಗೆ ಸೇರಿದ್ದ ಮೀನಾ

ಮೀನಾ ಶಾಲೆಗೆ ಸೇರಿದ್ದು ಶಾಲೆಯ ಶಿಕ್ಷಕರಿಗೆ ಇದು ಖುಷಿಯ ಸಂಗತಿಯಾಗಿತ್ತು. ಏಕೆಂದರೆ ಜಿಲ್ಲೆಯ ಕುಗ್ರಾಮಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಶಿಕ್ಷಕರೇ ಖುಷಿಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ ಮೀನಾ ಶಾಲೆಗೆ ಬಂದಿದ್ದಳು. ಈಕೆ ಸರಿಯಾಗಿ ಯಾವುದನ್ನೂ ಕಲಿತಿರಲಿಲ್ಲ. ಹೀಗಾಗಿ ಹಠಕ್ಕೆ ಬಿದ್ದಂತೆ ಶಿಕ್ಷಕರು ಕಲಿಸಲಾರಂಭಿಸಿದ್ದರು.
ನಿಜ ಹೇಳ ಬೇಕೆಂದರೆ ಈ ವಿದ್ಯಾರ್ಥಿನಿ ಶಾಲೆಗೆ ಬರುವುದೇ ಒಂದು ಸವಾಲ್ ಆಗಿತ್ತು. ಕಾರಣ ಈಕೆಯ ಮನೆ ಶಾಲೆಗೆ ಐದಾರು ಕಿ.ಮೀ. ದೂರದಲ್ಲಿತ್ತು. ಅಲ್ಲಿಂದ ಕಾಡು ರಸ್ತೆಯಲ್ಲಿ ನಡೆದುಕೊಂಡು ಈಕೆ ಶಾಲೆಗೆ ಬರಬೇಕಾಗಿತ್ತು. ಹಲವು ಬಾರಿ ಈಕೆಗೆ ಶಾಲೆಗೆ ಬರುವುದೇ ಕಷ್ಟವಾಗಿ ಪರಿಣಮಿಸಿದಾಗ ಶಾಲೆಗೆ ಬರುತ್ತಿರಲಿಲ್ಲ. ಈ ಸಂದರ್ಭ ಶಿಕ್ಷಕರು ಮನೆಗೆ ಹೋಗಿ ಮನವೊಲಿಸಿ ಶಾಲೆಗೆ ಬರುವಂತೆ ಮಾಡುತ್ತಿದ್ದರು.
ಹೇಗೋ ಶಿಕ್ಷಕರೆಲ್ಲ ಸೇರಿ ಆಕೆಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಆಕೆಯೂ ಯಾವುದೇ ಸೌಲಭ್ಯವಿಲ್ಲದ ಕುಗ್ರಾಮದಲ್ಲಿ ಶಿಕ್ಷಕರು ಹೇಳಿಕೊಟ್ಟಿದ್ದನ್ನೇ ಕಲಿತುಕೊಂಡು ಎಂಟರಿಂದ ಹತ್ತನೇ ತರಗತಿಗೆ ಬಂದಿದ್ದಳು. ಎಸ್ ಎಸ್ ಎಲ್ ಸಿಗೆ ಇಡೀ ಶಾಲೆಗೆ ಇವಳೊಬ್ಬಳೇ ವಿದ್ಯಾರ್ಥಿನಿಯಾಗಿದ್ದಳು. ಇವಳೇನಾದರೂ ಪಾಸಾಗದೆ ಹೋದರೆ ಶಾಲೆಗೆ ಶೂನ್ಯ ಫಲಿತಾಂಶ ಬರುವುದರೊಂದಿಗೆ ಶಿಕ್ಷಕ ವರ್ಗಕ್ಕೆ ಅವಮಾನವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿಯೇ ಶಿಕ್ಷಕರು ತುಂಬಾ ಕಷ್ಟಪಟ್ಟು ಆಕೆಗೆ ಕಲಿಸಿ ಹೇಗಾದರೂ ಮಾಡಿ ಮೊದಲ ದರ್ಜೆಯಲ್ಲಿ ಪಾಸ್ ಮಾಡಿಸಬೇಕೆಂದು ಹಠತೊಟ್ಟಿದ್ದರು. ಒಳ್ಳೆಯ ಸ್ವಭಾವ ಹೊಂದಿದ್ದ ವಿದ್ಯಾರ್ಥಿನಿ ಶಿಕ್ಷಕರಿಗೆ ಅಚ್ಚು ಮೆಚ್ಚಿನವಳಾಗಿದ್ದಳು.

