ಕೆ.ಆರ್.ನಗರ(ಜಿಟೆಕ್ ಶಂಕರ್): ಮಹಾಶಿವರಾತ್ರಿ (ಫೆ.15ನೇ ಭಾನುವಾರ) ಹಬ್ಬದ ದಿನದಿಂದ ಆರಂಭವಾಗಿ ಮಾ.12ನೇ ಗುರುವಾರದ ಯುಗಾದಿ ಹಬ್ಬದವರೆಗೆ ನಡೆಯುವ ಇತಿಹಾಸ ಪ್ರಸಿದ್ದ ಕಪ್ಪಡಿ ವಾರ್ಷಿಕ ಜಾತ್ರೆಯ ಯಶಸ್ಸಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಹೆಬ್ಬಾಳು ಹೋಬಳಿಯ ಕಪ್ಪಡಿ ಕ್ಷೇತ್ರದಲ್ಲಿ ಶನಿವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸತ್ಯ ಮತ್ತು ನಿಷ್ಠೆಗೆ ಹೆಸರಾಗಿರುವ ನಮ್ಮೂರಿನ ಜಾತ್ರೆಗೆ ಬರುವವರಿಗೆ ಮೂಲ ಸವಲತ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ಕಪ್ಪಡಿಯ ರಾಚಪ್ಪಾಜಿ, ಸಿದ್ದಪ್ಪಾಜಿ ಮತ್ತು ಚನ್ನಾಜಮ್ಮನವರ ಗದ್ದುಗೆ, ಕಾವೇರಿ ನದಿ ಹಾಗೂ ಜಾತ್ರೆಗೆ ಭಕ್ತರು ನೆರೆಯುವ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡಬೇಕೆಂದರು.

ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಮಠದ ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸಿ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದರು. ಜಾತ್ರೆಗೆ ಜಿಲ್ಲೆಯಿಂದಲ್ಲದೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಬರುವುದರಿಂದ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಸಮರ್ಪಕ ಸಾರಿಗೆ ಅನುಕೂಲ ಕಲ್ಪಿಸಬೇಕು ಎಂದು ಆದೇಶಿಸಿದರು.
ವಾಹನಗಳ ಪಾರ್ಕಿಂಗ್ ಮಾಡಲು ನಿಗದಿತ ಸ್ಥಳ ಗೊತ್ತುಪಡಿಸಿ ಸರಿಯಾದ ಮಾರ್ಗ ಫಲಕಗಳನ್ನು ಅಳವಡಿಸಿ ಎಂದ ಶಾಸಕರು ಸಾಧ್ಯವಾದಷ್ಠು ಪ್ಲಾಸ್ಟಿಕ್ ಮುಕ್ತವಾದ ಜಾತ್ರೆ ನಡೆಸಲು ಮಠದವರು ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರಲ್ಲದೆ, ಜಾತ್ರಾ ಸಂಪರ್ಕ ರಸ್ತೆ ಹಾಗೂ ಗದ್ದುಗೆಯ ಸುತ್ತ ನಿತ್ಯ ಮೂರು ಬಾರಿ ನೀರು ಹಾಕಬೇಕು ಅದರೊಂದಿಗೆ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಬಟ್ಟೆ ಬದಲಾಯಿಸಲು ಸುರಕ್ಷಿತ ಪ್ರದೇಶ ಗುರುತಿಸಿ ಇದರೊಂದಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಮಾಡಬೇಕೆಂದು ತಿಳಿಸಿದರು.

ಮಹಾ ಶಿವರಾತ್ರಿಯಿಂದ ಯುಗಾದಿಯವರೆಗೆ ರಾಮಸಮುದ್ರ ಮತ್ತು ಚಾಮರಾಜ ನಾಲೆಗಳ ಎಡ ಹಾಗೂ ಬಲದಂಡೆ ನಾಲೆಗಳಿಗೆ ಕಾವೇರಿ ನದಿಯಿಂದ ನಿರಂತರವಾಗಿ ನೀರು ಹರಿಯ ಬಿಡಬೇಕೆಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ ಡಿ.ರವಿಶಂಕರ್ ಇದರೊಟ್ಟಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಪೊಲೀಸರಿಗೆ ಮಾರ್ಗದರ್ಶನ ಮಾಡಿದರು. ಸೆಸ್ಕಾಂ ಇಲಾಖೆಯವರು ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಜತೆಗೆ ಇವರೊಂದಿಗೆ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಾತ್ರಾ ಸಂಪರ್ಕ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಕೂಡಲೇ ಆರಂಭಿಸಬೇಕೆಂದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ.ಇಓ ವಿ.ಪಿ.ಕುಲದೀಪ್, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಸದಸ್ಯ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಹೆಬ್ಬಾಳು ಗ್ರಾ.ಪಂ.ಮಾಜಿ ಅಧ್ಯಕ್ಷ ಕಾಂತರಾಜು, ಪಿಡಿಒ ಸರಿತಾ ಮತ್ತಿತರರು ಇದ್ದರು.








