‘ಶಿಶಿರ ಕಾವ್ಯೋತ್ಸವ’ದಲ್ಲಿ ಉದಯೋನ್ಮುಖ ಕವಿಗಳಿಗೆ ನಿರಂತರವಾಗಿ ಓದಲು ಸಾಹಿತಿ ಸತೀಶ್ ಜವರೇಗೌಡ ಸಲಹೆ

ಮೈಸೂರು : ಕನ್ನಡದಲ್ಲಿ ಹೊಸ ತಲೆಮಾರಿನ ಅನೇಕ ಪ್ರತಿಭಾವಂತ ಕವಿಗಳು ಹೊಸ ವಿನ್ಯಾಸ ಮತ್ತು ರೂಪದಲ್ಲಿ ಕಾವ್ಯ ರಚಿಸುತ್ತಿದ್ದಾರೆ. ಈ ಕಾವ್ಯವ ವಿವಿಧ ಒಳಪ್ರಕಾರಗಳಲ್ಲಿ ಬಹುವಿಸ್ತಾರವಾಗಿ ಚಾಚಿಕೊಂಡಿದೆ. ಇಂತಹ ಕಾವ್ಯವನ್ನು ಉದಯೋನ್ಮುಖ ಕವಿಗಳು ನಿರಂತರವಾಗಿ ಓದಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ನಗರದ ಬೋಗಾದಿಯ ಕ್ರಿಯಾ ಸಭಾಂಗಣದಲ್ಲಿ ಸ್ವಜನ್ಯ ಕಲಾ ವೇದಿಕೆ ಹಾಗೂ ಕ್ರಿಯಾ ಮೈಸೂರು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಎಸ್. ಅದ್ವೈತನ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಶಿಶಿರ ಕಾವ್ಯೋತ್ಸವ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡು ಮಾತನಾಡಿದರು.
ಕಾವ್ಯದ ವಿವಿಧ ಪ್ರಕಾರಗಳನ್ನು ಓದುವುದರಿಂದ ಉದಯೋನ್ಮುಖ ಕವಿಗಳ ಕಾವ್ಯದ ದಾರಿ ಸ್ಪಷ್ಟವಾಗುತ್ತದೆ. ಜೊತೆಗೆ, ಅವರೊಳಗಿನ ಅನುಭವಗಳಿಗೆ ಹೊಸ ಸ್ಪರ್ಶ ಲಭಿಸುತ್ತದೆ ಎಂದ ಸಜಗೌ ಅವರು, ಕವಿಗಳು ಹೊಸ ಹೊಸ ಸಾಹಿತ್ಯಾಸಕ್ತರ ಹುಟ್ಟು ಹಾಕಿ, ಹೊಸ ಹೊಸ ಚಿಂತನೆಗಳನ್ನು ಅವರ ಹೃದಯಕ್ಜೆ ದಾಟಿಸುವ ಕೆಲಸ ಮಾಡಬೇಕು ಎಂದರು.

ಕೌಟುಂಬಿಕ ಕಾರ್ಯಕ್ರಮಗಳಲ್ಲೂ ಕೂಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಶದ ಚಹರೆ ಇರಬೇಕೆ ಹೊರತು, ಅನುಕರಣೆಗೆ ಒಳಗಾಗಿಯೋ ವೈಯಕ್ತಿಕ ಪ್ರತಿಷ್ಠೆಗಾಗಿಯೋ ಆಡಂಬರದ ಹಾಗೂ ವೈಭವದ ಬದುಕಿಗೆ ಜೋತು ಬೀಳಬಾರದು. ಗಾಂಧಿಯವರ ಸರಳ ಜೀವನ ಮತ್ತು ಉದಾತ್ತ ಚಿಂತನೆ ನಮ್ಮದಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ಬೇರುಗಳು ಹಳ್ಳಿಗಳಲ್ಲಿ ಇವೆ. ಹಳ್ಳಿಯಿಂದ ಬಂದ ನಾವು ನಗರ ಸಂಸ್ಕೃತಿಯ ಬದುಕಿನಲ್ಲಿ ಬೆರೆತರೂ ಕೂಡ ನಮ್ಮ ಸಾಂಸ್ಕೃತಿಕತನವನ್ನ ಬಿಟ್ಟುಕೊಡಬಾರದು. ಖಾಸಗಿ ಸಮಾರಂಭಗಳನ್ನು ‘ಸಾಂಸ್ಕತೀಕರಣ’ಗೊಳಿಸಿದರೆ ನಮ್ಮ ಬದುಕು ಮತ್ತಷ್ಟು ಅಪ್ಯಾಯಮಾನ, ಸಹನೀಯ ಮತ್ತು ಮಾದರಿಯುಕ್ತವಾಗುತ್ತದೆ ಎಂದರು.
