ArticlesLatest

ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳವರ ಕೈಗೆ ಕೊಟ್ಟು ಶಿಕ್ಷಣ ಇಲಾಖೆ ಬಾಗಿಲು ಹಾಕಲಿ

ಸರ್ಕಾರಿ ಶಾಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ.. ಇರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿದಿದೆ. ಬಹಳಷ್ಟು ಶಾಲೆಗಳ ಕಟ್ಟಡಗಳು ದುಸ್ಥಿತಿಗೆ ತಲುಪಿವೆ. ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. ಸರ್ಕಾರಗಳು ಖಾಸಗಿಯವರಿಗೆ ವಹಿಸಿ ಕೈತೊಳೆದುಕೊಳ್ಳುವ ಹಂತಕ್ಕೆ ತಲುಪಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವುದು ಮೈಸೂರಿನ ಧ್ವನಿ ಫೌಂಡೇಶನ್ ಸ್ಥಾಪಕಿ ಲೇಖಕಿ, ಡಾ. ಶ್ವೇತಾ ಮಡಪ್ಪಾಡಿ ಅವರ ಅಭಿಪ್ರಾಯ… ಸರ್ಕಾರಿ ಶಾಲೆಗಳ ಕುರಿತಂತೆ ಅವರು ಬರೆದ ಲೇಖನ ಇಲ್ಲಿದೆ…

‘ನಮ್ಮ ಶಾಲೆ -ನಮ್ಮ ಜವಾಬ್ದಾರಿ’ ಹೆಸರಿನಲ್ಲಿ ಗ್ರಾಮೀಣ ಸರ್ಕಾರಿ ಶಾಲೆ ಗಳನ್ನು ದತ್ತು ಪಡೆಯಲು ಖಾಸಗಿ ಶಾಲೆಗಳಿಗೆ ಕರ್ನಾಟಕ ಸರ್ಕಾರ ಕರೆ ಕೊಟ್ಟಿದ್ದು, ಖಾಸಗಿ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸುವ ಉದ್ದೇಶದಿಂದ 206.10 ಕೋಟಿ ರೂಪಾಯಿ ಮೌಲ್ಯದ 15 ಒಪ್ಪಂದಗಳಿಗೆ ಸಹಿ ಹಾಕಿದೆ ಎಂಬುದಾಗಿ (mou) ಪತ್ರಿಕೆಗಳಲ್ಲಿ ವರದಿಯಾಗಿದೆ.  ಇದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಭವಿಷ್ಯದ ಕರ್ನಾಟಕದ ದೃಷ್ಟಿಯಿಂದ ಶಾಲಾ ಶಿಕ್ಷಣ ವ್ಯವಸ್ಥೆಗೆ ಒದಗಬಹುದಾದ ದುಸ್ಥಿತಿಗೆ ಪೀಠಿಕೆ ಹಾಕಿದಂತಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿ ಸರ್ಕಾರಿ ಶಾಲೆಗಳಿಗೆ ಅನುಭವಿ ಶಿಕ್ಷಕರು, ಪ್ರಯೋಗಾಲಯದ ಉಪಕರಣಗಳು ,ಕಂಪ್ಯೂಟರ್ಗಳು ಮತ್ತು ಶಾಲಾ ಬಸ್ ಗಳನ್ನು ಒದಗಿಸಿಕೊಡುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳನ್ನು ಕೇಳಿಕೊಂಡಿದ್ದಾರೆ ಎಂಬುದು ವರದಿಯಾಗಿದೆ.  ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳನ್ನು ನಿರ್ಮಿಸಲು ಟೊಯೋಟ ಕಂಪನಿಯವರು ಸಹಾಯ ಮಾಡಿರುವುದನ್ನು ಅವರು ಉಲ್ಲೇಖಿಸಿ ಪ್ರತಿ ಶಾಲೆಗೆ 10 ಕೋಟಿ ರೂಪಾಯಿಗಳಿಂದ 15 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.

