Articles

ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ… ಇದು ಜಗದಕವಿ ಯುಗದಕವಿಯ ಬದುಕು-ಬರಹದ ಕಥೆ

ರಾಷ್ಟ್ರಕವಿ ಕುವೆಂಪು ನಮಗೊಂದು ಹೆಮ್ಮೆ…ಡಿ.29 ಕುವೆಂಪು ಜನ್ಮದಿನ. ಈ ಸಂದರ್ಭದಲ್ಲಿ  ಅವರ ನೆನಪು ತುಂಬಾ ಕಾಡುತ್ತದೆ. ಅದರಲ್ಲೂ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಓಡಾಡುವರಿಗೆ ಸದಾ ನೆನಪಾಗಿ ನಮ್ಮ ಸುತ್ತಲೂ ಆವರಿಸಿಕೊಳ್ಳುತ್ತಾರೆ. ಇಂತಹ ಜಗದಕವಿ ಯುಗದಕವಿಯ ಕುರಿತಂತೆ ಬರಹಗಾರರಾದ ಕುಮಾರಕವಿ ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.. ಓದಿದ ಬಳಿಕ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ  ಹಾಕಿ ಬಿಡಿ…

“ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ” ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, ಪ್ರಬಂಧ, ಅಂಕಣ, ಭಾಷಣ, ಲೇಖನ, ಶಿಶುಸಾಹಿತ್ಯ, ಅನುವಾದ, ವಿಮರ್ಶೆ, ಆತ್ಮಕಥೆ, ಸಿನಿಮಾ ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ, ಜೀವನಚರಿತ್ರೆ, ರಗಳೆ ಭಾವಗೀತೆ, ಪದಕೋಶ, ಪತ್ರಿಕೋದ್ಯಮ, ರಾಜಕಾರಣ, ಆರ್ಥಿಕಜ್ಞಾನ, ಇಂಗ್ಲಿಷ್‌ ಸಾಹಿತ್ಯ ಮುಂತಾದ ಪ್ರಾಕಾರಗಳಲ್ಲಿ ಒಟ್ಟು 75 ಕೃತಿ ಸೃಜಿಸಿ ಯಶಸ್ವಿಯಾದ ಪ್ರಪಂಚದ ಏಕಮೇವಾದ್ವಿತೀಯ ವರಕವಿ.

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ಶಿವಮೊಗ್ಗದ ತೀರ್ಥಹಳ್ಳಿ ಬಳಿ ಕುಪ್ಪಳ್ಳಿಯ ಶ್ರೀಮತಿ ಸೀತಮ್ಮ ಶ್ರೀ ವೆಂಕಟಪ್ಪಗೌಡರ ಪುತ್ರರತ್ನರಾಗಿ 29.12.1904ರಂದು ಹಿರೀಕೊಡಿಗೆಯಲ್ಲಿ ಜನಿಸಿದರು. ಐಗಳಮಠ ಗ್ರಾಮೀಣಶಾಲೆ ಶಿಕ್ಷಣ ಮುಗಿಸಿ 1929ರಲ್ಲಿ ಮೈ.ವಿ.ವಿ. ಇಂದ ಎಂ.ಎ. ಪದವಿಗಳಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕ ಸೇವೆ ಆರಂಭ. ನಂತರ ಮೈಸೂರು ಯುವರಾಜ ಕಾಲೇಜಿನಲ್ಲಿ ಪ್ರವಾಚಕರಾಗಿದ್ದು ಶೀಘ್ರದಲ್ಲೆ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ- ಪ್ರಾಂಶುಪಾಲರಾಗಿ ವೃತ್ತಿಜೀವನ ಕೈಗೊಂಡರು.