ಅನುವಾದಕ ಡಾ.ಪಿ. ಮಣಿ ಮಾತನಾಡಿ, ಬರೀ ಕಲ್ಪನಾ ಲೋಕದಲ್ಲಿ ಕೂತು ಬರೆಯುವುದು ಕಾವ್ಯವಲ್ಲ. ಥಟ್ಟನೆ ಸಹ ಮೂಡುವುದು ಕಾವ್ಯವಲ್ಲ. ಕವಿ ಮನಸ್ಸಿಗೆ ತಟ್ಟಿದ, ಅಂತರಾಳದಲ್ಲಿ ತುಡಿಯುತ್ತಿರುವ, ಸಮಾಜಕ್ಕೆ ಹೇಳಲು ಹೊರಹೊಮ್ಮಿದ ಭಾವ ಪುಷ್ಪ ಸಹಜವಾಗಿ ಅರಳಿ ಕಾವ್ಯವಾಗಬೇಕು. ಆಗ ಕಾವ್ಯ ಭುವನದ ಭಾಗ್ಯವಾಗುವುದು ಎಂದು ವ್ಯಾಖ್ಯಾನಿಸಿದರು.
ಕವಿಗೆ ಬಹುಭಾಷೆಯ ಜ್ಞಾನ ಮುಖ್ಯ. ನವೋದಯ ಕಾಲದ ಕವಿಗಳು ತ್ರಿಭಾಷಾ ಜ್ಞಾನದಿಂದ ಸಾಹಿತ್ಯ ರಚಿಸಿದರು. ಅವರು ಮತ, ಪ್ರದೇಶ, ಭಾಷೆಯ ಗಡಿ ದಾಟಿ ಬೆಳೆದರು. ಆದ್ದರಿಂದ ಮಕ್ಕಳಿಗೆ ನಾಲ್ಕೈದು ಭಾಷೆಗಳನ್ನು ಕಲಿಸಿ. ಆದರೆ, ಅವರು ಕನ್ನಡವನ್ನು ಹೆಚ್ಚಾಗಿ ಪ್ರೀತಿಸಲಿ. ಆಗ ಬಹು ಸಂಸ್ಕೃತಿಯ ಮನನವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರೀ ಮಾತನಾಡಿ, ಒಂದು ಉತ್ತಮ ಕವಿತೆ ತನ್ನ ಕಾಲವನ್ನು ಮೀರಿ ನಿಲುತ್ತದೆ. ಅದು ಯಾವತ್ತಿಗೂ ಸತ್ಯ ಸಾರುತ್ತದೆ. ಆದ್ದರಿಂದ ಕವಿ ಯಾವೊತ್ತು ಕೂಡ ತನ್ನನ್ನು ಪಕ್ಕಕ್ಕೆ ಇಟ್ಟು, ಲೋಕಕ್ಕೆ ದನಿಯಾಗುತ್ತಾನೆ. ವೈಯಕಕ ನೆಲೆಯಲ್ಲಿ ಹೇಳುವ ಮೂಲಕ ಸಾರ್ವತ್ರಿಕವಾದದ್ದರೆಡೆಗೆ ಸಾಗುತ್ತಾನೆ ಎಂದರು.

