ವಚನ ಸಾಹಿತ್ಯದಿಂದ ಮನಸ್ಸಿನಲ್ಲಿ ನಿರ್ಮಲ ಭಾವ, ಬದುಕಿನಲ್ಲಿ ದೇವಲೋಕ ಸೃಷ್ಟಿ:ಮಲ್ಲಮ್ಮ ಶಿವಪ್ರಸಾದ್
ದೇವಲಾಪುರ ಕಾಲೋನಿ ಸ.ಹಿ.ಪ್ರಾ.ಶಾಲೆಯಲ್ಲಿ 133ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಹಾಗೂ 33ನೇ ಸರ್ಕಾರಿ ಶಾಲೆಗಳ ಬಲವರ್ಧನೆ ಕಾರ್ಯಕ್ರಮ

ಎಚ್ ಡಿ. ಕೋಟೆ : ವಚನ ಸಾಹಿತ್ಯ ಮನಸ್ಸಿನಲ್ಲಿ ನಿರ್ಮಲ ಭಾವ ಮೂಡಿಸಿ, ಬದುಕಿನಲ್ಲಿ ದೇವಲೋಕ ಸೃಷ್ಟಿಸುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕಿ ಮಲ್ಲಮ್ಮ ಶಿವಪ್ರಸಾದ್ ಹೇಳಿದರು.

ಹೆಗ್ಗಡೆದೇವನಕೋಟೆ ತಾಲ್ಲೂಕಿನ ದೇವಲಾಪುರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಶ್ರೀ ಶಿವಪ್ರಸಾದ್ ಮೇಲುದುರ್ಗಮಠ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 133ನೇ ಶಾಲೆಗಳೆಡೆಗೆ ವಚನಗಳ ನಡಿಗೆ’ ಹಾಗೂ 33ನೇ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಅಗತ್ಯ ಸೌಲಭ್ಯಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯವು ಸತ್ಯ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳ ಕಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ. ವಚನಗಳ ಅಧ್ಯಯನ ಮತ್ತು ಅನುಸರಣೆಯಿಂದ ನಾವು ಬದುಕಿರುವಾಗಲೇ ಸ್ವರ್ಗದಂತಹ ಸುಂದರ ಲೋಕವನ್ನು ನಿರ್ಮಿಸಿಕೊಳ್ಳಬಹುದು. ವಚನ ಸಾಹಿತ್ಯವು ವ್ಯಕ್ತಿಯ ಅಂತರಂಗವನ್ನು ಶುದ್ಧೀಕರಿಸಿ, ಸಮಾಜದಲ್ಲಿ ಸೌಹಾರ್ದತೆ, ಪ್ರೀತಿ ಮತ್ತು ಸಮಾನತೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ ಮಾತನಾಡಿ, ಬಸವಣ್ಣನವರ ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂಬ ವಚನದ ಆಶಯವನ್ನು ವಿವರಿಸಿ ವಚನ ಸಾಹಿತ್ಯವು ಪ್ರತಿಯೊಬ್ಬರನ್ನೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಸಮಾಜದಲ್ಲಿರುವ ಮೌಢ್ಯ, ಅಸಮಾನತೆ ಹಾಗೂ ಅನಗತ್ಯ ಆಚರಣೆಗಳಿಂದ ಹೊರಬಂದು ವೈಚಾರಿಕತೆ ಮತ್ತು ಮಾನವೀಯತೆಯ ದಾರಿಯಲ್ಲಿ ಸಾಗಲು ವಚನಗಳು ದಾರಿದೀಪವಾಗಿವೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ವಿಶ್ವಗುರು ಬಸವಣ್ಣನವರ ಸಪ್ತಸೂತ್ರಗಳು ಪ್ರತಿಯೊಬ್ಬರ ಬದುಕನ್ನು ಬೆಳಗಬಲ್ಲ ಅಮೂಲ್ಯ ತತ್ವಗಳಾಗಿವೆ. ಕಾಯಕ, ದಾಸೋಹ, ಸಮಾನತೆ, ಸತ್ಯ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ವಚನಗಳ ಸಂಸ್ಕಾರ ಬೆಳೆಸುವುದರಿಂದ ಉತ್ತಮ ವ್ಯಕ್ತಿತ್ವ ಮತ್ತು ಸಮಾಜಮುಖಿ ಮನೋಭಾವ ರೂಪುಗೊಳ್ಳುತ್ತದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ನವೆಂಬರ್ ತಿಂಗಳು ಕನ್ನಡಿಗರಿಗೆ ಹಾಗೂ ಮಕ್ಕಳಿಗೆ ವಿಶೇಷ ಸಂಭ್ರಮದ ತಿಂಗಳು. ನವೆಂಬರ್ 1 ಕನ್ನಡ ರಾಜ್ಯೋತ್ಸವದ ಸಂಭ್ರಮವಾದರೆ, ನವೆಂಬರ್ 14 ಮಕ್ಕಳ ದಿನಾಚರಣೆ ಮಕ್ಕಳ ಸಂತೋಷದ ಹಬ್ಬ. ಈ ಮಕ್ಕಳ ದಿನಾಚರಣೆಯನ್ನು ವಚನಗಳ ವಾಚನ, ವಚನಗಳ ಅರ್ಥವಿವರಣೆ ಮತ್ತು ವಚನ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ವಚನ ಹಬ್ಬವನ್ನಾಗಿ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ದೇವಲಾಪುರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ. ರಾಘವೇಂದ್ರಸ್ವಾಮಿ ಮಾತನಾಡಿ, ಶರಣು ವಿಶ್ವವಚನ ಫೌಂಡೇಷನ್ ಇಂದು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಚನ ಸಾಹಿತ್ಯವನ್ನು ಪ್ರಚುರಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ವಚನ ಸಾಹಿತ್ಯದ ಪರಿಚಯ ಮಾಡಿಸುವುದರ ಜೊತೆಗೆ ಶಾಲೆಗಳ ಅಗತ್ಯತೆಗಳನ್ನು ಗುರುತಿಸಿ, ಅವುಗಳ ಬಲವರ್ಧನೆಗೆ ನೆರವಾಗುತ್ತಿರುವ ಫೌಂಡೇಷನ್ನ ಸೇವೆ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಚನ ವಾಚನ ಮಾಡಿದ 20 ವಿದ್ಯಾರ್ಥಿಗಳಿಗೆ ವಚನ ಪುಸ್ತಕಗಳು, ವಚನ ದೀವಿಗೆ ಪ್ರಮಾಣಪತ್ರ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣೇಗೌಡ, ಎಸ್ ಡಿ ಎಂ ಸಿ ಸದಸ್ಯೆ, ಪರಿಮಳ, ಸಹಶಿಕ್ಷಕಿ ಜಯಂತಿ, ಅತಿಥಿ ಶಿಕ್ಷಕಿ ಅರುಣಕುಮಾರಿ, ಅಡುಗೆ ಸಿಬ್ಬಂದಿ ಜ್ಯೋತಿ ಉಪಸ್ಥಿತರಿದ್ದರು







