LatestNews

ತರಬೇತಿ ಕಾರ್ಯಾಗಾರದಲ್ಲಿ ಸಹಕಾರ ಕ್ಷೇತ್ರಕ್ಕೆ ಕೇಂದ್ರದ ಮನ್ನಣೆ ಶ್ಲಾಘಿಸಿದ ಜಯಕರ ಶೆಟ್ಟಿ ಬಿ.ಇಂದ್ರಾಳಿ

ಕುಶಾಲನಗರ(ರಘುಹೆಬ್ಬಾಲೆ): ಸಹಕಾರ ಕ್ಷೇತ್ರದ ಅಭಿವೃದ್ಧಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಸದೃಢಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ನಿರ್ದೇಶಕ ಜಯಕರ ಶೆಟ್ಟಿ ಬಿ.ಇಂದ್ರಾಳಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಬೊಳ್ಳೂರು ಕ್ಯಾಪ್ಟನ್ ಕ್ರೌನ್ ಹೋಟೆಲ್ ಸಭಾಂಗಣದಲ್ಲಿ ಮೈಸೂರು ವಿಭಾಗದ ನೌಕರರ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ಠೇವಣಿ, ಸಾಲ ವಿತರಣೆ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸಹಕಾರಿ ಕ್ಷೇತ್ರವನ್ನು ಆರ್ಥಿಕ ವ್ಯವಸ್ಥೆಗೆ ಮಾತ್ರ ಸೀಮಿತಗೊಳಿಸದೆ,ಎಲ್ಲಾ ಅಗತ್ಯ ವಸ್ತುಗಳ ಮಾರಾಟ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರದಿಂದ ನಡೆಸುವ ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆಗೆ  ಕಾರಣೀಭೂತರಾಗಬೇಕು ಎಂದರು.

ಕೊಡಗು ಜಿಲ್ಲಾ ಸಹಾಯಕ ಯೂನಿಯನ್ ಮಡಿಕೇರಿ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಸ್ವಾರ್ಥ ಸೇವೆ ಹಾಗೂ ಪಾರದರ್ಶಕ ಆಡಳಿತದಿಂದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಾಧ್ಯ ಎಂದರು.ಹಿರಿಯ ಸಹಕಾರಿಗಳ‌ ಮಾರ್ಗದರ್ಶನ, ಹಾಕಿಕೊಟ್ಟ ಭದ್ರ ಬುನಾದಿ‌ ಹಾಗೂ ಶ್ರಮದಿಂದ ಇಂದು‌ ಸಹಕಾರ ಕ್ಷೇತ್ರ ಹೆಚ್ಚು ಮುಂದುವರೆದಿದೆ.‌ನಾವು ಕೂಡ‌ ಸಹಕಾರ ಕ್ಷೇತ್ರವನ್ನು  ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕಿದೆ ಎಂದರು.‌

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಮಾತನಾಡಿ,ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಧಿಕಾರಿಗಳು,ಆಡಳಿತ ವರ್ಗಕ್ಕೆ ತರಬೇತಿ ತುಂಬ ಅಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಹಕಾರ ಕಾಯಿದೆ, ನಿಯಮಗಳಿಗೆ ತಿದ್ದುಪಡಿಗೆ ಅನುಗುಣವಾಗಿ ಸಂಘಗಳನ್ನು ಸದೃಢವಾಗಿ ನಡೆಸಿಕೊಂಡು ಹೋಗಬೇಕು ಎಂಬ ದೂರಾಲೋಚನೆಯಲ್ಲಿ ಇರಬೇಕಾಗಿದೆ.ಈ ಹಿಂದೆ ಸಹಕಾರ ಕ್ಷೇತ್ರದಲ್ಲಿ ಯಾವುದೇ ಜಾತಿ,ಪಕ್ಷ ಕಂಡು ಬರುತ್ತಿರಲಿಲ್ಲ.ಆದರೆ ಈಗ ಜಾತಿ,ಪಕ್ಷದ ಬಣ್ಣ ಕಂಡು ಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಹಕಾರ ಕ್ಷೇತ್ರದಲ್ಲಿ ವ್ಯಾಜ್ಯ ಇರುತ್ತಿರಲಿಲ್ಲ.ಮೂಲ ಸಿದ್ದಾಂತದ ಸಹಕಾರಿ ಚಳವಳಿ ಯೋಗಿ ಈಗ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭ ಚಿಕ್ಕಮಗಳೂರು ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ ದಿವಾಕರ್,ಕೊಡಗು ಸಹಕಾರ ಯೂನಿಯನ್ ನಿಯಮಿತ ಉಪಾಧ್ಯಕ್ಷ ಹೆಚ್.ಕೆ.ಮಾದಪ್ಪ ,ನಿರ್ದೇಶಕರಾದ ಕೆ.ಟಿ. ಪರಮೇಶ್,ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಎಂ.ಶ್ಯಾಮಲಾ, ಎಸ್.ಆರ್.ಸುನಿಲ್ ರಾವ್, ಕೊಡಗು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ.ರವಿಕುಮಾರ್, ಕೆಐಸಿಎಂ ಪ್ರಾಂಶುಪಾಲ ಪುಟ್ಟಸ್ವಾಮಿ,ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಇತರರು ಪಾಲ್ಗೊಂಡಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಗುರುಸ್ವಾಮಿ, ಸಿ.ಎ.ರುದ್ರೇಶ್ ಪಟೇಲ್, ಎಂ.ಎಂ.ಶ್ಯಾಮಲ ಅವರು,ಸಹಕಾರ ಸಂಘಗಳ ಕಾಯ್ದೆ-ಇತ್ತೀಚಿನ ತಿದ್ದುಪಡಿ, ಪದಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಜವಬ್ದಾರಿ-ಕರ್ತವ್ಯಗಳು, ಆದಾಯ ತೆರಿಗೆ ಹಾಗೂ ಜಿಎಸ್ಟಿ ಕುರಿತು, ಮಹಾಮಂಡಳದ ಕಾರ್ಯಚಟುವಟಿಕೆ ಕುರಿತು ಉಪನ್ಯಾಸ ನೀಡಿದರು. ಮೈಸೂರು ವಿಭಾಗದ ಎಂಟು ಜಿಲ್ಲೆಯ ಸಹಕಾರ ಪತ್ತಿನ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want