ಉದಾಹರಣೆ ಕೊಟ್ಟು ಹೆಗ್ಗನೂರು ಸರ್ಕಾರಿ ಶಾಲೆಯನ್ನು ಟೊಯೋಟಾ ಕಂಪನಿಯಿಂದ ಕೊಡುಗೆ ಪಡೆಯುವುದಕ್ಕಾಗಿ ‘ಟೊಯೋಟಾ ಶಾಲೆ’ಎಂದು ಮರುನಾಮಕರಣ ಮಾಡಲು ಅನುಮತಿ ನೀಡಲಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.  ಮೇಲ್ನೋಟಕ್ಕೆ ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ ವಿಚಾರಗಳು ಮತ್ತು ತೆಗೆದುಕೊಂಡ ನಿರ್ಧಾರ ಸುಂದರವಾಗಿ ಕಂಡರೂ ಅದರ ಒಳಗಿನ ಪ್ರಾಯೋಗಿಕ ವಿಚಾರಗಳು ಭವಿಷ್ಯದ ಹಳ್ಳಿಗಳಲ್ಲಿರುವ ಬಡ ಕೂಲಿ ಕಾರ್ಮಿಕ ಪೋಷಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

*ಮೊದಲನೆ ಯದಾಗಿ ಮುಖ್ಯಮಂತ್ರಿಗಳ ಮಾತುಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಜನಸಾಮಾನ್ಯರಿಗೆ ಸ್ಪಷ್ಟತೆ ಇಲ್ಲ. ಈ ನಿರ್ಧಾರ ಬಹುಜನರನ್ನು ತಲುಪಲೂ ಇಲ್ಲ. ಸರಕಾರಿ ಶಾಲೆಗಳ ಹಿತಾಸಕ್ತಿಗಳನ್ನು ಮುಂದಿಟ್ಟು ಕೊಂಡು ಮುಖ್ಯಮಂತ್ರಿಗಳು ಖಾಸಗೀ ಶಾಲೆಗಳ ಹಿತಾಸಕ್ತಿಗಾಗಿ ಈ ನಿರ್ಧಾರವನ್ನು ಕೈಗೊಂಡಿರುವುದರಲ್ಲಿ ಎರಡು ಮಾತಿಲ್ಲ. ಮುಖ್ಯಮಂತ್ರಿಗಳು ಹೇಳಿದಂತೆ ನಡೆಯುವುದಾದರೆ ಮುಂದೆ ಇದರಿಂದ ಆಗಬಹುದಾದ ಒಂದಷ್ಟು ಅನಾಹುತಗಳನ್ನು ನಾವು ಹೀಗೆ ಪಟ್ಟಿ ಮಾಡಬಹುದು.

ಸರ್ಕಾರಿ ಶಾಲೆಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಹಳ್ಳಿ ಪ್ರದೇಶಗಳಲ್ಲಿ. ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಬಡತನ ರೇಖೆ ಹಾಗೂ ಅದರಿಂದ ಕೆಳಗೆ ಇರುವವರು. ಅವರಲ್ಲಿ ಕೂಲಿ ಕಾರ್ಮಿಕರ ಮಕ್ಕಳು, ರೈತರ ಮಕ್ಕಳು ಹಣ್ಣು ತರಕಾರಿ ಮಾರುವವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸರ್ಕಾರ ಕೊಡುವ ಉಚಿತ ಬಟ್ಟೆ ,ಪುಸ್ತಕ ಆಹಾರ ಮೊದಲಾದವುಗಳಿಂದ ವಿದ್ಯಾಭ್ಯಾಸವನ್ನು ಸಾಧಿಸಿಕೊಳ್ಳುವವರು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಖಾಸಗಿ ಶಾಲೆಗಳ ಜವಾಬ್ದಾರಿಗೆ ಈ ಶಾಲೆಗಳನ್ನು ಬಿಟ್ಟುಕೊಟ್ಟಲ್ಲಿ ಖಾಸಗಿ ಶಾಲೆಯಲ್ಲಿ ವಿಧಿಸುವ ಶುಲ್ಕವನ್ನು ಪಾವತಿಸುವ ಶಕ್ತಿ ಅವರಿಗೆ ಇರುವುದಿಲ್ಲ. ಪುಸ್ತಕ, ಬಟ್ಟೆ ಮೊದಲಾದವುಗಳನ್ನು ಕೊಂಡುಕೊಳ್ಳುವುದಕ್ಕೆ ಶಕ್ತರಿಲ್ಲದೆ ಇರುವವರು ನಿಧಾನವಾಗಿ ವಿದ್ಯಾಭ್ಯಾಸದಿಂದ ವಿಮುಖಗೊಳ್ಳುವುದರಲ್ಲಿ ಎರಡು ಮಾತಿಲ್ಲ.

