ಕುಶಾಲನಗರ(Raghu Hebbale): ಕನ್ನಡ ನಾಡು ಕಂಡ ಹೆಮ್ಮೆಯ ಸೂಕ್ಷ್ಮಪ್ರಜ್ಞಾ ಸಾಹಿತಿ ಡಾ. ಸಿದ್ಧಲಿಂಗಯ್ಯರವರ ಹೋರಾಟ ಅನುಕರಣೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಕೊಡಗು ಜಿಲ್ಲಾ ಘಟಕ ವತಿಯಿಂದ ನಾಡೋಜ ಡಾ. ಸಿದ್ದಲಿಂಗಯ್ಯ ಜನ್ಮದಿನದ ಸ್ಮರಣಾರ್ಥವಾಗಿ ಗುಡ್ಡೆಹೊಸೂರು ರೈಸಿಂಗ್ ಸೂರ್ಯ ಹೋಂಸ್ಟೇ ಸಭಾಂಗಣದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ, ವಿಚಾರಗೋಷ್ಠಿ,ಗೀತಾಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತ್ಯದ ಮೂಲಕ ಪ್ರತಿಭಟನೆಯನ್ನು ದಾಖಲಿಸಿದರೂ ಎಂದಿಗೂ ಹಿಂಸೆಯನ್ನು ಬೆಂಬಲಿಸಲಿಲ್ಲ. ಸಮಸಮಾಜಕ್ಕೆ ಅವರು ಸದಾ ಮಿಡಿಯುತ್ತಿದ್ದರು. ಹಿರಿಯ ಕವಿಗಳ ಆದರ್ಶ ಬದುಕು, ಹೋರಾಟ ವಿದ್ಯಾರ್ಥಿ ಯುವ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು.ಡಾ.ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದರು.
ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಸಿದ್ಧಲಿಂಗಯ್ಯನವರು ದಲಿತ ಬಂಡಾಯ ಸಾಹಿತಿ ಎಂದೇ ಖ್ಯಾತಿ ಪಡೆದವರು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಖಜಾಂಚಿ ಶಿವರುದ್ರಯ್ಯ ಮಾತನಾಡಿ, ಬಾಲ್ಯದಿಂದಲೂ ಜಾಣ್ಮೆಯನ್ನು ಮೈಗೂಡಿಸಿಕೊಂಡಿದ್ದ ಸಿದ್ಧಲಿಂಗಯ್ಯನವರು ಪ್ರೌಢಶಾಲಾ ಹಂತದಲ್ಲಿಯೇ ಭಾಷಣ ಮಾಡುವುದು ಮತ್ತು ಸಾಹಿತ್ಯ ಬರೆಯುವುದು ಹೀಗೆ ಹಲವು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಕಾಲೇಜು ದಿನಗಳಲ್ಲಿಯೆ ಕಾರ್ಲ್ ಮಾರ್ಕ್ಸ್, ಲೋಹಿಯಾ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಜ್ಯೋತಿಬಾ ಫುಲೆ, ಭಗವಾನ್ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ರಂತಹ ಧೀಮಂತರ ವಿಚಾರಗಳನ್ನು ಓದಿಕೊಂಡು ಇವರ ವಿಚಾರಧಾರೆಗಳಿಂದ ಆಕರ್ಷಣೆಗೆ ಒಳಗಾಗಿ ಪ್ರಭಾವಿತರಾದರು ಎಂದರು.

ಕನ್ನಡ ಸಿರಿ ಸ್ನೇಹ ಬಳಗ ಅಧ್ಯಕ್ಷ ಲೋಕೇಶ್ ಸಾಗರ್ ,ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಸ್.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಭಾರದ್ವಜ್ ಕೆ.ಆನಂದತೀರ್ಥ ವಹಿಸಿದ್ದರು.
ಈ ಸಂದರ್ಭ ನಿವೃತ್ತ ಪ್ರಾಂಶುಪಾಲ ಡಾ. ಸೋಮಣ್ಣ,ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್. ವಿಜಯಾನಂದ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್,ಮುಖಂಡರಾದ ದಿನೇಶ್, ಜವರಪ್ಪ ಇತರರು ಪಾಲ್ಗೊಂಡಿದ್ದರು.
ಕವಿಗೋಷ್ಠಿಗೆ ಆಗಮಿಸಿದ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ನಂತರ ಡಾ. ಸಿದ್ದಲಿಂಗಯ್ಯನವರ ಸಾಹಿತ್ಯ ಆಧಾರಿತ ಕವನಗಳ ಸುಮಧುರ ಗೀತ ಗಾಯನ ನಡೆಯಿತು.ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ,ಕವನವಾಚಿಸಿದ ಯುವ ಕವಿಗಳಿಗೆ ಡಾ.ಸಿದ್ದಲಿಂಗಯ್ಯನವರ ಪುಸ್ತಕದೊಂದಿಗೆ ಪ್ರಶಂಸನಾ ಪತ್ರ, ನೆನಪಿನ ಕಾಣಿಕೆ ವಿತರಿಸಲಾಯಿತು.








