ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಜಯನಗರ 3ನೇ ಹಂತದಲ್ಲಿ 6.13 ಎಕರೆ ಜಾಗವನ್ನು ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಈ ಆಸ್ತಿಯ ಅಂದಾಜು ಮೌಲ್ಯ ಬರೋಬ್ಬರಿ 120 ಕೋಟಿ ರೂ.ಗಳಿಗೂ ಹೆಚ್ಚು ಎಂದು ಹೇಳಲಾಗಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಅಕ್ರಮ ಒತ್ತುವರಿ ವಿಚಾರ ಬೆಳಕಿಗೆ ಬರುತ್ತದೆ.
ಎಂಡಿಎ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅವರ ಸೂಚನೆ ಮೇರೆಗೆ, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಎಂಡಿಎ ಹಾಗೂ ಮೈಸೂರು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಶನಿವಾರ ಮುಂಜಾನೆ 5.30 ರಿಂದ ಬೆಳಗ್ಗೆ 9.30ರವರೆಗೆ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದರು.
ಅನಧಿಕೃತವಾಗಿ ವಾಸವಿದ್ದವರನ್ನು ಹೊರಗೆ ಕಳುಹಿಸಿ ಶೆಡ್‌ಗಳನ್ನು ತೆರವು ಮಾಡಲಾಯಿತು. ಆಸ್ತಿಯನ್ನು ಸಂರಕ್ಷಿಸಿದ ಅಧಿಕಾರಿಗಳು, ಫಲಕ ಅಳವಡಿಸಿದರು. ಸುತ್ತಲೂ ತಂತಿ ಬೇಲಿ ಅಳವಡಿಸುವ ಕೆಲಸ ಆರಂಭಿಸಿದ್ದಾರೆ. ಮೈಸೂರು ತಾಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸವೇ ನಂಬರ್ 264ರ 6.13 ಎಕರೆ ಜಾಗವನ್ನು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ 42 ವರ್ಷಗಳ ಹಿಂದೆ ವಿಜಯನಗರ 3ನೇ ಹಂತದ ವಸತಿ ಬಡಾವಣೆ ನಿರ್ಮಿಸಲು ಭೂಸ್ವಾಧೀನ ಮಾಡಿತ್ತು.

1981ರಲ್ಲಿ ಪ್ರಾಥಮಿಕ ಹಾಗೂ 1984ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 98,670 ರೂ.ಗಳ ಪರಿಹಾರವನ್ನೂ ನೀಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಅವರ ತಮ್ಮ ಕೋಂ ಮಂಡ ಅಲಿಯಾಸ್ ತಮ್ಮಯ್ಯ ಎಂಬವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲೂ ಮುಡಾ ಪರವಾಗಿ ತೀರ್ಪು ಬಂದಿತ್ತು.
ಸದರಿ ಜಾಗವನ್ನು ಮುಡಾ ಕ್ರೀಡಾಂಗಣಕ್ಕಾಗಿ ಮೀಸಲಿರಿಸಿತ್ತು. ಭೂಮಾಲೀಕರಿಗೆ ನಿಯಾಮನುಸಾರ ಪರಿಹಾರವನ್ನು ಒದಗಿಸಿತ್ತಾದರೂ, ಕೆಲವರು ನ್ಯಾಯಾಲಯದ ಮೊರೆ ಹೋಗಿ ಆ ಸ್ಥಳದಲ್ಲಿ ಶೆಡ್‌ಗಳನ್ನು ನಿರ್ಮಿಸಿ ಅನಧಿಕೃತವಾಗಿ ವಾಸವಿದ್ದರು.
ಈ ಹಿಂದೆ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಲೆಂದು ಹಲವು ಬಾರಿ ತೆರಳಿದಾಗ ಅನಧಿಕೃತವಾಗಿ ವಾಸವಿದ್ದವರು ತಮ್ಮ ಹಸುಗಳನ್ನು ಬಿಟ್ಟು ಬೆದರಿಸಿ ವಾಪಸ್ ಕಳುಹಿಸಿದ್ದರು. ಹಾಗಾಗಿ ಹಲವು ವರ್ಷಗಳಿಂದ ಬೆಲೆಬಾಳುವ ಪ್ರಮುಖ ಭೂಮಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲು ವಿಳಂಬವಾಗಿತ್ತು. ದಾಖಲೆಗಳೆಲ್ಲವೂ ಪ್ರಾಧಿಕಾರದ ಹೆಸರಿನಲ್ಲಿರುವ ಕಾರಣ ತೆರವುಗೊಳಿಸಿ ಆಸ್ತಿಯನ್ನು ಸಂರಕ್ಷಿಸಲಾಗಿದೆ ಎಂದು ಕೆ.ಆರ್. ರಕ್ಷಿತ್ ತಿಳಿಸಿದ್ದಾರೆ.

ಕಾರ್ಯಾಚರಣೆಗೆ ಅಡ್ಡಿ ಯತ್ನ: ಪ್ರಾಧಿಕಾರದ ಅಧಿಕಾರಿಗಳು ತೆರವು ಕಾರ್ಯಾಚರಣೆಗೆಂದು ತೆರಳಿದಾಗ ಸ್ಥಳದಲ್ಲಿದ್ದವರು ಅಡ್ಡಿಪಡಿಸಿ ಜಗಳಕ್ಕೆ ಮುಂದಾಗಿದ್ದರು. ಅಲ್ಲದೇ ಕಾರ್ಯಾಚರಣೆ ನಡೆಸುತ್ತಿದ್ದ ಜೆಸಿಬಿ ಮುಂದೆ ಮಲಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆಯೊಡ್ಡಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು. ಪೊಲೀಸರು ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳನ್ನು ವ್ಯಾನ್‌ಗೆ ಕೂರಿಸಿಕೊಂಡು ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.
ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ನೇತೃತ್ವದಲ್ಲಿ 50 ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿದರು. ಕಾರ್ಯಾಚರಣೆಯಲ್ಲಿ ಎಂಡಿಎ ಕಾರ್ಯದರ್ಶಿ ಕೆ.ಜಾನ್ಸನ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ನಾಗೇಶï, ಮಹೇಶï, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನೀತ, ಭೂಸ್ವಾಧೀನ ಶಾಖೆಯ ಸಚಿನ್ ಭಾಗವಹಿಸಿದ್ದರು.