ಮಕ್ಕಳ ಸಂಖ್ಯೆ ಕಮ್ಮಿ ಆಗುತ್ತಿದ್ದಂತೆ ಸಹಜವಾಗಿ ಸರ್ಕಾರಿ ಶಾಲೆಯನ್ನು ಪೂರ್ತಿಯಾಗಿ ಮುಚ್ಚಿ ಖಾಸಗಿ ಶಾಲೆಗಳು ಆ ಜಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಮಾಣವೇ ಹೆಚ್ಚು. ಹೀಗಾಗಿ ಸರಕಾರಿ ಜಾಗವು ಬಂಡವಾಳಶಾಹಿಗಳ ಸ್ವತ್ತಾಗುವುದಕ್ಕೆ ಡಿಕೆ ಶಿವಕುಮಾರ್ ಅವರ ಈ ನಿರ್ಧಾರ ಪೀಠಿಕೆಯಂತೆ ಕಾಣುತ್ತಿದೆ.  ಶಾಲೆಬಿಟ್ಟ ಮಕ್ಕಳು ತಂದೆ ತಾಯಿಯರೊಡನೆ ಕೂಲಿ ಕೆಲಸಕ್ಕೆ ಹೋಗಿ ಬಾಲಕಾರ್ಮಿಕರಾಗುತ್ತಾರೆ. ಇದು ನಿಜವಾದರೆ ಮುಂದಿನ 10 ವರ್ಷಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಬಲ್ಲದು.

ಈಗಾಗಲೇ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 45,590 ಶಿಕ್ಷಕರ ಹುದ್ದೆಗಳು ಖಾಲಿ ಇವೆ.  2022-23ರ  ಸಂದರ್ಭದಲ್ಲಿ ಕೊನೆಯದಾಗಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಪ್ರೌಢಶಾಲೆಯಲ್ಲಿ 12,134 ಶಿಕ್ಷಕರ ಹುದ್ದೆ ಖಾಲಿ ಇದೆ. ಹಾಗಾಗಿ ಒಟ್ಟು 57724 ಹುದ್ದೆಗಳು ಖಾಲಿ ಇವೆ.  ಮುಂದೆ ಖಾಸಗಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಜವಾಬ್ದಾರಿ ನೀಡಿದರೆ ಸರಕಾರಿ ಕೆಲಸದಲ್ಲಿ ಪ್ರಸ್ತುತದಲ್ಲಿ ಮುಂದುವರೆಯುತ್ತಿರುವ ಶಿಕ್ಷಕರು ಹಾಗೂ ಸರ್ಕಾರಿ ಕೆಲಸದ ನಿರೀಕ್ಷೆ ಇಟ್ಟು ಬಿಎ, ಬಿಎಡ್ ಪದವಿಗಳನ್ನು  ಪಡೆದಿರುವ ಶಿಕ್ಷಕರು ಖಾಸಗಿ ಸಂಸ್ಥೆಗಳು ನೀಡುವ ಕನಿಷ್ಟ ಸಂಬಳಗಳಿಗೆ ದುಡಿಯಬೇಕೆ?