ಏಪ್ರಿಲ್ ನಲ್ಲಿ ಪರೀಕ್ಷೆ ಮುಗಿದಿತ್ತು. ಇದಾದ ನಂತರ ಈಕೆಯನ್ನು ಕಾಲೇಜಿಗೆ ಸೇರಿಸುವ ಆಲೋಚನೆಯನ್ನು ಹೆತ್ತವರು ಮಾಡಿರಲಿಲ್ಲ. ಸಮೀಪದಲ್ಲಿ ಯಾವುದೇ ಕಾಲೇಜುಗಳು ಕೂಡ ಇರಲಿಲ್ಲ. ಹೀಗಾಗಿ ನಡೆದುಕೊಂಡು ಹೋಗಿ ಬಸ್ ಹಿಡಿದು ಪಟ್ಟಣಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ಗ್ರಾಮಕ್ಕೆ ಸಮೀಪದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್(ಇವತ್ತು ಗಲ್ಲು ಶಿಕ್ಷೆಗೆ ಗುರಿಯಾದವನು) ಎಂಬಾತನೊಂದಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದರು.
ಅಪ್ರಾಪ್ತೆ ಕಾರಣಕ್ಕೆ ಮುರಿದು ಬಿದ್ದ ಮದುವೆ
ಈಕೆಯೂ ಪ್ರಕಾಶ್ ನನ್ನು ಇಷ್ಟಪಟ್ಟಿದ್ದಳು. 34 ವರ್ಷದ ಆತನಿಗೂ 16 ವರ್ಷದ ಆಕೆಗೂ ವಯಸ್ಸಿನಲ್ಲಿ ಅಜಗಜಾಂತರವಿತ್ತು. ಆದರೆ ಆತ ಸ್ವಲ್ಪ ಮಟ್ಟಿಗೆ ಅನುಕೂಲದಲ್ಲಿದ್ದ ಜತೆಗೆ ಮಗಳು ಮೀನಾ ಕೂಡ ಆತನನ್ನು ಇಷ್ಟಪಟ್ಟಿರುವ ಕಾರಣದಿಂದ ಹೆತ್ತವರು ಮದುವೆ ಮಾಡುವ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ಎಸ್ ಎಸ್ ಎಲ್ ಸಿ ಫಲಿತಾಂಶ ಬರುವ ದಿನವೇ ಅವರಿಬ್ಬರ ಎಂಗೇಜ್ ಮೆಂಟ್ ಮಾಡಲು ತಯಾರಿ ನಡೆಸಿದ್ದರು. ಆಕೆ ಅಪ್ರಾಪ್ತೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದ ಪರಿಣಾಮ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಸಿ ಮದುವೆಯನ್ನು 18 ವರ್ಷದ ಬಳಿಕ ನಡೆಸುವಂತೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಮದುವೆ ಮುಂದೂಡಿತ್ತು.
2024 ಮೇ. 9ರಂದು ಗುರುವಾರ ಎಸ್ ಎಸ್ ಎಲ್ ಸಿ ರಿಸಲ್ಟ್ ಬಂದಿತ್ತು. ಮೀನಾ 314 ಅಂಕ ಗಳಿಸಿ ಪಾಸಾಗಿದ್ದಳು. ಎಂಗೇಜ್ ಮೆಂಟ್ ನಿಂತು ಹೋದ ನೋವಿನ ನಡುವೆ ಆಕೆ ಪಾಸಾದೆನಲ್ಲ ಎಂಬ ಖುಷಿಯಲ್ಲಿದ್ದಳು. ಆದರೆ ಅತ್ತ ಪ್ರಕಾಶ್ ಮಾತ್ರ ನನ್ನ ಮದುವೆ ನಡೆಯುತ್ತಿಲ್ಲವಲ್ಲ ಎಂಬ ಆಕ್ರೋಶದಲ್ಲಿದ್ದನು. ಆತನಿಗೆ ಅದೇನಾಗಿತ್ತೋ? ಆತನ ಮನಸ್ಸು ಮೃಗದಂತೆ ಆಗಿತ್ತು. ಅವತ್ತು ಸಂಜೆ 5.30ರ ವೇಳೆಗೆ ಕೋವಿಯೊಂದಿಗೆ ಮನೆಯಿಂದ ಹೊರ ಬಂದಿದ್ದಾನೆ. ಈ ವೇಳೆ ತಾಯಿಗೆ ನೀನು ಚೆನ್ನಾಗಿರು, ನಾನಿನ್ನು ಬರುತ್ತೇನೆ ಎಂದು ಹೇಳಿದ್ದಾನೆ. ಈತನ ಮಾತು ತಾಯಿಗೆ ಅರ್ಥವಾಗಿರಲಿಲ್ಲ. ಅಲ್ಲಿಂದ ನೇರವಾಗಿ ಆತ ಮೀನಾಳ ಮನೆಗೆ ಬಂದು ಆಕೆಯ ತಂದೆ ಸುಬ್ರಹ್ಮಣಿ ಜತೆ ಜಗಳ ಶುರುಮಾಡಿದ್ದನು.