ಬಾಲ್ಯದಿಂದಲೇ ಪ್ರಕೃತಿ ಆರಾಧಕರಾಗಿ ರಾಮಕೃಷ್ಣಪರಮಹಂಸ ವಿವೇಕಾನಂದ ಮುಂತಾದ ಮಹಾತ್ಮರ ಆ[ವಿ]ಚಾರಗಳಿಂದ ಪ್ರಭಾವಿತರಾದರು. ಪದ್ಮ[ವಿ]ಭೂಷಣ, ಅಭಿನವಪಂಪ, ರಾಷ್ಟ್ರಕವಿ, ನಾಡೋಜ, ಜಗದಕವಿ- ಯುಗದಕವಿ, ಕರ್ನಾಟಕರತ್ನ, 4ವಿ.ವಿ.ಯಿಂದ ಡಿ.ಲಿಟ್-ಗೌ.ಡಾಕ್ಟರೇಟ್‌ ಪುರಸ್ಕೃತ ಏಕೈಕ ಸಾಹಿತಿ! ಕುವೆಂಪು ಕುರಿತು ಬೇರೆ ಲೇಖಕರು ಬರೆದ 22 ವಿವಿಧ ಕೃತಿಗಳಿವೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ 24ಪ್ರಶಸ್ತಿ ಪುರಸ್ಕಾರ ಬಿರುದುಗಳು ಸಂದಿರುವುದು ವಿಶ್ವದಾಖಲೆ! ಅಖಿಲ ಭಾರತ 39ನೇ ಕನ್ನಡ ಸಾಹಿತ್ಯ ಸಮ್ಮೇಳನ[1957] ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರವು ಇವರ ಜನ್ಮದಿನ ವನ್ನು “ವಿಶ್ವಮಾನವ ದಿನ” ಎಂದು ಘೋಷಿಸಿ ಆಚರಣೆ ಮಾಡುತ್ತಿದೆ. ರಾಜ್ಯದ 8 ವಿ.ವಿ.ಗಳ ವಿಶ್ವಕೋಶದಲ್ಲಿ ಮತ್ತು ಗ್ರಂಥಸೂಚಿಯಲ್ಲಿ ಕುವೆಂಪುರವರ ಬಗ್ಗೆ ಉಲ್ಲೇಖವಿದೆ

ಜಗತ್ತಿನ 32 ಭಾಷೆಗಳಲ್ಲಿ ಇವರ ಕೃತಿಗಳು ಅನುವಾದಗೊಂಡಿದೆ ಬಹುಶಃ ರಾಜಕೀಯ ಇಲ್ಲದಿದ್ದರೆ ಮತ್ತು ಇನ್ನೊಂದೆರಡು ವರ್ಷ ಬದುಕಿದ್ದಿದ್ದರೆ ನೋಬೆಲ್ ಪ್ರಶಸ್ತಿ ದೊರಕುತ್ತಿತ್ತು?ಎಂಬುದರಲ್ಲಿ ಸಂಶಯವಿಲ್ಲ!   1956-60 ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯ ಗದ್ದುಗೆ ಏರಿ, ರಾಜ್ಯ, ರಾಷ್ಟ್ರ, ಯುಜಿಸಿ ನಿಬ್ಬೆರಗಾಗುವಂಥ ನೂರಾರು ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದರು.  ವಿ.ವಿ.ಆಡಳಿತದಲ್ಲಿ ಹಗಲಿರುಳು ತೊಡಗಿಸಿಕೊಂಡು ಅಧ್ಯಾಪಕರ, ಸಂಶೋಧಕರ ಹಾಗೂ ಅಧ್ಯಾಪಕೇತರರ ವಿಶ್ವಾಸ-ಗೌರವ ಗಳಿಸಿದರು. 1960ರಲ್ಲಿ ಅಂದಾಜು 800 ಎಕರೆ ವಿಸ್ತೀರ್ಣವುಳ್ಳ  ರಾಜ್ಯದ ಪ್ರಪ್ರಥಮ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ವಿಭಾಗಗಳ ಕೇಂದ್ರ ’ಮಾನಸ ಗಂಗೋತ್ರಿ’ ಎಂಬ ಕನಸಿನ ಕೂಸಿನ ಜನಕ!