ಈ ಶಿಕ್ಷಕರ ಭವಿಷ್ಯವೇನು?

ಸರಕಾರಿ ಶಾಲೆಯ ಅರ್ಹ ಶಿಕ್ಷಕರು ಅನಾವಶ್ಯಕವಾಗಿ ಖಾಸಗಿ ಶಾಲೆಯ ಶಿಕ್ಷಕರೊಂದಿಗೆ ಗುದ್ದಾಡಬೇಕಾದ ಪರಿಸ್ಥಿತಿ ಎದುರಾಗುವುದಾದರೆ ಅದಕ್ಕೆ ಯಾರು ಹೊಣೆ? ಈಗ ಶಿಕ್ಷಕರು ತಮ್ಮ ಭವಿಷ್ಯಕ್ಕಾಗಿ ಧ್ವನಿ ಎತ್ತಬೇಕಾಗಿದೆ. ಜೊತೆಗೆ ಸರಕಾರಿ ಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಡುವ ಪರಿಸ್ಥಿತಿ ಎದುರಾಗಿದೆ. ಸರಕಾರಿ ಶಾಲೆಯ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಕನ್ನಡ ಭಾಷೆಯ ಕಲಿಕೆ ಅದರ ಬೆಳವಣಿಗೆಗೆ ಖಾಸಗೀಕರಣದಿಂದ ಬಹುದೊಡ್ಡ ನೆಲೆಯಲ್ಲಿ ಹೊಡೆತ ಬೀಳುತ್ತದೆ.

ಸರಕಾರಕ್ಕೆ ಶಿಕ್ಷಣ ಇಲಾಖೆಯ ವಿಷಯವಾಗಿ ಎಷ್ಟು ಕಾಳಜಿ ಕಡಿಮೆ ಎಂದರೆ ಸುಮಾರು 19000 ಶಾಲೆಗಳಿಗೆ ಸಂಬಂಧಪಟ್ಟ ಆಸ್ತಿಯ ಖಾತೆ ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಂದಾಳತ್ವದಲ್ಲಿ ನೋಂದಣಿಯಾಯಿತು ಎಂಬ ಮಾಹಿತಿ ತಿಳಿಯಿತು. ಇಲ್ಲಿಯವರೆಗೆ ಶಾಲೆಯ ಹೆಸರಿನಲ್ಲಿ ಖಾತೆ ಇರದ 19,000 ಶಾಲೆಗಳಿದ್ದವು ಎಂಬುದು ಎಷ್ಟು ಆತಂಕ ಕಾರಿಯಾದ ಮಾಹಿತಿ!

ಕರ್ನಾಟಕದಲ್ಲಿ 3200 ರಷ್ಟು ಶತಮಾನ ಕಂಡ ಶಾಲೆಗಳಿವೆ . ಅವುಗಳಲ್ಲಿ ಕುವೆಂಪು ಓದಿದ ಶಾಲೆ,ವಿಶ್ವೇಶ್ವರಯ್ಯ,  ಬೇಂದ್ರೆ ಅಂತವರು ಓದಿದ ಶಾಲೆಗಳು,ಅಂಬೇಡ್ಕರ್ ಬಂದ ಶಾಲೆಗಳು,ಗಾಂಧಿ ಬಂದು ಹೋದ ಶಾಲೆಗಳೂ ಇವೆ. ಇಂತಹ ಶಾಲೆಗಳನ್ನು ಪಾರಂಪರಿಕ ಶಾಲೆಯಾಗಿ ಅತಿ ಕಡಿಮೆ ಖರ್ಚಿನಲ್ಲಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಒದಗಿಸಬಹುದಾಗಿತ್ತು.  ಅಂತಹ ಯಾವ ಮನಸ್ಸನ್ನೂ ಈವರೆಗಿನ  ಸರಕಾರ ಮಾಡಿಲ್ಲ.