ಮದುವೇ ಆಗಿಯೇ ತೀರಬೇಕೆಂದು ರಗಳೆ ತೆಗೆದಿದ್ದನು. ಆತನನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಈ ವೇಳೆ ಕೋಪದಲ್ಲಿದ್ದ ಆತ ಮೀನಾಳ ತಾಯಿ ಜಾನಕಿ ಕೈಗೆ ಕತ್ತಿಯಿಂದ ಕಡಿದಿದ್ದಲ್ಲದೆ, ತಡೆಯಲು ಬಂದ ಸುಬ್ರಹ್ಮಣಿ ಮೇಲೂ ಹಲ್ಲೆ ಮಾಡಿ ಮನೆಯಲ್ಲಿದ್ದ ಮೀನಾಳನ್ನು ಹೊರಕ್ಕೆ ಎಳೆದೊಯ್ದಿದ್ದನು.
ಅವಳ ಕತ್ತು ಕಡಿದಿದ್ದ ರಾಕ್ಷಸ ಪ್ರಕಾಶ್
ಬಾ ನಾವಿಬ್ಬರು ದೂರ ಹೋಗಿ ಮದುವೆಯಾಗೋಣ ಎಂದು ಹಠ ಮಾಡಿದ್ದನು. ಇದಕ್ಕೆ ಮೀನಾ ಒಪ್ಪದೇ ಇದ್ದಾಗ ಸುಮಾರು ನೂರೈವತ್ತು ಮೀಟರ್ ಗೂ ಹೆಚ್ಚು ದೂರಕ್ಕೆ ಎಳೆದೊಯ್ದು ಅಲ್ಲಿಯೇ ತನ್ನ ಬಳಿಯಿದ್ದ ಕತ್ತಿಯಿಂದ ಆಕೆಯ ಕತ್ತನ್ನು ಕಡಿದು ತುಂಡರಿಸಿ ಮುಂಡವನ್ನು ಅಲ್ಲಿಯೇ ಬಿಟ್ಟು ರುಂಡವನ್ನು ಹಿಡಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದನು. ಹೀಗೆ ಹೋದವನು ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಪೊದೆಗೆ ತಲೆಯನ್ನು ಎಸೆದು ಅಲ್ಲಿಂದ ಭಯದಲ್ಲಿ ಕಾಡು ಸೇರಿದ್ದನು.
ಸಂಜೆ ಹೊತ್ತು ಆಗಿದ್ದರಿಂದ ಜತೆಗೆ ಹತ್ತಿರದಲ್ಲಿ ಯಾವುದೇ ಮನೆಗಳು ಇಲ್ಲದ ಕಾರಣದಿಂದಾಗಿ ಹತ್ಯೆ ನಡೆದ ವಿಷಯ ಗ್ರಾಮಸ್ಥರಿಗೆ ತಿಳಿಯುವುದು ತಡವಾಗಿತ್ತು. ಹೀಗಾಗಿ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆಯೇ ಪೊಲೀಸರಿಗೆ ದೂರು ನೀಡಲಾಗಿತ್ತು. ಸ್ಥುಳಕ್ಕೆ ಬಂದ ಪೊಲೀಸರು ಶವದ ಮಹಜರು ನಡೆಸಿ ಆರೋಪಿಯ ಹುಡುಕಾಟ ಆರಂಭಿಸಿದ್ದರು.