ಅಧ್ಯಯನಾಂಗ, ಸಂಶೋಧನಾಂಗ, ಪ್ರಸಾರಾಂಗ, ಮುದ್ರಣಾಲಯ, ಆಡಳಿತಾಂಗ ರೂವಾರಿ ಹಾಡುಗಾರಿಕೆ ಮತ್ತು ವಾದ್ಯ ಸಂಗೀತ-ನೃತ್ಯ-ನಾಟಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಪದವಿ, ಬೋಧನೆ- ಸಂಶೋಧನೆಗೆಂದು ಲಲಿತ ಕಲೆಗಳ ಕಾಲೇಜು ಸ್ಥಾಪಿಸಿದ ಪಿತಾಮಹ! ಮಾನವಿಕ, ವಿಜ್ಞಾನ, ವಾಣಿಜ್ಯ ನಿಖಾಯಗಳನ್ನು ಪ್ರತ್ಯೇಕಿಸಿ ಆಡಳಿತ+ ಅಧ್ಯಯನ ವಿಕೇಂದ್ರೀಕರಣ ಗೊಳಿಸಿದ [ವಿ]ಜ್ಞಾನಿ!  ಕನ್ನಡ ವಿಶ್ವಕೋಶ, ಕನ್ನಡ ಗ್ರಂಥಸೂಚಿ, ಎಪಿಗ್ರಾಫಿ ಕರ್ನಾಟಕ, ಮಾನವಿಕ ಕರ್ನಾಟಕ, ವಿಜ್ಞಾನಕ ರ್ನಾಟಕ, ಪ್ರಬುದ್ಧ ಕರ್ನಾಟಕ, ನಾಲ್ಕಾಣೆ ಪುಸ್ತಕ ಮುಂತಾದ ನೂರಾರು ನೂತನ ಮಾದರಿ ಪ್ರಕಟಣೆಗಳಿಗೆ ನಾಂದಿಹಾಡಿದ ಸರಸ್ವತಿಪುತ್ರ! ತತ್‌ ಫಲವಾಗಿ ಉನ್ನತಾಧ್ಯಯನ ಮತ್ತು ಸಂಶೋಧನ ಕ್ಷೇತ್ರದಲ್ಲಿ ರಾಷ್ಟ್ರ- ಅಂತರ್‌ರಾಷ್ಟ್ರ ಮಟ್ಟದ ವಿದ್ವಾಂಸರುಗಳು ತಯಾರಾಗಿ ಅವರ ಅಧಿಕಾರಾವಧಿಯಲ್ಲಿ ಪ್ರಪಂಚಖ್ಯಾತಿ ಪಡೆಯಿತು ಮೈಸೂರು ವಿಶ್ವವಿದ್ಯಾನಿಲಯ! ಭುವನೇಶ್ವರಿಯ ಮಾನಸಪುತ್ರರಾಗಿ ಸಹಸ್ರಾರು ಕನ್ನಡ ಸೇವೆಸಲ್ಲಿಸಿದರು.

ವೃತ್ತಿ- ಪ್ರವೃತ್ತಿ ಸರಿಸಮವಾಗಿಸಿ ಎರಡೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದರು. 1949ರಲ್ಲಿ ’ರಾಮಾಯಣ ದರ್ಶನಂ’ ಮಹಾಕಾವ್ಯ ರಚಿಸಿ, 1968ರಲ್ಲಿ ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ’ಜ್ಞಾನಪೀಠಪ್ರಶಸ್ತಿ’ ತಂದುಕೊಟ್ಟರು! ಉತ್ತಮ ಶಿಷ್ಯವೃಂದ ತಯಾರು ಗೊಳಿಸುವಲ್ಲಿ ಸಿದ್ಧಹಸ್ತರು ಎನಿಸಿದ್ಧವರಲ್ಲಿ ಪ್ರಮುಖರು ದೇಜಗೌ, ಎಚ್ಚೆಸ್ಕೆ, ಸಿಪಿಕೆ, ಹಂಪನಾ, ಹಾ.ಮಾ.ನಾಯಕ್, ಪ್ರಭುಶಂಕರ್, ಪ್ರಹ್ಲಾದರಾವ್, ಜಿ.ಟಿ.ನಾರಾಯಣರಾವ್, ಉ.ಕಾ.ಸುಬ್ರಾಯಾಚಾರ್, ತಿಪ್ಪೇರುದ್ರಸ್ವಾಮಿ, ಮಲೆಯೂರು ಗುರುಸ್ವಾಮಿ, ಮುಂತಾದ ನೂರಾರು ವಿದ್ವಾಂಸರು!