ಕಾಡುವ ಕವಿತೆಗಳ ಬರೆಯುವ ಮೂಲಕ ಕವಿ ಜನಪರವಾದ ನಿಲುವನ್ನು ತಾಳುತ್ತಾನೆ. ಅಂತಹ ಸಂದರ್ಭದಲ್ಲಿ ಕವಿತೆ ಭಾಷಣ ಆಗದೆ ಹಾಗೆ ನೋಡಿಕೊಳ್ಳಬೇಕು. ಹೆಚ್ಚು ವಾಚಾಳಿಯಾಗಬಾರದು. ಬಿಚ್ಚಿಡುವ ಕವಿತೆಗಿಂತ ಬಚ್ಚಿಡುವ ಕವಿತೆಗಳನ್ನು ಬದಲಾದ ಸನ್ನಿವೇಶದಲ್ಲಿ ಹೊಸ ಸ್ವರೂಪ, ಆಕೃತಿಯಲ್ಲಿ ಬರೆಯಿರಿ. ಆಗ ಕವಿತೆ ಕನ್ನಡಿಯೂ ಆಗುತ್ತದೆ, ಬೆಳಕೂ ಆಗುತ್ತದೆ ಎಂದರು.
ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷ ಎಸ್. ಶಿಶಿರಂಜನ್ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿದ್ದ ಬಿಸಿಎಸ್ ನಿರ್ಮಾಣ ಕಂಪನಿಯ ಮಾಲೀಕ ಬಿ. ಆನಂದ್, ಕ್ರಿಯಾ ಮೈಸೂರು ಸಂಸ್ಥೆಯ ಸ್ಥಾಪಕ ಹಾಗೂ ಸಾಹಿತಿ ಪ್ರೊ. ಪ್ರಸನ್ನಕುಮಾರ ಕೆರಗೋಡು ಮಾತನಾಡಿದರು. ಹಿರಿಯ ಸಾಹಿತಿ ಶಂಕರನಾರಾಯಣ್, ರಂಗಕರ್ಮಿ ಚಂದ್ರು ಮಂಡ್ಯ ಉಪಸ್ಥಿತರಿದ್ದರು.
ಶಿಶಿರ ಕಾವ್ಯೋತ್ಸವದಲ್ಲಿ ಕವಿಗಳಾದ ಕೆ.ಎಂ. ಯಶೋಧ (ಯಶಿಕ), ಸಿ.ಎಸ್. ಭೈರಪ್ಪ, ರಶ್ಮಿ ಕೆ. ವಿಶ್ವನಾಥ್, ಅವ್ವ ಪರಮೇಶ್, ಯಶೋಧ ರಾಮಕೃಷ್ಣ, ಸಿ.ಎಸ್. ರಾಘವೇಂದ್ರ, ಎಸ್.ಎನ್. ಸಿದ್ದರಾಮ್, ಸಿ.ಎಸ್. ನಂದಿನಿ, ಎಸ್. ನಾಗೇಶ್ ಕಾವ್ಯಪ್ರಿಯ, ಜಿ. ರವೀಂದ್ರ ಕುಮಾರ್, ಲೋಕೇಶ್ ಕಲ್ಕುಣಿ, ಪ್ರಶಾಂತ್ ಬೆಳ್ತೂರು, ಹರವು ಎಸ್. ಲೋಕೇಶ್, ಸುಬ್ರಹ್ಮಣ್ಯ ಶಾಸ್ತ್ರಿ, ಡಾ.ಬಿ. ಬಸವರಾಜು, ರವಿ ಕಾಳಯ್ಯ, ಬಸವೇಶ ತಮ್ಮ ಸ್ವರಚಿತ ಕವನ ವಾಚಿಸಿದರು.