ಭಾರತದ ಸಂವಿಧಾನದ 21ಎ ನೇ ವಿಧಿಯ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಸಿಎಸ್ಆರ್ ಸಹಭಾಗಿತ್ವ ಅಥವಾ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸುವುದಿಲ್ಲ ಆದರೆ ಆರರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಖಚಿತಪಡಿಸುವ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಸರಕಾರ ಖಾಸಗಿ ಸಂಸ್ಥೆಗಳಿಗೆ ಸಂಪೂರ್ಣವಾಗಿ ವರ್ಗಾಯಿಸಲು ಸಾಧ್ಯವಿಲ್ಲ.

ಖಾಸಗಿ ಸಂಸ್ಥೆಗಳ ಸಿಎಸ್ಆರ್ ನೆರವು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಪೂರಕ ವ್ಯವಸ್ಥೆ ಆಗಿರಬೇಕು. ಬದಲಾಗಿ ಸರ್ಕಾರ ಒದಗಿಸಬೇಕಾದ ಶಿಕ್ಷಣದ ಮೂಲಭೂತ ಜವಾಬ್ದಾರಿಗೆ ಪರ್ಯಾಯವಾಗಬಾರದು. ಮುಖ್ಯಮಂತ್ರಿಗಳು ಪರ್ಯಾಯವಾಗಿ ಸೂಚಿಸುತ್ತಿರುವ ಸಿಎಸ್ಆರ್ ಜೊತೆಗಿನ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಯಾವುದೇ ಶುಲ್ಕವಿಲ್ಲದೆ ನಡೆಯುತ್ತವೆ ಎನ್ನುವುದಕ್ಕೆ ಖಾತರಿ ಏನು? ಯಾವುದೇ ಖಾಸಗಿ ಶಾಲೆಗಳು ಸರಕಾರಿ ಶಾಲೆಗಳಿಗೆ ಉಚಿತವಾಗಿ ಸೇವೆ ಸಲ್ಲಿಸುವಂತಹ ಉದಾರತೆಯನ್ನು ಲಾಭವಿಲ್ಲದೆ ಮಾಡಬಹುದೆಂಬುದನ್ನು ನಾವೆಲ್ಲರೂ ಹೇಗೆ  ನಂಬಬಹುದು?

ಸಿಎಸ್ಆರ್ ಹಣವನ್ನು ಖಾಸಗಿ ಶಾಲೆಗಳಿಗೆ ಕೊಡಿಸುವ ಬದಲು ಸರಕಾರವೇ ನೇರ ಜವಾಬ್ದಾರಿಯನ್ನು ತೆಗೆದುಕೊಂಡು ಒಂದು ವಿಶೇಷ ತಂಡವನ್ನು ರಚಿಸಿ , ಕಾರ್ಯನಿರ್ವಹಿಸಿ ಸರಕಾರಿ ಶಾಲೆಗಳಿಗೆ ನ್ಯಾಯ ಒದಗಿಸಬಹುದಾಗಿತ್ತು ಖಾಸಗಿ ಶಾಲೆಗಳಿಗೆ ಜವಾಬ್ದಾರಿ ನೀಡಿ ಸಿಎಸ್ಆರ್ ಹಣವನ್ನು ಶಾಲೆಗೆ ನೇರ ಒದಗಿಸಿಕೊಡುವುದರ ಹಿಂದಿನ ಉದ್ದೇಶವಾದರೂ ಏನು?  ಸರಕಾರ ಇದಕ್ಕೆ ಉತ್ತರ ಕೊಡಬೇಕಾಗಿದೆ. ನಾವು ಕರ್ನಾಟಕದ ಪ್ರಜೆಗಳಾಗಿ ಯುವಜನರಾಗಿ ಈ ನಾಡಿನಲ್ಲಿ  ಖರ್ಚಾಗುತ್ತಿರುವ ಹಣಕಾಸಿನ ಆಯವ್ಯದ ವಿವರಗಳು ಪಾರದರ್ಶಕವಾಗಿ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.

admin
the authoradmin

ನಿಮ್ಮದೊಂದು ಉತ್ತರ