ಒಂದೊಂದು ತರಕಾರಿಯಿಂದಲೂ ಹುಳಿ ಮಾಡುವುದು ಸಾಮಾನ್ಯ. ಆದರೆ ಒಂದಷ್ಟು ತರಕಾರಿಗಳನ್ನು ಸೇರಿಸಿ ಹುಳಿ ಮಾಡಿದರೆ ಬೆರಕೆ ತರಕಾರಿ ಹುಳಿಯಾಗುತ್ತದೆ. ಇದು ಸವಿಯಲು ಇನ್ನಷ್ಟು ರುಚಿಯಾಗಿರುತ್ತದೆಯಲ್ಲದೆ ಇದನ್ನು ಮಾಡುವುದು ಕೂಡ ಸುಲಭವೇ.. ಹಾಗಾದರೆ ತರಕಾರಿ ಹುಳಿಯನ್ನು ಮಾಡುವುದು ಹೇಗೆ? ಇಲ್ಲಿದೆ ತಯಾರಿ ವಿಧಾನ
ಬೇಕಾಗುವ ಪದಾರ್ಥಗಳು: ಬೀನ್ಸ್, ಸೌತೆಕಾಯಿ, ಆಲೂಗೆಡ್ಡೆ, ಮೂಲಂಗಿ, ಬೇಳೆ. ಅಕ್ಕಿ- 2 ಟೀ ಚಮಚ, ಕೊತ್ತಂಬರಿ ಸೊಪ್ಪು, ಒಣಮೆಣಸಿನ ಕಾಯಿ, ದನಿಯಾ, ಅರಿಶಿಣಪುಡಿ, ಕಾಯಿ ತುರಿ, ಜೀರಿಗೆ

ಮಾಡುವ ವಿಧಾನ: ಮೊದಲಿಗೆ ತರಕಾರಿಗಳಾದ ಬೀನ್ಸ್, ಸೌತೆಕಾಯಿ, ಆಲೂಗೆಡ್ಡೆ, ಮೂಲಂಗಿ ಮತ್ತು ಬೇಳೆಯನ್ನು ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಅಕ್ಕಿ, ಒಣಮೆಣಸಿನಕಾಯಿ, ದನಿಯಾ, ಜೀರಿಗೆ ಸ್ವಲ್ಪ ಸಮಯ ನೆನೆಸಿ ಬಳಿಕ ಅದಕ್ಕೆ ಕಾಯಿ, ಸ್ವಲ್ಪ ಅರಿಶಿಣ ಹಾಕಿ ಚೆನ್ನಾಗಿ ರುಬ್ಬಬೇಕು.
ಇದಕ್ಕೆ ಹುಣಸೆ ಹಣ್ಣನ್ನು ಕಿವುಚಿ ರಸ ತೆಗೆದು ಬೆರೆಸಬೇಕು. ಬಳಿಕ ಪಾತ್ರೆಯಲ್ಲಿ ಎಣ್ಣೆಯಿಟ್ಟು ಸಾಸಿವೆಯನ್ನು ಸಿಡಿಸಿ ಅದಕ್ಕೆ ಮಸಾಲೆ ಪದಾರ್ಥ ಹಾಗೂ ಬೇಯಿಸಿಟ್ಟ ತರಕಾರಿಯನ್ನು ಸೇರಿಸಿ ಒಗ್ಗರಣೆ ಹಾಕಿ ಕುದಿಸಿ ಇಳಿಸಿದರೆ ಸವಿಯಲು ಬೆರಕೆ ತರಕಾರಿ ಹುಳಿ ಸಿದ್ಧವಾಗಲಿದೆ.