ಸಾಹಿತ್ಯದ ವಿವಿಧ ಮಜಲುಗಳನ್ನು ನೋಡಿದ್ದೇ ಆದರೆ, ಕುವೆಂಪು ತಮ್ಮ ಚೊಚ್ಚಲ ಕವಿತೆ ಬರೆದದ್ದು ಇಂಗ್ಲಿಷ್ ಭಾಷೆಯಲ್ಲಿ. ಇವರ ಪ್ರಪ್ರಥಮ ಕವನ ಸಂಕಲನ: ’ದಿ ಬಿಗಿನರ್ಸ್ ಮ್ಯುಸ್’ ಓದಿದ ಕಸಿನ್ಸ್‌ಎಂಬ ಐರಿಷ್‌ಕವಿ ನೀಡಿದ ಸಲಹೆಯಂತೆ ಕನ್ನಡದಲ್ಲಿ ಕವಿತೆ ಬರೆಯಲು ಪ್ರಾರಂಭಿಸಿ ಕನ್ನಡವನ್ನೆ ಪ್ರಾಣವಾಗಿಸಿ ತಮ್ಮ ಬದುಕನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟರು. ಇವರ ಪ್ರಥಮ ಕವನಸಂಕಲನ; ಚೈತ್ರವೈಶಾಖ, ವಸಂತಾಗಮನ. ಕಥಾಸಂಕಲನ;- ಅಮಲನಕತೆ, ಕೊಳಲು.  ಕಾದಂಬರಿಗಳು;  ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ.  ಇತರೆ: ಪಾಂಚಜನ್ಯ, ನವಿಲು, ಪಕ್ಷಿಕಾಶಿ, ಚಂದ್ರಮಂಚಕೆ ಬಾಚಕೋರಿ, ಕಿಂದರಿಜೋಗಿ ಯಮನಸೋಲು, ರಕ್ತಾಕ್ಷಿ, ಮಹಾರಾತ್ರಿ, ಬೆರಳ್‌ಗೆಕೊರಳ್, ಶೂದ್ರತಪಸ್ವಿ, ಜಲಗಾರ, ಚಿತ್ರಾಂಗದ, ಮುಂತಾದವು ನವರತ್ನಗಳಂತೆ ಆ ಚಂದ್ರಾರ್ಕ ಮಿನುಗುತ್ತವೆ!

ಈ ಕೃತಿಗಳಲ್ಲಿ ಅವೆಷ್ಟೊ ನವನವೀನ ಪದಪುಂಜಗಳು ಕಾಣಸಿಗುತ್ತವೆ. ವೈವಿಧ್ಯಮಯ ಬಣ್ಣನೆ, ಮನೋಲ್ಲಾಸ ಗೊಳಿಸುತ್ತವೆ. ಅಸಂಖ್ಯಾತ ಮನುಷ್ಯ ಸಹಜ ಭಾವನೆ, ಪ್ರೀತಿ, ರಾಷ್ಟ್ರಪ್ರೇಮ, ನಾಡಪ್ರೇಮ, ರೈತಪ್ರೇಮ, ಕನ್ನಡಪ್ರೇಮ, ಆಧ್ಯಾತ್ಮಿಕತೆ, ಸತ್ ಸಾಕ್ಷಾತ್ಕಾರ ತುಂಬಿ ತುಳುಕುತ್ತವೆ.  ದಾಂಪತ್ಯ ಜೀವನಕ್ಕೆ ವೈದಿಕ ಧರ್ಮದ ಪರ್ಯಾಯವಾಗಿ ’ಮಂತ್ರಮಾಂಗಲ್ಯ’ ನವ್ಯಪದ್ಧತಿ ಸೃಷ್ಟಿಸಿ ಸರಳವಿವಾಹ ಪ್ರತಿಪಾದಿಸಿ ಕ್ರಾಂತಿಯೋಗಿಯಾದರು. ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ’ಬಾರಿಸು ಕನ್ನಡ ಡಿಂಡಿಮವ..’ ’ಮನುಜಮತ ವಿಶ್ವಪಥ’ ಎಲ್ಲಕ್ಕೂ ಮಿಗಿಲಾಗಿ ಸರ್ಕಾರದಿಂದ ಮಾನ್ಯತೆಗೊಂಡ ಅಧಿಕೃತ ನಾಡಗೀತೆ ’ಜೈಭಾರತಜನನಿಯತನುಜಾತೆ’ ಮುಂತಾದವು ಆಚಂದ್ರಾರ್ಕ ಮೊಳಗುತಿರುತ್ತವೆ!