ಈ ನಡುವೆ ಆರೋಪಿ ಪ್ರಕಾಶ್ ಆತ್ಮಹತ್ಯೆ ಮಾಡಿದ್ದಾನೆ ಎಂಬ ಗಾಳಿ ಸುದ್ದಿ ಹರಡಿತ್ತು. ಆದರೆ ಆತ ಕಾಡಿಗೆ ಕೋವಿಯೊಂದಿಗೆ ಹೋಗಿದ್ದಾನೆ ಎಂಬುದು ಗೊತ್ತಾದ ಬಳಿಕ ಆತನನ್ನು ಬರಿಗೈಲಿ ಹುಡುಕುವುದು ಕಷ್ಟವಾಗಿತ್ತು. ಮಾರನೆಯ ದಿನ (ಮೇ 10 ಶುಕ್ರವಾರ) ಬೆಳಗ್ಗಿನಿಂದಲೇ ಪೊಲೀಸರು ಬಿಡದೆ ಹುಡುಕಾಟ ನಡೆಸಿದ್ದರು. ಈ ವೇಳೆ ಆರೋಪಿಯಾಗಲೀ, ಆತ ಜತೆಗೆ ಕೊಂಡೊಯ್ದ ತಲೆಯಾಗಲೀ ಸಿಕ್ಕಿರಲಿಲ್ಲ. ಆದರೆ ತೀವ್ರ ಕಾರ್ಯಾಚರಣೆ ಬಳಿಕ ಕೊನೆಗೂ ಶುಕ್ರವಾರ ಸಂಜೆ ಆತನನ್ನು ಬಂಧಿಸಲಾಗಿತ್ತು, ಬಳಿಕ ಮೇ 11 ಶನಿವಾರ ಆತನನ್ನು ಸ್ಥಳಕ್ಕೆ ಕರೆತಂದಾಗ ಘಟನೆ ನಡೆಸಿದ ಸ್ಥಳದಿಂದ 300 ಮೀಟರ್ ದೂರದಲ್ಲಿ ತಾನು ರುಂಡ ಎಸೆದ ಪೊದಯನ್ನು ತೋರಿಸಿದ್ದನು.

ಆ ನಂತರ ಹಂತಕನನ್ನು ವಿಚಾರಣೆಗೊಳಪಡಿಸಿದಾಗ ಮದುವೆಯಾಗುವುದು ವಿಳಂಬವಾಗುತ್ತಿರುವುದೇ ಕೊಲೆಗೆ ಕಾರಣ ಎಂದು ಹೇಳಿರುವುದಾಗಿ ಆಗಿ ಕೊಡಗು ಎಸ್ಪಿ ರಾಮರಾಜನ್ ಮಾಹಿತಿ ನೀಡಿದ್ದರು. ಹಂತಕ ಪ್ರಕಾಶ್ ನನ್ನು ಜೈಲಿಗೆ ತಳ್ಳಿದ ಪೊಲೀಸರು ಆತನ ವಿರುದ್ಧ ಆರೋಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಗಲ್ಲುಶಿಕ್ಷೆಯನ್ನು ವಿಧಿಸಿದೆ.
ಇನ್ನು ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶರು “ಶಿರಚ್ಛೇದನ ಮಾಡುವ ಮೂಲಕ ಒಬ್ಬ ಬಾಲಕಿಯ ಧ್ವನಿಯನ್ನು ಮುಚ್ಚಿಸಬಹುದು, ಆದರೆ ನ್ಯಾಯದ ಧ್ವನಿಯನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ” ಎಂದು ಮಾರ್ಮಿಕವಾಗಿ ನುಡಿದು ಅಪರಾಧಿಗೆ ಮರಣದಂಡನೆ ವಿಧಿಸಿದ್ದಾರೆ. ಆ ಮೂಲಕ ಸತ್ತು ಸ್ವರ್ಗ ಸೇರಿರುವ ಆ ಅಮಾಯಕ ಹೆಣ್ಣು ಜೀವದ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ.
ಕ್ರೈಂಗೆ ಸಂಬಂಧಿಸಿದ ಸುದ್ದಿ ಮತ್ತು ಸ್ಟೋರಿಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..
–ಎಲ್ಕೆ ಕೊಡಗು