ಕುವೆಂಪು ತಮ್ಮ ’ರಾಮಾಯಣ ದರ್ಶನಂ’ ಮಹಾನ್ ಕೃತಿ ರಚನೆಯ ಪ್ರಾರಂಭದಲ್ಲಿ ಜಗತ್ತಿನ ಕೆಲವು ಕವಿಶ್ರೇಷ್ಠರಿಗೆ, ಅಗ್ರಜರಿಗೆ, ಗುರುವೃಂದಕ್ಕೆ ಭಕ್ತಿ ಗೌರವಗಳಿಂದ ಪ್ರಥಮ ನಮನ ಸಲ್ಲಿಸಿದ್ದಾರೆ.

ಹೋಮರ್‌ಗೆ ವರ್ಜಿಲ್‌ಗೆ ಡಾಂಟೆ ಮೇಣ್ ಮಿಲ್ಟನ್‌ಗೆ, ನಾರಣಪ್ಪಂಗೆ ಮೇಣ್ ಪಂಪನಿಗೆ ಋಷಿವ್ಯಾಸ, ಭಾಸ ಭವಭೂತಿ ಮೇಣ್ ಕಾಳಿದಾಸ ಆದ್ಯರಿಗೆ, ನರಹರಿ ತುಲಸೀದಾಸ ಮೇಣ್ ಕೃತ್ತಿವಾಸಾದಿ, ನನ್ನಯ್ಯ ಫ಼ಿರ್ದೂಸಿ ಕಂಬ ಅರವಿಂದರಿಗೆ. ಇಡೀ ಕೃತಿಯನ್ನು ತಮ್ಮ ನೆಚ್ಚಿನ ಗುರು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿರುವ ಜತೆಗೆ ಇನ್ನಿತರ ಗುರು, ಸಹೋದ್ಯೋಗಿ, ಬಂಧು-ಮಿತ್ರರಿಗೂ ಕೃತಜ್ಞತೆಸಲ್ಲಿಸಿದ್ದಾರೆ. ಇದು ಅವರಲ್ಲಿದ್ದ ಅಪೂರ್ವಗುಣ ಅಮೋಘ ಮನಸ್ಥಿತಿ ಪ್ರತಿ ಬಿಂಬಿಸುತ್ತದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು, ಕನ್ನಡಕ್ಕಾಗಿ ಕೊರಳೆತ್ತು ನಿನ್ನ ಕೊರಳು ಪಾಂಚಜನ್ಯ ಆಗುವುದು, ಝೇಂಕಾರವನ್ನು ಸ್ವಯಂ ಪುಟ್ಟಪ್ಪನವರೆ ಅಳವಡಿಸಿಕೊಂಡು ಪ್ರಪಂಚದಾದ್ಯಂತ ಕನ್ನಡ ಭಾಷೆ-ಸಾಹಿತ್ಯ ಪಸರಿಸಲು ಬೇಕಾದ ಸೂಕ್ತ ಕ್ರಮ  ಕೈಗೊಂಡರು. ಆಸ್ತಿಕ, ನಿರಹಂಕಾರಿ, ನಿಸ್ವಾರ್ಥಿ, ಸಾತ್ವಿಕ ಆಹಾರ, ತಾತ್ವಿಕ ವಿಚಾರದ ಶ್ರೇಷ್ಠಮಾನವ. ಇವರನ್ನು ಪಡೆದ ಭಾರತೀಯರು/ಕನ್ನಡಿಗರು ಧನ್ಯರು! ಈ ಮಹಾಕವಿಯ ಬಗ್ಗೆ ಹಾಗೂ ಇವರ ಸಾಹಿತ್ಯದ ಬಗ್ಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಹಲವಾರು ಬಗೆಯಲ್ಲಿ ಪ್ರೌಢಪ್ರಬಂಧ ಮಂಡಿಸಿ ಡಾಕ್ಟರೇಟ್ (PhD) ಗಳಿಸಿದ್ದಾರೆ!

 

ರಾಷ್ಟ್ರಕವಿ ಕುವೆಂಪು ಅಂದ್ರೆ… ಹಿರಿಯರ ಬಣ್ಣನೆ ಹೇಗಿದೆ ಗೊತ್ತಾ? ನೀವೊಮ್ಮೆ ಓದಿ ಬಿಡಿ…!

admin
the authoradmin

16 ಪ್ರತಿಕ್ರಿಯೆಗಳು

  • ಜಗತ್ತಿನ ಏಕೈಕ ಅದ್ವಿತೀಯ ಕವಿ ಕೆ.ವಿ.ಪುಟ್ಟಪ್ಪ (ಕುವೆಂಪು) ಎಂಬ ಜಗದ ಕವಿ ಯುಗದ ಕವಿ ರವರ ಬಗ್ಗೆ ಕುಮಾರಕವಿಯವರ ಈ ಬರವಣಿಗೆಯನ್ನು ಓದಿದ ನಾನು ಪಾವನವಾದೆ. ಇಂಥಹ ಶ್ರೇಷ್ಠ ಲೇಖನ ಓದುವ ಸುವರ್ಣಾವಕಾಶ ಒದಗಿಸಿದ ಜನಮನ ಕನ್ನಡ ಪತ್ರಿಕೆಯ ಸಂಪಾದಕ ಮಂಡಳಿಗೆ ನನ್ನ ಸಹಸ್ರ ವಂದನೆ, ಧನ್ಯವಾದ,

  • ಜಗತ್ತಿನ ಏಕೈಕ ಅದ್ವಿತೀಯ ಕವಿ ಕೆ.ವಿ.ಪುಟ್ಟಪ್ಪ (ಕುವೆಂಪು) ಎಂಬ ಜಗದ ಕವಿ ಯುಗದ ಕವಿ ರವರ ಬಗ್ಗೆ ಕುಮಾರಕವಿಯವರ ಈ ಬರವಣಿಗೆಯನ್ನು ಓದಿದ ನಾನು ಪಾವನವಾದೆ. ಇಂಥಹ ಶ್ರೇಷ್ಠ ಲೇಖನ ಓದುವ ಸುವರ್ಣಾವಕಾಶ ಒದಗಿಸಿದ ಜನಮನ ಕನ್ನಡ ಪತ್ರಿಕೆಯ ಸಂಪಾದಕ ಮಂಡಳಿಗೆ ನನ್ನ ಸಹಸ್ರ ವಂದನೆ, ಧನ್ಯವಾದ, ಒಟ್ಟಾರೆ ಇದೊಂದು ಮಹಾನ್ ಲೇಖನ….

  • ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಲೇಖನವನ್ನು ಬಹಳ ಸಂಕ್ಷಿಪ್ತವಾಗಿ ಆದರೆ ಮಾಹಿತಿಪೂರ್ಣವಾಗಿ ಬರೆದ ಕುಮಾರಕವಿ ನಟರಾಜ ರವರಿಗೆ ಧನ್ಯವಾದ.
    ಜನಮನ ಕನ್ನಡ ಪತ್ರಿಕೆಯವರಿಗೂ ಸಹ ಅನೇಕ ನಮಸ್ಕಾರಗಳು.
    ಸತ್ಯನಾರಾಯಣ, ಮೈವಿವಿ ನಿವೃತ್ತ ಉದ್ಯೋಗಿ, ಮೈಸೂರು.

  • ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಲೇಖನವನ್ನು ಬಹಳ ಸಂಕ್ಷಿಪ್ತವಾಗಿ ಆದರೆ ಮಾಹಿತಿಪೂರ್ಣವಾಗಿ ಬರೆದ ಕುಮಾರಕವಿ ನಟರಾಜ ರವರಿಗೆ ಧನ್ಯವಾದ.
    ಜನಮನ ಕನ್ನಡ ಪತ್ರಿಕೆಯವರಿಗೂ ಸಹ ಅನೇಕ ನಮಸ್ಕಾರಗಳು.
    ಸತ್ಯನಾರಾಯಣ, ಮೈವಿವಿ ನಿವೃತ್ತ ಉದ್ಯೋಗಿ, ಮೈಸೂರು 570009

  • ತುಂಬ ಅಚ್ಚುಕಟ್ಟಾದ ರೀತಿಯಲ್ಲಿ ಹಾಗೂ ಆಕರ್ಷಕ ಶೈಲಿಯಲ್ಲಿ ಬರೆದಿರುವ ಕುಮಾರಕವಿಯವರ ಕುವೆಂಪುರವರ ಲೇಖನ ನನಗೆ ತುಂಬ ಇಷ್ಟವಾಯಿತು, ಎಲ್ಲರಿಗೂ ಧನ್ಯವಾದ, ನಮಸ್ಕಾರ

  • ಕುವೆಂಪುರವರ ಬಾಯಿಂದ ಹೊರಟ ಪದವನ್ನೆ ಕಾವ್ಯನಾಮ ಆಗಿಸಿಕೊಂಡ ನಟರಾಜರವರ ಸಹೃದಯವಂತಿಕೆ ಮತ್ತು ಕಾಲಕ್ರಮೇಣ ಇವರು ಮಾಡಿದ ಸಾಹಿತ್ಯ ಸಾಧನೆ ಕನ್ನಡಿಗರೆಲ್ಲರೂ ಮೆಚ್ಚುವಂತಾದ್ದು ಎಂದರೆ ಉತ್ಪ್ರೇಕ್ಷೆ ಆಗಲಾರದು, ಏನೇಆಗಲಿ ಅದೃಷ್ಟವಂತ ಕುಮಾರಕವಿಯವರಿಗೆ ಅಭಿನಂದನೆ ಸಲ್ಲಿಸೋಣ….

  • ಕುವೆಂಪುರವರ ಬಾಯಿಂದ ಹೊರಟ ಪದವನ್ನೆ ಕಾವ್ಯನಾಮ ಆಗಿಸಿಕೊಂಡ ನಟರಾಜರವರ ಸಹೃದಯವಂತಿಕೆ ಮತ್ತು ಕಾಲಕ್ರಮೇಣ ಇವರು ಮಾಡಿದ ಸಾಹಿತ್ಯ ಸಾಧನೆ ಕನ್ನಡಿಗರೆಲ್ಲರೂ ಮೆಚ್ಚುವಂತಾದ್ದು ಎಂದರೆ ಉತ್ಪ್ರೇಕ್ಷೆ ಆಗಲಾರದು, ಏನೇಆಗಲಿ ಅದೃಷ್ಟವಂತ ಕುಮಾರಕವಿಯವರಿಗೆ ಅಭಿನಂದನೆ ಸಲ್ಲಿಸೋಣ….ಮಂಡಕಳ್ಳಿ ಶಾಂತಕುಮಾರ್, ಆಧುನಿಕ ತಂತ್ರಜ್ಞಾನ ರೈತ

  • ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಲೇಖನವನ್ನು ಬಹಳ ಸಂಕ್ಷಿಪ್ತವಾಗಿ ಆದರೆ ಮಾಹಿತಿಪೂರ್ಣವಾಗಿ ಬರೆದ ಕುಮಾರಕವಿ ನಟರಾಜ ರವರಿಗೆ ಧನ್ಯವಾದ.
    ಜನಮನ ಕನ್ನಡ ಪತ್ರಿಕೆಯವರಿಗೂ ಸಹ ಅನೇಕ ನಮಸ್ಕಾರಗಳು.
    ಸತ್ಯನಾರಾಯಣ, ಮೈವಿವಿ ನಿವೃತ್ತ ಉದ್ಯೋಗಿ, ಮೈಸೂರು 570009.

ನಿಮ್ಮದೊಂದು ಉತ್ತರ

Translate to any language you want